Kundapura Kannada Habba ಸಮಾರೋಪ;ಮಾತೃ ಭಾಷೆ ಮೇಲೆ ಅಭಿಮಾನವಿರಲಿ:ಜಯಪ್ರಕಾಶ ಹೆಗ್ಡೆ
ಹಾಯ್ ಪದವನ್ನು ಹ್ವಾಯ್ ಮಾಡು ಎಂದು ಮಾವ ಹೇಳಿದ್ದರು! : ಪ್ರಿಯಾಂಕಾ ಉಪೇಂದ್ರ
Team Udayavani, Aug 18, 2024, 10:58 PM IST
ಬೆಂಗಳೂರು: ಮಾತೃ ಭಾಷೆಯ ಮೇಲೆ ಅಭಿಮಾನ ಬೆಳೆಸಿಕೊಳ್ಳುವುದರ ಜತೆಗೆ ಇತರೆ ಭಾಷೆಗಳ ಮೇಲೂ ಗೌರವ ಇರಲಿ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ ಹೆಗ್ಡೆ ತಿಳಿಸಿದರು.
‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕುಂದಾಪ್ರ ಕನ್ನಡ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
ಕುಂದಾಪ್ರ ಕನ್ನಡ ಅಧ್ಯಯನ ಪೀಠಕ್ಕೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸದ್ಯದಲ್ಲೇ ಸಮಿತಿ ರಚನೆಯಾಗಲಿದೆ. ಮುಂದಿನ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಭಾಷೆಯ ಅಧ್ಯಯನ ಪೀಠ ತನ್ನ ಕೆಲಸ ಪ್ರಾರಂಭಿಸಲಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಆಡಳಿತಾತ್ಮಕವಾಗಿ ಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಇಂದಿಗೂ ತನ್ನ ನಂಟನ್ನು ಉಳಿಸಿಕೊಂಡಿದೆ. ಇಲ್ಲಿನ ಭಾಷೆ, ಸಂಸ್ಕೃತಿ ವಿಚಾರದಲ್ಲಿ ಭಿನ್ನತೆ ಇರಬಹುದು. ಆದರೆ ನಾವೆಲ್ಲರೂ ಒಂದೇ ಎನ್ನುವುದನ್ನು ಯಾರೂ ಮರೆಯಬಾರದು. ಮಕ್ಕಳಿಗೆ ಮೊದಲು ಮಾತೃಭಾಷೆ ಕಲಿಸಿಕೊಡಬೇಕು. ಉಳಿದದ್ದನ್ನು ಅವರೇ ಕಲಿತುಕೊಳ್ಳುತ್ತಾರೆ ಎಂದರು.
ಕುಂದಾಪುರದ ಜನರು ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಷ್ಟೇ ಗಂಭೀರವಾಗಿ ತೆಗೆದುಕೊಂಡರೂ, ಅದನ್ನು ಅಷ್ಟೇ ಆರಾಮವಾಗಿ ನೋಡುತ್ತಾರೆ. ಅಜ್ಜನಿಂದ, ತಂದೆಯವರೆಗೂ ಎಲ್ಲರನ್ನೂ ತಮಾಷೆ ಮಾಡುವ ಭಾಷೆ ಇದ್ದರೆ ಅದು ಕುಂದಾಪುರ ಕನ್ನಡ ಭಾಷೆ. ಇದು ಭಾಷೆಯ ಗರಿಮೆ. ಈ ಒಂದು ಕಾರಣದಿಂದ ನಾವೆಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತವಾಗುತ್ತದೆ. ಸಮಾನತೆ ಕುಂದಾಪುರ ಭಾಷೆಯಲ್ಲಿದೆ. ಬದುಕನ್ನು ಸುಂದರವಾಗಿ ಕಾಣುವ ದೃಷ್ಟಿಕೋನ ಕುಂದಾಪುರದ ಜನರಲ್ಲಿದೆ. ಹೀಗಾಗಿ ಜೀವನದಲ್ಲಿ ಎಷ್ಟೇ ದೊಡ್ಡ ಸೋಲಾದರೂ ಬೇಗನೆ ಪುಟಿದೇಳುತ್ತಾರೆ ಎಂದು ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಹೇಳಿದರು.
ಕುಂದಾಪುರದವರು ತಮ್ಮ ಭಾಷೆ ಉಳಿಸಿ ಬೆಳೆಸುತ್ತಿದ್ದಾರೆ. ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸುವುದು ತಪ್ಪಲ್ಲ. ನಮ್ಮತನ ಉಳಿಯಬೇಕೆಂದಾದರೆ ಮನೆಯಲ್ಲಿ ಮಕ್ಕಳೊಂದಿಗೆ ಆಡುಭಾಷೆಯಲ್ಲೇ ಮಾತನಾಡಿ. ಕುಂದಾಪುರ ಭಾಷೆಯಲ್ಲಿ ವಿಶಿಷ್ಟ ಶಕ್ತಿ ಇದೆ. ಭಾಷೆಯನ್ನು ಉಳಿಸಿಕೊಂಡರೆ ನಾವು ಉಳಿಯುತ್ತೇವೆ. ನಾವು ಉಳಿಯಬೇಕಾದರೆ ಭಾಷೆ ಉಳಿಯಬೇಕು ಎಂದು ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು.
‘ಹುಟ್ಟೂರ ಗೌರವ’ ಸನ್ಮಾನ
ದೇಶ ವಿದೇಶದಲ್ಲಿ ಎಷ್ಟೇ ಗೌರವ ಸನ್ಮಾನ ಬಂದಿದ್ದರೂ, ಹುಟ್ಟೂರ ಸನ್ಮಾನಕ್ಕೆ ಯಾವುದೂ ಸರಿಸಾಟಿ ಇಲ್ಲ. 14 ತಿಂಗಳ ಮಗುವಾಗಿದ್ದಾಗ ಪೋಲಿಯೂ ರೋಗಕ್ಕೆ ತುತ್ತಾದೆ. ಹೆತ್ತವರ ಪರಿಶ್ರಮ, ಆಶೀರ್ವಾದದ ಫಲವಾಗಿ ಸಾಧನೆ ಸಾಧ್ಯವಾಗಿದೆ. ನಾನಿಂದು ವ್ಹೀಲ್ಚಯರ್ನಲ್ಲಿ ಕೂತಿಲ್ಲ, ಇದು ನನ್ನ ರಥ, ಇದರಲ್ಲಿ ರಾಣಿಯಂತೆ ಕೂತಿದ್ದೇನೆ ಎಂದು ಭಾವಿಸುತ್ತೇನೆ. ಕನಸು ಕಾಣಬೇಕು. ಆ ಕನಸು ಒಂದಲ್ಲ ಒಂದು ದಿನ ನನಸಾಗುತ್ತದೆ. ಕೆಲವು ಬಾರಿ ಸ್ವಲ್ಪ ತಡವಾಗುತ್ತದೆ. ಇದಕ್ಕೆ ನಾನೇ ಉದಾಹರಣೆ. ದೇವರು ನನಗೆ ಸಣ್ಣ ನೋವು ಕೊಟ್ಟರೂ, ನೂರರಷ್ಟು ಗೌರವ ಕೊಟ್ಟಿದ್ದಾನೆ. ಅಂಗವೈಕಲ್ಯ ಇದೆ ಅಂತ ಅಂಜಬೇಕಿಲ್ಲ. ಮನಸ್ಸಿದ್ದರೆ ಎಲ್ಲವನ್ನೂ ಗೆಲ್ಲಬಹುದು ಎಂದು ಪದ್ಮಶ್ರೀ, ಅರ್ಜುನ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಮಾಲತಿ ಹೊಳ್ಳ ‘ಊರ ಗೌರವ’ ಸ್ವೀಕರಿಸಿ ಮಾತನಾಡಿದರು.
ಹಿಂದೆ ಕುಂದಾಪುರ ಭಾಷೆ ಮಾತನಾಡಿದರೆ ‘ಸರಿಯಾಗಿ ಮಾತನಾಡು’ ಎನ್ನುತ್ತಿದ್ದರು. ಈ ಭಾಷೆ ಸರಿಯಾಗಿಲ್ಲ ಎಂದವರು ಯಾರು? ಇಂದಿಗೆ ಭಾಷೆಯ ಮೇಲಿನ ಕೀಳರಿಮೆ ಕಳೆದು ಹೋಗಿದೆ. ಬೆಂಗಳೂರಿನಲ್ಲಿರುವ ವಿವಿಧ ಜಿಲ್ಲೆಗಳ ಜನರು ಕುಂದಾಪುರ ಭಾಷೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಪ್ರಭಾವ ಬೀರಿದಂತೆ ಭಾಷೆ ಬೆಳೆಯುತ್ತ ಹೋಗುತ್ತದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.
ಹಾಯ್ ಪದವನ್ನು ಹ್ವಾಯ್ ಮಾಡು!
”ಕುಂದಾಪುರ ನನ್ನಿಷ್ಟದ ಊರು. ಕೊಟ್ಟೆ ಕಡುಬು ನೆಚ್ಚಿನ ತಿನಿಸು. ಅತ್ತೆ-ಮಾವನ ಮೂಲಕ ಕನ್ನಡ ಕಲಿತುಕೊಂಡಿದ್ದೇನೆ. ಮದುವೆ ನಂತರ ಆನೆಗುಡ್ಡೆ ದೇವಸ್ಥಾನಕ್ಕೆ ಹೋಗಿದ್ದೆ. ‘ಕುಂದಾಪ್ರ ಕನ್ನಡ’ ಎಂದಾಗ ಮನೆಯಲ್ಲಿ ಮಾವ ‘ಹಾಯ್ ಪದವನ್ನು ಹ್ವಾಯ್ ಮಾಡು ಅಷ್ಟೇ..’ಎಂದಿದ್ದರು ಎಂದು ನಟಿ ಪ್ರಿಯಾಂಕ ಉಪೇಂದ್ರ ಹೇಳಿದರು.
ಎಂ.ಆರ್.ಜಿ. ಸಮೂಹದ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ,ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ, ಸೌತ್ ಫೀಲ್ಡ್ ಪೇಂಟ್ಸ್ ಪ್ರೈ. ಲಿ. ಎಂಡಿ ಶಿವರಾಮ ಹೆಗ್ಡೆ, ಚೆಪ್ ಟಾಕ್‌ನ ಗೋವಿಂದಬಾಬು ಪೂಜಾರಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಉಪೇಂದ್ರ ಶೆಟ್ಟಿ, ‘ಕುಂದಾಪ್ರ ಕನ್ನಡ ಪ್ರತಿಷ್ಠಾನ’ದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.