ಅಪ್ಪುಗೆ ಭಾಷೆ, ಭಾವ ಗಡಿಮೀರಿದ ಪ್ರೀತಿ
"ದೊಡ್ಮನೆ ಹುಡ್ಗ'ನ ಅಂತಿಮ ದರ್ಶನ ಪಡೆದ ದಕ್ಷಿಣ ಭಾರತದ ಖ್ಯಾತ ನಟರು, ಕಂಬನಿ ಮಿಡಿದ ಗಣ್ಯರು
Team Udayavani, Oct 31, 2021, 6:32 AM IST
ಬೆಂಗಳೂರು: ಅಗಲಿದ “ಯುವರತ್ನ’ನ ಅಂತಿಮ ದರ್ಶನ ಪಡೆಯಲು ದಕ್ಷಿಣ ಭಾರತ ಚಿತ್ರರಂಗವೇ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿತ್ತು. ತೆಲುಗು, ತಮಿಳು ಹಾಗೂ ಮಲಯಾಳಂ ಖ್ಯಾತ ನಟರು ಪುನೀತ್‌ಗೆ ಅಂತಿಮ ನಮನ ಸಲ್ಲಿಸಿ “ದೊಡ್ಮನೆ ಕುಟುಂಬ’ಕ್ಕೆ ಸಾಂತ್ವನ ಹೇಳಿದರು.
ಶನಿವಾರ ಬೆಳಿಗ್ಗೆ ಪ್ರಭುದೇವ ಮತ್ತು ಸಹೋದರರು, ಅರ್ಜುನ್‌ಸರ್ಜಾ, ಸಂಜೆ ನಂದಮೂರಿ ಬಾಲಕೃಷ್ಣ, ರಾಣಾ ದಗು ಬಾಟಿ, ಜ್ಯೂನಿ ಯರ್ ಎನ್‌ಟಿಆರ್, ಚಿರಂಜೀವಿ, ಪ್ರಕಾಶ್ ರಾಜ್, ರಾಮ್‌ಚರಣ್, ಮಂಚು ಮನೋಜ್, ನರೇಶ್, ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಅಲಿ ಸೇರಿ ಹಲವರು ಪುನೀತ್ ಪಾರ್ಥಿವ ಶರೀರಕ್ಕೆ ಕೈಮುಗಿದು ಕಣ್ಣೀರಿಟ್ಟಿರು. ಪಕ್ಕದಲ್ಲಿಯೇ ನಿಂತಿದ್ದ ಶಿವರಾಜ್ ಕುಮಾರ್ ಕೂಡ ಭಾವುಕರಾಗಿ ಕಣ್ಣೀರಿಟ್ಟರು. ನಟರೆಲ್ಲರೂ ಅವರನ್ನು ಬಿಗಿ ದಪ್ಪಿ ಧೈರ್ಯ ತುಂಬಿದರು. ಬಳಿಕ ಡಾ|ರಾಜ್ ಕುಟುಂಬದ ಜೊತೆಗಿನ ಬಾಂಧವ್ಯ, ಪುನೀತ್ ಕುರಿತ ತಮ್ಮ ಮಾತುಗಳನ್ನು ಹಂಚಿಕೊಂಡರು.
ಪಾರ್ಥಿವ ಶರೀರದ ಸಮೀಪಕ್ಕೆ ಬಂದ ಜ್ಯೂ.ಎನ್‌ಟಿಆರ್ ತದೇಕಚಿತ್ತದಿಂದ ಪುನೀತ್ ದೇಹವನ್ನೇ ನೋಡುತ್ತಾ ನಿಂತುಬಿಟ್ಟರು. ಒಂದೆರಡು ನಿಮಿಷ ಅವರು ದೃಷ್ಟಿ ಕದಲಿಸಲೇ ಇಲ್ಲ. “ಅಪ್ಪು ಅಪ್ಪು …’ ಎಂದು ನಟ ಪ್ರಕಾಶ್ ರಾಜ್ ದುಃಖಿಸಿದರು.
“ರಾಜ್‌ಕುಮಾರ್ ಕುಟುಂಬ ಎಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿ ದ್ದರು. ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ. ಒಪ್ಪಿಕೊಳ್ಳಲು ಕಷ್ಟಕರವಾಗಿದೆ. ಭಗವಂತ ಪುನೀತ್‌ಗೆ ಅನ್ಯಾಯ ಮಾಡಿದ. ಆ ದೇವರೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಬೆಂಗಳೂ ರಿಗೆ ಯಾವಾಗ ಬಂದರೂ ಅವರನ್ನ ಭೇಟಿಯಾಗುತ್ತಿದ್ದೆ . ಡಾ|ರಾಜ್ ಕುಮಾರ್ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆ . ಅವರ ಕುಟುಂಬಸ್ಥರ ಜತೆ ಯಾವಾಗಲೂ ಮಾತನಾಡುತ್ತಿದ್ದೆ . ಪುನೀತ್ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ’ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳುತ್ತಾ ಭಾವುಕರಾದರು.
ತೆಲುಗು ಹಾಸ್ಯ ನಟ ಅಲಿ ಮಾತನಾಡಿ, “ಒಳ್ಳೆಯವರನ್ನು ದೇವರು ಬೇಗ ಕರೆದುಕೊಂಡು ಹೋಗ್ತಾರೆ. ಭಗವಂತನ ಇಚ್ಛೆ ಏನೆಂದು ಯಾರಿಗೂ ಗೊತ್ತಿರುವುದಿಲ್ಲ. ಕನ್ನಡ ಚಿತ್ರರಂಗ ಒಳ್ಳೆಯ ನಟನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದರು. “ಪುನೀತ್ ಸದಾ ನನ್ನನ್ನು ಅಣ್ಣ ಎಂದು ಕರೆಯುತ್ತಿದ್ದರು’ ಎಂದು ಸ್ಮರಿಸಿದರು. ಅಂತಿಮ ನಮನ ಸಲ್ಲಿಸಿದ ಬಳಿಕ ದುಃಖ ವ್ಯಕ್ತಪಡಿಸಿದ ವಿಕ್ಟರಿ ವೆಂಕಟೇಶ್, “ಪುನೀತ್ ನಿಧನ ಚಿತ್ರರಂಗಕ್ಕೆ ಅತ್ಯಂತ ದೊಡ್ಡ ನಷ್ಟ’ ಎಂದರು. “ಪುನೀತ್ ತುಂಬಾ ಒಳ್ಳೆಯ ಮನುಷ್ಯ. ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಿದ್ದರು. ವಿ ಮಿಸ್ ಯೂ ಅಪ್ಪು’ ಎಂದು ನಟ ಶ್ರೀಕಾಂತ್ ದುಃಖ ವ್ಯಕ್ತಪಡಿಸಿದರು. “ಜೇಮ್ಸ…’ ಚಿತ್ರದಲ್ಲಿ ನಾನು ನಟನೆ ಮಾಡಿದ್ದೆ . ತೆಲುಗು ಭಾಷೆಯಲ್ಲೂ ಸಿನಿಮಾ ಬರುತ್ತಿತ್ತು. ಆದರೆ ಈಗ ಅವರು ಇಲ್ಲದಿರುವುದು ನೋವಾಗುತ್ತಿದೆ. ವಾರದ ಹಿಂದೆಯೂ ನನಗೆ ಕರೆ ಮಾಡಿದ್ದರು. ಚಿತ್ರದ ಡಬ್ಬಿಂಗ್ ಸಂಬಂಧ ಮಾತಾಡಿದ್ದರು ಎಂದು ಶ್ರೀಕಾಂತ್ ನೆನಪಿಸಿಕೊಂಡರು.
ಅಪ್ಪ, ಅಮ್ಮನ ಮಡಿಲಲ್ಲೇ ಕಂದನಿಗೆ ಸಮಾಧಿ
ಬೆಂಗಳೂರು: ಪುನೀತ್ ಪಾರ್ಥಿವ ಶರೀರವನ್ನು ಕಂಠೀರವ ಸ್ಟೂಡಿಯೋ ಆವರಣದಲ್ಲಿ ಅವರ ಅಪ್ಪ, ಅಮ್ಮನ ಸಮಾಧಿಯ ಸಮೀಪವೇ ಮಣ್ಣು ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಂಠೀರವ ಸ್ಟೂಡಿಯೋ ಆವರಣದಲ್ಲಿರುವ ವರನಟ ಡಾ|ರಾಜ್‌ಕುಮಾರ್ ಅವರ ಸಮಾಧಿಯ ಸಮೀಪದಲ್ಲೇ ಪಾರ್ವತಮ್ಮ ಅವರ ಸಮಾಧಿ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಪುನೀತ್ ಶರೀರವನ್ನು ಮಣ್ಣುಮಾಡುವುದರಿಂದ ಅಲ್ಲಿಯೇ ಅವರ ಸಮಾಧಿ ನಿರ್ಮಾಣವಾಗಲಿದೆ.
ಅಂತ್ಯಕ್ರಿಯೆ ನಡೆಯಲಿರುವ ಜಾಗ ಹೊರತು ಪಡಿಸಿ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಡಾ|ರಾಜ್ ಕುಟುಂಬ ವರ್ಗ ಸಹಿತವಾಗಿ ನಿರ್ದಿಷ್ಟ ಸಂಖ್ಯೆಯ ಅತಿಥಿಗಳಿಗಷ್ಟೇ ಅಂತ್ಯಕ್ರಿಯೆ ಸಂದರ್ಭ ದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ರೀತಿಯಲ್ಲೂ ಸಮಸ್ಯೆ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪೊಲೀಸ್ ಭದ್ರತೆ: ಕಂಠೀರವ ಸ್ಟೂಡಿಯೋ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾ ಗಿದೆ. ಮುಖ್ಯದ್ವಾರ ಹೊರತುಪಡಿಸಿ ಬೇರೆಲ್ಲ ದ್ವಾರಗಳನ್ನು ಬಂದ್ ಮಾಡಲಾಗಿದೆ. ಡಾ|ರಾಜ್ ಸಮಾಧಿಗೆ ಹೋಗುವ ದಾರಿಗೂ ನಿರ್ದಿಷ್ಟ ಜಾಗ ಬಿಟ್ಟು, ಉಳಿದೆಲ್ಲ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಭದ್ರತೆ ಕಾಪಾಡಿ ಕೊಳ್ಳಲು ವಿಶೇಷ ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸಮಾಧಿಗೆ ಪುಷ್ಪಾಲಂಕಾರ: ಡಾ|ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ಅವರ ಸಮಾಧಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿದೆ. ಶನಿ ವಾರ ಮಧ್ಯಾಹ್ನದಿಂದಲೇ ಅಲಂಕಾರ ಕಾರ್ಯ ಕೈಗೊಂಡಿದ್ದು, ಸಮಾಧಿಯ ಸಮೀಪಕ್ಕೆ ಸಾರ್ವ ಜನಿಕರು ಸಹಿತವಾಗಿ ಯಾರೂ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ.
ಬೆಟ್ಟದ ಹೂ ಸಿನಿಮಾ ವೀಕ್ಷಿಸಿದ ಎಚ್‌ಡಿಡಿ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಶನಿವಾರ ಪುನೀತ್ ಬಾಲನಟನಾಗಿ ಅಭಿನಯಿಸಿದ್ದ “ಬೆಟ್ಟದ ಹೂ’ ಸಿನಿಮಾ ವೀಕ್ಷಿಸಿದರು. ಶುಕ್ರವಾರ ಪುನೀತ್ ಪಾರ್ಥಿವ ಶರೀರದ ದರ್ಶನ ಮಾಡಿದ್ದ ದೇವೇಗೌಡರು, ಶನಿವಾರ ಪದ್ಮನಾಭನಗರ ನಿವಾಸದಲ್ಲಿ ಬೆಟ್ಟದ ಹೂ ಸಿನಿಮಾ ವೀಕ್ಷಿಸಿದರು. ಈ ವೇಳೆ ಪುನೀತ್ ಅಭಿನಯ ನೋಡಿ ಕಣ್ಣೀರಾದರು. ಎಚ್.ಡಿ.ದೇವೇಗೌಡರು ಪುನೀತ್ ಅಭಿನಯದ ಪೃಥ್ವಿ ಹಾಗೂ ರಾಜಕುಮಾರ್ ಚಿತ್ರವನ್ನು ಅಪ್ಪು ಜತೆಯಲ್ಲೇ ವೀಕ್ಷಿಸಿದ್ದರು. ಡಾ|ರಾಜ್‌ಕುಮಾರ್ ಪುತ್ರ ನಿಜಕ್ಕೂ ಯುವರತ್ನ ಎಂದು ಆಗ ಪ್ರಶಂಸೆ ವ್ಯಕ್ತಪಡಿಸಿದ್ದರು.
ಪುನೀತ್‌ಗೆ ದಶ ದಿಕ್ಕುಗಳಲ್ಲೂ ಶ್ರದ್ಧಾಂಜಲಿ ಸಲ್ಲಿಕೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ನಗರದ ವಿವಿಧ ವೃತ್ತಗಳು, ಆಟೋ, ಟೆಂಪೋ ಹಾಗೂ ಟ್ಯಾಕ್ಸಿ ನಿಲ್ದಾಣ, ಬಸ್ ನಿಲ್ದಾಣಗಳು, ಗಲ್ಲಿ ಗಲ್ಲಿಗಳಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಕೆಲ ಯುವಕರ ತಂಡ ಶನಿವಾರ ಮಧ್ಯಾಹ್ನ ಕಂಠೀರವ ಸ್ಟೇಡಿಯಂನಿಂದ ಕಂಠೀರವ ಸ್ಟೂಡಿಯೋದವರೆಗೆ ಬೈಕ್‌ನಲ್ಲಿ ಅಪ್ಪು ಫೋಟೋ ಹಿಡಿದು, ಕನ್ನಡ ಧ್ವಜದೊಂದಿಗೆ ರ್‍ಯಾಲಿ ನಡೆಸಿದರು. ನಗರದ ದಶದಿಕ್ಕುಗಳಿಂದಲೂ ಅಭಿಮಾನಿಗಳು ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಜ್ಯದ ಬಹುತೇಕ ಎಲ್ಲೆಡೆಯೂ ಶನಿವಾರವಿಡೀ ಇದೇ ದೃಶ್ಯಗಳು ಸಾಮಾನ್ಯವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.