ಕೋವಿಡ್ ನಡುವೆಯೂ ಪ್ರಗತಿ ಕಂಡ ಕೆಎಂಎಫ್
Team Udayavani, Jun 4, 2021, 7:02 AM IST
ಬೆಂಗಳೂರು: ಕೋವಿಡ್ ಸಮಯದಲ್ಲೂ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ರೈತರ ಮತ್ತು ಗ್ರಾಹಕರ ಹಿತ ಕಾಯುತ್ತಾ ಪ್ರಗತಿ ಸಾಧಿಸಿದೆ.
ಕರ್ನಾಟಕ ಹಾಲು ಮಹಾಮಂಡಲ ಮತ್ತು ಸಹಕಾರ ಹಾಲು ಒಕ್ಕೂಟಗಳು ಎಲ್ಲ ಸಂಕಷ್ಟಗಳನ್ನು ಮೀರಿ ನಿಂತಿದ್ದು, ಸುಮಾರು 14,700ಕ್ಕೂ ಹೆಚ್ಚು ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘಗಳು 14 ಜಿಲ್ಲಾ ಹಾಲು ಒಕ್ಕೂಟಗಳು, ಕರ್ನಾಟಕ ಹಾಲು ಮಹಾಮಂಡಲ ಸೇರಿ ಹಾಲಿನ ಉದ್ಯಮಕ್ಕೆ ನಷ್ಟವಾಗದಂತೆ ಹಾಗೂ ಸುಮಾರು 30,000 ಸಿಬಂದಿಯ ಉದ್ಯೋಗಕ್ಕೆ ಧಕ್ಕೆ ಆಗದಂತೆ ನೋಡಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ.
ಸರಕಾರ 88 ಕೋ. ರೂ. ವೆಚ್ಚದಲ್ಲಿ ಒಂದು ತಿಂಗಳ ಕಾಲ ಪ್ರತಿ ದಿನ ಸರಾಸರಿ 8 ಲಕ್ಷ ಲೀಟರ್ ಹಾಲು ಖರೀದಿಸಿ ಕಟ್ಟಡ ಕಾರ್ಮಿಕರಿಗೆ ವಿತರಿಸಿ ಸಹಕರಿಸಿದೆ.
ಕೋವಿಡ್ ಕಾರಣ ಎಚ್ಚರಿಕೆ :
ಕೋವಿಡ್ ಹಿನ್ನೆಲೆಯಲ್ಲಿ ಹಲವು ಮುನ್ನೆಚ್ಚರಿಕೆ ವಹಿಸಲಾಯಿತು. ಗ್ರಾಮೀಣ ಪ್ರದೇಶದ 14,700 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಪೂರೈಸುವ 9 ಲಕ್ಷ ರೈತರು, ಸರದಿಯಲ್ಲಿ ನಿಂತು ಅಂತರ ಕಾಯ್ದುಕೊಂಡು ಹಾಲಿನ ಕೇಂದ್ರದಲ್ಲಿ ಹಾಲು ಹಾಕಿದರು. ಸಂಘದ ಹಾಲು ಶೇಖರಣೆ ವ್ಯವಸ್ಥೆಯ ಸ್ವತ್ಛತೆ ಕಾಯ್ದುಕೊಂಡು, ಯಾವುದೇ ತೊಂದರೆ ಆಗದಂತೆ ಗ್ರಾಮೀಣ ಮಟ್ಟದಲ್ಲಿ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತೆ ಕ್ರಮವು ರೈತರಿಗೆ ಪಾಠವಾಯಿತು.
ಕೋವಿಡ್ ನಡುವೆ ಕಾರ್ಯ :
ಹಾಲು ಒಕ್ಕೂಟ, ಮಹಾ ಮಂಡಲದಿಂದ ನೀಡಲಾಗುವ ಕೃತಕ ಗರ್ಭಧಾರಣೆ, ಪಶು ಆಹಾರ ಪೂರೈಕೆ, ಮೇವಿನ ಬೀಜ, ಬೇರುಗಳ ಪೂರೈಕೆ ಮುಂತಾದ ಹಲವು ಸೇವಾ ಕಾರ್ಯಕ್ರಮ ಹಿಂದಿನಂತೆಯೇ ನಡೆದವು. ಹಾಲಿನ ಶೇಖರಣೆ ದಿನವಹಿ 89 ಲಕ್ಷ ಲೀ.ದಾಟಿದ್ದು, ಇದು ಅತಿ ಹೆಚ್ಚು ಶೇಖರಣೆ ಆಗಿದೆ. ಜೂನ್, ಜುಲೈ ತಿಂಗಳಿನಲ್ಲಿ ಇನ್ನೂ ಹೆಚ್ಚಿಗೆ ಆಗಲಿದೆ.
ಜತೆಗೆ ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಂದಿನಿ ಪಶು ಆಹಾರದ ದರವನ್ನು 2 ಸಾವಿರ ರೂ.ಗಳನ್ನು ಪ್ರತಿ ಮೆ.ಟನ್‌ಗೆ ಕಡಿಮೆ ಮಾಡಲಾಯಿತು. ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಇದ್ದಾಗಲೂ ದಾಖಲೆಯ 6200 ಮೆ.ಟನ್ ಪಶು ಆಹಾರ ಉತ್ಪಾದಿಸಿ ಸರಬರಾಜು ಮಾಡಲಾಯಿತು. ಪಶು ಆಹಾರ ತಯಾರಿಸಲು ಬೇಕಾಗುವ ಮೆಕ್ಕೆಜೋಳವನ್ನು ರೈತರಿಂದ ನೇರ ಖರೀದಿ ಪ್ರಾರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಯಿತು. ಹಾಲಿನ ಸಂಸ್ಕರಣೆ ವಿಚಾರದಲ್ಲಿ ಕೆಎಂಎಫ್ ಎಚ್ಚರಿಕೆ ಹೆಜ್ಜೆಯನ್ನಿಟ್ಟಿತು.
ಇ-ಮಾರುಕಟ್ಟೆ :
ಮಾರುಕಟ್ಟೆ ವಿಷಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಗ್ರಾಹಕರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಕಾಲದಲ್ಲಿ ದೊರಕುವಂತೆ ಮಾಡಲಾ ಯಿತು. ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಜಾಲವನ್ನು ಹೆಚ್ಚಿಸುವುದರ ಜೊತೆಗೆ ಇ-ಮಾರುಕಟ್ಟೆ ಬಲಪಡಿಸ ಲಾಯಿತು.
ಮಾರುಕಟ್ಟೆ ಬೇಡಿಕೆ ಪರಿಗಣಿಸಿ, ಆಯುರ್ವೇದ ಪ್ರಾಮುಖ್ಯದ ಅರಿಶಿನ, ತುಳಸಿ, ಅಶ್ವಗಂಧ ಮುಂತಾದ ಸುವಾಸಿತ ಹಾಲು ಬಿಡುಗಡೆ ಮಾಡಲಾಯಿತು. ಅಯುರ್ವೇದ ಗುಣಗಳಿರುವ ಐಸ್ ಕ್ರೀಂ, ಸಿರಿಧಾನ್ಯ ಉತ್ಪನ್ನಗಳು, ರಸ್ಕ್, ಗುಡ್‌ಲೈಫ್ ಬ್ರೆಡ್ ಬಿಡುಗಡೆ ಮಾಡಲಾಗಿದೆ. ನಂದಿನಿ ಸಿಹಿ ಉತ್ಸವ ಆಚರಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು. 2021ರ ಜೂನ್ ತಿಂಗಳಿಂದ ಗ್ರಾಹಕರಿಗೆ 1 ಲೀಟರ್ ಹಾಲಿಗೆ 40 ಗ್ರಾಂ ಹೆಚ್ಚುವರಿ ಉಚಿತ ಹಾಲನ್ನು ನೀಡಲಾಗುತ್ತಿದೆ.
ಕೋವಿಡ್ ಕವಚ ವಿಮೆ :
ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಲ ಹಾಗೂ ಹಾಲು ಒಕ್ಕೂಟಗಳ ಸಿಬಂದಿಗೆ ಆದ್ಯತೆ ಮೇಲೆ ಕೊರೊನಾ ಲಸಿಕೆ ಕೊಡಿಸಿದೆ. ಸಿಬಂದಿಗೆ ಟೆಸ್ಟ್ ಮಾಡುವುದರ ಜತೆಗೆ ಕೊರೊನಾ ಬಾಧಿತರಿಗೆ ಔಷಧ ಕಿಟ್ ನೀಡುತ್ತಿದೆ. ಆಸ್ಪತ್ರೆ ವೆಚ್ಚ ಭರಿಸಲು ಕೊರೊನಾ ಕವಚ ವಿಮಾ ಯೋಜನೆ ಜಾರಿಗೆ ತರಲಾಗಿದ್ದು ಸಿಬಂದಿ ಮರಣ ಹೊಂದಿದರೆ ಪರಿಹಾರವನ್ನು ಕೆಎಂಎಫ್ ನೀಡಲಿದೆ.
ಆಶಾ ಕಾರ್ಯಕರ್ತೆಯರಿಗೆ ನೆರವು ವಿತರಣೆ :
ಕೊವಿಡ್ ಮೊದಲ ಅಲೆಯ ಸಂದರ್ಭ ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೆ 3,000 ರೂ.ಅನ್ನು ಹಾಲು ಒಕ್ಕೂಟಗಳು ನೀಡಿದ್ದವು. ಜತೆಗೆ ಕರ್ನಾಟಕ ಹಾಲು ಮಹಾಮಂಡಲ ಮತ್ತು ಒಕ್ಕೂಟ ಸೇರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟಾರೆಯಾಗಿ 8 ಕೋಟಿ ರೂ.ಗೂ ಅಧಿಕ ಮೊತ್ತವನ್ನು ಕೆಎಂಎಫ್ ನೀಡಿದೆ.
ಶಾಲಾ ಮಕ್ಕಳಿಗೆ ಕೆನೆಭರಿತ ಹಾಲು ನೀಡುವ ಯೋಜನೆಯನ್ನು ಮುಂದುವರಿಸುವುದಾಗಿ ಸರಕಾರ ಹೇಳಿದೆ. ಇದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. – ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.