Valmiki ಹಗರಣಕ್ಕೆ ಬಿ. ನಾಗೇಂದ್ರ ಸೂತ್ರಧಾರ: ಇ.ಡಿ. ಆರೋಪಪಟ್ಟಿ
ನಾಗೇಂದ್ರ ಹೆಸರು ಕೈಬಿಟ್ಟಿದ್ದ ಎಸ್‌ಐಟಿ ಇ.ಡಿ. ಸೇರ್ಪಡೆ ದದ್ದಲ್ ಸದ್ಯ ನಿರಾಳ
Team Udayavani, Sep 11, 2024, 7:05 AM IST
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ಸೂತ್ರಧಾರ ಮಾಜಿ ಸಚಿವ ಬಿ. ನಾಗೇಂದ್ರ ಆಗಿದ್ದು, ಇವರ ಸೂಚನೆಯ ಮೇರೆಗೆ ಇತರ ಆರೋಪಿಗಳು ನಿಗಮದ ಹಣವನ್ನು ಲಪಟಾಯಿಸಿದ್ದಾರೆ ಎಂದು ಹಗರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ಇ.ಡಿ.) ತನ್ನ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ರಾಜ್ಯ ಸರಕಾರದ ಎಸ್‌ಐಟಿ ತನಿಖಾ ವರದಿಯಲ್ಲಿ ನಾಗೇಂದ್ರ ಹೆಸರು ಕೈಬಿಡ ಲಾಗಿತ್ತು. ವಿಶೇಷವೆಂದರೆ ವಾಲ್ಮೀಕಿ ನಿಗಮದ ಹಾಲಿ ಅಧ್ಯಕ್ಷ, ಶಾಸಕ ಬಸವನಗೌಡ ದದ್ದಲ್ ಹೆಸರು ಇ.ಡಿ.ಯ ಆರೋಪಿಪಟ್ಟಿಯಲ್ಲಿ ಕಂಡುಬಂದಿಲ್ಲ.
ನಿಗಮದಲ್ಲಿ ನಡೆದಿದ್ದ ಹಗರಣದ ತನಿಖೆ ನಡೆಸಿದ್ದ ಇ.ಡಿ.ಯು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 4,970 ಪುಟಗಳ ದೋಷಾ ರೋಪ ಪಟ್ಟಿ ಸಲ್ಲಿಸಿದೆ.
ನಾಗೇಂದ್ರ ಅವರ ಆಣತಿಯಂತೆ ಸಂಪೂರ್ಣ ಹಣದ ವಹಿವಾಟು ನಡೆದಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನಿಗಮದ 20.19 ಕೋಟಿ ರೂ. ಹಣವನ್ನು ಕಳೆದ ಬಳ್ಳಾರಿ ಕ್ಷೇತ್ರದ ಲೋಕಸಭಾ ಚುನಾವಣೆಗೂ ಬಳಸಲಾಗಿದೆ. ವಿವಿಧ ಬ್ಯಾಂಕ್‌ಗಳಿಗೆ ನಿಗಮದ ದುಡ್ಡನ್ನು ವರ್ಗಾವಣೆ ಮಾಡಿಕೊಂಡು ಬೂತ್ ಮಟ್ಟದಲ್ಲಿ ಹಣ ಹಂಚಿಕೆ ಮಾಡಲಾಗಿದೆ.
ನಾಗೇಂದ್ರ ಅವರ ಆಪ್ತ ವಿಜಯ್ ಕುಮಾರ್ ಮೊಬೈಲನ್ನು ಇ.ಡಿ. ಅಧಿಕಾರಿಗಳು ಕೂಲಂಕಷ ವಾಗಿ ಪರಿಶೀಲಿಸಿದಾಗ ಅದರಲ್ಲಿ ನಗದು ಹಣದ ಚಿತ್ರ ಮತ್ತಿತರ ಸಾಕ್ಷ್ಯಗಳು ಸಿಕ್ಕಿವೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ವಿವಿಧ ಬ್ಯಾಂಕ್ ಖಾತೆಗಳನ್ನು ತೆರೆದು ನಿಗಮದ ಹಣವನ್ನು ಆರೋಪಿಗಳು ಲಪ ಟಾಯಿಸಿರುವುದು, ಬೇರೆ ಬೇರೆ ಮೂಲಗಳಿಂದ ಅವುಗಳನ್ನು ಡ್ರಾ ಮಾಡಿರುವ ಕುರಿತು 4,970 ಪುಟಗಳ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಆರೋಪಿಗಳು ನಿಗಮದ ಹಣ ವರ್ಗಾವಣೆ ಮಾಡಿಕೊಂಡಿರುವ ದಾಖಲೆ ಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ.
ಮೊದಲ ಆರೋಪಿ ನಾಗೇಂದ್ರ
ನಾಗೇಂದ್ರ (ಎ 1), ಸತ್ಯನಾರಾಯಣ ವರ್ಮಾ (ಎ 2), ಮತ್ತೋರ್ವ ಸತ್ಯನಾರಾಯಣ (ಎ 3), ನಿಗಮದ ಮಾಜಿ ಎಂ.ಡಿ. ಪದ್ಮನಾಭ, ನಾಗೇಂದ್ರ ಅವರ ಆಪ್ತ ಕಾರ್ಯದರ್ಶಿ ವಿಜಯ್ ಕುಮಾರ್, ನಿಗಮದ ಸಿಬಂದಿ ಪರಶುರಾಮ್ ಸಹಿತ ಒಟ್ಟು 25 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. 15 ಮಂದಿ ಸಾಕ್ಷಿಗಳನ್ನು ಉಲ್ಲೇಖೀಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವಾರು ಎಲೆಕ್ಟ್ರಾನಿಕ್ ದಾಖಲೆಗಳು, ಮೊಬೈಲ್ ಸಾಕ್ಷ್ಯ, ನಿಗಮದ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದ ಬ್ಯಾಂಕ್ ಖಾತೆ ಸೇರಿ ಹಲವು ಸಾಕ್ಷ್ಯಗಳನ್ನುಉಲ್ಲೇಖಿಸಲಾಗಿದೆ.
ನಾಗೇಂದ್ರ ಸೂಚನೆ ಮೇರೆಗೆ ಕೃತ್ಯ
ಎಂ.ಜಿ. ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ಹೊಸ ಖಾತೆ ತೆರೆದು ನಿಗಮದ ಹಣವನ್ನು ಅಕ್ರಮವಾಗಿ ಆ ಖಾತೆಗೆ ವರ್ಗಾವಣೆ ಮಾಡಲು ಹೇಳಿದ್ದೇ ನಾಗೇಂದ್ರ. ಅವರು ಕೊಟ್ಟ ಯೋಜನೆಯಂತೆ ಇತರ ಆರೋಪಿಗಳು ನಿಗಮದ ಹಣ ವರ್ಗಾವಣೆ ಮಾಡಿದ್ದಾರೆ. ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್ ಮೂಲಕ ಕೃತ್ಯ ಎಸಗಲಾಗಿದೆ. ಹಗರಣದಲ್ಲಿ ಶಾಮೀಲಾಗಿರುವ ನಿಗಮದ ಮಾಜಿ ಅಧಿಕಾರಿಗಳು, ನಾಗೇಂದ್ರ ಆಪ್ತರು ವಿಚಾರಣೆ ವೇಳೆ ಕೊಟ್ಟ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಎಂ.ಡಿ. ಸತ್ಯನಾರಾಯಣ ವರ್ಮಾ ಜತೆ ನಾಗೇಂದ್ರ ನಿಕಟ ಸಂಪರ್ಕ ಹೊಂದಿದ್ದರು ಎಂದು ಇ.ಡಿ. ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯ ಶಾಸಕ ದದ್ದಲ್‌ಗೆ ನೆಮ್ಮದಿ
ವಾಲ್ಮೀಕಿ ಮಹರ್ಷಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್ ಅವರ ಹೆಸರನ್ನು ಆರೋಪಿಗಳ ಹೆಸರಿನಲ್ಲಿ ಇ.ಡಿ. ಉಲ್ಲೇಖೀಸಿಲ್ಲ. ಆದರೆ ಇ.ಡಿ. ತನಿಖೆ ಇನ್ನೂ ಮುಂದುವರಿಯಲಿದ್ದು, ಮುಂದೆ ಅವರ ಪಾತ್ರ ಕಂಡುಬಂದರೆ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸುವ ಸಾಧ್ಯತೆಗಳಿವೆ. ಸದ್ಯದ ಮಟ್ಟಿಗೆ ಬಂಧನ ಭೀತಿಯಿಂದ ದದ್ದಲ್ ಪಾರಾಗಿದ್ದಾರೆ.
ಎಸ್‌ಐಟಿ ಸಲ್ಲಿಸಿದ್ದ
ಆರೋಪ ಪಟ್ಟಿಯಲ್ಲಿ
ನಾಗೇಂದ್ರ ಹೆಸರಿಲ್ಲ
ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಪೊಲೀಸರು 12 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಈ ಹಿಂದೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ, ಬಸವನಗೌಡ ದದ್ದಲ್ ಹೆಸರನ್ನು ಉಲ್ಲೇಖಿಸಿರಲಿಲ್ಲ. ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮದ ಎಂ.ಡಿ. ಪದನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ವಿರುದ್ಧ ಎಸ್‌ಐಟಿ ಆರೋಪ ಪಟ್ಟಿ ಸಲ್ಲಿಸಿತ್ತು.
ಚಾರ್ಜ್‌ಶೀಟ್‌ನಲ್ಲಿ ಏನಿದೆ?
-ಮಾಜಿ ಸಚಿವ ನಾಗೇಂದ್ರ ಸೂಚನೆ ಮೇರೆಗೆ ವಾಲ್ಮೀಕಿ ನಿಗಮದ ಹಣ ಲಪಟಾಯಿಸಲಾಗಿದೆ
-ಬಳ್ಳಾರಿ ಲೋಕಸಭಾ ಚುನಾವಣೆ ವೇಳೆಯೂ ನಿಗಮದ 20.19 ಕೋಟಿ ರೂ. ಹಣ ಬಳಕೆ
-ವಿವಿಧ ಬ್ಯಾಂಕ್ ಖಾತೆಗಳಿಗೆ ನಿಗಮದ ಹಣ ವರ್ಗಾಯಿಸಿ ಬೂತ್ ಮಟ್ಟದಲ್ಲಿ ಹಣ ಹಂಚಿಕೆ
-ನಾಗೇಂದ್ರ ಆಪ್ತ ವಿಜಯ್ ಕುಮಾರ್ ಮೊಬೈಲ್‌ನಲ್ಲಿ ನಗದು ಹಣದ ಚಿತ್ರ,ಇತರ ಸಾಕ್ಷ್ಯ ಪತ್ತೆ
ಏನಿದು ವಾಲ್ಮೀಕಿ ಹಗರಣ?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ನಡೆದಿದೆ ಎಂದು ಈ ವರ್ಷ ಅಧಿಕಾರಿ ಚಂದ್ರಶೇಖರ್ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಕೋಟ್ಯಂತರ ರೂ. ಹಣವನ್ನು ಹೈದರಾಬಾದ್‌ನ ಕೋ-ಆಪರೇಟಿವ್ ಸೊಸೈಟಿಗೆ ಅಕ್ರಮವಾಗಿ ವರ್ಗಾಯಿಸಿ, ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.
ಹಣಕಾಸು ಇಲಾಖೆ ನಿರ್ಲಕ್ಷ್ಯ
ಹಣಕಾಸು ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಕಂಡುಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ವ್ಯವಹಾರಗಳ ಬಗ್ಗೆ ಗಮನಹರಿಸದೆ ಈ ಎರಡೂ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವುದನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ನಾಗೇಂದ್ರ ಅವರ ಆಣತಿಯಂತೆಯೇ ಅಕ್ರಮ ನಡೆದಿದೆ. 21 ಕೋ.ರೂ.ಗಳನ್ನು ಲೋಕಸಭಾ ಚುನಾವಣೆಗೆ ಬಳಸಿ ಕೊಳ್ಳಲಾಗಿದೆ ಎಂದು ಆರೋಪಪಟ್ಟಿಯಲ್ಲಿ ಇದೆ. ಇದರಿಂದ ವಾಲ್ಮೀಕಿ ಹಗರಣ ಸರಕಾರಿ ಪ್ರಾಯೋಜಿತ ಎಂದು ಸಾಬೀತಾಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು.
-ಸುನಿಲ್ ಕುಮಾರ್,
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: 39 ಲಕ್ಷ ಕೇಸ್ ಇತ್ಯರ್ಥ; ಪುನಃ ಒಂದಾದ 307 ದಂಪತಿ
ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್ ಮನವಿ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.