ಮುಂದುವರಿದ ‘ಆಹ್ವಾನ’ ರಾಜಕೀಯ: ಅಸಲಿ ಕಥೆಯನ್ನು ಬಿಜೆಪಿ ಮುಚ್ಚಿಡುತ್ತಿದೆ ಎಂದ ಜೆಡಿಎಸ್
Team Udayavani, Nov 12, 2022, 9:54 AM IST
ಬೆಂಗಳೂರು: ನಾಡಪ್ರಭು ಕೇಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿಲ್ಲ ಎಂಬ ಜೆಡಿಎಸ್ ಆರೋಪ, ನಂತರ ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ಟ್ವೀಟ್ ಹೀಗೆ ಪ್ರತಿಮೆಯ ಸುತ್ತ ರಾಜಕೀಯ ಮುಂದುವರಿದಿದೆ. ಇದೀಗ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿದ ಜೆಡಿಎಸ್ ಹಲವು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ.
ಮಾಡಿದ ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಕಮಲ ಪಕ್ಷಕ್ಕೆ ಸಿದ್ಧಿಸಿರುವ ಕಲೆ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ! ಆದರೆ; ಮುಖ್ಯಮಂತ್ರಿಗಳೇ ಪತ್ರ ಬರೆದು ಎಚ್ ಡಿ ದೇವೇಗೌಡ ಅವರನ್ನು ಆಹ್ವಾನಿಸಿದ್ದಾರೆಂದು ಜನರ ದಿಕ್ಕು ತಪ್ಪಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ, ಅಸಲಿ ಕಥೆಯನ್ನೇ ಮುಚ್ಚಿಡುತ್ತಿದೆ ಎಂದಿದೆ.
ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿಗಳಿಗೆ ಕರೆ ಮಾಡಿ ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಆಹ್ವಾನಿಸಿ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ. ಸರಿ; ನವೆಂಬರ್ 11ರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಪತ್ರ ಬರೆದಿದ್ದು ಯಾವಾಗ? ಆ ಪತ್ರವನ್ನು ಮಾಜಿ ಪ್ರಧಾನಿಗಳ ನಿವಾಸಕ್ಕೆ ತಲುಪಿಸಿದ್ದು ಯಾವಾಗ? ಕಮಲದವರ ಕಣ್ಣಿಗೆ ಕಾಮಾಲೆ ಬಡಿದಿದೆಯಾ, ಹೇಗೆ? ಘನವೆತ್ತ ಮಾನ್ಯ ಮುಖ್ಯಮಂತ್ರಿಗಳು ಬರೆದ ʼಘನವೇತ್ತʼ ಪತ್ರವನ್ನೊಮ್ಮೆ ʼಸಂಘಸಂಸ್ಕಾರʼದ ಬಿಜೆಪಿಗರು ಗಮನಿಸಬೇಕು. ಪತ್ರದಲ್ಲಿ ಮಾಜಿ ಪ್ರಧಾನಿಗಳ ಹೆಸರೆಲ್ಲಿ ಬರೆಯಲ್ಪಟ್ಟಿದೆ? (ಕೊನೆಯಲ್ಲಿ) ಕನ್ನಡ ನೆಲದ ಏಕೈಕ ಪ್ರಧಾನಿಯಾಗಿದ್ದ ಮೇರು ನಾಯಕರಿಗೆ ಪತ್ರ ಬರೆಯುವ ಸಂಸ್ಕಾರ, ಶಿಷ್ಟಾಚಾರ ಇದೇನಾ ಎಂದು ಜೆಡಿಎಸ್ ತನ್ನ ಟ್ವೀಟ ನಲ್ಲಿ ಖಾರವಾಗಿ ಪ್ರಶ್ನಿಸಿದೆ.
ಇದನ್ನೂ ಓದಿ:ಠಾಕ್ರೆ ಬಣ ತ್ಯಜಿಸಿ ಏಕನಾಥ ಶಿಂಧೆ ಜತೆ ಸೇರಿದ ಸಂದ ಗಜಾನನ ಕೀರ್ತಿಕರ್
ಮರುದಿನ 12.50ರ ಸಮಾರಂಭಕ್ಕೆ ರಾತ್ರಿ 9 ಗಂಟೆಗೆ ಮಾಜಿ ಪ್ರಧಾನಿಗಳಿಗೆ ಕಾಟಾಚಾರದ ಕರೆ ಮಾಡಿದ ಮುಖ್ಯಮಂತ್ರಿಗಳು, ತಾವು ಬರೆದ ಪತ್ರವನ್ನು ತಲುಪಿಸಿದ್ದು ಮಧ್ಯರಾತ್ರಿ 12.30 ಗಂಟೆಗೆ! ಹಾಗಾದರೆ, ಅವರ ಮೊದಲ ಪತ್ರ ಹೋಗಿದ್ದು ಯಾರಿಗೆ? ಇಂಥ ಹಿರಿಯರ ವಿಷಯದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ವರ್ತಿಸುವ ರೀತಿ ಹೀಗೇನಾ? ಇದರಲ್ಲಿ ಸುಳ್ಳಾಡುವುದೇನಿದೆ? ಮುಖ್ಯಮಂತ್ರಿಗಳು ಬರೆದ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ. ಹಾಗಾದರೆ, ಮುಖ್ಯಮಂತ್ರಿಗಳೇ ಎಲ್ಲವನ್ನೂ ಹೇಳಲಿ. ಜನರಿಗೂ ಸತ್ಯ ಯಾವುದು? ಸುಳ್ಳು ಯಾವುದು? ಎನ್ನುವುದು ತಿಳಿಯಲಿ. ಸತ್ಯ ಹೇಳುವ ದಮ್ಮು, ತಾಖತ್ತು ಮುಖ್ಯಮಂತ್ರಿಗಳಿಗೆ ಇದೆ ಎಂದು ನಾವು ಭಾವಿಸುತ್ತೇವೆ ಎಂದಿದೆ.
ಇನ್ನು ಕನ್ನಡದ ಆಸ್ಮಿತೆ ಪ್ರಶ್ನೆ. ಬಿಜೆಪಿಗೆ ನಾಚಿಕೆಯಾಗಬೇಕು, ಹಿಂದಿ ಹೇರಿಕೆ ವಾಕರಿಕೆ ಬರುವಷ್ಟಿದೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಪಂಗನಾಮ, ಈ ನೆಲದ ಸಂಸ್ಕೃತಿ, ಭಾಷೆ, ಆಚಾರ-ವಿಚಾರಗಳನ್ನು ಹತ್ತಿಕ್ಕಿ,ಇಡೀ ದಕ್ಷಿಣ ಭಾರತೀಯರನ್ನು ದೆಹಲಿ ಗುಲಾಮರನ್ನಾಗಿ ಮಾಡಲು ಹೊರಟಿರುವ ಬಿಜೆಪಿಗರಾ ಕನ್ನಡದ ಮಣ್ಣಿನ ಮಕ್ಕಳನ್ನು ಗುರುತಿಸಿದ್ದು?
‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’; ಇದು ಭಾರತ ಕಂಡ ಪರಮ ಢೋಂಗಿ ಘೋಷಣೆ. ಇದಕ್ಕೆ ʼಸಬ್ ಕಾ ಸರ್ವನಾಶ್ʼ ಎಂದು ಸೇರಿದರೆ ಪರಿಪೂರ್ಣ. ಕರ್ನಾಟಕದಲ್ಲಿ ಶಿಕ್ಷಣ, ಧರ್ಮ, ಜಾತಿ, ಆಚಾರ, ವಿಚಾರ, ಆಹಾರ, ಉಡುಪುಗಳ ವಿಷಯದಲ್ಲೂ ಬಿಜೆಪಿ ಮಾಡಿದ್ದು ಸಾಕ್ಷಾತ್ ಸರ್ವನಾಶವೇ. ಕುಟುಂಬ ರಾಜಕಾರಣ ಅಂತೀರಾ? ಗುಜರಾತಿನಿಂದ ಶುರುವಾಗಿ ದೆಹಲಿವರೆಗೂ ಹಬ್ಬಿ, ಬಿಸಿಸಿಐ ಒಳಹೊಕ್ಕಿ ಕೂತಿದ್ದು ಯಾರ ಕುಟುಂಬ? ಕರ್ನಾಟಕದಲ್ಲಿ ಬೆಳೆದು ನಿಂತ ಬಿಜೆಪಿ ವಂಶವೃಕ್ಷಗಳೆಷ್ಟು? ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ಒಡಿಶಾವರೆಗೆ ವ್ಯಾಪಿಸಿರುವ ಬಿಜೆಪಿ ವಂಶವೃಕ್ಷಗಳ ಕೊಂಬೆಗಳ ಲೆಕ್ಕ ಬಿಚ್ಚಿಡಬೇಕೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.