ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅನುಮಾನ!
Team Udayavani, Dec 9, 2017, 9:25 AM IST
ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ವಿವಿಧ ಪದವಿಗೆ ಸೇರಿದ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಲ್ಯಾಪ್‌ಟಾಪ್ ಸಿಗುವುದೇ ಇಲ್ಲ ಎನ್ನುವ ಪರಿಸ್ಥಿತಿ ಒಂದೆಡೆಯಾದರೆ, ಕಳೆದ ಸಾಲಿನಲ್ಲಿ ಸೇರಿಕೊಂಡ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಇನ್ನೂ ಲ್ಯಾಪ್‌ಟಾಪ್ ಪೂರೈಸಲು ಸಾಧ್ಯವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಾರ್ಷಿಕ ಆದಾಯ 2.50 ಲಕ್ಷದ ಒಳಗಿರುವ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2016-17ನೇ ಸಾಲಿನಲ್ಲಿ ಎಸ್ ಸಿಪಿ, ಟಿಎಸ್‌ಪಿ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ವಿತರಣೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ 25,276 ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ 9726 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಒದಗಿಸಲು ವರ್ಷದ ಹಿಂದೆಯೇ ಟೆಂಡರ್ ಆಹ್ವಾನಿಸಲಾಗಿತ್ತು.
ಒಂದೇ ರೀತಿಯ ಇ-ಕಂಟೆಂಟ್ ತುಂಬಿರುವ ಲ್ಯಾಪ್ ಟಾಪ್‌ಗ್ಳಿಗೆ ಇ-ಟೆಂಡರ್ ಪ್ರಕ್ರಿಯೆಯಲ್ಲಿ ಒಂದೇ ಬಿಡ್ ದಾರರು ಎರಡು ದರವನ್ನು ವಿಧಿಸಿದ್ದರು. ಕಾಲೇಜು ಶಿಕ್ಷಣ ಇಲಾಖೆಯ ವಿದ್ಯಾರ್ಥಿಯ ಒಂದು ಲ್ಯಾಪ್‌ಟಾಪ್‌ಗೆ 14,490 ರೂ. ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ವಿದ್ಯಾರ್ಥಿಯ ಒಂದು ಲ್ಯಾಪ್‌ಟಾಪ್‌ಗೆ 17,892 ರೂ. ಬಿಡ್ ಮಾಡಿದ್ದರು.
ಲ್ಯಾಪ್‌ಟಾಪ್ ಮಾದರಿ ಹಾಗೂ ಲ್ಯಾಪ್‌ಟಾಪ್ ಉತ್ಪಾದನೆ ಮಾಡುವ ಸಂಸ್ಥೆ ಒಂದೇ ಆಗಿದ್ದರೂ, ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ತಲಾ ಒಂದು ಲ್ಯಾಪ್ ಟಾಪ್ ಬೆಲೆಯಲ್ಲಿ 3402 ರೂ. ಹೆಚ್ಚಿಸಿರುವುದಕ್ಕೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ರಾಜ್ಯದ ಬೊಕ್ಕಸಕ್ಕೆ 3.31 ಕೋಟಿ ರೂ.ಗಳಷ್ಟು ಹೆಚ್ಚುವರಿ ಹೊರೆಯಾಗಲಿದೆ
ಎಂದು ಸರ್ಕಾರದ ಗಮನ ಸೆಳೆದಿದ್ದರು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್‌ಟಾಪ್‌ಗ್ಳಲ್ಲೇ ಇನ್ನೂ ಶೇ.25 ಲ್ಯಾಪ್‌ಟಾಪ್‌ಗ್ಳನ್ನು ಹೆಚ್ಚುವರಿಯಾಗಿ ಪಡೆದು, ತಾಂತ್ರಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದೆ. ಅದರಂತೆ ಒಂದೇ ಟೆಂಡರ್ ಅಡಿಯಲ್ಲಿ ಲ್ಯಾಪ್‌ಟಾಪ್ ಖರೀದಿಸಿ ಕಳೆದ ವರ್ಷದ ಎಸ್ಸಿ, ಎಸ್ಟಿ ಅರ್ಹ
ಫಲಾನುಭವಿ ವಿದ್ಯಾರ್ಥಿಗಳಿಗೆ ವಿತರಿಸಲು ನಿರ್ಧರಿಸಿದೆ. ಇದರಿಂದ ಸರ್ಕಾರ ಹೆಚ್ಚುವರಿ ಹಣ ಭರಿಸುವುದು ತಪ್ಪಲಿದೆ.
ಹೀಗಾಗಿ, ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ವಿವಿಧ ಕೋರ್ಸ್‌ಗೆ 2016-17ರಲ್ಲಿ ದಾಖಲಾಗಿರುವ ಪರಿಶಿಷ್ಟ ವಿದ್ಯಾರ್ಥಿಗಳಿಗೆ 14,490 ರೂ. ಗಳ ಇ-ಕಂಟೆಂಟ್ ತುಂಬಿದ ಲ್ಯಾಪ್‌ಟಾಪ್ ವಿತರಣೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಟೆಂಡರ್ ಪಡೆದ ಸಂಸ್ಥೆ ಕೂಡ ಲ್ಯಾಪ್‌ಟಾಪ್ ನೀಡಲು ಒಪ್ಪಿಗೆ ಸೂಚಿಸಿದೆ. ಸದ್ಯದಲ್ಲೇ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ದೊರೆಯಲಿದೆ.
ಈ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಡೌಟ್!:
ಆದರೆ, ಈ ವರ್ಷ ವಿವಿಧ ಪದವಿ ಹಾಗೂ ವೃತ್ತಿಪರ ಕೋಸ್ ìಗೆ ದಾಖಲಾಗಿರುವ 1.50 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಸಿಗುವುದು ಸಂಪೂರ್ಣ ಅನುಮಾನ. ಕಾರಣ, ತಾಂತ್ರಿಕ ಸಲಹಾ ಮಂಡಳಿ(ಟಿಎಪಿ) ನೀಡಿರುವ ಮಾರ್ಗಸೂಚಿಯನ್ನು ಗಾಳಿಗೆ ತೂರಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಲ್ಯಾಪ್‌ಟಾಪ್ ಖರೀದಿ ಪ್ರಕ್ರಿಯೆಯಲ್ಲಿ ಅಕ್ರಮದ ಹೊಗೆಯಾಡುತ್ತಿದೆ ಎಂದು ಕಾಲೇಜು ಶಿಕ್ಷಣ
ಇಲಾಖೆಯ ಆಯುಕ್ತರಾಗಿದ್ದ ಅಜಯ್ ನಾಗಭೂಷಣ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಬೆಳಗಾವಿ ಅಧಿವೇಶನದ ವೇಳೆ ಉಭಯ ಸದನಗಳಲ್ಲೂ ಈ ವಿಷಯ ಚರ್ಚೆಯಾಗಿತ್ತು. ತನಿಖೆಗಾಗಿ ಸದನ ಸಮಿತಿ ರಚಿಸಲಾಗಿದೆ. ಸದನ ಸಮಿತಿ ತನಿಖೆ ನಡೆಸಿ, ವರದಿ ಸಿದ್ಧಪಡಿಸಿ, ಅದನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರವೇ ಮುಂದಿನ ಪ್ರಕ್ರಿಯೆ ನಡೆಯವುದರಿಂದ ಈ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಷ್ಟ ಸಾಧ್ಯ.
ಟೆಂಡರ್ ಅವ್ಯವಹಾರ: ಅಧಿಕಾರಿಯೇ ಕಿಂಗ್‌ಪಿನ್
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ನಿಯೋಜನೆ (ಡೆಪ್ಯುಟೇಷನ್) ಆಧಾರದಲ್ಲಿ ಬೋಧಕೇತರ ಹುದ್ದೆಯಲ್ಲಿ ಸೇರಿಕೊಂಡು ಲ್ಯಾಪ್‌ಟಾಪ್ ಟೆಂಡರ್ ಅವ್ಯವಹಾರದಲ್ಲಿ ಕಿಂಗ್‌ಪಿನ್ ಆಗಿರುವ ಮಾಹಿತಿ ಸದನ ಸಮಿತಿಗೆ ಲಭ್ಯವಾಗಿದೆ. ಕಾಲೇಜು ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಿರುವ
ಲ್ಯಾಪ್‌ಟಾಪ್ ಟೆಂಡರ್ ದಾಖಲೆಯನ್ನು ಸಿದ್ಧಪಡಿಸುವಾಗಲೇ ಅವ್ಯವಹಾರ ನಡೆದಿರುವ ದಾಖಲೆ ಸಮಿತಿಗೆ ಲಭ್ಯವಾಗಿದೆ. ಆದರೆ, ಟೆಂಡರ್ ಪ್ರಕ್ರಿಯೆ ನಡೆಯದೆ ಇರುವುದರಿಂದ ತಾಂತ್ರಿಕವಾಗಿ ತಪ್ಪು ನಡೆದಿರುವುದಕ್ಕೆ ದಾಖಲೆ ಒದಗಿಸುವುದು ಕಷ್ಟವಾಗಲಿದೆ ಎಂದು ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.
ಆದರೆ, ವಿದ್ಯಾರ್ಥಿಗಳಿಗೆ ಹಂಚಬೇಕಾದ ಲ್ಯಾಪ್‌ಟಾಪ್‌ನ ಕಾನ್ಫಿಗರೇಷನ್ (ಸಾಮರ್ಥ್ಯ ಹಾಗೂ ವಿನ್ಯಾಸ), ನಿರ್ವಹಣೆ ಹಾಗೂ
ವಾರೆಂಟಿ ಈ ಮೂರು ವಿಚಾರದಲ್ಲಿ ಗೇಮ್ ಪ್ಲಾನ್ ಮಾಡಿದ್ದಾರೆ. ತಾಂತ್ರಿಕ ಅಡ್ವೆ„ಸರಿ ಪ್ಯಾನಲ್(ಟಿಎಪಿ), ಇಸ್ರೋ ಮತ್ತು ಐಐಎಸ್ಸಿ
ಅಧಿಕಾರಿಗಳು ಸೂಚಿಸಿರುವ ಕಾನ್ಫಿಗರೇಷನ್ ನ್ನು ಗಣನೆಗೆ ತೆಗೆದುಕೊಳ್ಳದೆ, ತಮ್ಮದೇ ಕಾನ್ಫಿಗರೇಷನ್‌ನಡಿ ಲ್ಯಾಪ್‌ಟಾಪ್ ಟೆಂಡರ್
ಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳಿಗೆ ನೀಡುವ ಲ್ಯಾಪ್‌ಟಾಪ್‌ನ ನಿರ್ವಹಣೆ ಹೇಗೆ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಜಿಲ್ಲೆಗೊಂದು ಕೇಂದ್ರ ಮಾಡಿ, ಅಲ್ಲಿಂದಲೇ ನಿರ್ವಹಣೆ ಮಾಡುವ ಒಪ್ಪಂದ ಇದಾಗಿತ್ತು. ಲ್ಯಾಪ್‌ಟಾಪ್ ವಾರೆಂಟಿ ಬಗ್ಗೆಯೂ ನಿಖರತೆ ಇರಲಿಲ್ಲ.
ಲ್ಯಾಪ್‌ಟಾಪ್ ಟೆಂಡರ್ ಪ್ರಕ್ರಿಯೆ ಸಿದ್ಧಪಡಿಸುವಾಗ ಸಂಬಂಧಪಟ್ಟ ವಿಭಾಗದ ಅಧಿಕಾರಿ, ಅಧೀನ ಕಾರ್ಯದರ್ಶಿ,
ಉಪಕಾರ್ಯದರ್ಶಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನಿಯೋಜನೆಯಲ್ಲಿದ್ದ ಅಧಿಕಾರಿಯ ಮುಂದಾಳತ್ವದಲ್ಲಿ ಟೆಂಡರ್ ಪ್ರಕ್ರಿಯೆ ಸಿದ್ಧಪಡಿಸಲಾಗಿದೆ. ನಿಗಧಿತ ಕಾಲಮಿತಿಗೆ ನಿಯೋಜನೆಯಾಗಿರುವ ಅಧಿಕಾರಿ ಇದನ್ನು ಮಾಡಿರುವುದಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿದ್ದ ಅಜಯ್ ನಾಗಭೂಷಣ್ ಕೂಡ ಆಕ್ಷೇಪವನ್ನು ಪತ್ರದಲ್ಲಿ ಉಲ್ಲೇಖೀಸಿದ್ದಾರೆ ಮತ್ತು ಸದನ ಸಮಿತಿಯ ಮುಂದೆಯೂ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಲ್ಯಾಪ್‌ಟಾಪ್ ಟೆಂಡರ್ ಅವ್ಯವಹಾರದ ಕಿಂಗ್‌ಪಿನ್ ಯಾರೆಂಬುದು ಸದನ ಸಮಿತಿಗೆ ತಿಳಿದು ಬಂದಿದೆ. ಆದರೆ, ಬಹಿರಂಗವಾಗಿ
ಹೇಳಲು ಸಾಧ್ಯವಿಲ್ಲ. ಟೆಂಡರ್ ಪ್ರಕ್ರಿಯೆ ನಡೆಯುವ ಹಂತದಲ್ಲಿ ಆಗಿರುವ ಬದಲಾವಣೆ ಮತ್ತು ಇದರ ಉಸ್ತುವಾರಿಯನ್ನು
ನಿಯೋಜನೆಯ ಮೇಲಿರುವ ಅಧಿಕಾರಿಯೇ ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿ ಸದನ ಸಮಿತಿಗೆ ಸ್ಪಷ್ಟವಾಗಿ ಸಿಕ್ಕಿದೆ.
ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.