ಇಂದು ಪುನೀತ್‌ಗೆ “ಕರ್ನಾಟಕ ರತ್ನ’; ವಿಧಾನಸೌಧದ ಆವರಣ ಸಿಂಗಾರ
ರಾಜ್ ಕುಟುಂಬಕ್ಕೆ ಅಧಿಕೃತ ಆಹ್ವಾನ
Team Udayavani, Nov 1, 2022, 7:00 AM IST
ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನದಂದೇ ಪ್ರತಿಷ್ಠಿತ “ಕರ್ನಾಟಕ ರತ್ನ’ ಪ್ರಶಸ್ತಿಯು ಮರಣೋತ್ತರವಾಗಿ, ಕರುನಾಡಿನ ಜನರ ಹೃದಯ ಸಿಂಹಾಸನದಲ್ಲಿ ವೀರಾಜಮಾನರಾಗಿರುವ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಮುಡಿಗೇರಲಿದೆ.
ಕರುನಾಡಿನ ಕಣ್ಮಣಿ ಅಪ್ಪು ಅವರಿಗೆ ಅಧಿಕೃತವಾಗಿ “ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕಾಗಿ ವಿಧಾನಸೌಧದ ಮುಂಭಾಗ ಭರ್ಜರಿ ಸಿದ್ಧತೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಖ್ಯಾತ ನಟ ರಜನಿಕಾಂತ್, ಜೂನಿಯರ್ ಎನ್‌ಟಿಆರ್, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ, ಕನ್ನಡ ಚಲನಚಿತ್ರ ರಂಗದ ಗಣ್ಯರು ಭಾಗವಹಿಸಲಿರುವ ಕಾರ್ಯಕ್ರಮಕ್ಕಾಗಿ ವಿಧಾನಸೌಧದ ಆವರಣವನ್ನು ಸಿಂಗರಿಸಲಾಗಿದ್ದು ಆಕರ್ಷಣೀಯ ವೇದಿಕೆ ಸಜ್ಜುಗೊಂಡಿದೆ.
ಆಹ್ವಾನ:
ದಿ.ಪುನೀತ್ ರಾಜ್‌ಕುಮಾರ್ ಅವರ ಕುಟುಂಬಕ್ಕೆ ಸರ್ಕಾರದಿಂದ ಸೋಮವಾರ ಅಧಿಕೃತ ಆಹ್ವಾನ ನೀಡಲಾಯಿತು. ಕಂದಾಯ ಸಚಿವ ಆರ್.ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ನೇತೃತ್ವದಲ್ಲಿ ಸರ್ಕಾರದ ಪ್ರತಿನಿಧಿಗಳು ಸದಾಶಿವ ನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಈ ಮಧ್ಯೆ, 67ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ನಾಡಿನಾದ್ಯಂತ ಗ್ರಾಮಗಳಲ್ಲಿ, ನಗರಗಳಲ್ಲಿ, ಶಾಲೆ ಹಾಗೂ ಇತರೆ ಸಂಘ ಸಂಸ್ಥೆಗಳು, ಸರ್ಕಾರಿ ಕಚೇರಿಗಳಲ್ಲಿ ರಾಜ್ಯೋತ್ಸವ ಆಚರಿಸಬೇಕು ಹಾಗೂ ಕನ್ನಡದ ಧ್ವಜಗಳನ್ನು ಹಾರಿಸಬೇಕು ಎಂದು ಸಿಎಂ ಬೊಮ್ಮಾಯಿ ಕೋರಿದ್ದಾರೆ.
ಮಂಗಳವಾರ ಸಂಜೆ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ನೀಡಲಿದೆ. ಪುನೀತ್ ಅಭಿಮಾನಿಗಳು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ.
– ಬಸವರಾಜ ಬೊಮ್ಮಾಯಿ, ಸಿಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.