ಕೆಎಸ್‌ಟಿಡಿಸಿ ನಷ್ಟದ ಹಾದಿಯಿಂದ ಲಾಭದ ಹಳಿಗೆ
ಕೋವಿಡ್ ಸಂದರ್ಭ 18 ಕೋಟಿ ರೂ. ಸಾಲ ; ಈಗ 9 ಕೋಟಿ ರೂ. ಲಾಭ
Team Udayavani, Jul 24, 2022, 6:25 AM IST
ಬೆಂಗಳೂರು: ರಾಜ್ಯ ಸರಕಾರಿ ಸ್ವಾಮ್ಯದ ಕರ್ನಾಟಕ ಪ್ರವಾಸೋದ್ಯಮ ನಿಗಮವು ನಷ್ಟದ ಹಾದಿಯಿಂದ ಲಾಭದ ಹಳಿಗೆ ಬಂದು ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮವು ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಹಲವಾರು ಪ್ರವಾಸಿ ತಾಣಗಳಲ್ಲಿ ಹೊಟೇಲ್‌ಗಳನ್ನು ನಡೆಸುತ್ತಿದೆ. ಹಲವಾರು ವರ್ಷಗಳಿಂದ ಹೊಟೇಲ್‌ಗಳ ಕಳಪೆ ನಿರ್ವಹಣೆ ಹಾಗೂ ಅಲ್ಲಿ ದೊರೆಯುವ ಆಹಾರ ಪದಾರ್ಥಗಳ ಬಗ್ಗೆ ಸಾರ್ವಜನಿಕರಿಗೆ ನಕಾರಾತ್ಮಕ ಭಾವನೆ ಇದ್ದುದರಿಂದ ಇವು ನಷ್ಟದಲ್ಲಿತ್ತು. ಪ್ರತಿ ತಿಂಗಳು ಸಿಬಂದಿಯ ಸಂಬಳ ನೀಡುವುದಕ್ಕೂ ಕಷ್ಟ ಪಡುವಂತಹ ಪರಿಸ್ಥಿತಿ ಎದುರಾಗಿತ್ತು.
ಕೊರೊನಾ ಸಂದರ್ಭದಲ್ಲಿ 18 ಕೋಟಿ ರೂ. ಸಾಲದ ಭಾರ ಹೊತ್ತುಕೊಂಡಿತ್ತು.ನಿರ್ವಹಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಿರುವುದರಿಂದ ನಾಲ್ಕೇ ತಿಂಗಳಲ್ಲಿ 9 ಕೋಟಿ ರೂ. ಲಾಭ ಗಳಿಸಿದೆ. ಸಂಸ್ಥೆ ವಾರ್ಷಿಕ ಸುಮಾರು 46 ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ಈ ವರ್ಷ 100 ಕೋಟಿ ರೂ. ಗುರಿ ಹಾಕಿಕೊಂಡಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.
ಕೆಎಸ್‌ಟಿಡಿಸಿ ನಡೆಸುವ ಮಯೂರ ಹೊಟೇಲ್‌ಗಳ ಬಗ್ಗೆ ಸಾರ್ವಜನಿಕರಿಗೆ ಇರುವ ಅಭಿಪ್ರಾಯವನ್ನು ಮನಗಂಡು ಅಲ್ಲಿನ ಅಡುಗೆ ಪಾತ್ರೆ, ತಟ್ಟೆ, ಲೋಟ (ಕ್ರಾಕರೀಸ್)ದಿಂದ ಹಿಡಿದು ಎಲ್ಲವನ್ನೂ ಬದಲಾಯಿಸಲಾಗಿದೆ.
ಹೊಸ ರೂಪ
ಹೊಟೇಲ್ ರೂಮುಗಳಿಗೆ ಹೊಸ ರೂಪ ನೀಡಲಾಗಿದ್ದು, ಹಾಸಿಗೆ, ದಿಂಬು, ಬೆಡ್‌ಶೀಟ್ ಮುಂತಾದವುಗಳನ್ನು ಬದಲಾಯಿಸಿ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ಪ್ರಯತ್ನ ಮಾಡಲಾಗಿದೆ. ನಂದಿಬೆಟ್ಟ, ಊಟಿ, ಸಂಗಮ, ಮುತ್ಯಾಲ ಮಡುವುಗಳಲ್ಲಿ ಹೊಸದಾಗಿ 30 ರೂಮುಗಳನ್ನು ನಿರ್ಮಾಣ ಮಾಡಲಾಗಿದೆ.
ಖಾಸಗಿ ಹೊಟೇಲ್‌ಗಳಿಗೆ ಸ್ಪರ್ಧೆ
ಖಾಸಗಿ ಹೊಟೇಲ್‌ಗಳಿಗೆ ಸ್ಪರ್ಧೆ ನೀಡುವ ಮಟ್ಟಕ್ಕೆ ಉತ್ತಮ ಸೇವೆ ಒದಗಿಸುವಂತೆ ಮಾರ್ಪಡಿಸಲಾಗಿದ್ದು, ಸರಕಾರಿ ನೌಕರರಿಗೆ ಶೇ.15ರಷ್ಟು ರಿಯಾಯಿತಿಯನ್ನೂ ಕೆಎಸ್‌ಟಿಡಿಸಿ ನೀಡುತ್ತಿದೆ. ಅಲ್ಲದೆ, ಪ್ರವಾಸಿಗರನ್ನು ಸೆಳೆಯಲು ರೂಮಿನ ಬಾಡಿಗೆ ಮತ್ತು ಊಟದದರದಲ್ಲಿ ಶೇ.20 ಕಡಿತ ಮಾಡುವ ಮೂಲಕ ಗ್ರಾಹಕ ಸ್ನೇಹಿಯಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ.
ವುಡನ್ ಕಾಟೇಜ್‌ಅತಿ ಕಡಿಮೆ ವೆಚ್ಚದಲ್ಲಿ ಪ್ರವಾಸಿಗರಿಗೆ ಆಕರ್ಷಣೀಯವಾಗುವಂತೆ ತಮಿಳುನಾಡಿನ ಊಟಿಯಲ್ಲಿ 10 ಹಾಗೂ ಚಿಕ್ಕಬಳ್ಳಾಫುರ ಜಿಲ್ಲೆಯ ನಂದಿ ಬೆಟ್ಟದಲ್ಲಿ 10 ವುಡನ್ ಕಾಟೇಜ್‌ಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ.
ದಸರಾ ಪ್ಯಾಕೇಜ್ ಪ್ಲ್ಯಾನ್
ಮುಂದಿನ ದಸರಾ ಸಂದರ್ಭದಲ್ಲಿ ಮೈಸೂರು ಹಾಗೂ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ವಿಶೇಷ ಪ್ಯಾಕೇಜ್ ಘೋಷಿಸಲು ನಿಗಮ ನಿರ್ಧರಿಸಿದೆ. ಮಡಿಕೇರಿ, ನಾಗರಹೊಳೆ, ಬಂಡೀಪುರ, ಸೋಮನಾಥಪುರ, ಬೇಲೂರು ಹಳೆಬೀಡು ಮುಂತಾದ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ನೀಡಲು ನಿಗಮ ತೀರ್ಮಾನಿಸಿದೆ.
ಕೆಎಸ್‌ಟಿಡಿಸಿ ಹೊಟೇಲ್ ಕಡೆಗೆ ಪ್ರವಾಸಿಗರನ್ನು ಸೆಳೆಯಲು ಇರುವ ಒಂದೇ ಒಂದು ಉಪಾಯ ಅಂದರೆ, ಹೊಟೇಲ್‌ನ ಸ್ವಚ್ಛತೆ, ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು. ಇವೆರಡರ ಕಡೆಗೆ ಹೆಚ್ಚಿನ ಒತ್ತು ನೀಡಿದ್ದು, ನಾಲ್ಕು ತಿಂಗಳಲ್ಲಿ ಅದರ ಫಲಿತಾಂಶ ಲಭ್ಯವಾಗಿದೆ.
-ಜಿ. ಜಗದೀಶ್, ಕೆಎಸ್‌ಟಿಡಿಸಿ ಎಂ.ಡಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.