ಪ್ರಜಾಪ್ರಭುತ್ವ ಸಂಸ್ಥೆಗಳ ಬಲವರ್ಧನೆ ಅಗತ್ಯ: ಓಂ ಬಿರ್ಲಾ
Team Udayavani, Sep 25, 2021, 6:40 AM IST
ಬೆಂಗಳೂರು: ಪ್ರಜಾಪ್ರಭುತ್ವ ಸಂಸ್ಥೆಗಳು ಜನರ ಭಾವನೆಗಳಿಗೆ ಸ್ಪಂದಿಸಿ ಉತ್ತರದಾಯಿಯಾಗಲು ಈ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡು “ಪ್ರಜಾಪ್ರಭುತ್ವ, ಸಂಸದೀಯ ಮೌಲ್ಯಗಳ ರಕ್ಷಣೆ’ ಕುರಿತು ಮಾತನಾಡಿದ ಅವರು, ಕರ್ನಾಟಕ ವಿಧಾನ ಸಭೆ ಪ್ರಜಾತಂತ್ರ ವ್ಯವಸ್ಥೆಯ ಪ್ರತೀಕವಾಗಿದೆ. ಕರ್ನಾಟಕ ಶ್ರೀಮಂತ ಮತ್ತು ಅದ್ಭುತವಾದ ಇತಿಹಾಸ ಹೊಂದಿದೆ. ಬಸವೇಶ್ವರರು 12ನೇ ಶತಮಾನದಲ್ಲಿ ನಿರ್ಮಿಸಲಾದ ಅನುಭವ ಮಂಟಪ ಪ್ರಸ್ತುತ ಸಂದರ್ಭದಲ್ಲಿ ಜನ ಪ್ರತಿನಿಧಿಗಳ ಸಂಸತ್ತಿನ ಪ್ರತಿಬಿಂಬವಾಗಿದೆ. ರಾಣಿ ಚೆನ್ನಮ್ಮಳ ತ್ಯಾಗ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದರು.
ಸ್ವಾತಂತ್ರ್ಯದ 75ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು ಜನರಿಗೆ ಇನ್ನಷ್ಟು ಉತ್ತರ ದಾಯಿತ್ವವಾಗುವಂತೆ ನೋಡಿ ಕೊಳ್ಳಬೇಕಿದೆ. ಸಂಸದೀಯ ಪ್ರಜಾಪ್ರಭುತ್ವ ಚುನಾಯಿತ ಪ್ರತಿನಿಧಿ ಗಳ ಜವಾಬ್ದಾರಿ ಆಧರಿಸಿದೆ. ಚುನಾಯಿತ ಪ್ರತಿನಿಧಿಗಳು ಜನರ ಆಶಯಗಳು ಮತ್ತು ಆಕಾಂಕ್ಷೆಗಳಿಗೆ ಸಂವೇದನಾಶೀಲರಾದಾಗ ಮತ್ತು ಶಾಸಕಾಂಗಗಳ ಮೂಲಕ ಅವುಗಳನ್ನು ಪೂರೈಸಲು ಶ್ರಮಿಸಿದಾಗ ಮಾತ್ರ ಸಂಸತ್ತು ಮತ್ತು ಶಾಸಕಾಂಗದ ಪ್ರತಿಷ್ಠೆ ಹೆಚ್ಚಿಸಬಹುದು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಕವಾಗಿ ಮಾಡು ವಂತೆ ನೋಡಿಕೊಳ್ಳಬೇಕು ಎಂದರು.
ಸಂವಿಧಾನದ ಮೂರು ಅಂಗಗಳಲ್ಲಿ ಶಾಸಕಾಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಗ್ರ ಚರ್ಚೆಯ ಮೂಲಕ ಕಾನೂನು ರೂಪಿಸಬೇಕು. ಅದರಲ್ಲಿ ಶಾಸಕರ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿದೆ. ಶಾಸಕರ ಸಾಮರ್ಥ್ಯ ಮತ್ತು ಕೌಶಲ್ಯ ಹೆಚ್ಚಿ ಸಲು ಶಾಸಕಾಂಗಗಳು ಸಮಗ್ರ ಸಾಮರ್ಥ್ಯ ವೃದ್ಧಿ ಕ್ರಿಯಾ ಯೋಜನೆ ರೂಪಿಸಬೇಕು. ಆದರೆ, ಈಗೀಗ ಅಗತ್ಯ ಚರ್ಚೆ, ಶಾಸಕರ ಭಾಗವಹಿ ಸದಿರುವಿಕೆ, ಚಿಂತನೆ ನಡೆಯ ದಿರುವುದು ಕಳವಳಕಾರಿ ಎಂದರು.
ಕಾಂಗ್ರೆಸ್ ಗೈರು
ಲೋಕಸಭಾಧ್ಯಕ್ಷರ ಜಂಟಿ ಅಧಿವೇಶನ ಕುರಿತ ಭಾಷಣಕ್ಕೆ ವಿಪಕ್ಷ ಕಾಂಗ್ರೆಸ್ ಸದಸ್ಯರು ಗೈರು ಹಾಜರಾಗಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಮಾತ್ರ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವ ಅವಕಾಶವಿದ್ದು, ಸ್ಪೀಕರ್ ಕಾಗೇರಿ ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಲೋಕಸಭಾ ಕಟ್ಟಡಕ್ಕೆ ಅನುಭವ ಮಂಟಪ ಹೆಸರಿಡಲು ಮನವಿ:
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಲೋಕಸಭಾ ನೂತನ ಸಂಕೀರ್ಣದ ಕಟ್ಟಡವೊಂದಕ್ಕೆ ಅನುಭವ ಮಂಟಪ ಎಂದು ನಾಮಕರಣ ಮಾಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ.
ಲೋಕಸಭೆ ಸಭಾ ಧ್ಯಕ್ಷರು ಹಾಗೂ ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಒಂದೇ ಕಾರಣಕ್ಕೆ ಜಂಟಿ ಅಧಿವೇಶನ ಕಲಾಪದಲ್ಲಿ ಪಾಲ್ಗೊಂ ಡೆವು. – ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಲೋಕಸಭೆ ಸ್ಪೀಕರ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಸ್ಪೀಕರ್ ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಾರೆ. ಆದ್ದರಿಂದ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದೇವೆ.-ಸಿದ್ದರಾಮಯ್ಯ, ವಿಪಕ್ಷ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.