ದೇಶದ ಏಕೈಕ ಜಾನಪದ ವಿ.ವಿ.ಗೆ ಆರ್ಥಿಕ ಸಂಕಷ್ಟ
ಸಿಬಂದಿಗೆ ವೇತನವಿಲ್ಲ , ಬಾಡಿಗೆ ಪಾವತಿಸುವುದಕ್ಕೂ ಹಣವಿಲ್ಲದೆ ಮುಚ್ಚುವ ಭೀತಿ
Team Udayavani, Aug 17, 2020, 7:01 AM IST
ದಾವಣಗೆರೆ: ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಗೋಟಗೋಡಿಯಲ್ಲಿನ ದೇಶದ ಏಕೈಕ ಜಾನಪದ ವಿಶ್ವವಿದ್ಯಾನಿಲಯವು ಅನುದಾನದ ಕೊರತೆಯಿಂದ ಬಳಲುತ್ತಿದ್ದು, ಕರ್ನಾಟಕ ಜಾನಪದ ವಿ.ವಿ.ಯ ಅಸ್ತಿತ್ವದ ಬಗ್ಗೆಯೇ ಅನುಮಾನ ವ್ಯಕ್ತವಾಗಿದೆ.
ಕೋವಿಡ್ 19 ಆತಂಕದಿಂದ ವಿ.ವಿ.ಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹೈರಾಣಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವೇ ಸವಾಲಾಗಿದೆ.
ಪ್ರಸ್ತುತ ವಿ.ವಿ.ಯಲ್ಲಿ ಕುಲಪತಿ, ಮೌಲ್ಯಮಾಪನ ವಿಭಾಗದ ಕುಲಸಚಿವರು, ಸಹಾಯಕ ಕುಲ ಸಚಿವರು, ಕಚೇರಿ ಅಧೀಕ್ಷಕರು ಸೇರಿ ನಾಲ್ವರು ಮಾತ್ರ ಖಾಯಂ ಇದ್ದಾರೆ.
ಉಳಿದೆಲ್ಲ ಹುದ್ದೆಗಳು ಖಾಲಿಯಿವೆ. ಸುಮಾರು 30 ಬೋಧಕ ಸಿಬಂದಿ, 40 ಬೋಧಕೇತರ ಸಿಬಂದಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೋಧಕ ಸಿಬಂದಿಯ ಗುತ್ತಿಗೆ ಅವಧಿಯೂ ಮುಗಿದಿದ್ದು, ಇನ್ನೂ ನವೀಕರಣ ಆಗಿಲ್ಲ.
ವಿ.ವಿ.ಯ ಕಟ್ಟಡ ಬಾಡಿಗೆ, ನಿರ್ವಹಣೆ ಮತ್ತು ಸಿಬಂದಿಯ ವೇತನ ಸೇರಿ ವರ್ಷಕ್ಕೆ ಸರಾಸರಿ 3 ಕೋಟಿ ರೂ.ಗೂ ಅಧಿಕ ವೆಚ್ಚ ತಗಲುತ್ತದೆ. ಆದರೆ ಸರಕಾರದಿಂದ ಬರುತ್ತಿರುವ ಅನುದಾನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಹೊಸ ಶೈಕ್ಷಣಿಕ ಚಟುವಟಿಕೆ, ಯೋಜನೆಗಳಿಗೆ ಹಣವೇ ಇಲ್ಲದ ದುಃಸ್ಥಿತಿ ಎದುರಾಗಿದೆ.
ಆರ್ಥಿಕ ಸಂಕಷ್ಟದಿಂದ ವಿ.ವಿ. ಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಮಧ್ಯಾಹ್ನದ ಊಟ ನಿಲ್ಲಿಸಲಾಗಿದೆ. ಶಿಗ್ಗಾವಿ ಪಟ್ಟಣದಿಂದ ವಿ.ವಿ.ಗೆ ವಿದ್ಯಾರ್ಥಿಗಳನ್ನು ಕರೆತರುವ ಬಸ್ ವ್ಯವಸ್ಥೆ ನಿಲ್ಲಿಸಲಾಗಿದೆ. 2018-19 ಮತ್ತು 2019-20ನೇ ಸಾಲಿನಲ್ಲಿ ಘಟಿಕೋತ್ಸವ ನಡೆಸದೆ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಕೊಟ್ಟು ಕಳುಹಿಸಲಾಗಿದೆ.
ವೇತನವನ್ನೂ ಕೊಟ್ಟಿಲ್ಲ
ಬೋಧಕ ಸಿಬಂದಿಗೆ ಮೇ ತಿಂಗಳ ವೇತನ ಇನ್ನೂ ನೀಡಿಲ್ಲ. ಕೋವಿಡ್ 19 ಸಂಕಷ್ಟ ಅನುಭವಿಸುತ್ತಿರುವ ಈ ವರ್ಷ ಬೋಧಕ ಸಿಬಂದಿಗೆ ಜೂನ್ ಮತ್ತು ಜುಲೈ ತಿಂಗಳಿಗೆ ವೇತನ ನೀಡಬೇಕು ಎಂದು ಯುಜಿಸಿ ಸುತ್ತೋಲೆ ಹೊರಡಿಸಿದೆ. ಇದನ್ನೂ ಸೇರಿಸಿದರೆ ಬೋಧಕ ಸಿಬಂದಿಗೆ 3 ತಿಂಗಳ ವೇತನ ಬರುವುದು ಬಾಕಿ ಇದೆ. ಬೋಧಕೇತರ ಸಿಬಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಗುತ್ತಿಗೆ ಏಜೆನ್ಸಿಯಿಂದ ಅವರಿಗೂ ಮೇ ತಿಂಗಳಿನಿಂದೀಚೆಗೆ ವೇತನ ಪಾವತಿಯಾಗಿಲ್ಲ.
ಜುಲೈ, ಆಗಸ್ಟ್ ತಿಂಗಳಲ್ಲಿ ಪ್ರವೇಶ ಪೂರ್ಣಗೊಂಡು ಸೆಪ್ಟಂಬರ್‌ನಲ್ಲಿ ಪ್ರಸಕ್ತ ಸಾಲಿನ ತರಗತಿ ಆರಂಭವಾಗಬೇಕಿತ್ತು. ಕೊರೊನಾ ಕಾರಣದಿಂದ ಪದವಿ ಅಂತಿಮ ವರ್ಷದ ಪರೀಕ್ಷೆಗಳು ನಡೆಯದೆ ಇರುವುದರಿಂದ ಈ ಬಾರಿ ಇನ್ನೂ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿಲ್ಲ. ಕೊರೊನಾ ಅಡಚಣೆ ಜತೆಗೆ ಆರ್ಥಿಕ ಸಂಕಷ್ಟವೂ ವಿ.ವಿ.ಯನ್ನು ಬಾಧಿಸುತ್ತಿದ್ದು, ಅವಸಾನದ ಅಂಚಿಗೆ ತಲುಪಿದೆ.
ನೇಮಕಾತಿ ಏಕೆ ಆಗಿಲ್ಲ?
ಜಾನಪದ ವಿ.ವಿ. ಸ್ಥಾಪನೆಯಾದಾಗಿನಿಂದ ಖಾಯಂ ಬೋಧಕ- ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಹಲವು ಬಾರಿ ಅಧಿಸೂಚನೆ, ಮರು ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಪ್ರತಿಸಲ ಅಧಿಸೂಚನೆ ಹೊರಡಿಸಿದಾಗಲೂ ಏನಾದರೊಂದು ನ್ಯೂನತೆಯಾಗಿ ಅದಕ್ಕೆ ತಡೆಯುಂಟಾಯಿತು. ಹೀಗಾಗಿ ಈವರೆಗೂ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದ್ದರಿಂದ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಿಸಿಕೊಂಡು ವಿ.ವಿ. ಮುನ್ನಡೆಸಲಾಗುತ್ತಿದೆ.
ನೆರೆಯೂ ಕಾರಣ!
ವಿ.ವಿ. ಸ್ಥಾಪನೆಯಾದಾಗಿನಿಂದ ಪ್ರತೀ ವರ್ಷ ಮೂರೂವರೆಯಿಂದ ನಾಲ್ಕೂವರೆ ಕೋಟಿ ರೂ.ಗಳಷ್ಟು ಅನುದಾನ ವಿ.ವಿ.ಗೆ ಸಿಗುತ್ತಿತ್ತು. 2018-19ನೇ ಸಾಲಿನಲ್ಲಿ ಸಂಭವಿಸಿದ ನೆರೆ ಕಾರಣದಿಂದ ಆ ವರ್ಷ ಎಲ್ಲ ವಿ.ವಿ.ಗಳ ಅನುದಾನದಲ್ಲಿ 1 ಕೋಟಿ ರೂ. ಕಡಿತಗೊಳಿಸಲಾಯಿತು. ಇದು 2019-20ನೇ ಸಾಲಿಗೂ ಮುಂದುವರಿಯಿತು. ವಿ.ವಿ.ಯ ಎಲ್ಲ ವಿಭಾಗಗಳು ಸೇರಿ ವಿದ್ಯಾರ್ಥಿಗಳಿಂದ ಬರುವ ಶುಲ್ಕ 2 ಲಕ್ಷ ರೂ. ದಾಟುವು ದಿಲ್ಲಿ. ರಾಜ್ಯದಲ್ಲಿ ನಾಲ್ಕು ಪ್ರಾದೇಶಿಕ ಕೇಂದ್ರಗಳಿದ್ದು, ಸಿಬಂದಿ, ಬಾಡಿಗೆ ಕಟ್ಟಡ ಇತ್ಯಾದಿ ಗಳಿಗಾಗಿ ವಿ.ವಿ. ಪ್ರತೀ ತಿಂಗಳು 2-3 ಲಕ್ಷ ರೂ. ವ್ಯಯಿಸುತ್ತದೆ. ಹೀಗಾಗಿ ವಿ.ವಿ. ಆರ್ಥಿಕ ಸಂಕಷ್ಟ ಸುಳಿಗೆ ಸಿಲುಕಿ ಒದ್ದಾಡುವಂತಾಗಿದೆ.
ಬಿಎಸ್‌ವೈ ಕನಸಿನ ಕೂಸು
ಜಾನಪದ ವಿ.ವಿ. ಸಿಎಂ ಬಿಎಸ್‌ವೈ ಕನಸಿನ ಕೂಸು. ಅವರೇ ಸ್ಥಾಪನೆಗೆ ಮಂಜೂರಾತಿ ನೀಡಿದ್ದರು. ಪ್ರಸ್ತುತ ಯಡಿಯೂರಪ್ಪ ಅವರೇ ಸಿಎಂ ಆಗಿರುವುದರಿಂದ ಜಾನಪದ ವಿ.ವಿ.ಗೆ ಹೆಚ್ಚಿನ ಅನುದಾನ ನೀಡಿ ಪುನಃಶ್ಚೇತನ ನೀಡಬಹುದು ಎಂಬ ನಿರೀಕ್ಷೆ ಇದೆ.
ವಿ.ವಿ.ಯ ಸಮರ್ಪಕ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ 5 ಕೋಟಿ ರೂ. ಅನುದಾನ ಬೇಕು. ಆದರೆ ಈಗ 3 ಕೋಟಿ ರೂ. ಮಾತ್ರ ಸಿಗುತ್ತಿದೆ. ಪ್ರಸಕ್ತ ಸಾಲಿನ ಅನುದಾನ ಈವರೆಗೂ ಬಂದಿಲ್ಲ. ಅಭಿವೃದ್ಧಿ ಅನುದಾನದಲ್ಲಿಯೇ ಸಿಬಂದಿ ವೇತನ ಪಾವತಿಸಬೇಕಾಗಿದ್ದರಿಂದ ಬಾಕಿ ಇದೆ.
– ಪ್ರೊ| ಡಿ.ಬಿ. ನಾಯಕ, ಕುಲಪತಿ, ಕರ್ನಾಟಕ ಜಾನಪದ ವಿ.ವಿ., ಗೋಟಗೋಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.