ಕೋವಿಡ್ ಹಗರಣ ತನಿಖೆಗೆ ವಿಚಾರಣಾ ಆಯೋಗ ರಚನೆ
ಆಯೋಗಕ್ಕೆ ನ್ಯಾ| ಜಾನ್ ಮೈಕಲ್ ಕುನ್ಹಾ ನೇತೃತ್ವ
Team Udayavani, Aug 27, 2023, 7:15 AM IST
ಬೆಂಗಳೂರು: ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಅಕ್ರಮ ಆರೋಪಗಳ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ’ಕುನ್ಹಾ ನೇತೃತ್ವದಲ್ಲಿ ವಿಚಾರಣ ಆಯೋಗ ರಚಿಸಿ ರಾಜ್ಯ ಸರಕಾರ ಶನಿವಾರ ಆದೇಶ ಪ್ರಕಟಿಸಿದೆ.
ನ್ಯಾ| ಡಿ’ಕುನ್ಹಾ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ವಿಚಾರಣೆ ನಡೆಸಿ ಅವರಿಗೆ ಶಿಕ್ಷೆ ನೀಡಿದ ದಿಟ್ಟ ನ್ಯಾಯಾಧೀಶ ಎಂದೇ ಖ್ಯಾತರಾದವರು.
ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ವ್ಯಕ್ತವಾದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಈ ನಿರ್ಧಾರ ತೆಗೆದುಕೊಂಡಿದೆ. ಕಮಿಷನ್ ಆಫ್ ಎನ್‌ಕ್ವಯರಿ ಆ್ಯಕ್ಟ್ ಅನ್ವಯ ವಿಚಾರಣ ಆಯೋಗ ರಚಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಾಜಿ ಸಚಿವ ಡಾ| ಸುಧಾಕರ್ ಅವರನ್ನು ಈ ಮೂಲಕ ಕಾಂಗ್ರೆಸ್ ಸರಕಾರ ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ.
ತನಿಖಾ ಆಯೋಗ ಕಾಯ್ದೆ ಮಾತ್ರವಲ್ಲ, ದಂಡ ಪ್ರಕ್ರಿಯಾ ನಿಯಮಗಳ ಅಡಿಯಲ್ಲೂ ತನಿಖೆಗೆ ಅವಕಾಶ ನೀಡಲಾಗಿದ್ದು, ಮೂರು ತಿಂಗಳೊಳಗಾಗಿ ವಿಚಾರಣೆ ಪೂರ್ಣಗೊಳಿಸಲು ಸರಕಾರ ಅಪೇಕ್ಷಿಸಿದೆ. ಆಯೋಗಕ್ಕೆ ದಾಖಲೆಯನ್ನು ಒದಗಿಸಲು, ವೈದ್ಯರು, ತಾಂತ್ರಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ಸಂಬಂಧಪಟ್ಟ ಇಲಾಖೆ ಸಹಕರಿಸಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಅಧಿಕಾರಿಗಳು ಆಯೋಗವು ಅಪೇಕ್ಷಿಸಿದ ಎಲ್ಲ ಕಡತಗಳು, ದಾಖಲೆ ಒದಗಿಸುವ ಜತೆಗೆ ಅಗತ್ಯ ಬಿದ್ದರೆ ಸ್ಥಳ ಮಹಜರು ನಡೆಸಲು ಸಹಕರಿಸಬೇಕು. ಆಯೋಗಕ್ಕೆ ಅಗತ್ಯವಿರುವ ಸಿಬಂದಿ, ಸಾಮಗ್ರಿ, ವಾಹನ, ಸಂಬಳ ವ್ಯವಸ್ಥೆಯನ್ನು ಕಲ್ಪಿಸುವ ಜತೆಗೆ ಆಯೋಗದ ಅಧ್ಯಕ್ಷರು ಅಪೇಕ್ಷೆಪಟ್ಟರೆ 3ನೇ ಸ್ವತಂತ್ರ ಸಂಸ್ಥೆಯ ಮೂಲಕ ಗುಣಮಟ್ಟ ಪರಿಶೀಲನೆಗೂ ಅವಕಾಶ ನೀಡಬಹುದಾಗಿದೆ. ಆಯೋಗಕ್ಕೆ ಬೆಂಗಳೂರು ಕೇಂದ್ರದಲ್ಲಿ ಕಚೇರಿ ಹಾಗೂ ಇನ್ನಿತರ ಸೌಲಭ್ಯ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಳಾಡಳಿತ ಇಲಾಖೆಯಿಂದ ನಿರ್ದೇಶನ ನೀಡಲಾಗಿದೆ.
ಅದೇ ರೀತಿ 40 ಪರ್ಸೆಂಟ್ ಕಮಿಷನ್ ಆರೋಪದ ವಿರುದ್ಧ ನ್ಯಾ| ನಾಗಮೋಹನ್ ದಾಸ್ ನೇತೃತ್ವದಲ್ಲಿ ರಚಿಸಿರುವ ತನಿಖಾ ಆಯೋಗಕ್ಕೆ ಸೂಕ್ತ ವ್ಯವಸ್ಥೆ, ಕಚೇರಿ ಸೌಲಭ್ಯ ಕಲ್ಪಿಸುವಂತೆ ಲೋಕೋಪಯೋಗಿ ಇಲಾಖೆಗೆ ಸರಕಾರ ನಿರ್ದೇಶನ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.