Kashi: ಕಾಶಿಯಾತ್ರೆ ಪ್ಯಾಕೇಜ್: ಸಹಾಯಧನ 2.5 ಸಾ.ರೂ. ಹೆಚ್ಚಳ: ರಾಮಲಿಂಗಾ ರೆಡ್ಡಿ
ಯಾತ್ರೆ ಅವಧಿಯೂ 9 ದಿನಕ್ಕೆ ವಿಸ್ತರಣೆ 15 ವರ್ಷ ಪೂರೈಸಿರುವ ಬಸ್‌ಗಳ ದುರಸ್ತಿ
Team Udayavani, Aug 19, 2023, 11:13 PM IST
ಬೆಂಗಳೂರು: ಕಾಶಿಯಾತ್ರೆಗೆ ನೀಡುತ್ತಿರುವ ಸಹಾಯಧನವನ್ನು ರಾಜ್ಯ ಸರಕಾರ ಹೆಚ್ಚಿಸಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಶನಿವಾರ “ಉದಯವಾಣಿ’ ಬೆಂಗಳೂರು ಆವೃತ್ತಿಯ ಕಚೇರಿಯಲ್ಲಿ ಜರಗಿದ ಸಂವಾದದಲ್ಲಿ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದರು.
ಸಾರಿಗೆ ಇಲಾಖೆ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಿರುವ ಪ್ರಯಾಣಿಕರ ದಟ್ಟಣೆ ಮತ್ತು ಬೇಡಿಕೆಯನ್ನು ಪೂರೈಸಬೇಕಾದರೆ ಸಾರಿಗೆ ನಿಗಮಗಳಿಗೆ ಇನ್ನೂ ಕನಿಷ್ಠ 10 ಸಾವಿರ ಬಸ್‌ಗಳ ಅಗತ್ಯ ಇದೆ. ಈಗಿರುವ ಸ್ಥಿತಿಯಲ್ಲಿ ಬಸ್ ಖರೀದಿ ಅಸಾಧ್ಯ. ಹಾಗಾಗಿ 15 ವರ್ಷ ಪೂರೈಸಿರುವ ಬಸ್‌ಗಳನ್ನು ಎಂಜಿನ್ ನವೀಕರಣ, ಚಾಸಿ ಮಾರ್ಪಾಡು ಸಹಿತ ಹೊಸ ಸ್ಪರ್ಶದೊಂದಿಗೆ ಸುಮಾರು 500 ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಇದಕ್ಕಾಗಿ ತಲಾ 2-3 ಲಕ್ಷ ರೂ. ವ್ಯಯಿಸಲಾಗಿದೆ. ಒಂದು ವೇಳೆ ಹೊಸ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದರೆ, 200 ಕೋಟಿ ರೂ. ಖರ್ಚಾಗುತ್ತಿತ್ತು. ಅಷ್ಟರಮಟ್ಟಿಗೆ ಆರ್ಥಿಕ ಮಿತವ್ಯಯ ಮಾಡಲಾಗುತ್ತಿದೆ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಶಿಯಾತ್ರೆ ಸಹಾಯಧನ 7.5 ಸಾ.ರೂ.
ಕಾಂಗ್ರೆಸ್ ಸರಕಾರ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಮತ್ತು ಅಲ್ಲಿಗೆ ತೆರಳುವ ಭಕ್ತರಿಗೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಕಾಶಿ ಯಾತ್ರೆ ಪ್ಯಾಕೇಜ್‌ಗೆ ಬಿಜೆಪಿ ಸರಕಾರ 5 ಸಾವಿರ ರೂ. ನೀಡುತ್ತಿತ್ತು ಹಾಗೂ ಯಾತ್ರೆ ಅವಧಿ 8 ದಿನಗಳಿಗೆ ಸೀಮಿತವಾಗಿತ್ತು. ನಾವು ಸಹಾಯಧನವನ್ನು 7,500 ರೂ.ಗಳಿಗೆ ಹೆಚ್ಚಿಸಿದ್ದು, ಯಾತ್ರೆಯ ಅವಧಿಯನ್ನು 9 ದಿನಗಳಿಗೆ ಹೆಚ್ಚಿಸಿದ್ದೇವೆ. ಇದರಿಂದ ಗಯಾಕ್ಕೂ ಹೋಗು ಬರಲು ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದರು.
ನಿಗಮಗಳಿಗೆ ಪ್ರಶಸ್ತಿಗಳ ಸುರಿಮಳೆ
ಸಾರಿಗೆ ನಿಗಮಗಳ ಸ್ಥಿತಿಗತಿ ಬಗ್ಗೆ ವಿವರಿಸಿದ ಅವರು, ನಿತ್ಯ ಶಕ್ತಿ ಯೋಜನೆ ಅಡಿ ಈಗಲೂ 70 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ನಿತ್ಯ 80 ಸಾವಿರ ಇದ್ದ ಟ್ರಿಪ್‌ಗ್ಳನ್ನು 1.56 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದುವರೆಗೆ ನಿಗಮಗಳ ಸಾಧನೆಗೆ 350 ಪ್ರಶಸ್ತಿಗಳು ಲಭಿಸಿದ್ದು, ನನ್ನ ಅವಧಿಯಲ್ಲೇ 204 ಪ್ರಶಸ್ತಿಗಳು ಅರಸಿ ಬಂದಿವೆ. ಈ ವರ್ಷ ಇನ್ನೂ 50 ಪ್ರಶಸ್ತಿಯ ಗರಿಗಳು ಬರಲಿವೆ. ಇದು ನಿಗಮಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಬಿಜೆಪಿ ಅವಧಿಯಲ್ಲಿ ನಿಗಮಗಳನ್ನು ಪ್ರೋತ್ಸಾಹಿಸುವ ಕೆಲಸವನ್ನೂ ಮಾಡಲಿಲ್ಲ. ಇದರ ಪರಿಣಾಮ ಮಕಾಡೆ ಮಲಗಿದ್ದವು. ನಾನು ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗ ಇದೇ ನಿಗಮಗಳು ಒಂದು ವರ್ಷ ಲಾಭದ ಹಳಿಗೂ ಬಂದಿದ್ದವು ಎಂದು ಹೇಳಿದರು.
ಪ್ರಯಾಣ ದರ ಹೆಚ್ಚಳಕ್ಕೆ ರಾಜಕೀಯ ಅಡ್ಡಿ!
ರಾಜ್ಯದಲ್ಲಿ 2015-16ರಿಂದ ಈಚೆಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಯೇ ಇಲ್ಲ. ಇದರ ತುರ್ತು ಅಗತ್ಯವಿದ್ದರೂ, ರಾಜಕೀಯ ಕಾರಣಗಳಿಂದ ಸಾಧ್ಯವಾಗುತ್ತಿಲ್ಲ. 2015ರಿಂದ ಈವರೆಗೆ ಡೀಸೆಲ್ ಬೆಲೆಯಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಹೆಚ್ಚು-ಕಡಿಮೆ 35-40 ರೂ. ಅಧಿಕವಾಗಿದೆ. ಆದರೆ ಪ್ರಯಾಣ ದರ ಮಾತ್ರ ಹಾಗೇ ಇದೆ. ಅಗತ್ಯ ಇದ್ದರೂ ರಾಜಕೀಯ ಕಾರಣಗಳಿಂದ ಪರಿಷ್ಕರಣೆ ಮಾಡಲು ಆಗಿಲ್ಲ ಹಾಗೂ ಆಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.
6 ಸಾವಿರ ಕೋಟಿ ರೂ. ಸಾಲ
ನಾಲ್ಕೂ ಸಾರಿಗೆ ನಿಗಮಗಳಲ್ಲಿ ಪ್ರಸ್ತುತ ಸುಮಾರು 4 ಸಾವಿರ ಕೋಟಿ ರೂ. ಸಾಲ ಇದ್ದು, ಸದ್ಯದ ಸ್ಥಿತಿಯಲ್ಲಿ ಲಾಭದ ಹಳಿಗೆ ಮರಳುವುದು ಸಾಧ್ಯವೇ ಇಲ್ಲ. ಮುಖ್ಯವಾಗಿ ಸಾರಿಗೆ ನಿಗಮಗಳು ಸೇವಾ ಸಂಸ್ಥೆಗಳಾಗಿವೆ. ಅವುಗಳನ್ನು ಸದ್ಯದ ಸ್ಥಿತಿಯಲ್ಲಿ ನಷ್ಟದ ಸುಳಿಯಿಂದ ಹೊರ ತರುವುದು ಅಥವಾ ಲಾಭದ ಹಳಿಗೆ ತರಬೇಕಾದರೆ ಪ್ರಯಾಣ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲು ಆಯಾ ನಿಗಮಗಳಿಗೇ ಅವಕಾಶ ನೀಡಬೇಕು. ಆದಾಯ ಬಾರದ ಮಾರ್ಗಗಳಿಗೆ ಕತ್ತರಿ ಹಾಕಬೇಕು. ಇದೆಲ್ಲವೂ ಸಾಧ್ಯವೇ ಎಂದು ಸಚಿವರು ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.