Lok Sabha Election Results: ಮೈತ್ರಿಗೆ ಭರ್ಜರಿ? ಕಾಂಗ್ರೆಸ್‌ಗೆ ಎರಡಂಕಿ?
ಇಂದು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ; ಮೂವರು ಮಾಜಿ ಸಿಎಂ, ಮೂವರು ಕೇಂದ್ರ ಸಚಿವರ ಭವಿಷ್ಯ ನಿರ್ಧಾರ
Team Udayavani, Jun 4, 2024, 6:55 AM IST
ಬೆಂಗಳೂರು: ಇಡೀ ದೇಶವೇ ಉಸಿರು ಬಿಗಿಹಿಡಿದು ಕಾಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು,ರಾಜ್ಯದ 28 ಕ್ಷೇತ್ರಗಳ ಪೈಕಿ ಜನ ಕಾಂಗ್ರೆಸ್ ಗ್ಯಾರಂಟಿಯ ಕೈ ಹಿಡಿಯುತ್ತಾರೋ, ಮೋದಿ ಗ್ಯಾರಂಟಿಯಲ್ಲಿ ಮತ್ತೆ ಕಮಲ ಅರಳಿಸುತ್ತಾರೋ ಎಂಬ ಕುತೂಹಲ ಸೃಷ್ಟಿಯಾಗಿದೆ. ಹಲವು ದೃಷ್ಟಿಕೋನಗಳಿಂದ ಕರ್ನಾಟಕದ ಬಲಾಬಲ ಹೊಸ ರಾಜಕೀಯ ಸಮೀಕರಣಕ್ಕೆ ಸಾಕ್ಷಿಯಾಗಲಿದೆ ಎಂಬ ಚರ್ಚೆ ಈಗ ಪ್ರಾರಂಭವಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ 25 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತ್ತು. ಮೈತ್ರಿ ಸರಕಾರವಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ ಒಂದು ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದ್ದವು. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ನಿಖೀಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಆದರೆ ಈ ಬಾರಿ ರಾಜಕಾರಣದ “ಎರಕ’ ಬದಲಾಗಿದ್ದು ಬಿಜೆಪಿ-ಜೆಡಿಎಸ್ ಮೈತ್ರಿಗೆ ಮತದಾರ ಆಶೀರ್ವದಿಸುವನೇ ಎಂಬ ಪ್ರಶ್ನೆಗೆ ಇಂದು ಉತ್ತರ ಲಭಿಸಲಿದೆ.
ಈ ಬಾರಿಯ ಚುನಾವಣೆಯಲ್ಲಿ ಘಟಾನು ಘಟಿಗಳು ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಮೂವರು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಕಣದಲ್ಲಿದ್ದಾರೆ. ಕ್ಷೇತ್ರ ಬದಲಾಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಭವಿಷ್ಯವನ್ನು ಬೆಂಗಳೂರು ಉತ್ತರದ ಜನ ಬರೆಯಲಿದ್ದಾರೆ. ಕಾಂಗ್ರೆಸ್ ಪಾಳಯದಿಂದ 8 ಮಂದಿ ಸಚಿವರ ಕುಟುಂಬದ ಕುಡಿಗಳು ಕಣದಲ್ಲಿದ್ದಾರೆ.
ಬಿಜೆಪಿ ನಿರೀಕ್ಷೆ ಏನು ?
ಎಕ್ಸಿಟ್ ಫೋಲ್ ಬಹುತೇಕ ನಿಜವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಸಿಎಂ ಸಿದ್ದರಾಮಯ್ಯ- ಡಿಸಿಎಂ ಡಿ.ಕೆ.ಶಿವಕುಮಾರ್ ನಾಯ ಕತ್ವದ ಎದುರು ಕುಗ್ಗಿದ್ದ ಬಿಜೆಪಿಗೆ ಮೋದಿ ಅಲೆಯೇ ಆಶೀರ್ವಾದವಾಗಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಮೈತ್ರಿ ಅನುಕೂಲ ಕಲ್ಪಿಸುತ್ತದೆ ಎಂಬ ಆಶಾವಾದ ಬಿಜೆಪಿಗೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಷ್ಟು ಉಳಿಯಬಹುದೆಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರೂ ಈ ಕ್ಷಣಕ್ಕೂ ಹೊಂದಿದ್ದಾರೆ.
ಕಾಂಗ್ರೆಸ್‌ಗೆ ಎಷ್ಟು ಗ್ಯಾರಂಟಿ ?
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ತಮ್ಮ ಕೈ ಹಿಡಿಯುತ್ತದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. 2014ರಲ್ಲಿ ಮೋದಿ ಅಲೆಯ ಮಧ್ಯೆಯೂ 9 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಗ್ಯಾರಂಟಿ ಹವಾದಲ್ಲಿ ಎರಡಂಕಿ ದಾಟುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಬಲವಾದ ನಿಲುವು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಕ್ಷೇತ್ರಗಳಿಗಿಂತ ಸಹೋದರ ಡಿ.ಕೆ. ಸುರೇಶ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರದ ಫಲಿತಾಂಶ ಮಹತ್ವದ್ದಾಗಿದೆ.
ಲೋಕಸಭೆ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕೊನೇ ಪಕ್ಷ 25 ಸೀಟು ಗೆಲ್ಲುತ್ತೇವೆ. ಮತಗಟ್ಟೆ ಸಮೀಕ್ಷೆ ಇದನ್ನೇ ಹೇಳುತ್ತಿದೆ. ಜೆಡಿಎಸ್ ಪಕ್ಷ ಮೂರು ಕ್ಷೇತ್ರಗಳಲ್ಲೂ ಗೆಲುವು ಪಡೆಯಲಿದೆ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಮತ ಎಣಿಕೆಗೆ 54 ಸಾವಿರ
ಅಧಿಕಾರಿ, ಸಿಬಂದಿ ನಿಯೋಜನೆ
ಬೆಂಗಳೂರು: ಬೆಂಗಳೂರು ಹೊರತುಪಡಿಸಿ ಲೋಕಸಭಾ ಚುನಾವಣೆಯ ಮತ ಎಣಿಕೆ ಕೇಂದ್ರಗಳ ಭದ್ರತೆಗಾಗಿ 54 ಸಾವಿರಕ್ಕೂ ಅಧಿಕ ಮಂದಿ ಪೊಲೀಸ್ ಅಧಿಕಾರಿ-ಸಿಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಹಾಗೂ ಹೊಯ್ಸಳ ಪೊಲೀಸರ ಗಸ್ತು ತಿರುಗುವಂತೆ ಸೂಚಿಸಲಾಗಿದೆ.
ಈ ಸಂಬಂಧ ಈಗಾಗಲೇ ರಾಜ್ಯದ ಎಲ್ಲ ವಲಯ ಐಜಿಪಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.
ರಾಜ್ಯದಲ್ಲಿ ಒಟ್ಟು 29 (ತುಮಕೂರಿನಲ್ಲಿ ಎರಡು ಕೇಂದ್ರ) ಮತ ಎಣಿಕೆ ಕೇಂದ್ರಗಳಿದ್ದು, ಈ ಪೈಕಿ ಮೂರು ಬೆಂಗಳೂರು ಕಮಿಷನರೆಟ್ ವ್ಯಾಪ್ತಿಗೆ ಬರುತ್ತದೆ. ಇನ್ನುಳಿದ 26 ಮತ ಎಣಿಕೆ ಕೇಂದ್ರದಲ್ಲಿ ಸಿಎಆರ್/ಡಿಎಆರ್, ಕೆಎಸ್‌ಆರ್‌ಪಿ ತುಕಡಿಗಳು ಸಹಿತ ತಲಾ ಒಂದು ಕೇಂದ್ರಕ್ಕೆ 500-600 ಮಂದಿ ಪೊಲೀಸ್ ಅಧಿಕಾರಿ-ಸಿಬಂದಿಯನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಪ್ರತಿ ಕೇಂದ್ರದ ಬಳಿ 1 ಅಥವಾ 2 ಶಸ್ತ್ರಸಜ್ಜಿತ ಕೇಂದ್ರ ಭದ್ರತಾ ಪಡೆ ಕೂಡ ಕರ್ತವ್ಯ ನಿರ್ವಹಿಸಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಹಾಗೆಯೇ ಪ್ರತಿ ಕೇಂದ್ರದ ಭದ್ರತೆಯ ಮೇಲುಸ್ತುವಾರಿಯನ್ನು ಜಿಲ್ಲಾ ವರಿಷ್ಠಾಧಿಕಾರಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ವಹಿಸಲಿದ್ದಾರೆ. ಇದರೊಂದಿಗೆ ಪ್ರತಿ ಠಾಣೆ ವ್ಯಾಪ್ತಿಯಲ್ಲೂ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಅಧಿಕಾರಿ-ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುತೂಹಲ ಕೆರಳಿಸಿದ ಕ್ಷೇತ್ರಗಳು
ಹಳೆ ಮೈಸೂರು ಭಾಗಕ್ಕೆ ಹೊಸ ಫಲಿತಾಂಶ?
–ಮೈಸೂರು: ಸಿಎಂ ತವರು ಕ್ಷೇತ್ರದಲ್ಲಿ ರಾಜವಂಶಸ್ಥ ಯದುವೀರ್ ಸ್ಪರ್ಧೆ. ಮೊದಲ ಬಾರಿಗೆ ಜನತಾ ಅರಮನೆಯಲ್ಲಿ ಭವಿಷ್ಯ ಬರೆದುಕೊಳ್ಳುತ್ತಿರುವ ಯದುವೀರ್.
-ಮಂಡ್ಯ : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅದೃಷ್ಟ ಪರೀಕ್ಷೆ ನಡೆಸುತ್ತಿರುವ ಕ್ಷೇತ್ರ. ಕುಮಾರಸ್ವಾಮಿ ವಿರುದ್ಧ ಸರಕಾರ ತನ್ನೆಲ್ಲ ಪ್ರತಿಷ್ಠೆಯನ್ನು ಪಣಕೊಡ್ಡಿ ಸೆಣೆಸುತ್ತಿರುವುದರಿಂದ ಎಲ್ಲರ ಲಕ್ಷ್ಯ ಇತ್ತ ಹರಿದಿದೆ.
-ಹಾಸನ : ಲೈಂಗಿಕ ಹಗರಣದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಫಲಿತಾಂಶವಿದು. ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಇಲ್ಲಿ ಎಲ್ಲ ಬಗೆಯ ರಣತಂತ್ರ ಪ್ರಯೋಗಿಸಿದೆ.
– ಬೆಂಗಳೂರು ಗ್ರಾಮಾಂತರ : ಸದ್ಯಕ್ಕೆ ಕರ್ನಾಟಕದ ಹೈವೋಲ್ಟೆàಜ್ ಕ್ಷೇತ್ರ ಇದು. ರಾಜ್ಯ ರಾಜಕಾರಣದ ಹೆವಿವೇಟ್ಸ್ ಡಿ.ಕೆ.ಸೋದರ ಪಾರಮ್ಯವನ್ನು ನಿರ್ಧರಿಸುವ ನಿರ್ಣಾಯಕ ಸಮರ ಇದು. ಬಂಡೆಯೋ, ಹೃದಯವೋ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಮಂಗಳವಾರ ಸಿಗಲಿದೆ ಉತ್ತರ.
ಕಿತ್ತೂರು ಕರ್ನಾಟಕದಲ್ಲೇನು ?
-ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಭವಿಷ್ಯ ಬರೆಯುವ ಫಲಿತಾಂಶ
-ಬೆಳಗಾವಿಯಲ್ಲಿ ಮಾಜಿ ಸಿಎಂ ಪ್ರತಿಸ್ಪರ್ಧಿಯಾಗಿರುವ ಹೆಬ್ಟಾಳ್ಕರ್ ಪುತ್ರ ಮ್ಯಾಜಿಕ್ ಮಾಡುವುರೇ ?
ಕರಾವಳಿ ಕತೆ ಏನು ?
-ಕರಾವಳಿಯ ಮೂರು ಕ್ಷೇತ್ರದಲ್ಲಿ ಎರಡು ಪಕ್ಷಗಳಿಂದ ಹೊಸ ಮುಖ. ಸಂಸತ್ ಪ್ರವೇಶಿಸುವರೇ ಕಾಗೇರಿ, ಕೋಟ, ಚೌಟ?
ಕಲ್ಯಾಣದಲ್ಲಿ ಯಾರಿಗೆ ವರ ?
-ಖರ್ಗೆ ತವರು ಕಲಬುರಗಿಯಲ್ಲಿ ಕೈಯೋ, ಕಮಲವೋ ? ಎಐಸಿಸಿ ಅಧ್ಯಕ್ಷರ ರಾಜಕೀಯ ಭವಿಷ್ಯ ಬದಲಾಯಿಸುವ ಫಲಿತಾಂಶವಿದು.
-ಸಂಸತ್ ಪ್ರವೇಶಿಸುವರೇ ಅತಿ ಕಿರಿಯ ಅಭ್ಯರ್ಥಿ ಸಾಗರ್ ಖಂಡ್ರೆ ?
-ಕೊಪ್ಪಳದಲ್ಲಿ ಬಿಜೆಪಿಗೆ ಪರಚುವುದೇ ಕರಡಿ ಬಂಡಾಯ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.