ಥಂಡಾಯಕ್ಕೆ ಸಿಎಂ ಪ್ರವೇಶ
ಮಾತುಕತೆಗೆ ಬರುವಂತೆ ಅತೃಪ್ತ ಶಾಸಕರಿಗೆ ಆಹ್ವಾನ
Team Udayavani, Jan 20, 2021, 5:20 AM IST
ಬೆಂಗಳೂರು: “ಸಮಸ್ಯೆ ಹೊತ್ತು ದಿಲ್ಲಿಗೆ ಬರಬೇಡಿ, ಪಕ್ಷದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬೇಡಿ, ಬಿಎಸ್‌ವೈ ನಾಯಕತ್ವ ಅಬಾಧಿತ’ ಎಂಬ ವರಿಷ್ಠರ ಸ್ಪಷ್ಟ ಸಂದೇಶದ ಅನಂತರವೂ ಬಿಜೆಪಿಯಲ್ಲಿ ಅಸಮಾಧಾನ, ಬಹಿರಂಗ ಹೇಳಿಕೆ, ಪ್ರತ್ಯೇಕ ಸಭೆಯಂಥ ಘಟನೆಗಳು ಮುಂದುವರಿದಿವೆ. ಭಿನ್ನಮತವನ್ನು ಶಮನಗೊಳಿಸಲು ಈಗ ಸಿಎಂ ಯಡಿಯೂರಪ್ಪ ಅವರೇ ರಂಗ ಪ್ರವೇಶಿಸಿದ್ದಾರೆ. ಅತೃಪ್ತ ಶಾಸಕರನ್ನು ಕರೆದು ಮಾತನಾಡಿಸಲು ಯತ್ನಿಸಿದ್ದಾರೆ.
ಬಸನಗೌಡ ಪಾಟೀಲ್ ಮತ್ತು ಎಂ.ಪಿ. ರೇಣುಕಾಚಾರ್ಯ ಅವರ ಬಹಿರಂಗ ಹೇಳಿಕೆ ನಡುವೆಯೇ ಇನ್ನೊಂದು “ಪಕ್ಷ ನಿಷ್ಠ’ ಅತೃಪ್ತ ಶಾಸಕರ ತಂಡ ಪ್ರತ್ಯೇಕ ಸಭೆ ನಡೆಸಲು ಮುಂದಾಗಿದೆ. ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಸಮಾರು 20 ಶಾಸಕರು ಬುಧವಾರ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿ, ವರಿಷ್ಠರನ್ನು ಭೇಟಿಯಾಗಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಮತ್ತು ಶಿವನಗೌಡ ನಾಯಕ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಹಾಲಿ ಸಚಿವರನ್ನು ಕೈ ಬಿಟ್ಟು ಸಂಪುಟ ಪುನಾರಚನೆ ಮಾಡುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ಪ್ರಾತಿನಿಧ್ಯ ಮತ್ತು ಹಿರಿತನವನ್ನು ಪರಿಗಣಿಸಿ ಸಂಪುಟ ಪುನಾರಚನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ದಿಲ್ಲಿಯಲ್ಲಿ ರೇಣುಕಾಚಾರ್ಯ :
ಇನ್ನೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ದಿಲ್ಲಿಗೆ ತೆರಳಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭ ಸಿ.ಪಿ. ಯೋಗೇಶ್ವರ್‌ಅವರಿಗೆ ಸಚಿವ ಸ್ಥಾನ ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಬಹಿರಂಗವಾಗಿ ಅನಗತ್ಯ ಹೇಳಿಕೆ ನೀಡುವುದರಿಂದ ಪಕ್ಷ ಮತ್ತು ಸರಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂದು ವರಿಷ್ಠರು ಹೇಳಿದ್ದು, ಬಹಿರಂಗ ಹೇಳಿಕೆ ನೀಡದಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಕಸರತ್ತು :
ಅಸಮಾಧಾನಿತ ಶಾಸಕರ ಮನವೊಲಿಸಲು ಸಿಎಂ ಬಿಎಸ್‌ವೈ ಮುಂದಾಗಿದ್ದು, ಎಂ.ಪಿ. ರೇಣುಕಾಚಾರ್ಯ ಅವರಿಗೆ ದೂರವಾಣಿ ಕರೆ ಮಾಡಿ, ಗೊಂದಲ ಸೃಷ್ಟಿಸುವ ಯತ್ನ ಮಾಡದೆ, ತಮ್ಮನ್ನು ಬಂದು ಭೇಟಿ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಕುಂದಾಪುರದ ಆನೆಗುಡ್ಡೆ ದೇವಸ್ಥಾನದಲ್ಲಿ ಮಾತನಾಡಿದ ಸಿಎಂ, ರೇಣುಕಾಚಾರ್ಯ ತಮ್ಮನ್ನು ಭೇಟಿ ಮಾಡಲಿದ್ದಾರೆ. ಯಾವುದೇ ರೀತಿಯ ಗೊಂದಲ ಇಲ್ಲ ಎಂದಿದ್ದಾರೆ.
ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದ ಅರವಿಂದ್ ಬೆಲ್ಲದ ಮತ್ತು ಬಿ.ಸಿ. ನಾಗೇಶ್ ಅವರನ್ನು ಮಂಗಳ ವಾರ ಸಂಜೆ ಗೃಹ ಕಚೇರಿ “ಕೃಷ್ಣಾ’ಗೆ ಕರೆಯಿಸಿದ್ದಾರೆ. ಅನಂತರ ಅವರೊಂದಿಗೆ ಚರ್ಚಿಸಿ ಅತೃಪ್ತರ ಸಭೆ ನಡೆಸಿ ಸರಕಾರಕ್ಕೆ ಮುಜುಗರ ಉಂಟು ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಹಂತದಲ್ಲಿ ರೇಣುಕಾಚಾರ್ಯ ಅವರ ದಿಲ್ಲಿ ಭೇಟಿಯ ಬಗ್ಗೆ ಮಾಹಿತಿ ಪಡೆಯಲು ಸಂಸದ, ಪುತ್ರ ಬಿ.ವೈ. ರಾಘವೇಂದ್ರ ಅವರನ್ನು ದಿಲ್ಲಿಗೆ ಕಳುಹಿಸುವುದಕ್ಕೂ ಯಡಿಯೂರಪ್ಪ ಮುಂದಾಗಿದ್ದರು ಎನ್ನಲಾಗಿದೆ.
ಮತ್ತೂ ಖಾತೆ ಹಂಚಿಕೆ ಗೊಂದಲ :
ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆಯುತ್ತಿದ್ದರೂ ಖಾತೆ ಹಂಚಿಕೆಯ ಗೊಂದಲ ಮುಂದುವರಿದಿದೆ. ಹಿರಿಯ ಸಚಿವರಿಂದ ಪ್ರಬಲ ಖಾತೆಗಳಿಗೆ ಬೇಡಿಕೆ ಮತ್ತು ಕೆಲವು ಸಚಿವರ ಖಾತೆ ಬದಲಾವಣೆ ಕುರಿತು ಚರ್ಚೆಯಿಂದಾಗಿ ಖಾತೆ ಹಂಚಿಕೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದಾರೆ. ಅವರ ಖಾತೆ ಬದಲಾಯಿಸಿ ಕಂದಾಯ ಖಾತೆ ನೀಡುತ್ತಾರೆ ಎನ್ನಲಾಗುತ್ತಿದೆ. ಕಂದಾಯ ಖಾತೆ ಹೊಂದಿರುವ ಆರ್. ಅಶೋಕ್ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಮಂಡಿಸಿದ್ದಾರೆ. ಅರವಿಂದ ಲಿಂಬಾವಳಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಬಾರದು ಎಂದು ಸಿಎಂ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಸಂಜೆ ಹಿರಿಯ ಸಚಿವರ ಜತೆ ಚರ್ಚಿಸಿ ಖಾತೆ ಹಂಚಿಕೆ ಮಾಡಲು ಮುಖ್ಯಮಂತ್ರಿ ನಿರ್ಧರಿಸಿದ್ದರು. ಅಸಮಾಧಾನಿತ ಶಾಸಕರ ಮನವೊಲಿಕೆ ಕಸರತ್ತು ನಡೆಸಿದ್ದರಿಂದ ಬುಧವಾರ ಹಿರಿಯ ಸಚಿವರ ಜತೆ ಚರ್ಚಿಸಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಖಾತೆ ಹಂಚಿಕೆ ಕುರಿತು ಸಚಿವರ ಜತೆ ಸಮಾಲೋಚನೆ ನಡೆಸಿ, ಗುರುವಾರ ಖಾತೆ ಹಂಚಿಕೆ ಮಾಡುತ್ತೇನೆ.– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
CM ಆಗುವ ಅರ್ಹತೆ ಇದ್ದರೂ ಬೇಡದ ಖಾತೆ: ಗುಡುಗಿದ ಮಾದಾರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.