ಖಾಲಿ ಕುರ್ಚಿ ಮುಂದೆ ವಿಧೇಯಕ ಮಂಡನೆ
Team Udayavani, Feb 17, 2023, 5:55 AM IST
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಆಯವ್ಯಯ ಮಂಡನೆಗೆ ಒಂದು ದಿನ ಮುಂಚಿತವಾಗಿಯೇ ಶಾಸಕರ ಕುತೂಹಲ ಉಳಿಸಿಕೊಳ್ಳುವುದಕ್ಕೆ ವಿಫಲವಾಗಿದೆ. ಖಾಸಗಿ ವಿಶ್ವವಿದ್ಯಾಲಯ ವಿಧೇಯಕ ಮಂಡನೆ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ “ಖಾಲಿ ಕುರ್ಚಿ’ಗಳನ್ನು ಉದ್ದೇಶಿಸಿ ಮಾತನಾಡುವ ಸ್ಥಿತಿ ನಿರ್ಮಾಣವಾಯಿತು. ಈ ಸಂದರ್ಭದಲ್ಲಿ ಕೇವಲ ಹದಿನಾಲ್ಕು ಶಾಸಕರು ಮಾತ್ರ ಕಲಾಪದಲ್ಲಿ ಉಪಸ್ಥಿತರಿದ್ದ ಹಿನ್ನೆಲೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆಯನ್ನು ಸೋಮವಾರಕ್ಕೆ ಮುಂದೂಡಬೇಕಾಯಿತು.
ವಂದನಾ ನಿರ್ಣಯದ ಭಾಷಣ ಮುಕ್ತಾಯಗೊಂಡ ಬಳಿಕ ಸ್ಪೀಕರ್ ಕಾಗೇರಿ ವಿಶ್ವವಿದ್ಯಾಲಯ ವಿಧೇಯಕ ಮಂಡನೆಗೆ ಅವಕಾಶ ಕಲ್ಪಿಸಿದರು. ಬೆಳಗಾವಿ ಅಧಿವೇಶನದಲ್ಲೂ ಈ ಆರು ಖಾಸಗಿ ವಿವಿ ವಿಧೇಯಕ ಮಂಡನೆಯಾಗಿತ್ತು. ಆದರೆ ಆಡಳಿತ ಪಕ್ಷದ ಶಾಸಕರಿಂದಲೇ ಅಂದು ವಿರೋಧ ವ್ಯಕ್ತವಾಗಿದ್ದರಿಂದ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಮತ್ತೆ ವಿಧೇಯಕವನ್ನು ಮಂಡಿಸಲಾಗಿತ್ತು. ಈ ಪೈಕಿ ಜಿಎಮ್ ವಿಶ್ವವಿದ್ಯಾಲಯ ವಿಧೇಯಕ ಮಂಡಿಸಿ ಜಾರಿಗೆ ತರುತ್ತಿರುವ ಉದ್ದೇಶ ಹಾಗೂ ಅಗತ್ಯಗಳ ಬಗ್ಗೆ ಸಚಿವ ಅಶ್ವತ್ಥನಾರಾಯಣ ಖಾಲಿ ಕುರ್ಚಿಯನ್ನು ಉದ್ದೇಶಿಸಿಯೇ ಭಾಷಣ ಪ್ರಾರಂಭಿಸಿದ್ದರು.
ಆಗ ಕಾಂಗ್ರೆಸ್ ಪಾಳಯದಲ್ಲಿ, ಯು.ಟಿ.ಖಾದರ್, ಪ್ರಿಯಾಂಕ ಖರ್ಗೆ, ಜೆಡಿಎಸ್‌ನ ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಶಿವಲಿಂಗೇಗೌಡ, ಲಿಂಗೇಶ್ ಸೇರಿ ಎಂಟು ಸದಸ್ಯರು ಮಾತ್ರ ಹಾಜರಿದ್ದರು. ಆಡಳಿತ ಪಕ್ಷದಲ್ಲಿ ಸಚಿವರಾದ ಅಶ್ವತ್ಥನಾರಾಯಣ, ಅಂಗಾರ ಹಾಗೂ ನಾಗೇಶ್ ಸೇರಿದಂತೆ ಆರು ಶಾಸಕರಿದ್ದರು. ಒಂದೊಮ್ಮೆ ವಿಧೇಯಕವನ್ನು ಮತಕ್ಕೆ ಹಾಕಿದರೆ ಸರ್ಕಾರಕ್ಕೆ ತೀವ್ರ ಮುಜುಗರವಾಗುವ ಸನ್ನಿವೇಶ ನಿರ್ಮಾಣವಾಗಿತ್ತು.
ಈ ಬಗ್ಗೆ ಸಭಾಧ್ಯಕ್ಷ ಕಾಗೇರಿಯವರ ಗಮನ ಸೆಳೆದ ಪ್ರಿಯಾಂಕ ಖರ್ಗೆ ” ನಾವು ಮಸೂದೆ ಪಾಸ್ ಮಾಡಿಕೊಡಲು ಸಿದ್ದರಿದ್ದೇವೆ. ಆದರೆ ಆಡಳಿತ ಪಕ್ಷದ ಸದಸ್ಯರಿಗೇ ಮನಸ್ಸಿದ್ದಂತೆ ಕಾಣುತ್ತಿಲ್ಲ. ಮತಕ್ಕೆ ಹಾಕಿದರೆ ವಿಧೇಯಕ ಬಿದ್ದು ಹೋಗುತ್ತದೆ ‘ ಎಂದು ಎಚ್ಚರಿಕೆ ನೀಡಿದರು. ನೀವು ಮಂಡನೆ ಮಾಡಿ ನಾವು ಕೊನೆಯವರೆಗೂ ಇರುತ್ತೇವೆ ಎಂದು ಜೆಡಿಎಸ್ ಸದಸ್ಯರು ಕಲಾಪದಲ್ಲೇ ಕುಳಿತುಕೊಂಡರು. ವಿಧೇಯಕವನ್ನು ಸಭೆಯ ಮತಕ್ಕೆ ಹಾಕಿದರೆ ಸರ್ಕಾರಕ್ಕೆ ಮುಖಭಂಗವಾಗುವುದು ನಿಚ್ಚಳವಾಗಿತ್ತು.
“ವಾತಾವರಣ ಸರಿ ಇಲ್ಲ. ಸದನದ ಪರಿಸ್ಥಿತಿಯನ್ನು ನೋಡಿಕೊಳ್ಳಿ. ಸದನದ ಕೋರಂ ಇಲ್ಲ. ಹೀಗಾಗಿ ವಿಧೇಯಕದ ಬಗ್ಗೆ ಸೋಮವಾರ ಚರ್ಚೆ ನಡೆಸೋಣ’ ಎಂದು ಸ್ಪೀಕರ್ ಕಾಗೇರಿ, ಅಶ್ವತ್ಥನಾರಾಯಣ ಅವರಿಗೆ ಸಲಹೆ ನೀಡಿದರು. ಈ ಹಿನ್ನೆಲೆಯಲ್ಲಿ ಕಲಾಪವನ್ನು ಮುಂದೂಡಲಾಗಿದೆ.
ವಿಧೇಯಕಗಳು ಯಾವುವು ? : ಜಿಎಂ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘ ವಿಶ್ವವಿದ್ಯಾಲಯ, ಆಚಾರ್ಯ ವಿಶ್ವವಿದ್ಯಾಲಯ, ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯ, ಟಿ.ಜಾನ್ ವಿಶ್ವವಿದ್ಯಾಲಯ, ಕಿಷ್ಕಿಂದ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡನೆ ಮಾಡುವುದಕ್ಕೆ ರಾಜ್ಯ ಸರ್ಕಾರ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ಇದೇ ಅಧಿವೇಶನದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.