Assembly Session; ಜ್ಞಾನದೇಗುಲ ವಿವಾದ: ಉಭಯ ಸದನದಲ್ಲಿ ವಾಗ್ಯುದ್ಧ
ರಾಜ್ಯದ ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿ "ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂಬ ಘೋಷವಾಕ್ಯ
Team Udayavani, Feb 19, 2024, 11:24 PM IST
ಬೆಂಗಳೂರು: ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಕವನದ ಸಾಲನ್ನು “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದೆ ಎಂಬ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ವಿಪಕ್ಷ ಬಿಜೆಪಿಯು ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ಬಿ.ವೈ. ವಿಜಯೇಂದ್ರ ಅವರು, ಕುವೆಂಪು ಅವರ ಧ್ಯೆಯವಾಕ್ಯವನ್ನು ಬದಲಾಯಿಸಿರುವುದು ಕುವೆಂಪುಗೆ ಮಾಡಿದ ಅವಮಾನ. ಹೀಗೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಧಿಕಾರ ನೀಡಿದವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ದನಿಗೂಡಿಸಿ, ಈ ರೀತಿ ಅಸಂಬದ್ಧ ಆದೇಶ ಹೊರಡಿಸುವುದರ ಹಿಂದೆ ಇಡೀ ಸರಕಾರವೇ ಇದೆ ಎಂದನಿಸುತ್ತದೆ. ಮೊನ್ನೆ ಗಣೇಶನ ಪೂಜೆ, ಸರಸ್ವತಿ ಪೂಜೆ ಮಾಡು ವಂತಿಲ್ಲ ಅಂತ ಆದೇಶ ಮಾಡಿದರು. ವಿರೋಧ ವ್ಯಕ್ತವಾದಾಗ ಹಿಂಪಡೆ ದರು. ಈಗ ಕುವೆಂಪು ಅವರ ಕವನದಸಾಲನ್ನು ತೆಗೆದು ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ವಾಕ್ಯವನ್ನು ಹಾಕಿದ್ದಾರೆ ಎಂದು ಟೀಕಿಸಿದರು.
ಈ ರೀತಿ ಬದಲಾವಣೆ ಮಾಡಲು ಸರಕಾರಿ ಆದೇಶ ಎಲ್ಲಿದೆ? ಮಂತ್ರಿಗಳ ಆದೇಶ ಎಲ್ಲಿದೆ? ಇದುವರೆಗೂ ಮಂತ್ರಿಗಳ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ. ಒಬ್ಬ ಪ್ರಧಾನ ಕಾರ್ಯದರ್ಶಿ ಹುಚ್ಚುಚ್ಚಾಗಿ ಮನಸ್ಸಿಗೆ ಬಂದಂತೆ ಬದಲಾವಣೆ ಮಾಡುತ್ತಾನೆ ಎಂದಾದರೆ, ಈಗ ವಿಧಾನಸೌಧದ ಮುಂದೆ “ಸರಕಾರದ ಕೆಲಸ, ದೇವರ ಕೆಲಸ’ ಅಂತ ಇದೆ. ಯಾರೋ ಕಾರ್ಯದರ್ಶಿ ಬಂದು ಅದನ್ನ ಅಳಿಸಿ ಹಾಕಿ ಅಂದರೆ ಏನರ್ಥ ಎಂದು ಅಶೋಕ್ ಅವರು ಪ್ರಶ್ನಿಸಿದರು.
ಬಿಜೆಪಿಯ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು, ನೀವು ಕುವೆಂಪುಗೆ ಅವಮಾನ ಮಾಡಿದ್ದೀರಿ ಎಂದು ಹೇಳಿದ್ದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರನ್ನು ಕೆರಳಿಸಿತು. ಈ ಘಟನೆ ಬಗ್ಗೆ ಸಂಬಂಧಪಟ್ಟ ಸಚಿವರು ವಾಸ್ತವಾಂಶ ಆಧಾರಿತ ಉತ್ತರ ಕೊಡುತ್ತಾರೆ. ಆದರೆ ನೀವು ಈ ರೀತಿಯ ಆರೋಪ ಮಾಡಿದರೆ ಅದಕ್ಕೆ ನಾವು ಬೇರೆಯೇ ರೀತಿಯಲ್ಲಿ ಉತ್ತರ ಕೊಡಬೇಕಾಗುತ್ತದೆ. ಕುವೆಂಪು ಅವರ ಪಠ್ಯವನ್ನು ಪಾಠ ಪುಸ್ತಕದಿಂದ ಕಿತ್ತು ಹಾಕಿದ್ದು ಯಾರು ಎಂದು ತಿರುಗೇಟು ನೀಡಿದರು. ಸಮಾಜ ಕಲ್ಯಾಣ ಸಚಿವರು ಈ ಬಗ್ಗೆ ಉತ್ತರಿಸಲಿದ್ದಾರೆ ಎಂದು ಕೃಷ್ಣ ಭೈರೇಗೌಡರು ಭರವಸೆ ನೀಡಿದ ಬಳಿಕ ಕಲಾಪ ಮುಂದುವರಿಯಿತು.
ಮೇಲ್ಮನೆಯಲ್ಲೂ ಮಾತಿನ ಸಮರ, ಸಚಿವರ ಉತ್ತರಕ್ಕೆ ಪಟ್ಟು
ವಿಧಾನ ಪರಿಷತ್ತಿನಲ್ಲೂ ಇದೇ ವಿಷಯವಾಗಿ ಆಡಳಿತ-ವಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ಧಿಕ್ಕಾರದ ಘೋಷಣೆ, ವಾಕ್ಸಮರ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಬಿಜೆಪಿಯ ಎನ್.ರವಿಕುಮಾರ್, ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿ ಘೋಷವಾಕ್ಯ ಬದಲಾವಣೆ ಮಾಡಿರುವುದು ಇಡೀ ಸಮಾಜದಲ್ಲಿ ಒಂದು ರೀತಿ ದಿಗಿಲು ಶುರುವಾಗಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಬೇಕು ಎಂದು ಸಭಾಪತಿಗಳನ್ನು ಆಗ್ರಹಿಸಿದರು.
ಇದಕ್ಕೆ ದನಿಗೂಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ ಇನ್ನಿತರರು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸಂಬಂಧಪಟ್ಟ ಸಚಿವರು ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಗಳ ಪೀಠದಲ್ಲಿದ್ದ ತೇಜಸ್ವಿನಿ ಗೌಡ, ಶೂನ್ಯ ವೇಳೆಯಲ್ಲಿ ಚರ್ಚೆಗೆ ಸದನದ ನಿಯಮಾವಳಿಯಲ್ಲಿ ಅವಕಾಶವಿಲ್ಲ. ಬೇರೆ ರೂಪದಲ್ಲಿ ಮಾತ್ರ ಅವಕಾಶ ಕಲ್ಪಿಸಬಹುದಾಗಿ ಸಮಜಾಯಿಷಿ ನೀಡಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು, ಸರಕಾರ ಕುವೆಂಪು ಅವರಿಗೆ ಅಪಮಾನ ಮಾಡಿದೆ ಎಂದು ಸದನದ ಬಾವಿಗಿಳಿದರು. ಅತ್ತ ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಈ ಹಿನ್ನೆಲೆಯಲ್ಲಿ ಸದನವನ್ನು 5 ನಿಮಿಷ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗಲೂ ಇದೇ ಪರಿಸ್ಥಿತಿ ಉಂಟಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಭೋಜನ ವಿರಾಮದವರೆಗೂ ಸದನ ಮುಂದೂಡಿದರು. ಬಳಿಕ ಪರಿಸ್ಥಿತಿ ತಣ್ಣಗಾಯಿತು.
ರಾಜ್ಯದ ಹಲವೆಡೆ ಆಕ್ರೋಶ
ಬೆಂಗಳೂರು/ಹುಬ್ಬಳ್ಳಿ/ಮಂಗಳೂರು: ವಸತಿ ಶಾಲೆಗಳ ಪ್ರವೇಶದ್ವಾರದ ಫಲಕ ಬದಲಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೌಖೀಕ ಸೂಚನೆ ಹಿನ್ನೆಲೆಯಲ್ಲಿ ನಾಮಫಲಕ ಬದಲಾವಣೆ ಮಾಡಿದ್ದು, ಹಲವೆಡೆ ಆಕ್ರೋಶ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 11 ವಸತಿ ಶಾಲೆಗಳಲ್ಲಿ ಬದಲಾವಣೆ ನಡೆದಿದೆ. ವಸತಿ ಶಾಲೆಯ ಪ್ರಮುಖರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ ಇಲಾಖೆಯಿಂದ ಆದೇಶ ಬಂದಿರಲಿಲ್ಲ. ಆದರೆ ಇಲಾಖಾ ಮುಖ್ಯಸ್ಥರ ಮೌಖಿಕ ಆದೇಶದಂತೆ ಇದನ್ನು ಮಾಡಲಾಗಿದೆ’ ಎಂದರು. ಸೋಮವಾರ ಈ ವಿಚಾರ ವಿವಾದ ಎಬ್ಬಿಸುತ್ತಿದ್ದಂತೆ ಕೆಲವು ವಸತಿ ಶಾಲೆಯ ಫಲಕವನ್ನು ತೆಗೆಯಲಾಗಿದೆ ಎಂಬ ಮಾಹಿತಿ ಬಂದಿದೆ.
ಧಾರವಾಡದ 12 ಮೊರಾರ್ಜಿ ವಸತಿ ಶಾಲೆ, ಬಳ್ಳಾರಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 5, ಕ್ರೈಸ್‌ಗೆ ಸೇರಿದ 15 ಸೇರಿ ಒಟ್ಟು 20 ವಸತಿ ಶಾಲೆ, ವಿಜಯಪುರ ಜಿಲ್ಲೆಯ 23 ಮೊರಾರ್ಜಿ ವಸತಿ ಶಾಲೆ, ಚಿಕ್ಕಮಗಳೂರಿನ 36, ಬೆಳಗಾವಿ 56, ಶಿವಮೊಗ್ಗದ ಕುಂಸಿ ಇಂದಿರಾ ಗಾಂಧಿ ವಸತಿ ಶಾಲೆ, ಕೊಪ್ಪಳ ಜಿಲ್ಲೆಯ 30, ಬೀದರ್‌ನ 29 ವಸತಿ ಶಾಲೆಗಳ ಧ್ಯೇಯ ವಾಕ್ಯ ಬದಲಿಸಲಾಗಿದೆ. ಇನ್ನುಳಿದಂತೆ ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ಕಲಬುರಗಿ, ಗದಗ ಜಿಲ್ಲೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಆಯಾ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಕುವೆಂಪು ಮಾತಿನಂತೆ ನಡೆಯುವವರು ನಾವು. ಯಾವುದೇ ಜ್ಞಾನದೇಗುಲ ಸರಸ್ವತಿಯ ನೆಲೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಕೈಮುಗಿಯುತ್ತೇವೆ. ಇದೊಂದು ಒಳ್ಳೆಯ ಸಂಪ್ರದಾಯ. ಶಾಲೆಯಲ್ಲಿ ಅವರ ಹಕ್ಕಿನ ಚ್ಯುತಿಯಾಗಿ ಹೀಗೆ ಬದಲಿಸಿದ್ದಾರೋ ಗೊತ್ತಿಲ್ಲ. ಕೈಮುಗಿದು ಒಳಗೆ ಬಂದು ಹಕ್ಕು ಪ್ರತಿಪಾದಿಸಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
-ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಯಾವುದನ್ನು ಪ್ರಶ್ನಿಸಬೇಕು? ಸಮಾಜ ಕಲ್ಯಾಣ ಇಲಾಖೆಯ ವಸತಿಶಾಲೆಗಳಲ್ಲಿ ಎಷ್ಟೆಷ್ಟು ಲೂಟಿ ಆಗುತ್ತಿದೆ ಎಂಬುದನ್ನು ಪ್ರಶ್ನಿಸಬೇಕಾ? ಅಲ್ಲಿನ ಮಕ್ಕಳಿಗೆ ಊಟ ಸಿಗುತ್ತಿಲ್ಲ ಎನ್ನುವುದನ್ನು ಪ್ರಶ್ನಿಸಬೇಕಾ? ಈ ನಿಟ್ಟಿನಲ್ಲಿ ಫಲಕ ಅಳವಡಿಸಿದ್ದರೆ ನಾನೂ ಸ್ವಾಗತಿಸುತ್ತೇವೆ.
-ಕೆ.ಎಸ್. ಈಶ್ವರಪ್ಪ
ಧೈರ್ಯವಾಗಿ ಪ್ರಶ್ನಿಸಿ ಎಂಬುದರಲ್ಲಿ ತಪ್ಪಿಲ್ಲ. ಕುತೂಹಲ ಇರದಿದ್ದರೆ ಕಲಿಕೆ ಇರುವುದಿಲ್ಲ. ಕಲಿಕೆ ಇಲ್ಲದಿದ್ದರೆ ಜ್ಞಾನ ಬರುವುದಿಲ್ಲ. ಪ್ರಬು ದ್ಧತೆ ಇಲ್ಲದ ಸಮಾಜ ಸಮೃದ್ಧ ಆಗುವುದಿಲ್ಲ. ಪ್ರಬುದ್ಧ ಭಾರತ ಕಟ್ಟಲು ಪ್ರಶ್ನೆ ಕೇಳಬೇಕು.
-ಪ್ರಿಯಾಂಕ್ ಖರ್ಗೆ, ಸಚಿವ
ಬಿಜೆಪಿಯವರು ಅಗತ್ಯ ಬಿದ್ದಂತೆ ಜಾತೀಯತೆ, ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ತಮಗೆ ಅನುಕೂಲವಾಗುವ ರೀತಿ ಹೇಳುತ್ತಾರೆ. ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಇಲ್ಲವೇ ಧೈರ್ಯದಿಂದ ಪ್ರಶ್ನಿಸು ಎನ್ನುವುದು ಎರಡೂ ಒಂದೇ ಆಗಿದೆ.
-ಲಕ್ಷ್ಮೀ ಹೆಬ್ಬಾಳಕರ, ಸಚಿವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.