ಮಲ್ಲಿಕಾರ್ಜುನ ಖರ್ಗೆ ಏಳು-ಬೀಳು ಪಕ್ಷ ನಿಷ್ಠೆಗೆ ಪಟ್ಟ


Team Udayavani, Oct 20, 2022, 6:30 AM IST

ಮಲ್ಲಿಕಾರ್ಜುನ ಖರ್ಗೆ ಏಳು-ಬೀಳು ಪಕ್ಷ ನಿಷ್ಠೆಗೆ ಪಟ್ಟ

ಕಾಂಗ್ರೆಸ್‌ನ ಮೇರು ಹುದ್ದೆಗೆ ಆಯ್ಕೆಯಾಗಿರುವ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಹಲವಾರು ನಿರೀಕ್ಷೆಗಳಿವೆ. ಖಡಕ್‌ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಖರ್ಗೆ ಅವರು ಪಕ್ಷವನ್ನು ಪುನರ್‌ ಸಂಘಟಿಸುತ್ತಾರೆ ಎಂಬ ಆಶಾಭಾವವೂ ಕಾಂಗ್ರೆಸಿಗರಲ್ಲಿ ಇದೆ. ರಾಜಕಾರಣದಲ್ಲಿ ಹೆಚ್ಚು ಸೋಲನ್ನೇ ಕಾಣದೇ ಬೆಳೆದು ಬಂದವರು ಮಲ್ಲಿಕಾರ್ಜುನ ಖರ್ಗೆ…

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರ ಪಕ್ಷ ನಿಷ್ಠೆ, ತಾಳ್ಮೆ, ಎಲ್ಲರನ್ನೂ ವಿಶ್ವಾಸಕ್ಕೆ ಕರೆ ದೊಯ್ಯುವ ಗುಣ ಅವರನ್ನು ಎಐಸಿಸಿ ಅಧ್ಯಕ್ಷ ಪಟ್ಟದವರೆಗೂ ತಲುಪಿಸಿದೆ.

ಐದು ದಶಕಗಳ ಕಾಲ ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ, ನೆಹರೂ ಕುಟುಂಬಕ್ಕೆ ನಿಷ್ಠೆ, ಪಕ್ಷ ಹಾಗೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿರುವ ಖರ್ಗೆ ಅವರು ರಾಜಕಾರಣದಲ್ಲಿ ಸಾಕಷ್ಟು ಏಳು-ಬೀಳು ಕಂಡಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದು 1969 ರಲ್ಲಿ ವಿದ್ಯಾರ್ಥಿ ನಾಯಕನಾಗಿ ಅನಂತರ ಕಾರ್ಮಿಕ ನಾಯಕನಾಗಿ ಗುರುತಿಸಿಕೊಂಡು ಕಾಂಗ್ರೆಸ್‌ ಸೇರಿ ನಗರ ಕಾಂಗ್ರೆಸ್‌ ಅಧ್ಯಕ್ಷರಿಂದ ಹಿಡಿದು ಎಐಸಿಸಿವರೆಗೆ ಹಲವಾರು ಹುದ್ದೆ ನಿಭಾಯಿಸಿದ ಬಹುಶಃ ಕರ್ನಾಟಕದ ಏಕೈಕ ರಾಜಕಾರಣಿ ಇವರೇ. ನಿಜಲಿಂಗಪ್ಪ ಅವರ ಅನಂತರ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಎಂಬ ಖ್ಯಾತಿಯೂ ಇವರದಾಗಿದೆ.

ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಎರಡು ಬಾರಿ ಬಂದರೂ ಆ ಹುದ್ದೆಗಾಗಿ ಲಾಬಿ ಅಥವಾ ಹೈಕಮಾಂಡ್‌ ಮೇಲೆ ಒತ್ತಡ ಹಾಕಿದವರಲ್ಲ. ಪಕ್ಷ ಸೂಚಿಸುವ ಕೆಲಸ ಮಾಡುವುದಷ್ಟೇ ನನ್ನ ಕೆಲಸ ಎಂದು ತ್ಯಾಗ ಮಾಡಿದವರು. ಇದೇ ಕಾರಣಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಇವರನ್ನು ಹುಡುಕಿ ಬಂದಿತು.

ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು, ಗುಂಡೂರಾವ್‌, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್‌. ಎಂ.ಕೃಷ್ಣ, ಧರ್ಮಸಿಂಗ್‌ವರೆಗೂ ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ ಖರ್ಗೆ ಅವರು, ಪ್ರಾಥಮಿಕ ಶಿಕ್ಷಣ, ಕಂದಾಯ, ಸಾರಿಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಜಲಸಂಪನ್ಮೂಲ, ಸಹಕಾರ, ಕೈಗಾರಿಕೆ, ಗೃಹ ಹೀಗೆ ಪ್ರಮುಖ ಖಾತೆ ನಿಭಾಯಿಸಿ ಪ್ರತಿಯೊಂದು ಇಲಾಖೆಯಲ್ಲಿಯೂ ಕ್ರಾಂತಿಕಾರಕ ನಿರ್ಧಾರಗಳನ್ನು ಕೈಗೊಂಡಿದ್ದರು. ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ಗೃಹ ಸಚಿವರಾಗಿದ್ದಾಗ ವರನಟ ಡಾ| ರಾಜ್‌ಕುಮಾರ್‌ ಅಪಹರಣ ಪ್ರಕರಣವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿದರು.

ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ, ಎರಡು ಬಾರಿ ವಿಪಕ್ಷ ನಾಯಕರಾಗಿ, ಅನಂತರ ಎರಡು ಅವಧಿಗೆ ಸಂಸದರಾಗಿ, ಕೇಂದ್ರದಲ್ಲಿ ಕಾರ್ಮಿಕ ಹಾಗೂ ರೈಲ್ವೇ ಸಚಿವರಾಗಿ, ಎಐಸಿಸಿ ಚುನಾವಣೆಗೆ ಸ್ಪರ್ಧೆ ಮಾಡುವವರೆಗೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದರು. ಚುನಾವಣೆಗೆ ಸ್ಪರ್ಧೆ ಮಾಡು ತ್ತಿದ್ದಂತೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ನಿಯಮದಡಿ ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

1972 ರಿಂದ ಆರಂಭಗೊಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿಜಯದ ಹಾದಿ ನಿರಂತರ ಹತ್ತು ಚುನಾವಣೆಗಳವರೆಗೂ ಮುಂದುವರಿದಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯಾಯಿತು. ಆದರೂ ಕಾಂಗ್ರೆಸ್‌ ಪಕ್ಷ ಅವರನ್ನು ರಾಜ್ಯಸಭೆಗೆ ಕಳುಹಿಸಿ ವಿಪಕ್ಷ ನಾಯಕನ ಸ್ಥಾನಮಾನ ನೀಡಿತು.

“ಕೈ’ ಕಮಾಂಡರ್‌ ರಾಜ್ಯದಲ್ಲೇ!
ಕಾಂಗೆಸ್‌ ಹೈಕಮಾಂಡ್‌ ದೆಹಲಿಯಲ್ಲಿದೆ. ರಾಜ್ಯದಲ್ಲಿಲ್ಲ, ಮುಂದಿನ ಮುಖ್ಯಮಂತ್ರಿ ಸೇರಿ ಯಾವುದೇ ತೀರ್ಮಾನ ಅಲ್ಲೇ ಆಗಲಿದೆ ಎಂದು ಹೇಳಿದ್ದ ಮಲ್ಲಿಕಾರ್ಜುನ ಖರ್ಗೆ ಅವರೇ ಇದೀಗ ಕೈ ಕಮಾಂಡ್‌ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಗಾದಿ ಅಲಂಕರಿಸಿರುವುದು ಒಂದು ರೀತಿಯಲ್ಲಿ ಕರ್ನಾಟಕಕ್ಕೆ ಹೈಕಮಾಂಡ್‌ ಬಂದಂತಾಗಿದೆ. ಕಾಂಗ್ರೆಸ್‌ ಪಕ್ಷ ರಾಜಕೀಯವಾಗಿ ಸಂಕಷ್ಟ ಬಂದಾಗಲೆಲ್ಲ ರಕ್ಷಣೆ ಬಯಸಿ ಬರುವುದು ಕರ್ನಾಟಕದತ್ತ ಇದಕ್ಕೆ ಇಂದಿರಾಗಾಂಧಿ ಚಿಕ್ಕಮಗಳೂರು, ಸೋನಿಯಾಗಾಂಧಿ ಬಳ್ಳಾರಿಗೆ ಬಂದು ಸ್ಪರ್ಧಿಸಿ ಗೆದ್ದಿದ್ದೇ ಸಾಕ್ಷಿ. ಈಗ ಕಾಂಗ್ರೆಸ್‌ ಕೂಡ ಬಲವರ್ಧನೆ ತುಡಿತದಲ್ಲಿರುವ ಹೊತ್ತಿಗೆ ಖರ್ಗೆ ಆಯ್ಕೆ ಮೂಲಕ ಕರ್ನಾಟಕದವರನ್ನೇ ನೆಚ್ಚಿಕೊಂಡಂತಾಗಿದೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುವ ಮೂಲಕ ಕಾಂಗ್ರೆಸ್‌ನಲ್ಲಿ ಹೈಕಮಾಂಡ್‌ ಇಲ್ಲ. ಅಲ್ಲಿ ಎಲ್ಲವೂ ಗಾಂಧಿ ಕಮಾಂಡ್‌’ ಎಂಬ ವಿರೋಧಪಕ್ಷಗಳ ಆರೋಪದಿಂದ ಮುಕ್ತವಾದಂತಾಗಿದೆ.

ಹಳಬರಿಗೂ ಹೊಸಬರಿಗೂ ಸ್ನೇಹ
ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರು ಹಾಗೂ ಕಿರಿಯ ನಾಯಕರ ನಡುವೆ ಅಷ್ಟೇನು ಉತ್ತಮ ಬಾಂಧವ್ಯವಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ರಾಜಸ್ಥಾನದಲ್ಲಿ ಹಿರಿಯ ನಾಯಕ, ಸಿಎಂ ಅಶೋಕ್‌ ಗೆಹೊÉàಟ್‌ ಮತ್ತು ಕಿರಿಯ ನಾಯಕ ಸಚಿನ್‌ ಪೈಲಟ್‌ ನಡುವಿನ ಸಮರ. ಇದೇ ರೀತಿಯ ಪರಿಸ್ಥಿತಿ ಗೋವಾ, ಕೇರಳ, ದಿಲ್ಲಿ, ತೆಲಂಗಾಣ ಮತ್ತು ಪಂಜಾಬ್‌ನಲ್ಲೂ ಇದೆ. ಎರಡೂ ಪೀಳಿಗೆಯ ನಾಯಕರು ಖರ್ಗೆ ಅವರನ್ನು ಬೆಂಬಲಿಸಿದ್ದಾರೆ. ಆದರೆ ಇದೀಗ ಎರಡೂ ಪೀಳಿಗೆಯನ್ನು ಒಂದೇ ದೋಣಿಯಲ್ಲಿಟ್ಟುಕೊಂಡು ದಡ ಮುಟ್ಟುವ ದೊಡ್ಡ ಜವಾಬ್ದಾರಿ ಖರ್ಗೆಗಿದೆ.

ಖರ್ಗೆ ಮುಂದಿವೆ ಹಲವು ಸವಾಲುಗಳು
ಕಾಂಗ್ರೆಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾಗಿರುವ ಮಲ್ಲಿಕಾರ್ಜುನ್‌ ಖರ್ಗೆ ಅವರ ಕಣ್ಣ ಮುಂದೆ ಸವಾಲುಗಳ ಸಾಲೇ ಇದೆ. ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಖರ್ಗೆ ಅವರ ಪಕ್ಷ ಮಾತ್ರ ಎಲ್ಲೆಡೆ ಸೋಲನ್ನೇ ಕಾಣುತ್ತಾ ಬಂದಿದ್ದು ಮತ್ತೆ ಪಕ್ಷವನ್ನು ಗಟ್ಟಿಯಾಗಿಸುವ ಜವಾಬ್ದಾರಿ ಖರ್ಗೆ ಮೇಲಿದೆ.

ಹೊಸತನದ ಆವಶ್ಯಕತೆ
ಕಾಂಗ್ರೆಸ್‌ ರಾಷ್ಟ್ರದಲ್ಲಿ ಅತೀ ಹಳೆಯ ಪಕ್ಷ ಎನ್ನುವ ಖ್ಯಾತಿ ಪಡೆದಿದೆ. ಈಗ ಪಕ್ಷ ತನ್ನ ಅದ್ದೂರಿ ಇತಿಹಾಸವನ್ನು ನೆನಪಿಸಿಕೊಳ್ಳ ಬಹುದೇ ಹೊರತು ಅದೇ ರೀತಿಯಲ್ಲಿ ಮತ್ತೆ ಅಧಿಕಾರ ಸಾಧಿಸಲಾಗದು. ಬದಲಾದ ಕಾಲಕ್ಕೆ ತಕ್ಕನಾಗಿ ಪಕ್ಷ ಕೂಡ ಬದಲಾಗಬೇಕಿದೆ. ಈ ವರ್ಷ ಹಾಗೂ ಮುಂದಿನ ವರ್ಷದಲ್ಲಿ ಹಲವು ರಾಜ್ಯಗಳಲ್ಲಿ ಚುನಾವಣೆ ಇರುವ ಸಮಯದಲ್ಲಿ ಪಕ್ಷ ಮತದಾರರನ್ನು ಸೆಳೆಯುವುದಕ್ಕೆ ಹೊಸ ರೀತಿಯ ಪ್ರಯತ್ನಗಳನ್ನು ಮಾಡಬೇಕಿದೆ. ಮೋದಿ ಸರಕಾರವನ್ನು ವಿರೋಧಿಸುವುದಷ್ಟನ್ನೇ ಮಾಡದೆ, ತಾವು ಆಡಳಿತಕ್ಕೆ ಬಂದರೆ ದೇಶವನ್ನು ಹೇಗೆ ಮುನ್ನಡೆಸುತ್ತೇವೆ ಎನ್ನುವ ಬಗ್ಗೆಯೂ ಪ್ರಚಾರ ಮಾಡಬೇಕಿದೆ.

ಸ್ವತಂತ್ರವೆಂದು ತೋರಿಸಿಕೊಳ್ಳಬೇಕು
ಖರ್ಗೆಗೆ ಈ ಕ್ಷಣಕ್ಕೆ ಇರುವ ದೊಡ್ಡ ಜವಾಬ್ದಾರಿಯೆಂದರೆ ಅದು ತಾವು ನೆಹರೂ, ಗಾಂಧಿ ಕುಟುಂಬದ ಬೆಂಬಲಿತ ವ್ಯಕ್ತಿಯಲ್ಲ, ಸ್ವತಂತ್ರ ನಾಯಕ ಎಂದು ತೋರಿಸಿಕೊಳ್ಳುವುದು. ಖರ್ಗೆ ಹೆಸರಿಗೆ ಮಾತ್ರ ಅಧ್ಯಕ್ಷ, ಅವರು ಗಾಂಧಿ ಕುಟುಂಬದ ನಿರ್ದೇಶನದಂತೆಯೇ ನಡೆಯಲಿದ್ದಾರೆ ಎಂದು ತೋರಿಸುವುದಕ್ಕೆಂದೇ ವಿಪಕ್ಷಗಳು ಹಾಗೂ ಕಾಂಗ್ರೆಸ್‌ನೊಳಗಿನ ಕೆಲವು ನಾಯಕರು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಹೀಗಿರುವಾಗ ಖರ್ಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಅದರ ಜತೆಯಲ್ಲೇ ಗಾಂಧಿ ಕುಟುಂಬವನ್ನು ಎದುರು ಹಾಕಿಕೊಳ್ಳುವುದೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಯಿದೆ.

ಒಗ್ಗಟ್ಟಿನ ಪ್ರಶ್ನೆ
ಸದ್ಯಕ್ಕೆ ದೇಶದಲ್ಲಿ ಬಿಜೆಪಿಯನ್ನು ಎದುರಿಸಬೇಕೆಂದರೆ ವಿಪಕ್ಷಗಳು ಒಂದಾಗಬೇಕಿದೆ. ವಿಪಕ್ಷವೆಂದರೆ ಕಾಂಗ್ರೆಸ್‌ ಮುಖ್ಯ ಎನ್ನುವ ಭ್ರಮೆ ಖರ್ಗೆ ಸೇರಿ ಅನೇಕರಲ್ಲಿ ಇನ್ನೂ ಉಳಿದಿದೆ. ಆದರೆ ಈಗಾಗಲೇ ಅನೇಕ ಪ್ರಾದೇಶಿಕ ಪಕ್ಷಗಳೂ ಸೇರಿ ಹಲವು ಪಕ್ಷಗಳು ಮುಖ್ಯ ನೆಲೆಗೆ ಬಂದು ಕಾಂಗ್ರೆಸ್‌ಗೆ ಸರಿ ಸಮಾನವಾಗಿ ನಿಲ್ಲುತ್ತಿವೆ. ಹೀಗಿರುವಾಗ ಎಲ್ಲ ವಿಪಕ್ಷಗಳೊಂದಿಗೆ ಸಂಬಂಧ ಗಟ್ಟಿಗೊಳಿಸಿಕೊಂಡು ಜತೆಯಾಗಿ ನಿಲ್ಲಬೇಕಿದೆ. ಯುಪಿಎ ಮೈತ್ರಿಕೂಟವನ್ನು ಮತ್ತೆ ಗಟ್ಟಿಗೊಳಿಸುವ ಹೊಣೆ ಖರ್ಗೆ ಅವರಿಗಿದೆ.

ಸಂಘಟನಾತ್ಮಕ ಸಮಸ್ಯೆ
ಕಾಂಗ್ರೆಸ್‌ನೊಳಗೆ ಜಿ23 ನಾಯಕರ ಗುಂಪಿರುವುದು ಎಲ್ಲರಿಗೂ ತಿಳಿದ ವಿಚಾರ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಗೆ ಸದಸ್ಯರ ಆಯ್ಕೆಗೆ ಚುನಾವಣೆ ಆಗಬೇಕು ಎನ್ನುವುದೂ ಈ ಜಿ23 ನಾಯಕರ ಬೇಡಿಕೆಯಲ್ಲೊಂದು. ಸಿಡಬ್ಲ್ಯುಸಿಗೆ ಕೊನೆಯದಾಗಿ ಚುನಾವಣೆಯಾಗಿದ್ದು 1997ರಲ್ಲಿ. ಇದೀಗ ಸಂಘಟನೆಯಲ್ಲಿ ಒಗ್ಗಟ್ಟು ಬೇಕೆಂದರೆ ಎಲ್ಲ ನಾಯಕರ ಮಾತನ್ನೂ ಖರ್ಗೆ ಕೇಳಬೇಕಿದೆ. ಹಾಗೆಯೇ ಒಬ್ಬರಿಗೆ ಒಂದೇ ಹುದ್ದೆ, ಒಂದು ಕುಟುಂಬ ಒಂದು ಟಿಕೆಟ್‌, ಗರಿಷ್ಠ 5 ವರ್ಷದ ಅಧಿಕಾರ ಹೀಗೆ ಹಲವು ಸಂಘಟನಾತ್ಮಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾರೆಯೇ ಎನ್ನುವ ಪ್ರಶ್ನೆಗಳೂ ಮುಂದಿವೆ.

ಖರ್ಗೆಗೆ ಕೈ ಪಟ್ಟ;
ಇದು ಐತಿಹಾಸಿಕ ಘಟ್ಟ
22 ವರ್ಷಗಳ ಬಳಿಕ ಎದುರಾದ ಚುನಾವಣೆ
2000ರ ಬಳಿಕ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಸುದೀರ್ಘಾವಧಿಗೆ ಸೋನಿಯಾ ಗಾಂಧಿ ಮತ್ತು ಅಲ್ಪಾವಧಿಗೆ ರಾಹುಲ್‌ ಗಾಂಧಿಯವರು ಅಧ್ಯಕ್ಷರಾಗಿದ್ದರು. ಆದರೆ ಈ ಬಾರಿ ಆಂತರಿಕ ಚುನಾವಣೆ ನಡೆಸಿ ಖರ್ಗೆ ಅವರನ್ನು ಆರಿಸಲಾಗಿದೆ. 2000ರಲ್ಲಿ ಜಿತೇಂದ್ರ ಪ್ರಸಾದ ಅವರನ್ನು ಮಣಿಸಿ ಸೋನಿಯಾ ಗಾಂಧಿಯವರು ಅಧ್ಯಕ್ಷೆಯಾಗಿದ್ದರು.

24 ವರ್ಷದ ಬಳಿಕ ಗಾಂಧಿಯೇತರ ಕುಟುಂಬದ ವ್ಯಕ್ತಿ
1998ರಿಂದ ಸೋನಿಯಾ ಗಾಂಧಿಯವರೇ ಕಾಂಗ್ರೆಸ್‌ ಚುಕ್ಕಾಣಿ ಹಿಡಿದಿದ್ದರು. 1997ರಲ್ಲಿ ಆಯ್ಕೆಯಾಗಿದ್ದ ಸೀತಾರಾಂ ಕೇಸರಿ ಅವರನ್ನು ಕೆಳಗಿಳಿಸಿ ಸೋನಿಯಾ ಗಾಂಧಿಯವರನ್ನು ಮತ್ತೆ ನೇಮಕ ಮಾಡಲಾಗಿತ್ತು. ಅಂದರೆ ಸೀತಾರಾಂ ಕೇಸರಿ ಬಳಿಕ ಆಯ್ಕೆಯಾದ ಗಾಂಧಿಯೇತರ ಕುಟುಂಬದ ವ್ಯಕ್ತಿ ಖರ್ಗೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ 2ನೇ ಕನ್ನಡಿಗ
2019ರ ಲೋಕಸಭೆ ಚುನಾವಣೆ ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಜೀವನದ ಯಾವುದೇ ಚುನಾವಣೆಯಲ್ಲಿ ಸೋತೇ ಇರಲಿಲ್ಲ. ಅಲ್ಲದೆ ಇಡೀ ಜೀವಮಾನವನ್ನೇ ರಾಜಕೀಯಕ್ಕಾಗಿ ಮೀಸಲಿಟ್ಟ ವ್ಯಕ್ತಿ. ವಿಶೇಷವೆಂದರೆ ಕಾಂಗ್ರೆಸ್‌ಗೆ 1968-69ರಲ್ಲಿ ಎಸ್‌.ನಿಜಲಿಂಗಪ್ಪ ಅವರು ಅಧ್ಯಕ್ಷರಾಗಿದ್ದರು. ಅವರನ್ನು ಬಿಟ್ಟರೆ ಖರ್ಗೆಯವರೇ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಕರ್ನಾಟಕದ ನಾಯಕ.

137 ವರ್ಷಗಳ ಕಾಂಗ್ರೆಸ್‌ನಲ್ಲಿ ಇದು 6ನೇ ಚುನಾವಣೆ
ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾಗಿದ್ದ ಪಕ್ಷ ಕಾಂಗ್ರೆಸ್‌. ಇದಕ್ಕೆ 137 ವರ್ಷಗಳ ಇತಿಹಾಸವಿದೆ. ಇಂಥ ಕಾಂಗ್ರೆಸ್‌ಗೆ ಇದುವರೆಗೆ ಕೇವಲ 6 ಬಾರಿ ಮಾತ್ರ ಆಂತರಿಕ ಚುನಾವಣೆ ನಡೆದಿದೆ. 1939ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿತ್ತು. ಅದನ್ನು ಬಿಟ್ಟರೆ 1950, 1977, 1997, 2000ರಲ್ಲೂ ಚುನಾವಣೆ ನಡೆದಿತ್ತು. ಈಗ ಜಿ23 ನಾಯಕರ ಆಗ್ರಹದೊಂದಿಗೆ ಆಂತರಿಕ ಚುನಾವಣೆ ನಡೆಸಲಾಗಿದೆ.

ದಕ್ಷಿಣ ಭಾರತದ ಆರನೇ ನಾಯಕ
ಎಐಸಿಸಿ ಹುದ್ದೆಗೇರುತ್ತಿರುವ ದಕ್ಷಿಣ ಭಾರತದ ಆರನೇ ನಾಯಕ ಇವರು. ಈ ಹಿಂದೆ ನೀಲಂ ಸಂಜೀವ ರೆಡ್ಡಿ, ಕೆ.ಕಾಮರಾಜ್‌, ಪಿ.ವಿ.ನರಸಿಂಹರಾವ್‌, ಎಸ್‌.ನಿಜಲಿಂಗಪ್ಪ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು.

ಎರಡನೇ ದಲಿತ ನಾಯಕ
ಬಾಬು ಜಗಜೀವನ್‌ ರಾಂ ಬಳಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ವಹಿಸಿ ಕೊಳ್ಳುತ್ತಿರುವ ನಾಯಕ ಮಲ್ಲಿಕಾರ್ಜುನ ಖರ್ಗೆ. ಈ ಹಿಂದೆ ಇವರು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಗುಂಪಿನ ನೇತೃತ್ವ ವಹಿಸಿದ್ದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.