Lokayukta raids: ಕೋಟ್ಯಂತರ ರೂ. ಅಕ್ರಮ ಸಂಪತ್ತು ಬಹಿರಂಗ
17 ಅಧಿಕಾರಿಗಳಿಗೆ ದಾಳಿಯ ಬಿಸಿ
Team Udayavani, Oct 30, 2023, 11:59 PM IST
ಬೆಂಗಳೂರು: ಆದಾಯಕ್ಕಿಂತ ಮಿಗಿಲಾಗಿ ಭಾರೀ ಪ್ರಮಾಣದ ಆಸ್ತಿ-ಪಾಸ್ತಿ, ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನಗಳು, ಕಂತೆ-ಕಂತೆ ನೋಟು, ಲಾಕರ್ ತೆರೆಯುತ್ತಿದ್ದಂತೆ ಕೆ.ಜಿ.ಗಟ್ಟಲೆ ಚಿನ್ನಾಭರಣ, ಇಂದ್ರನ ವೈಭೋಗವನ್ನೇ ನಾಚಿಸುವ ಬಂಗಲೆಗಳು, ಐಷಾರಾಮಿ ಕಾರುಗಳು…
ಇದು ಸೋಮವಾರ ಬೆಳ್ಳಂಬೆಳಗ್ಗೆ ಲೋಕಾ ಯುಕ್ತರಿಂದ ದಾಳಿಗೊಳಗಾದ 17 ಭ್ರಷ್ಟ ಸರಕಾರಿ ಅಧಿಕಾರಿಗಳ ಸಂಪತ್ತಿನ ಚಿತ್ರಣ.
ಬೆಂಗಳೂರು, ತುಮಕೂರು, ಮಂಡ್ಯ, ಚಿತ್ರದುರ್ಗ, ಹಾವೇರಿ, ಹಾಸನ, ಬಳ್ಳಾರಿ, ರಾಯಚೂರು, ಕಲಬುರಗಿ, ಬೆಳಗಾವಿ ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ 17 ಸರಕಾರಿ ಅಧಿಕಾರಿಗಳ ವಿರುದ್ಧ ದಾಖಲಾದ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿ ರಾಜ್ಯದ 69ಕ್ಕೂ ಅಧಿಕ ಪ್ರದೇಶಗಳಲ್ಲಿ ಏಕಕಾಲದಲ್ಲಿ ಕರ್ನಾಟಕ ಲೋಕಾಯುಕ್ತದ 240 ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸರಕಾರಿ ಅಧಿಕಾರಿಗಳ ನಿವಾಸಗಳು, ಕಚೇರಿಗಳು ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಲಾಗಿದೆ. ಆ ವೇಳೆ ಪತ್ತೆಯಾದ ದಾಖಲೆಗಳನ್ನು ಪರಿಶೀಲಿಸಿದಾಗ ಒಬ್ಬೊಬ್ಬ ಅಧಿಕಾರಿಯೂ ಆದಾಯ ಕ್ಕಿಂತ ಭಾರೀ ಪ್ರಮಾಣದ ನಿವೇಶನ, ಕಟ್ಟಡ, ಜಮೀನು ಹೊಂದಿರುವುದನ್ನು ಕಂಡು ಲೋಕಾಯಕ್ತ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ದಾಳಿಗೊಳಗಾದ ಹಲವು ಅಧಿಕಾರಿಗಳು ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮೇಲ್ನೋಟಕ್ಕೆ ಸಂಶಯ ವ್ಯಕ್ತವಾಗಿದೆ. ಆದಾಯಕ್ಕಿಂತ ಹೆಚ್ಚಿನ ಮೌಲ್ಯದ ಸಂಪತ್ತುಗಳಲ್ಲಿ ನಿವೇಶನ, ಮನೆಗಳೇ ಅಧಿಕ ಮೌಲ್ಯದ್ದಾಗಿವೆ.
ಕಾರ್ಮಿಕ ಇಲಾಖೆಯ ಬಾಯ್ಲರ್ಸ್ ವಿಭಾಗದ ಉಪನಿರ್ದೇಶಕ ಎಸ್.ಆರ್. ಶ್ರೀನಿವಾಸ್‌ಗೆ ಸೇರಿದ ಬೆಂಗಳೂರಿನ ಉಳ್ಳಾಲ, ಬ್ಯಾಡರ ಹಳ್ಳಿ, ಸುಂಕದ ಕಟ್ಟೆಯಲ್ಲಿರುವ ಮನೆ, ಕೊಳ್ಳೆಗಾಲ ದಲ್ಲಿರುವ ನಿವಾಸದ ಮೇಲೆ ಸೇರಿ 9 ಕಡೆ ದಾಳಿ ನಡೆಸಲಾಗಿದೆ. ಆ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಮೈಸೂರಿನಲ್ಲಿ ನಿವೇಶನ, ಕೊಳ್ಳೆ ಗಾಲದ ಸತ್ಯಗಾಲದ ಬಳಿ ಫಾರ್ಮ್ ಹೌಸ್, ದುಬಾರಿ ವಾಚ್‌ಗಳು, ನಿಯೋನ್, ಸಫಾರಿ ಕಾರು ಗಳನ್ನು ಹೊಂದಿರು ವುದು ಗೊತ್ತಾಗಿದೆ.
ಕಾರು ತನ್ನದಲ್ಲವೆಂದು ಪೇಚಿಗೆ ಬಿದ್ದ
ಲೋಕಾಯುಕ್ತ ಪೊಲೀಸರು ಮನೆಗೆ ದಾಳಿ ನಡೆಸಿರುವುದು ಗೊತ್ತಾಗುತ್ತಿದ್ದಂತೆ ತಬ್ಬಿಬ್ಟಾದ ಶ್ರೀನಿವಾಸ್, ಕಾರುಗಳು ತನ್ನದಲ್ಲ ಎಂದು ಪೊಲೀಸರನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆ ವೇಳೆ ಇತ್ತೀಚೆಗೆ ಆಯುಧಪೂಜೆ ಕಾರಿಗೆ ಪೂಜೆ ಸಲ್ಲಿಸುತ್ತಿರುವ ವೀಡಿಯೋ ಸಾಕ್ಷ್ಯ ಮುಂದಿಟ್ಟು ಪೊಲೀಸರು ಪ್ರಶ್ನಿಸಿದಾಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ತುಮಕೂರಿನ ಶಿರಾ ಗ್ರಾಮೀಣ ಕುಡಿಯುವ ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯ ಎಂಜಿನಿಯರ್ ನಾಗೇಂದ್ರಪ್ಪ ನಿವಾಸದ ಮೇಲೆ ದಾಳಿ ನಡೆಸಿ ಮಹತ್ವದ ದಾಖಲಾತಿಗಳ ಪರಿಶೀಲನೆ ನಡೆಸಲಾಗಿದೆ.
ಹಿರಿಯೂರು ನಗರದ ಕುವೆಂಪು ಬಡಾವಣೆಯ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ ಹಾಗೂ ವೇದಾವತಿ ನಗರದ ಚಂದ್ರಾ ಲೇಔಟ್‌ನ ಚಿತ್ರದುರ್ಗದ ಅರಣ್ಯ ಇಲಾಖೆ ಅಧಿಕಾರಿ ಎಸಿಎಫ್ ನಾಗೇಂದ್ರ ನಾಯ್ಕ ಅವರ ಮನೆಯಲ್ಲಿ ಲೋಕಾ ತಂಡ ಮಾಹಿತಿ ಸಂಗ್ರಹಿಸಿದೆ.
ರಾಯಚೂರಿನಲ್ಲಿ ಕ್ಯಾಶುಟೆಕ್ ಸಂಸ್ಥೆ ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶರಣಬಸಪ್ಪ ಪಟ್ಟೇದ್ ಮನೆ ಹಾಗೂ ಕಚೇರಿ ಸಹಿತ ನಾಲ್ಕು ಕಡೆ ನಡೆದ ದಾಳಿ ವೇಳೆ 40ಕ್ಕೂ ಅಧಿಕ ತೊಲ ಚಿನ್ನಾಭರಣ
ವನ್ನು ಅಡವಿಟ್ಟು 6-7 ಲಕ್ಷ ರೂ. ಸಾಲ ಪಡೆದಿರುವ ದಾಖಲೆಗಳು ಸಿಕ್ಕಿದ್ದು, ಮನೆಯಲ್ಲಿ ಕೇವಲ 13 ಸಾ.ರೂ. ಸಿಕ್ಕಿದೆ.
ಹೊರಗೆ ಸಾಧಾರಣ, ಒಳಗೆ ಐಶಾರಾಮಿ
ದೇವಸೂಗೂರಿನ ರಾಘವೇಂದ್ರ ಕಾಲನಿಯಲ್ಲಿ ಪಟ್ಟೇದ ಅವರ ಪತ್ನಿ, ಸಹೋದರಿಯ ಮಕ್ಕಳ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಶರಣಬಸಪ್ಪ ಪಟ್ಟೇದ್ ಅವರು ನಿವಾಸ ಹೊರಗಿನಿಂದ ಸಾಧಾರಣವಾಗಿ ಕಂಡರೂ ಒಳಗೆ ವಿಲಾಸಿಯಾಗಿದೆ. ಎಲ್ಲ ವಸ್ತುಗಳೂ ದುಬಾರಿಯದ್ದಾಗಿವೆ.
ಪಂಚಾಯತ್‌ರಾಜ್ ಇಲಾಖೆಯ ಎಇಇ ಎಂ.ಎಂ. ಬಿರಾದಾರ ಅವರ ಬೆಳಗಾವಿಯ ಸದಾಶಿವ ನಗರದಲ್ಲಿರುವ ಮನೆ, ಖಾನಾಪುರದ ಮನೆ ಸಹಿತ 3 ಕಡೆ ಹಾಗೂ ಕಲಬುರಗಿಯ ನಗರ ಯೋಜನಾ ಅ ಧಿಕಾರಿ ಅಪ್ಪಾಸಾಹೇಬ ಕಾಂಬಳೆ ಅವರ ರಾಮತೀರ್ಥ ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎಂ.ಎಂ. ಬಿರಾದಾರ ಮನೆಯಲ್ಲಿ ಸುಮಾರು 1.35 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಆಗಿದೆ. ಅಪ್ಪಾಸಾಹೇಬ ಕಾಂಬಳೆ ಅವರ ಬೆಳಗಾವಿಯ ರಾಮತೀರ್ಥ ನಗರದ ನಿವಾಸದಲ್ಲಿ 250 ಗ್ರಾಂ ಚಿನ್ನಾಭರಣ ಪತ್ತೆ ಆಗಿದೆ. ಜತೆಗೆ 6 ಲಕ್ಷ ರೂ. ಸಿಕ್ಕಿದೆ.
ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆ ಅವರ ಕಲಬುರಗಿ ನಗರದ ಮಾಕಾ ಲೇಔಟ್‌ನಲ್ಲಿರುವ 2 ಅಂತಸ್ತಿನ ಬಂಗಲೆಯಲ್ಲಿ ಪರಿಶೀಲನೆ ನಡೆಸು ತ್ತಿರುವ ಅಧಿ ಕಾರಿಗಳಿಗೆ ಕೋಟಿಗಟ್ಟಲೆ ರೂ. ಬೆಲೆ ಬಾಳುವ ಅಕ್ರಮ ಆಸ್ತಿಗೆ ಸಂಬಂ ಧಿಸಿದ ದಾಖಲೆಗಳು ಲಭಿಸಿವೆ. ಈ ಮನೆ ಸುಮಾರು 1 ಕೋಟಿ ರೂ.ಗೂ ಅಧಿ ಕ ಮೌಲ್ಯದ್ದಾಗಿದೆ. ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ನಾಗರಹಳ್ಳಿಯಲ್ಲಿ 7 ಎಕ್ರೆ ನೀರಾವರಿ ಜಮೀನು ಕೂಡ ಇದೆ. ಅಲ್ಲದೆ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ಒಂದೂವರೆ ಎಕ್ರೆ ಜಮೀನಿನ ದಾಖಲೆ ದೊರಕಿವೆ. ಬೇನಾಮಿ ಹೆಸರಿನಲ್ಲಿ ಕೆಲವು ಕಾರು ಸಹಿತ ವಾಹನಗಳು ಮತ್ತು ಒಂದು ಪರವಾನಿಗೆ ಹೊಂದಿರುವ ರಿವಾಲ್ವರ್ ದಾಖಲೆ ಜತೆಗೆ ಹಲವಾರು ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಕಂಬಿ ಎಣಿಸುತ್ತಿರುವ ಎಆರ್‌ಒ
ಬಿಬಿಎಂಪಿಯ ಹೆಗ್ಗನಹಳ್ಳಿಯ ಎಆರ್‌ಒ ಕೆ.ವಿ. ಚಂದ್ರಪ್ಪ ಅವರಿಗೆ ಸೇರಿದ ಬೆಂಗಳೂ ರಿನ ಮೂರು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕೆ.ಆರ್. ಪುರದ ಮನೆ ಮೇಲೆ ದಾಳಿ ಮಾಡಿದಾಗ ಅಪಾರ ಪ್ರಮಾಣದ ಚಿನ್ನ, ನಗದು, ದುಬಾರಿ ಬೆಲೆಯ ವಸ್ತು, ಕೋಟ್ಯಂತರ ರೂ. ಮೌಲ್ಯದ ಆಸ್ತಿಯ ದಾಖಲೆಗಳು ಸಿಕ್ಕಿವೆ. ಚಂದ್ರಪ್ಪ ಜಮೀನಿನ ಖಾತೆ ಬದಲಾಯಿಸಿ ಕೊಡಲು ಅರ್ಜಿದಾರರಿಂದ 60 ಸಾ.ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಅವರನ್ನು ಬಂಧಿಸಲಾಗಿದೆ.
ಕುಂದಾಪುರದಲ್ಲೂ ಮನೆ ಮೇಲೆ ದಾಳಿ, ಶೋಧ
ಕುಂದಾಪುರ: ವಾಣಿಜ್ಯ ತೆರಿಗೆ ಇಲಾಖೆಯ ಉಡುಪಿಯ ಕಚೇರಿಯಲ್ಲಿ ಸಹಾಯಕ ಕಮಿಷ ನರ್ ಆಗಿರುವ ರಾಜೇಶ ಹೆಮ್ಮಣ್ಣ ನಾಯಕ್ ಅವರ ಕುಂದಾಪುರದ ನಿವಾಸಕ್ಕೆ ಸೋಮವಾರ ಬೆಳಗ್ಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ರಾಜೇಶ ಹೆಮ್ಮಣ್ಣ ನಾಯಕ್ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರಾಗಿದ್ದು, ಕುಂದಾಪುರದ ಎಲ್‌ಐಸಿ ರಸ್ತೆ ಸಮೀಪದ ಸಲೀಂ ಆಲಿ ರಸ್ತೆಯಲ್ಲಿ ಜಾಗ ಖರೀದಿಸಿ ಬೃಹತ್ ಮನೆ ನಿರ್ಮಿಸಿದ್ದಾರೆ. ನಸುಕಿನಲ್ಲಿಯೇ ಸುಮಾರು ಏಳು ಮಂದಿ ಲೋಕಾಯುಕ್ತ ಅಧಿಕಾರಿಗಳ ತಂಡ ಎರಡು ವಾಹನಗಳಲ್ಲಿ ಆಗಮಿಸಿ ದಾಳಿ ನಡೆಸಿ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿದೆ. ಇದೇ ವೇಳೆ ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಕಚೇರಿಯಲ್ಲಿ, ಅಂಕೋಲಾದ ಬೇಲೆಕೇರಿಯ ಮನೆಗೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಬಳಿಕ ಮನೆಯ ಹೊರಗಿನ ಗೇಟಿಗೆ ಬೀಗ ಜಡಿಯಲಾಗಿದೆ.
ದಾಳಿಗೊಳಗಾದ ಭ್ರಷ್ಟರು ಯಾರು?
(ಹೆಸರು, ಹುದ್ದೆ, ಅಕ್ರಮ ಆಸ್ತಿಯ ಮೌಲ್ಯ)
- ತಿಪ್ಪಣ್ಣಗೌಡ ಅನ್ನದಾನಿ, ಕಾರ್ಯ ನಿರ್ವಾಹಕ ಅಭಿಯಂತ, ಕೆಬಿ ಜೆ ಎ ನ್ ಎಲ್
ಒಟ್ಟು ಅಕ್ರಮ ಆಸ್ತಿ- 2.14 ಕೋಟಿ ರೂ.
- ಬಸವರಾಜ, ವಲಯ ಅರಣ್ಯಾಧಿಕಾರಿ, ಬೀದರ್ -2.48 ಕೋ.ರೂ.
- ಮಹಾಂತೇಶ, ವಲಯ ಅರಣ್ಯಾಧಿಕಾರಿ, ಹಾವೇರಿ ಉಪ ವಿಭಾಗ -1.50 ಕೋ.ರೂ.
- ಪರಮೇಶಪ್ಪ, ವಲಯ ಅರಣ್ಯಾಧಿಕಾರಿ, ಜಲಾನಯನ ಅಭಿವೃದ್ಧಿ ವಿಭಾಗ, ಕೃಷಿ ಘಟಕ, ಹಾವೇರಿ -2.32 ಕೋ.ರೂ.
- ಎಂ.ಪಿ. ನಾಗೇಂದ್ರ ನಾಯ್ಕ…, ಎಸಿಎಫ್, ಸಾಮಾಜಿಕ ಅರಣ್ಯ ಕಚೇರಿ, ಚಿತ್ರದುರ್ಗ -1.88 ಕೋ.ರೂ.
- ಬಾಲರಾಜು, ಮುಖ್ಯ ಇಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು -1.22 ಕೋ.ರೂ.
- ಕೆ. ಮಂಜುನಾಥ್, ಕಂದಾಯ ನಿರೀಕ್ಷಕರು, ಬಳ್ಳಾರಿ -30.79 ಲಕ್ಷ ರೂ.
- ಶರಣಬಸಪ್ಪ ಪಟ್ಟೇಡ್, ನಿರ್ದೇಶಕರು, ಯೋಜನೆ, ಕ್ಯಾಶ್ಯೂಟೆಕ್ ನಿರ್ಮಿತಿ ಕೇಂದ್ರ, ಶಕ್ತಿ ನಗರ, ರಾಯಚೂರು -2.30 ಕೋ.ರೂ.
- ಎಂ. ನಾಗೇಂದ್ರಪ್ಪ, ಸಹಾಯಕ ಇಂಜಿನಿಯರ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ, ಶಿರಾ, ತುಮಕೂರು -2.61 ಕೋ.ರೂ.
- ವಿ. ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ, ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಚಿತ್ರದುರ್ಗ -1.68 ಕೋ.ರೂ.
- ಅಪ್ಪಾಸಾಹೇಬ ಸಿದ್ಲಿಂಗ್ ಕಾಂಬಳೆ, ಜಂಟಿ ನಿರ್ದೇಶಕರು, ನಗರ ಯೋಜನೆ, ಕಲಬುರಗಿ -1.87 ಕೋ.ರೂ.
- ಚಂದ್ರಪ್ಪ ಕೆ.ವಿ. ಎಆರ್‌ಒ, ಹೆಗ್ಗನಹಳ್ಳಿ, ಬಿಬಿಎಂಪಿ, ಬೆಂಗಳೂರು -2.15 ಕೋ.ರೂ.
- ಎಚ್. ರಾಜೇಶ್, ಸಹಾಯಕ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಉಡುಪಿ -2.10 ಕೋ.ರೂ.
- ಎಚ್.ಇ. ನಾರಾಯಣ, ಜೂನಿಯರ್ ಎಂಜಿನಿಯರ್, ಕೆಪಿಟಿಸಿಎಲ…, ಗೊರೂರು, ಹಾಸನ -1.41 ಕೋ.ರೂ.
- ಮಹಾದೇವ, ಎಇಇ, ಪಂಚಾಯತ್ ರಾಜ್ ಉಪವಿಭಾಗ, ಕಲಬುರಗಿ-
2.39 ಕೋ.ರೂ.
- ಟಿ.ಎಂ. ಶಶಿಕುಮಾರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಟೌನ್ ಪ್ಲಾನಿಂಗ್, ಪ್ರಸ್ತುತ ಕೆಐಎಡಿಬಿ ಬೆಂಗಳೂರು-6.65 ಕೋ.ರೂ.
- ಎಸ್.ಆರ್. ಶ್ರೀನಿವಾಸ್, ಉಪನಿರ್ದೇಶಕರು, ಬಾಯ್ಲರ್ಸ್ ವಿಭಾಗ, ಕಾರ್ಮಿಕ ಇಲಾಖೆ ದಾವಣಗೆರೆ –
2.89 ಕೋ.ರೂ.
ಲೋಕಾಯುಕ್ತದ ಡಿಜಿ, ಐಜಿ, ಎಸ್‌ಪಿಗಳ ಸಹಿತ ಎಲ್ಲ ಹಂತದ ಅಧಿಕಾರಿಗಳು ಕಳೆದ ಒಂದು ತಿಂಗಳುಗಳಿಂದ ಪೂರ್ವ ತಯಾರಿ ನಡೆಸಿದ್ದರು. ದಾಳಿಗೊಳಗಾದವರು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವುದಕ್ಕೆ ಕೆಲವು ಮಾಹಿತಿಗಳು ಸಿಕ್ಕಿದ ಬಳಿಕ ದಾಳಿ ನಡೆಸಿದ್ದಾರೆ. ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರಿಂದ ದಾಳಿಯ ಬಗ್ಗೆ ವರದಿ ಸಿಕ್ಕಿದ ಬಳಿಕ ದಾಳಿಗೊಳಗಾದವರು ಹೊಂದಿರುವ ಆಸ್ತಿ-ಪಾಸ್ತಿಗಳ ನಿರ್ದಿಷ್ಟ ಮಾಹಿತಿಗಳು ಸಿಗಲಿವೆ.
– ನ್ಯಾ| ಬಿ.ಎಸ್. ಪಾಟೀಲ್, ಲೋಕಾಯುಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.