Lok Sabha Election; ಕಾಂಗ್ರೆಸ್ 4 ಕ್ಷೇತ್ರ ಅಭ್ಯರ್ಥಿ ಇಂದು ಅಂತಿಮ?
ಹನುಮಂತಯ್ಯ ಕೋಲಾರಕ್ಕೆ, ಸುನಿಲ್ ಚಾ.ನಗರಕ್ಕೆ ರಕ್ಷಾ ಚಿಕ್ಕಬಳ್ಳಾಪುರಕ್ಕೆ, ಬಳ್ಳಾರಿಗೆ ತುಕಾರಾಂ?
Team Udayavani, Mar 26, 2024, 7:10 AM IST
ಬೆಂಗಳೂರು: ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿ (ಸಿಇಸಿ) ಸಭೆಯು ಹೊಸದಿಲ್ಲಿಯಲ್ಲಿ ಮಂಗಳವಾರ ನಿಗದಿಯಾಗಿದೆ. ರಾಜ್ಯದಲ್ಲಿ ಘೋಷಣೆಗೆ ಬಾಕಿ ಇರುವ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಈಗಾಗಲೇ ಕಾಂಗ್ರೆಸ್ 2 ಹಂತಗಳಲ್ಲಿ 24 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಾಮ ರಾಜನಗರ ಹಾಗೂ ಬಳ್ಳಾರಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿದೆ. ಅನಾರೋಗ್ಯದಿಂದ ಚೇತರಿಸಿಕೊಂಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಮಂಗಳವಾರ ಸಿಇಸಿ ಸಭೆ ನಡೆಯಲಿದೆ.
ಕೋಲಾರಕ್ಕೆ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸಹಿತ ಜಿಲ್ಲೆಯ ಮುಖಂಡರು ರಾಜ್ಯಸಭೆಯ ಮಾಜಿ ಸದಸ್ಯ ಡಾ| ಎಲ್. ಹನುಮಂತಯ್ಯ ಪರವಾಗಿ ನಿಂತಿದ್ದಾರೆ.
ಹನುಮಂತಯ್ಯ ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಈ ನಡುವೆ ಸೋಮವಾರ ಹನುಮಂತಯ್ಯ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ಚಿಕ್ಕಬಳ್ಳಾಪುರದ ಟಿಕೆಟ್‌ಗೆ ಮಾಜಿ ಸಿಎಂ ಡಾ| ಎಂ. ವೀರಪ್ಪ ಮೊಲಿ ಹಾಗೂ ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರ ಪುತ್ರ, ಯುವ ಕಾಂಗ್ರೆಸ್ ನಾಯಕ ರಕ್ಷಾ ರಾಮಯ್ಯ ಅವರ ನಡುವೆ ಪೈಪೋಟಿ ನಡೆದಿದೆ. ರಕ್ಷಾ ರಾಮಯ್ಯಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ.
ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ಕೊಡಬಹುದೆಂಬ ನಿರೀಕ್ಷೆ ಯಿದ್ದರೆ, ಬಳ್ಳಾರಿ ಮೀಸಲು ಕ್ಷೇತ್ರದಿಂದ ಸಂಡೂರು ಶಾಸಕ ತುಕಾರಾಂಗೆ ಟಿಕೆಟ್ ಕೊಡಬಹುದೆಂದು ಹೇಳಲಾಗುತ್ತಿದೆ. ಬಳ್ಳಾರಿ ಯಿಂದ ಮಾಜಿ ಸಚಿವ ಬಿ. ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡ ಬಿಜೆಪಿ ಸೇರ್ಪಡೆ ಆಗಿರುವ ಬೆಳವಣಿಗೆಗಳನ್ನು ಅವಲೋಕಿಸಿ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ತುಕಾರಾಂ ಅವರು ತಮ್ಮ ಬದಲಿಗೆ ಪುತ್ರಿಗೆ ಟಿಕೆಟ್ ಕೊಡಬೇಕೆಂಬ ಬೇಡಿಕೆ ಇಟ್ಟಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮಾತ್ರ ತುಕಾರಾಂ ಅವರನ್ನೇ ಕಣಕ್ಕಿಳಿಸಬೇಕೆಂದು ನಿರ್ಧರಿಸಿದಂತಿದೆ.
ಕಾಂಗ್ರೆಸ್ ಟಿಕೆಟ್ ಕಗ್ಗಂಟು
-ಅಳಿಯನಿಗೆ ಕೋಲಾರ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿರುವ ಸಚಿವ ಮನಿಯಪ್ಪ.
-ಹನಮಂತಯ್ಯ ಪರ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹಿತ ಪ್ರಮುಖರ ಒಲವು.
-ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮೊಲಿ, ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ.
-ಚಾಮರಾಜನಗರದಿಂದ ಮಹದೇವಪ್ಪ ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆ.
-ಪುತ್ರಿಗೆ ಬಳ್ಳಾರಿ ಟಿಕೆಟ್ ಕೇಳಿದ್ದರೂ ಶಾಸಕ ತುಕಾರಾಂ ಸ್ಪರ್ಧೆಗೆ ಕೈ ವರಿಷ್ಠರ ಒಲವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.