ಕಾಂಗ್ರೆಸ್ ಮಣಿಸಲು ಬಿಜೆಪಿ ಜತೆಗೆ ಜೆಡಿಎಸ್ ಬಾಂಧವ್ಯ ವೃದ್ಧಿ
ಲೋಕಸಭೆಯಲ್ಲಿ ಗೆಲ್ಲಲಾಗದಿದ್ದರೂ ಜೆಡಿಎಸ್‌ಗೆ ಕಾಂಗ್ರೆಸ್ ಸೋಲಿಸುವ ಹಠ
Team Udayavani, Jul 24, 2023, 7:30 AM IST
ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೊಂದಿಗೆ ಕೂಡಿ ಬಾಳಿ ಸರಕಾರ ರಚಿಸಿದ್ದ ಜೆಡಿಎಸ್, 2023ರ ವಿಧಾನಸಭಾ ಚುನಾವಣೆ ಫಲಿತಾಂಶ ಅತಂತ್ರವಾಗುವ ಲೆಕ್ಕಾಚಾರವಿಟ್ಟುಕೊಂಡು ಮತ್ತೂಮ್ಮೆ ಸಮ್ಮಿಶ್ರ ಸರಕಾರ ರಚಿಸಬಹುದೆಂಬ ನಿರೀಕ್ಷೆಗಳಿದ್ದವು. ಆದರೆ ಈ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ಲೋಕಸಭೆ ಚುನಾವಣೆಯಲ್ಲಾದರೂ ಉರುಳಿಸುವ ದಾಳ ಫಲ ಕೊಟ್ಟಿತು ಎಂಬ ಹೊಸ ಲೆಕ್ಕಾಚಾರ ಆರಂಭವಾಗಿದೆ.
ಜೆಡಿಎಸ್ ಒಮ್ಮೆ ಕಾಂಗ್ರೆಸ್‌ನ ಬಿ ಟೀಮ್ ಎಂದು ಕರೆಸಿಕೊಂಡರೆ, ಒಮ್ಮೆ ಬಿಜೆಪಿಯ ಬಿ ಟೀಮ್ ಎಂದೂ ಕರೆಸಿಕೊಂಡಿದೆ. “ಶತ್ರುವಿನ ಶತ್ರು ಮಿತ್ರ’ ಎನ್ನುವಂತೆ ಉಭಯ ಪಕ್ಷಗಳೂ ಕಾಂಗ್ರೆಸ್ ವಿರುದ್ಧ ಒಂದಾಗಿದೆ.
ಕೈ ಹಿಸುಕಿಕೊಂಡಿದ್ದ ದಳ
2018ರ ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರವಾದಾಗ ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸಿದ್ದ ಜೆಡಿಎಸ್, 2019ರ ಲೋಕ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿತ್ತು. ಮೇಲ್ಮಟ್ಟದ ನಾಯಕರ ನಡುವೆ ಮಾತ್ರ ನಡೆದ ಈ ಸಖ್ಯವು ಕಾರ್ಯಕರ್ತರ ಮಟ್ಟದಲ್ಲಿ ಅಪಥ್ಯವೆನಿಸಿತ್ತು. ಒಳ ಏಟುಗಳ ಪರಿಣಾಮ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನವನ್ನಷ್ಟೇ ಗಳಿಸಿ ಕೈ ಕೈ ಹಿಸುಕಿಕೊಂಡಿತ್ತು.
ಶತ್ರುಗಳಂತಾದ ಮಿತ್ರಪಕ್ಷಗಳು
ಜಾತ್ಯತೀತ ತತ್ವದ ಮೇಲೆ ಒಂದಾಗಿದ್ದೇವೆ ಎಂದಿದ್ದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಬುಡವೇ ಅಲ್ಲಾಡಿತ್ತು. ಇಬ್ಬರ ಕಿತ್ತಾಟದಲ್ಲಿ ಕಮಲ ಸರಕಾರ ಅರಳಿ ನಿಂತು ಗೆಲುವಿನ ನಗೆ ಬೀರಿತ್ತು. ಮಿತ್ರಪಕ್ಷಗಳು ಶತ್ರುಪಕ್ಷಗಳಂತಾದವು. ಆಡಳಿತದಲ್ಲಿದ್ದ ಪಕ್ಷಗಳು ವಿಪಕ್ಷದ ಸ್ಥಾನದಲ್ಲಿ ಕೂರುವಂತಾಗಿದ್ದವು. ಆದರೆ ಆಗ ಬಿಜೆಪಿ ಸರಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡುವ ಮನಸ್ಥಿತಿಯಲ್ಲಿ ಉಭಯ ಪಕ್ಷಗಳೂ ಇರಲಿಲ್ಲ.
ಒಂಟಿಗಿಂತ ಜಂಟಿ ಹೋರಾಟವೇ ಲೇಸು
2023ರ ಸೋಲಿನ ಆಘಾತದಿಂದ ಹೊರ ಬರಲು ತವಕಿಸುತ್ತಿರುವ ಬಿಜೆಪಿ, ವಿಪಕ್ಷ ನಾಯಕನ ಆಯ್ಕೆಯಲ್ಲಿ ಹಿಂದೆ ಬಿದ್ದಿದೆ. ಇದೇ ಧೈರ್ಯದಲ್ಲಿ ಕಾಂಗ್ರೆಸ್ ವಿರುದ್ಧ ಒಂದು ಹೆಜ್ಜೆ ಮುಂದಿಟ್ಟಿದ್ದ ಜೆಡಿಎಸ್ ಅನ್ನು ತನ್ನ ತೆಕ್ಕೆಗೆ ಸೆಳೆದು ಒಗ್ಗಟ್ಟಿನ ಮಂತ್ರಜಪಿಸಿದೆ. ಮೊದಲ ಅಧಿವೇಶನದಲ್ಲೇ ಜಂಟಿ ಹೋರಾಟಕ್ಕಿಳಿದಿರುವ ಜೆಡಿಎಸ್-ಬಿಜೆಪಿ ಯು ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ ರವಾನಿಸಿವೆ.
ಕಾಂಗ್ರೆಸ್ ಮತ ಬುಟ್ಟಿಗೆ ಪೆಟ್ಟು
ಸೋಲಿನ ಕಹಿ ಅನುಭವಿಸಿದ ಬಳಿಕ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎರಡೂ ಪಕ್ಷಗಳು ಒಂದಾಗುತ್ತಿವೆ ಎಂಬ ವಾದಗಳು ಒಂದೆಡೆಯಿದ್ದರೆ, ಯಾವ ಎನ್‌ಡಿಎಯೂ ಇಲ್ಲ, ಐಎನ್‌ಡಿಐಎ ಕೂಡ ಇಲ್ಲ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಮಾತೂ ಇನ್ನೊಂದೆಡೆ ಇದೆ. ಆದರೆ ಜೆಡಿಎಸ್‌ನ ಭದ್ರಕೋಟೆ ಎನ್ನುವಂತಿದ್ದ ಹಳೆ ಮೈಸೂರು ಭಾಗದಲ್ಲೇ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಭಾಗಗಳಲ್ಲಿ ಮುನ್ನೆಲೆಗೆ ಬರಬೇಕೆಂದಿದ್ದ ಬಿಜೆಪಿಗೂ ಹಿನ್ನಡೆಯಾಗಿದೆ. ಶೇಕಡಾವಾರು ಮತಗಳನ್ನು ಗಮನಿಸಿದಾಗ ಜೆಡಿಎಸ್‌ನ ಮತಗಳು ಕಾಂಗ್ರೆಸ್ ಪಾಲಾಗಿರುವುದು ಸ್ಪಷ್ಟವಾಗಿದೆ. ಇಲ್ಲೆಲ್ಲ ಸದ್ಯಕ್ಕೆ ಕಾಂಗ್ರೆಸ್ ಪ್ರಭಾವವನ್ನು ಹೆಚ್ಚಿಸಿದೆ. ಅದರಲ್ಲೂ ಜೆಡಿಎಸ್‌ನಲ್ಲಿದ್ದ ಕೆಲವು ಮಿತ್ರರೇ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ. ಕಾಂಗ್ರೆಸ್‌ಗೆ ಪಾಠ ಕಲಿಸುವುದರ ಜತೆಗೆ ಪಕ್ಷ ಬಿಟ್ಟವರಿಗೂ ಶಾಸ್ತಿ ಮಾಡಬೇಕೆಂದು ಕಾಯುತ್ತಿದೆ. ಸ್ಥಳೀಯವಾಗಿ ಈ ಶಾಸಕರ ಪ್ರಭಾವ ಕುಗ್ಗಿಸಿದರೆ, ಸಹಜವಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗಳು ತಲೆಕೆಳಗಾಗಲಿವೆ. ತಾನು ಹೆಚ್ಚು ಸ್ಥಾನ ಗೆಲ್ಲದಿದ್ದರೂ ಪರವಾಗಿಲ್ಲ, ಕಾಂಗ್ರೆಸ್ ಬುಟ್ಟಿಯಲ್ಲಿರುವ ಮತಗಳನ್ನಾದರೂ ಕೀಳಬೇಕು ಎಂಬ ರಾಜಕೀಯ ದಾಳ ಉರುಳಿಸಲು ಜೆಡಿಎಸ್ ಸಜ್ಜಾಗಿದೆ.
– ಶೇಷಾದ್ರಿ ಸಾಮಗ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.