ಮತ್ತೆ ಅಧಿಕಾರದ ಕಹಳೆ ಮೊಳಗಿಸಿದ ಕಮಲ ಪಡೆ
"ಜನಸ್ಪಂದನ'ದ ಮೂಲಕ ಬಯಲು ಸೀಮೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ
Team Udayavani, Sep 11, 2022, 7:15 AM IST
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ಬಿಜೆಪಿ ಬೃಹತ್ ಶಕ್ತಿ ಪ್ರದರ್ಶನದ ಮೂಲಕ ಸಾರಿದೆ. “ಜನಸ್ಪಂದನ’ದ ವೇದಿಕೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯ ಕಮಲ ಅರಳಿಸುವ ಸಂಕಲ್ಪವನ್ನು ಮಾಡಿದೆ. ಆ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಎಂಬ ಸಂದೇಶವನ್ನೂ ಬಿಜೆಪಿ ನಾಯಕರು ನೀಡಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಶನಿವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮ ದಿನಾಚರಣೆಯ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಪ್ರತ್ಯುತ್ತರ ನೀಡಲೆಂದೇ ಕಾರ್ಯಕ್ರಮದ ವೇದಿಕೆಯನ್ನು ಬಳಸಿಕೊಂಡರು.
ಪ್ರಮುಖವಾಗಿ ಬಯಲು ಸೀಮೆಯ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲೆಯ ಕೆಲವು ಭಾಗದ ಜನರಿಗೆ ಮಾತ್ರ ಸೀಮಿತವಾಗಿ ಆಯೋಜನೆಯಾಗಿದ್ದ ಜನಸ್ಪಂದನ ಕಾರ್ಯಕ್ರಮದ ಮೂಲಕ “ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿ ಇಲ್ಲ’ ಎನ್ನುವ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಆರೋಪಕ್ಕೆ ಪ್ರತ್ಯುತ್ತರ ನೀಡಲೇಂದೆ ಬಿಜೆಪಿ ಈ ಸಮಾವೇಶ ಆಯೋಜಿಸಿತ್ತು. ಅಲ್ಲದೇ ಈ ಭಾಗದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮಿಷನ್ 150 ಗುರಿ ಮುಟ್ಟಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಎಲ್ಲ ನಾಯಕರೂ ಪುನರುಚ್ಚರಿಸಿದರು.
ಹೆಚ್ಚಿದ ಉತ್ಸಾಹ:
ಸಮಾವೇಶಕ್ಕೆ ಆಗಮಿಸಿದ್ದ ಜನಸ್ತೋಮ ಬಿಜೆಪಿ ನಾಯಕರ ಉತ್ಸಾಹವನ್ನು ಹೆಚ್ಚಿಸಿತ್ತು. ಎಲ್ಲ ನಾಯಕರೂ ತಮ್ಮ ಸರ್ಕಾರದ ಸಾಧನೆಯ ಜೊತೆಗೆ ಕಾಂಗ್ರೆಸ್ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ವಿಶೇಷವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನು ಹೊರಗೆಡವುವುದಾಗಿ ಘೋಷಣೆ ಮಾಡಿದರು.
ಕಾಂಗ್ರೆಸ್‌ನದ್ದು 100 ಪರ್ಸೆಂಟ್ ಭ್ರಷ್ಟಾಚಾರ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, 2018ರಲ್ಲಿ ಬಿಜೆಪಿಗೆ ಹೆಚ್ಚಿನ ಜನ ಬೆಂಬಲ ಇದ್ದರೂ ಕಾಂಗ್ರೆಸ್ ಅಧಿಕಾರದ ಆಸೆಯಿಂದ ಬಿಜೆಪಿಯನ್ನು ದೂರ ಇಟ್ಟು, ಮೈತ್ರಿ ಸರ್ಕಾರ ರಚಿಸಿತು. ಆದರೆ, ಅಲ್ಲಿನ 17 ಜನ ವೀರರು ಹೊರ ಬಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅನ್ನಭಾಗ್ಯ ಯೋಜನೆಯ ಭ್ರಷ್ಟಾಚಾರದ ತನಿಖೆ ನಡೆಸಿದ್ದ ಅಧಿಕಾರಿ ಅನುರಾಗ್ ತಿವಾರಿ ಅನುಮಾನಾಸ್ಪದವಾಗಿ ಸಾವಿಗೀಡಾದರು. ಅಕ್ರಮ ಮರಳು ದಂಧೆ, ಹಾಸಿಗೆ ದಿಂಬು ಹಗರಣ, ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನದ್ದು 100% ಸರ್ಕಾರ. ಕೆಲಸ ಮಾಡದೇ ಬಿಲ್ ತೆಗೆಯುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು ಎಂದು ಆರೋಪಿಸಿದರು.
ನಾನು ಯಡಿಯೂರಪ್ಪ ಅವರ ನೇತೃತ್ವದ ಯೊಜನೆಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ವಿದ್ಯಾನಿಧಿ ಯೋಜನೆಯನ್ನು 20 ಲಕ್ಷ ಮಕ್ಕಳಿಗೆ ನೀಡಲಾಗುತ್ತಿದೆ. ರೈತರಿಗೆ ರೈತ ಶಕ್ತಿ ಯೋಜನೆ, ಯಶಸ್ವಿನಿ ಯೋಜನೆ, ಹಾಲು ಉತ್ಪಾದಕರಿಗೆ ಬ್ಯಾಂಕ್ ಸ್ಥಾಪನೆ ಮಾಡುತ್ತಿದ್ದೇವೆ. ಅದರಿಂದ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಹೆಚ್ಚಳ ಮಾಡಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ ಎಸ್ಟಿ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಎಸ್ಸಿ ಎಸ್ಟಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಎತ್ತಿನಹೊಳೆ ಯೋಜನೆ ಮೂಲಕ ಕೋಲಾರ್ ಫೀಡರ್‌ಗೆ ನೀರು ಹರಿಸುತ್ತೇನೆ. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ನಗರಗಳನ್ನು ಸೆಟಲೈಟ್ ಟೌನ್‌ಗಳಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ತಾಕತ್ ಇದ್ದರೆ ತಡೆಯಿರಿ:
ನಾವು ಜನಸ್ಪಂದನ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತೇವೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಾಕತ್ ಇದ್ದರೆ ಕಾಂಗ್ರೆಸ್ ನಾಯಕರು ತಡೆಯಲಿ ಎಂದು ಸವಾಲು ಹಾಕಿದರು.
ರಾಹುಲ್ ವಿರುದ್ಧ ವಾಗ್ಧಾಳಿ:
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ಅವರು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ಧಾಳಿ ನಡೆಸಿದರು. ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ದೇಶವನ್ನು ವಿಭಜಿಸುವುದಾಗಿ ಹೇಳಿದವರನ್ನೇ ಜೊತೆಗಿಟ್ಟುಕೊಂಡು ನಡೆಯುತ್ತಿದ್ದಾರೆ. ಅವರನ್ನು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಪ್ರಶ್ನಿಸಬೇಕು ಎಂದು ಹೇಳಿದರು. ಅಲ್ಲದೇ, ಜನಸ್ಪಂದನ ವೇದಿಕೆ ಸಂಘರ್ಷದ ವೇದಿಕೆಯಾಗಿದ್ದು, ಈ ವೇದಿಕೆ ಮೂಲಕ ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ದೇಶದಲ್ಲಿ ಮೋದಿಯವರು ಪ್ರಧಾನಿಯಾಗಿರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡುತ್ತಿರುವ ಆರೋಪಗಳಿಗೆಲ್ಲ ಅಧಿವೇಶನದಲ್ಲಿ ಉತ್ತರ ನೀಡಲಾಗುವುದು. ರಾಜ್ಯದಲ್ಲಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗುವುದು ಎಂದು ಹೇಳಿದರು.
ಡಾ. ಸುಧಾಕರ್‌ಗೆ ಬಹುಪರಾಕ್
ಬಿಜೆಪಿಯ ಶಕ್ತಿ ಕಡಿಮೆ ಇರುವ ಬಯಲು ಸೀಮೆ ಪ್ರದೇಶದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಅವರಿಗೆ ಸಮಾವೇಶದಲ್ಲಿ ಮಾತನಾಡಿದ ಎಲ್ಲ ನಾಯಕರೂ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ನಳಿನ್‌ಕುಮಾರ್ ಕಟೀಲ್, ಸಿ.ಟಿ. ರವಿ, ಸ್ಮತಿ ಇರಾನಿ ಸೇರಿ ಎಲ್ಲ ನಾಯಕರೂ ಕಾರ್ಯಕ್ರಮ ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ ಆಯೋಜನೆ ಮಾಡಿದ್ದಕ್ಕೆ ಸಚಿವ ಸುಧಾಕರ್ ಹಾಗೂ ಅವರಿಗೆ ಜೊತೆಯಾಗಿ ನಿಂತ ಸಚಿವರಾದ ಎಂ.ಟಿ.ಬಿ. ನಾಗರಾಜ್, ಮುನಿರತ್ನ ಅವರಿಗೆ ಅಭಿನಂದನೆ ಸಲ್ಲಿಸಿದರು. ಯಡಿಯೂರಪ್ಪ ಅವರಂತೂ ತಮ್ಮ ಭಾಷಣದಲ್ಲಿ ಏಳು ಬಾರಿ ಡಾ.ಸುಧಾಕರ್ ಅವರ ಹೆಸರು ಪ್ರಸ್ತಾಪಿಸಿ ಈ ಭಾಗದಲ್ಲಿ ಇಷ್ಟು ಜನಸ್ತೋಮ ಸೇರಿಸಿರುವ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕತ್ತಿ, ಪ್ರವೀಣ್ ನೆಟ್ಟಾರುಗೆ ಶ್ರದ್ದಾಂಜಲಿ
ಇತ್ತೀಚೆಗೆ ನಿಧನ ಹೊಂದಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಉಮೇಶ್ ಕತ್ತಿ ಹಾಗೂ ಮಂಗಳೂರಿನಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರುಗೆ ಸಮಾವೇಶದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಲ್ಲದೆ, ಪ್ರವೀಣ್ ನೆಟ್ಟಾರು ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದರು.
ಸಚಿವರಿಂದ ನೃತ್ಯ
ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡದ ಕಲಾವಿದರು ಹಾಡಿದ ಹಾಡಿಗೆ ಸಚಿವ ಎಂ.ಟಿ.ಬಿ. ನಾಗರಾಜ್ ಹಾಗೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಕುಣಿಯುವ ಮೂಲಕ ಜನರಿಗೆ ಮನರಂಜನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.