ಮಳೆ ಕೊರತೆ; ಜಲಾಶಯಗಳಲ್ಲಿ ಶೂನ್ಯ ಒಳಹರಿವು
ಬತ್ತಿದ ನದಿಗಳ ಒಡಲು; ಜಲಕ್ಷಾಮದ ದಿಗಿಲು
Team Udayavani, Jun 26, 2023, 7:00 AM IST
ಬೇಸಗೆಯ ಬೇಗೆ, ಮುಂಗಾರು ಪೂರ್ವ ಮಳೆಯ ಕೊರತೆ, ನೈಋತ್ಯ ಮುಂಗಾರು ಪ್ರವೇಶದಲ್ಲಾದ ವಿಳಂಬದಿಂದ ರಾಜ್ಯಾದ್ಯಂತ ಜಲಾಶಯಗಳ ಒಡಲು ಬರಿದಾಗಿದೆ. ಹಲವು ಪ್ರಮುಖ ಜಲಾಶಯಗಳಲ್ಲಿ ಶೂನ್ಯ ಒಳಹರಿವು ಇದ್ದು, ಬರದ ಛಾಯೆ ಆವರಿಸತೊಡಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಲಕ್ಷಾಮ ಉಂಟಾಗಬಹುದೇ ಎಂಬ ಆತಂಕ ತಲೆದೋರಿದೆ.
ಡೆಡ್ ಸ್ಟೋರೇಜ್ ತಲುಪಿದ ತುಂಗಾ, ಭದ್ರಾ, ಲಿಂಗನಮಕ್ಕಿ
ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಭದ್ರಾ, ತುಂಗಾ, ಲಿಂಗನಮಕ್ಕಿಯಲ್ಲಿ ಜೂನ್ ಕೊನೆಯ ವಾರ ಬಂದರೂ ಉತ್ತಮ ಒಳಹರಿವು ಕಂಡುಬಂದಿಲ್ಲ. ತುಂಗಾ, ಲಿಂಗನಮಕ್ಕಿ ಜಲಾಶಯಗಳು ಈಗಾಗಲೇ ಡೆಡ್ ಸ್ಟೋರೇಜ್ ತಲುಪಿವೆ. ಮಳೆ ಬಾರದಿದ್ದರೆ ಶಿವಮೊಗ್ಗ ಸೇರಿ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಪರಿಸ್ಥಿತಿ ಬಿಗಡಾಯಿಸಲಿದೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 137 ಅಡಿ (24 ಟಿಎಂಸಿ) ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 150 ಅಡಿ ನೀರಿತ್ತು. ತುಂಗಾ ಜಲಾಶಯ ತುಂಬಲು 12 ಅಡಿ ನೀರು ಬರಬೇಕಿದೆ. ಶಿವಮೊಗ್ಗ ನಗರಕ್ಕೆ ಇಲ್ಲಿಂದಲೇ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಸದ್ಯಕ್ಕೆ ಯಾವುದೇ ಆತಂಕ ಇಲ್ಲ.
ರಾಜ್ಯದ ಶೇ. 25 ಜಲವಿದ್ಯುತ್ ಪೂರೈಸುವ ಲಿಂಗನಮಕ್ಕಿ ಜಲಾಶಯ ಡೆಡ್ ಸ್ಟೋರೇಜ್ ಸಮೀಪಿಸಿದೆ. ಮಳೆ ಬಾರದಿದ್ದರೆ 15 ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಪ್ರಸ್ತುತ ವಿದ್ಯುತ್ 2ರಿಂದ 3 ಮಿಲಿಯನ್ ಯುನಿಟ್‌ಗೆ ಕುಸಿದಿದೆ. 1,819 ಅಡಿ (152 ಟಿಎಂಸಿ) ಗರಿಷ್ಟ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 1,740.40 ಅಡಿ (11.14 ಟಿಎಂಸಿ) ನೀರಿದೆ. ಕಳೆದ ವರ್ಷ ಈ ಅವಧಿಯಲ್ಲಿ 1,750.55 ಅಡಿ (18.69 ಟಿಎಂಸಿ) ನೀರಿತ್ತು.
ಬರಿದಾಗುತ್ತಿದೆ ಕಬಿನಿಯ ಒಡಲು
ರಾಜ್ಯದ ಎರಡು ಪ್ರಮುಖ ಹುಲಿ ಸಂರಕ್ಷಿತಾರಣ್ಯಗಳನ್ನು ಬೇರ್ಪಡಿಸುವ ಕಬಿನಿ ಜಲಾಶಯ ನೀರಿಲ್ಲದೆ ಬರಿದಾಗುತ್ತಿದೆ. ಕೇರಳದ ವಯನಾಡು ಭಾಗದಲ್ಲಿ ಜನ್ಮತಾಳುವ ಕಪಿಲಾ ನದಿ ಜೂನ್ ವೇಳೆಗೆ ಮೈದುಂಬಿ ಹರಿಯುತ್ತಿದ್ದಳು. ಆದರೆ ನಿರೀಕ್ಷಿತ ಮಳೆಯಾಗದ ಹಿನ್ನೆಲೆ ಕಪಿಲಾ ನದಿ ಕಳೆಗುಂದಿ ಹರಿಯುತ್ತಿರುವ ಪರಿಣಾಮ 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಕೇವಲ 4.28 ಟಿಎಂಸಿಯಷ್ಟು ಮಾತ್ರ ನೀರಿದೆ. ಸದ್ಯ ಜಲಾಶಯಕ್ಕೆ 513 ಕ್ಯುಸೆಕ್‌ನಷ್ಟು ಒಳಹರಿವಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2,312 ಅಡಿಗಳಷ್ಟಿತ್ತು. ಜಲಾಶಯದಲ್ಲಿ ಒಂದೆರಡು ತಿಂಗಳಿಗಷ್ಟೇ ಸಾಕಾಗುವಷ್ಟು ನೀರು ಮಾತ್ರ ಇದೆ.
ಹೇಮಾವತಿ ಡ್ಯಾಂಗೆ ಇನ್ನೂ ಆರಂಭವಾಗದ ಒಳ ಹರಿವು
ಮುಂಗಾರು ಆರಂಭವಾಗಿ 2 ವಾರ ಕಳೆದರೂ ಹಾಸನದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಳಹರಿವು ಇನ್ನೂ ಆರಂಭವಾಗಿಲ್ಲ. ಕಳೆದ ವರ್ಷ ಈ ಅವಧಿಯಲ್ಲಿ ಒಳಹರಿವಿನ ಪ್ರಮಾಣ 492 ಕ್ಯುಸೆಕ್ ಇತ್ತು. ಆದರೆ ಈ ವರ್ಷ 291 ಕ್ಯುಸೆಕ್ ಇದೆ. ಅಚ್ಚುಕಟ್ಟು ಪ್ರದೇಶದ ಬೇಸಿಗೆ ಬೆಳೆಗೆ ನೀರು ಹರಿಸದಿದ್ದ ಕಾರಣ ಜಲಾಶಯದಲ್ಲಿ 10 ಟಿಎಂಸಿ ನೀರು ಲಭ್ಯವಿದೆ.
ಹಿಪ್ಪರಗಿ ಡ್ಯಾಂ ಸಂಪೂರ್ಣ ಖಾಲಿ
ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಬಾಗಲಕೋಟೆಯನ್ನು ಬಹುತೇಕ ಮುಳುಗಡೆ ಜಿಲ್ಲೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಮೂರು ನದಿಗಳು, 64 ಕೆರೆಗಳಿದ್ದರೂ ಜಿಲ್ಲೆಗೆ ಕುಡಿಯುವ ನೀರಿನ ಅಭಾವದ ಭೀತಿ ಹೆಚ್ಚಾಗಿದೆ. ಇನ್ನೊಂದು ವಾರದಲ್ಲಿ ಮಳೆ ಬಾರದಿದ್ದರೆ ನೀರಿಗಾಗಿ ಹಾಹಾಕಾರ ಆರಂಭವಾಗಲಿದೆ. ಬಾಗಲಕೋಟೆ ನಗರಕ್ಕೆ ನೀರು ಪೂರೈಸುವ ಬನ್ನಿದಿನ್ನಿ ಬ್ಯಾರೇಜ್ ಕೂಡ ಖಾಲಿಯಾಗುತ್ತಿದ್ದು, ವಾರಕ್ಕೆ 3 ಬಾರಿ ಬಿಡುತ್ತಿದ್ದ ನೀರನ್ನು ಈಗ 2 ಬಾರಿ ಮಾತ್ರ ಬಿಡಲಾಗುತ್ತಿದೆ. ಹಿಪ್ಪರಗಿ ಡ್ಯಾಂನಲ್ಲಿ ಕಳೆದ ವರ್ಷ ಇದೇ ದಿನ 1.80 ಟಿಎಂಸಿ ಅಡಿ ನೀರಿತ್ತು. ಈಗ 0.10 ಟಿಎಂಸಿ ಅಡಿ ಇದ್ದು, ಅದು ಡೆಡ್ ಸ್ಟೋರೇಜ್. ಹೀಗಾಗಿ ಡ್ಯಾಂ ಸಂಪೂರ್ಣ ಖಾಲಿಯಾಗಿದೆ. ಶೂನ್ಯ ಒಳ ಹರಿವು ಇದೆ.
ವಿ.ವಿ. ಸಾಗರದಲ್ಲಿ 23 ಟಿಎಂಸಿ ಅಡಿ ನೀರು ಸಂಗ್ರಹ
ಚಿತ್ರದುರ್ಗ ಜಿಲ್ಲೆಯ 3 ಪಟ್ಟಣಗಳು ಹಾಗೂ ನೂರಾರು ಹಳ್ಳಿಗಳ ಕುಡಿಯುವ ನೀರಿನ ಆಸರೆಯಾಗಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದಲ್ಲಿ 23 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಸದ್ಯ 123.55 ಅಡಿಗಳಷ್ಟಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ 125.6 ಅಡಿಯಷ್ಟು ನೀರಿನ ಸಂಗ್ರಹವಿತ್ತು. ಮಳೆ ಕಡಿಮೆ ಇರುವುದರಿಂದ ಒಳಹರಿವು ಹಾಗೂ ಹೊರ ಹರಿವು ಇಲ್ಲ. ಇಲ್ಲಿಂದ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಡಿಆರ್‌ಡಿಒಗೆ ಕುಡಿಯುವ ನೀರು ಒದಗಿಸಲಾಗುತ್ತದೆ.
ಹಿಡಕಲ್-ಮಲಪ್ರಭಾ ಪರಿಸ್ಥಿತಿ ಗಂಭೀರ
ಬೆಳಗಾವಿಯ ಹಿಡಕಲ್ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ಇದುವರೆಗೆ ಒಳಹರಿವು ಇಲ್ಲ. ಸದ್ಯಕ್ಕೆ ಜುಲೈ 2ನೇ ವಾರದವರೆಗೆ ನೀರು ಲಭ್ಯವಿದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಪ್ರತೀ ವರ್ಷ ಈ ವೇಳೆಯಲ್ಲಿ ಈ ಜಲಾಶಯಗಳಲ್ಲಿ ಕನಿಷ್ಠ 2 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಹಿಡಕಲ್ ಜಲಾಶಯಕ್ಕೆ ಜೂನ್ ಅಂತ್ಯದವರೆಗೆ ಒಳ ಹರಿವು ಪ್ರತಿನಿತ್ಯ ಸುಮಾರು 10 ಸಾವಿರ ಕ್ಯುಸೆಕ್ ನೀರು ಬರುತ್ತಿತ್ತು. ಇದೇ ಪರಿಸ್ಥಿತಿ ಮಲಪ್ರಭಾ ನದಿಯಲ್ಲಿಯೂ ಇದೆ. ಜುಲೈ ಎರಡನೇ ವಾರದವರೆಗೆ ನೀರು ಲಭ್ಯ ಇದ್ದು, ಬಳಿಕ ಪರಿಸ್ಥಿತಿ ಗಂಭೀರವಾಗಲಿದೆ. ಮಳೆ ಬಾರದಿದ್ದರೆ ಸುಮಾರು 600ಕ್ಕೂ ಹೆಚ್ಚು ಹಳ್ಳಿಗಳು ತೊಂದರೆಗೆ ಒಳಗಾಗಲಿವೆ.
ತುಂಗಭದ್ರಾ ಜಲಾಶಯ ಖಾಲಿ
ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಖಾಲಿಯಾಗಿದೆ. ಕಳೆದ ವರ್ಷ ಈ ಹೊತ್ತಿಗೆಗಾಗಲೇ ಸುಮಾರು 40 ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಸದ್ಯ ಜಲಾಶಯದಲ್ಲಿ 4.15 ಟಿಎಂಸಿ ನೀರು ಸಂಗ್ರಹವಿದೆ. ಮಳೆ ಬರದಿದ್ದರೂ ಸದ್ಯ ಇರುವ ನೀರನ್ನು ಕುಡಿಯಲು ಮಾತ್ರ ನಿಭಾಯಿಸಬಹುದು. ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ಈ ಸಮಸ್ಯೆ ಎದುರಾಗುತ್ತಿದೆ. 2017ರಲ್ಲೂ ಈ ಸಮಸ್ಯೆ ಆಗಿದ್ದು, ಆ ವರ್ಷ ಜಲಾಶಯಕ್ಕೆ ಕೇವಲ 88 ಟಿಎಂಸಿ ಮಾತ್ರ ಹರಿದು ಬಂದಿತ್ತು.
ಕಾರಂಜಾ ನೀರಿನ ಮಟ್ಟ ಕುಸಿತ
ವರುಣನ ಅಬ್ಬರದಿಂದ ಕಳದೆರಡು ವರ್ಷ ಭೋರ್ಗರೆದಿದ್ದ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಒಟ್ಟು 7.69 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದೆ. ಸದ್ಯ ಡ್ಯಾಂನಲ್ಲಿ 4.829 ಟಿಎಂಸಿ ನೀರು ಲಭ್ಯವಿದ್ದು, ಅದರಲ್ಲಿ 4.454 ಟಿಎಂಸಿ ಬಳಸಬಹುದಾಗಿದೆ. ಅಚ್ಚುಕಟ್ಟು ಪ್ರದೇಶದ ಅಲ್ಲಲ್ಲಿ ಎರಡು ದಿನ ಕೊಂಚ ಮಳೆಯಾಗಿದ್ದರಿಂದ ಒಳ ಹರಿವಿನಲ್ಲಿ 312 ಕ್ಯೂಸೆಕ್ ದಾಖಲಾಗಿದೆ.
ಬತ್ತಿದ ಕಲಬುರಗಿ ಜಲಾಶಯಗಳು
ಕಳೆದೆರಡು ವರ್ಷ ಅತಿವೃಷ್ಟಿ ಕಂಡ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಮಳೆ ನಾಪತ್ತೆಯಾಗಿ ಜಲಾಶಯಗಳು ಖಾಲಿಯಾಗಿದ್ದು, ಒಳಹರಿವು ಸಂಪೂರ್ಣ ಸ್ಥಗಿತವಾಗಿದೆ. ಭೀಮಾ ಏತ ನೀರಾವರಿ ಜಲಾಶಯದಲ್ಲಿ ಕೇವಲ 0.068 ಟಿಎಂಸಿ ಅಡಿ ಮಾತ್ರ ನೀರಿದೆ. ಬೆಣ್ಣೆತೊರಾ ಜಲಾಶಯದಲ್ಲಿ 0.328 ಟಿಎಂಸಿ ಅಡಿ ನೀರು ಮಾತ್ರ ಇದೆ. ಕಳೆದ ವರ್ಷ ಈ ಸಮಯದಲ್ಲಿ 115 ಕ್ಯೂಸೆಕ್ ಒಳಹರಿವು ಇದ್ದರೆ ಈಗ ಸಂಪೂರ್ಣ ಶೂನ್ಯವಾಗಿದೆ. ಅಮರ್ಜಾ ಜಲಾಶಯದಲ್ಲೂ ಒಳಹರಿವು ಶೂನ್ಯವಾಗಿದೆ. ಗಂಡೋರಿ ನಾಲಾ ಜಲಾಶಯದಲ್ಲಿ 0.147 ಟಿಎಂಸಿ ಅಡಿ ನೀರು ಮಾತ್ರ ಇದೆ. ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ 0.099 ಟಿಎಂಸಿ ಅಡಿ ನೀರಿದೆ.
ಆಲಮಟ್ಟಿ ಬರಿದು
ಕೃಷ್ಣೆಯ ಉಗಮಸ್ಥಾನ ಮಹಾರಾಷ್ಟ್ರದಲ್ಲಿ ಮುಂಗಾರು ಕೈಕೊಟ್ಟ ಕಾರಣ ಕೃಷ್ಣೆಯ ಒಡಲು ಬರಿದಾಗಿದೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ ಹಾಗೂ ಬಸವ ಸಾಗರ ಜಲಾಶಯಗಳು ಬತ್ತಿವೆ. ತುರ್ತಾಗಿ ಮಳೆ ಆಗದಿದ್ದಲ್ಲಿ ಕೃಷ್ಣೆಯನ್ನೇ ನಂಬಿರುವ ಉತ್ತರ ಕರ್ನಾಟಕದ ಬಹುತೇಕ ನಗರ-ಪಟ್ಟಣ-ಗ್ರಾಮೀಣ ಪ್ರದೇಶದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಲಾಲ ಬಹಾದ್ದೂರ ಶಾಸ್ತ್ರೀ ಜಲಾಶಯದಲ್ಲಿ ಕಳೆದ ವರ್ಷ ಮೇ ತಿಂಗಳಲ್ಲಿ 49.123 ಟಿಎಂಸಿ ಅಡಿ ನೀರು ಇತ್ತು. ಈಗ ಜಲಾಶಯಕ್ಕೆ ಒಳಹರಿವಿಲ್ಲದೆ 19.747 ಟಿಎಂಸಿ ಅಡಿ ನೀರು ಮಾತ್ರ ಇದೆ.
ಕೆಆರ್‌ಎಸ್ ನೀರಿನ ಮಟ್ಟ ಕುಸಿತ
ಕಾವೇರಿ ಕೊಳ್ಳದಲ್ಲಿ ಮಳೆ ಸಮರ್ಪಕವಾಗಿ ಆಗದ ಹಿನ್ನೆಲೆಯಲ್ಲಿ ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಗರಿಷ್ಠ 124.80 ಮಟ್ಟದ ಜಲಾಶಯದಲ್ಲಿ ಸದ್ಯ 77.68 ಅಡಿಗೆ ಇಳಿದಿದೆ. ಒಳಹರಿವು 552 ಕ್ಯುಸೆಕ್ ಇದ್ದರೆ, ಹೊರಹರಿವು 571 ಕ್ಯೂಸೆಕ್ ಇದೆ. ಒಟ್ಟು ಜಲಾಶಯದಲ್ಲಿ 9.800 ಟಿಎಂಸಿ ನೀರು ಸಂಗ್ರಹವಿದೆ. ಸದ್ಯಕ್ಕೆ ಕುಡಿಯುವ ನೀರಿಗೆ ತೊಂದರೆಯಿಲ್ಲ. ಮಳೆ ಬರದಿದ್ದರೆ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗಲಿದೆ.
ಶೂನ್ಯ ಒಳಹರಿವಿನ ಜಲಾಶಯಗಳು
– ವಾರಾಹಿ
– ತುಂಗಭದ್ರಾ
– ಘಟಪ್ರಭಾ
– ಮಲಪ್ರಭಾ
– ಆಲಮಟ್ಟಿ
– ನಾರಾಯಣಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.