Karkala; ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಆರೋಪ : ಕೃಷ್ಣ ನಾಯಕ್ ಅರ್ಜಿ ವಜಾ
Team Udayavani, Oct 22, 2024, 6:45 AM IST
ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ರಚನೆಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಿಲ್ಪ ಕಲಾವಿದ ಹಾಗೂ ಕ್ರಿಷ್ ಆರ್ಟ್ ವರ್ಲ್ಡ್ ಮುಖ್ಯಸ್ಥ ಕೃಷ್ಣ ನಾಯಕ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣ ಸಂಬಂಧ ಕೃಷ್ಣ ಶೆಟ್ಟಿ ಅವರು ಕಾರ್ಕಳ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್ಐಆರ್ ಹಾಗೂ ಕಾರ್ಕಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಕೃಷ್ಣ ನಾಯಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿ ಆದೇಶಿಸಿದೆ.
ತನಿಖೆಗೆ ಸರಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಇದಲ್ಲದೆ, ಪ್ರಕರಣವನ್ನು ಸಿಐಡಿಗೂ ವಹಿಸಲಾಗಿದೆ. ಅದಕ್ಕೆ ನ್ಯಾಯಾಲಯದಲ್ಲಿ ತಡೆ ಇದೆ. ಈ ಮಧ್ಯೆ ಖಾಸಗಿ ದೂರೊಂದು ದಾಖಲಿಸಲಾಗಿದೆ. ಈ ರೀತಿ ಮೂರು ಬಗೆಯಲ್ಲಿ ಪ್ರಕರಣ ನಡೆಯುತ್ತಿದೆ. ಹೀಗಿದ್ದಾಗ, ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿಯ ಅಣತಿಯಂತೆ ಕಾರ್ಕಳದ ಪೊಲೀಸರು ಬೆಂಗಳೂರಿಗೆ ಬಂದು ಅರ್ಜಿದಾರರ ಮನೆಯಿಂದ ವಸ್ತುಗಳು ಹಾಗೂ ಪ್ರತಿಮೆಯನ್ನು ಎತ್ತಿಕೊಂಡು ಹೋಗಿದ್ದಾರೆ. ನಿರ್ಮಿತಿ ಕೇಂದ್ರಕ್ಕೆ ಕೊಡಲಾದ ಕಾರ್ಯಾದೇಶದಂತೆ ಅರ್ಜಿದಾರರು ತಮ್ಮ ಕೆಲಸ ಮಾಡುತ್ತಿದ್ದಾರೆ. ಕಾನೂನು ತೊಡಕುಗಳನ್ನು ಸೃಷ್ಟಿಸಿ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಪಡಿಸಲಾಗುತ್ತಿದೆ. ಪ್ರಕರಣ ರದ್ದುಪಡಿಸಬೇಕು ಮತ್ತು ಕಾಮಗಾರಿ ಮುಂದುವರಿಸಲು ನಿರ್ಮಿತಿ ಕೇಂದ್ರಕ್ಕೆ ಅನುಮತಿಸಬೇಕು ಎಂದು ಮನವಿ ಮಾಡಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.