Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
ಬೀದಿಗೆ ಬಂದ ಕೆಸರೆರಚಾಟ... ಯತ್ನಾಳ್ ತಂಡಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರಿಂದಲೇ ವಿರೋಧ
Team Udayavani, Nov 26, 2024, 6:55 AM IST
ಬೀದರ್: ರೈತರ ಜಮೀನು, ಮಠ, ಮಂದಿರಗಳಿಗೆ ವಕ್ಫ್ ನೋಟಿಸ್ ವಿರುದ್ಧ ಬಿಜೆಪಿ ಭಿನ್ನರ ಬಣ ಬೀದರ್‌ನಿಂದ ಬೆಳಗಾವಿಯವರೆಗೆ ಆಯೋಜಿಸಿರುವ ಬೃಹತ್ ಜನಜಾಗೃತಿ ಹೋರಾಟಕ್ಕೆ ಸೋಮವಾರ ಬೀದರ್‌ನಲ್ಲಿ ಚಾಲನೆ ದೊರೆತಿದ್ದು, ಈ ಮೂಲಕ ಬಿಜೆಪಿಯ ಬಣ ಸಂಘರ್ಷವೂ ತಾರಕಕ್ಕೇರಿದಂತಾಗಿದೆ.
ವಕ್ಫ್ ಭೂ ಕಬಳಿಕೆ ವಿರುದ್ಧ ಐದು ಜಿಲ್ಲೆಗಳಲ್ಲಿ ಬಿಜೆಪಿ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದ ಬಿಜೆಪಿ ಭಿನ್ನರ ತಂಡ ಹಮ್ಮಿಕೊಂಡಿರುವ ಹೋರಾಟ ಬೀದರ್‌ನಿಂದ ಆರಂಭಗೊಂಡಿದ್ದು, ತಂಡವು ವಕ್ಫ್ ಬೋರ್ಡ್‌ನಿಂದ ಅನ್ಯಾಯಕ್ಕೆ ಒಳಗಾದ ಗ್ರಾಮಗಳಿಗೆ ಭೇಟಿ, ಜನರಿಂದ ಅಹವಾಲು ಸ್ವೀಕರಿಸಿತು.
ಬೀದರ್‌ನ ಝರಣಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ತಂಡ ಧರ್ಮಾಪುರ ಮತ್ತು ಚಟ್ನಳ್ಳಿ ಗ್ರಾಮಕ್ಕೆ ತೆರಳಿ ವಕ್ಫ್ ಹೆಸರು ಸೇರ್ಪಡೆ ಬಗ್ಗೆ ಜನರಿಂದ ಮಾಹಿತಿ ಸಂಗ್ರಹಿಸಿತು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿತು.
ಯಾರ್ಯಾರು ಭಾಗಿ?
ಬಿಜೆಪಿ ಹಿರಿಯ ಶಾಸಕ ಹಾಗೂ ಭಿನ್ನರ ಬಣದ ನೇತೃತ್ವ ವಹಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಪಾದಯಾತ್ರೆಗೆ ಶಾಸಕ ಬಿ.ಪಿ. ಹರೀಶ್, ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮುಖಂಡರಾದ ಎನ್.ಆರ್. ಸಂತೋಷ ಮತ್ತು ಈಶ್ವರಸಿಂಗ್ ಠಾಕೂರ್ ಸಾಥ್ ನೀಡಿದರು.
ಬಿಜೆಪಿ ಒಳ ಗಲಾಟೆ
ತಾಲೂಕಿನ ಧರ್ಮಾಪುರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ್ದ ಯತ್ನಾಳ್ ತಂಡಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿದ್ದು, ಈ ವೇಳೆ ಎರಡೂ ಬಣಗಳ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ಈ ಮೂಲಕ ಕೇಸರಿ ಪಡೆಯ ಆಂತರಿಕ ಕೆಸರೆರಚಾಟ ಮತ್ತೆ ಬೀದಿಗೆ ಬಂದಂತಾಗಿದೆ. ವಕ್ಫ್ ವಿರುದ್ಧ ಯತ್ನಾಳ್ ನೇತೃತ್ವದ ಬಿಜೆಪಿಯ ಭಿನ್ನರ ತಂಡ ಬೀದರ್‌ನಿಂದ ಬೆಳಗಾವಿಯವರೆಗೆ ಹೋರಾಟ ಆರಂಭಿಸಿದೆ. ಜಿಲ್ಲೆಯ ಧರ್ಮಾಪುರ ಗ್ರಾಮದಲ್ಲಿ ಸ್ಥಳೀಯ ಶಾಸಕ ಡಾಣ ಶೈಲೇಂದ್ರ ಬೆಲ್ದಾಳೆ ಮತ್ತು ಯತ್ನಾಳ್ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಇದು ಅಲ್ಲಿ ಸೇರಿದ್ದ ಗ್ರಾಮಸ್ಥರಲ್ಲಿ ಗೊಂದಲ ಉಂಟು ಮಾಡಿತು. ಈ ಹೋರಾಟದ ಬಗ್ಗೆ ಸ್ಥಳೀಯ ಶಾಸಕರು, ಕಾರ್ಯಕರ್ತರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಯತ್ನಾಳ್ ವಿರುದ್ಧ ಘೋಷಣೆ ಕೂಗಿದರು. ಅನಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಸಂಘರ್ಷ ಏಕೆ?
ವಕ್ಫ್ ವಿರುದ್ಧ ಪಕ್ಷದ ಅಧಿಕೃತ ಹೋರಾಟಕ್ಕೆ ಮುನ್ನವೇ ಯತ್ನಾಳ್ ತಂಡದಿಂದ ಅಭಿಯಾನ
ಬೀದರ್‌ನಿಂದ ಬೆಳಗಾವಿವರೆಗೆ ಬೃಹತ್ ಜನಜಾಗೃತಿ ಹೋರಾಟಕ್ಕೆ ಬೀದರ್‌ನಲ್ಲಿ ಚಾಲನೆ
ಪಾದಯಾತ್ರೆಗೆ ಬಿಜೆಪಿ ಶಾಸಕ, ಮಾಜಿ ಸಚಿವ, ಮಾಜಿ ಸಂಸದರ ಸಾಥ್
ಆದರೆ ಯತ್ನಾಳ್ ತಂಡಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರಿಂದಲೇ ವಿರೋಧ
ಶಾಸಕ ಡಾ| ಶೈಲೇಂದ್ರ ಬೆಲ್ದಾಳೆ ಮತ್ತು ಯತ್ನಾಳ್ ಬೆಂಬಲಿಗರ ಮಧ್ಯೆ ಗಲಾಟೆ
ವಕ್ಫ್ ವಿರುದ್ಧ ಡಿ.4ರಿಂದ 6ರವರೆಗೆ ಪಕ್ಷದ ಅಧಿಕೃತ ರಾಜ್ಯ ಪ್ರವಾಸಕ್ಕೆ ಸಿದ್ಧತೆ
ಭಿನ್ನ ನಾಯಕರ ವಿರುದ್ಧ ಶಿಸ್ತುಕ್ರಮ: ರಾಜ್ಯಾಧ್ಯಕ್ಷ ವಿಜಯೇಂದ್ರ ಪಟ್ಟು ?
ತಮ್ಮ ವಿರುದ್ಧ ನಿರಂತರ ಬಂಡಾಯ ಸಾರಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ವರಿಷ್ಠರ ಮೇಲೆ ಬಲವಾದ ಒತ್ತಡ ಹೇರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜ ಯೇಂದ್ರ ಮುಂದಾಗಿದ್ದು, ಡಿಸೆಂಬರ್‌ನಲ್ಲಿ ಇದೇ ಉದ್ದೇಶಕ್ಕಾಗಿ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಉಪಸಮರದ ಬೆನ್ನಲ್ಲೇ ವಿಜ ಯೇಂದ್ರ ರಾಜೀನಾಮೆಗೆ ಯತ್ನಾಳ್ ಮಾಡಿರುವ ಆಗ್ರಹ, ವಕ್ಫ್ ಬಗ್ಗೆ ಯತ್ನಾಳ್ ಬಣ ನಡೆಸುತ್ತಿರುವ ಅಭಿ ಯಾನ ವಿಜಯೇಂದ್ರ ಬಣವನ್ನು ತೀವ್ರವಾಗಿ ಕೆರಳಿಸಿದೆ. ಜತೆಗೆ ವಿರೋಧಿ ಚಟುವಟಿಕೆಯನ್ನು ಹೆಚ್ಚಿಸುತ್ತಿರುವುದರಿಂದ ಅವರನ್ನು ಹಣಿಯುವುದಕ್ಕಾಗಿ ವಿಜಯೇಂದ್ರ ವರಿಷ್ಠರ ಭೇಟಿಗೆ ನಿರ್ಧರಿಸಿದ್ದಾರೆ.
ಡಿಸೆಂಬರ್‌ನಲ್ಲಿ ಬಿಜೆಪಿಯ ಸಂಘಟನ ಪರ್ವ ಮುಕ್ತಾಯಗೊಳ್ಳುತ್ತದೆ. ಸಂಸತ್ ಹಾಗೂ ವಿಧಾನ ಮಂಡಲದ ಅಧಿವೇಶನವೂ ಸಮಾಪನಗೊಳ್ಳುತ್ತದೆ. ಹೀಗಾಗಿ ಡಿಸೆಂಬರ್ ಕೊನೆಯ ವಾರ ಅವರು ದಿಲ್ಲಿಗೆ ತೆರಳಲು ನಿರ್ಧರಿಸಿದ್ದು, ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಆಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೋರ್ ಕಮಿಟಿಯಲ್ಲಿ ಮಂಡನೆ
ಯತ್ನಾಳ್ ಅವರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದರೂ ಬಿಜೆಪಿಯ ಶಾಸಕರು, ಸಂಸದರು ಈ ಬಗ್ಗೆ ಒಮ್ಮೆಯೂ ತುಟಿ ಬಿಚ್ಚಿಲ್ಲ. ವಿಜಯೇಂದ್ರ ಪರ ಯಾರೂ ಮಾತನಾಡಿಲ್ಲ. ಪಕ್ಷದ ಪದಾಧಿಕಾರಿಗಳು ಕೂಡ ಖಂಡಿಸಿಲ್ಲ. ಇದು ವಿಜಯೇಂದ್ರ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಇವರೆಲ್ಲರ ಮೌನ ಸಮ್ಮತಿ ಯತ್ನಾಳ್ ಪರ ಇದೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಘಟಕದಿಂದ ವರಿಷ್ಠರಿಗೆ ಪ್ರಸ್ತಾವ ಕಳುಹಿಸುವ ತಂತ್ರ ಹೆಣೆದಿದ್ದಾರೆ.
ಈ ವಿಚಾರವನ್ನು ಕೋರ್ ಕಮಿಟಿಯಲ್ಲಿ ಮಂಡಿಸಿ, ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಬಣ ಮಾಡುವ ಟೀಕೆಯನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ, ಇದು ಪಕ್ಷ ವಿರೋಧಿ ಚಟುವಟಿಕೆ ಎಂಬ ನಿರ್ಣಯ ತೆಗೆದುಕೊಂಡು ವರಿಷ್ಠರಿಗೆ ರವಾನೆ ಮಾಡುವ ಲೆಕ್ಕಾಚಾರ ಹೊಂದಿದ್ದಾರೆ. ಡಿ. 7ರಂದು ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ವಿಚಾರ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ: ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವುದಕ್ಕೂ ವಿಜಯೇಂದ್ರ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಪದಾಧಿಕಾರಿಗಳೆಲ್ಲರೂ ವಿಜಯೇಂದ್ರ ನಿಷ್ಠರು ಎಂಬ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ನಿರ್ಣಯಕ್ಕೆ ಬರಲಾಗಿದೆ. ಈ ಪ್ರಕ್ರಿಯೆಯೂ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.
ಮುಂದುವರಿಯುವ ವಿಶ್ವಾಸ
ವಿಜಯೇಂದ್ರ ಅವರನ್ನು ಡಿಸೆಂಬರ್ ತಿಂಗಳಿನಲ್ಲಿ ವರಿಷ್ಠರು ಬದಲಾಯಿಸುತ್ತಾರೆಂಬ ನಿರೀಕ್ಷೆಯನ್ನು ವಿರೋಧಿ ಬಣ ಹೊಂದಿದೆ. ಆದರೆ ಇದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ನಡೆಸಿರುವ ವಿಜಯೇಂದ್ರ, ಮುಂದಿನ ಅವಧಿಗೂ ಮುಂದುವರಿಯುವ ವಿಶ್ವಾಸದಲ್ಲಿ ಇದ್ದಾರೆ.
ಈ ಬಗ್ಗೆ ತಮ್ಮ ಆಪ್ತರ ಬಳಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುವುದಿಲ್ಲ. ಡಿಸೆಂಬರ್ ಬಳಿಕ ಎಲ್ಲವೂ ತಮ್ಮ ನಿಯಂತ್ರಣಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಕ್ಫ್ : ಡಿ. 4ರಿಂದ ಬಿಜೆಪಿ ಅಧಿಕೃತ ರಾಜ್ಯ ಪ್ರವಾಸ
ಯತ್ನಾಳ್ ತಂಡದಿಂದ ವಕ್ಫ್ ವಿರುದ್ಧ ಅಭಿಯಾನ ಆರಂಭವಾದ ಬೆನ್ನಲ್ಲೇ ಬಿಜೆಪಿ ರಾಜ್ಯ ಘಟಕ ದಿಂದಲೂ ರಾಜ್ಯ ಪ್ರವಾಸ ಘೋಷಣೆ ಮಾಡಲಾಗಿದ್ದು, ಡಿ. 4ರಿಂದ 6ರ ವರೆಗೆ 3 ತಂಡಗಳಲ್ಲಿ ಪ್ರವಾಸ ನಡೆಯಲಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಈ ವಿಷಯ ತಿಳಿಸಿದ್ದು, ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಈ ಪ್ರವಾಸ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.