ಎನ್‌ಸಿಸಿ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ
Team Udayavani, Jun 24, 2019, 3:06 AM IST
ಬೆಳ್ತಂಗಡಿ: ರಾಜ್ಯದ ಬಹುತೇಕ ಸರಕಾರಿ ಶಾಲೆಗಳಲ್ಲಿ 10 ವರ್ಷ ಸೇವೆ ಸಲ್ಲಿಸಿದ ಎನ್‌ಸಿಸಿ ಶಿಕ್ಷಕರಿಗೆ ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆ ನೀತಿ ಜಾರಿಗೊಳಿಸಿದ್ದರಿಂದ ಸರಕಾರಿ ಶಾಲೆಗಳಲ್ಲಿ ಎನ್‌ಸಿಸಿ ಘಟಕ ಮುಚ್ಚುವ ಭೀತಿ ಎದುರಾಗಿದೆ.
ಸದ್ಯ ರಾಜ್ಯದಲ್ಲಿರುವ ಸರಕಾರಿ ಶಾಲೆಗಳ ಪೈಕಿ ಕೇವಲ 47 ಪ್ರೌಢಶಾಲೆ ಮತ್ತು 62 ಕಾಲೇಜುಗಳಲ್ಲಿ ಮಾತ್ರ ಎನ್‌ಸಿಸಿ ಘಟಕ ಉಳಿದುಕೊಂಡಿದೆ. ಎನ್‌ಸಿಸಿ ತರಬೇತಿ ಪಡೆದು ಮಕ್ಕಳಿಗೆ ಸನ್ನಡತೆ ಕಲಿಸುವ “ಎ’ ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಎನ್‌ಸಿಸಿ ಇಲ್ಲದ “ಸಿ’ ವಲಯಕ್ಕೆ ವರ್ಗಾವಣೆಗೊಳ್ಳುವುದರಿಂದ ಸರಕಾರಿ ಶಾಲೆಯಲ್ಲಿ ಈಗಾಗಲೇ ಎನ್‌ಸಿಸಿ ವಿಂಗ್‌ನಲ್ಲಿರುವ ಮಕ್ಕಳು ಪ್ರಯೋಜನದಿಂದ ವಿಮುಖರಾಗಲಿದ್ದಾರೆ. ಜತೆಗೆ, ಈಗಿರುವ ಎನ್‌ಸಿಸಿ ಘಟಕಗಳು ಮುಚ್ಚುವ ಭೀತಿ ಎದುರಾಗಿದೆ.
ಶಿಕ್ಷಕರಿಂದ ಮನವಿ: ಈ ಕುರಿತು ರಾಜ್ಯದ 47 ಶಾಲೆಗಳ ಎನ್‌ಸಿಸಿ ಶಿಕ್ಷಕರು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಕದ ತಟ್ಟಿದ್ದಾರೆ. ವರ್ಗಾವಣೆ ಮಾಡುವುದೇ ಆದಲ್ಲಿ ಎನ್‌ಸಿಸಿ ಇರುವ ಪ್ರೌಢಶಾಲೆಗಳಿಗೆ ವರ್ಗಾವಣೆ ಮಾಡುವಂತೆ ಕೋರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸತತ 3 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದಾರೆ.
2018ರ ಅಕ್ಟೋಬರ್‌ನಲ್ಲಿ ಪ್ರಧಾನ ಕಾರ್ಯದರ್ಶಿಗಳು ಮನವಿ ಪುರಸ್ಕರಿಸಿ, ಎನ್‌ಸಿಸಿ ಇರುವ ಸ್ಥಳಕ್ಕೆ ಮಾತ್ರ ವರ್ಗಾವಣೆ ಮಾಡುವಂತೆ ಆದೇಶ ನೀಡಿದ್ದರು. ಆದರೆ, ಆಯುಕ್ತರು ಆದೇಶವನ್ನು 3 ಬಾರಿ ಪುನರ್ ಪರಿಶೀಲನೆಗಾಗಿ ಪ್ರಧಾನ ಕಾರ್ಯದರ್ಶಿಗಳಿಗೆ ಹಿಂದಿರುಗಿಸಿದ್ದಾರೆಯೇ ವಿನಃ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂಬುದು ಶಿಕ್ಷಕರ ಅಳಲು.
ಆಯುಕ್ತರಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಕೌನ್ಸೆಲಿಂಗ್ ಸಮಯದಲ್ಲಿ ಶಿಕ್ಷಕರು ಆಯ್ಕೆ ಮಾಡಿದ ಶಾಲೆಗೆ ವರ್ಗಾಯಿಸುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದಲ್ಲಿ ಹಾಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಪಾಡೇನು ಎಂಬುದು ಪ್ರಶ್ನೆ. ಇನ್ನೊಂದೆಡೆ, ಸರಕಾರವು ಶಿಕ್ಷಕರಿಗೆ ಎನ್‌ಸಿಸಿ ತರಬೇತಿಗಾಗಿ ತಲಾ 60 ಸಾವಿರ ರೂ. ವಿನಿಯೋಗಿಸಿದ್ದು, ಸರಕಾರದ ಬೊಕ್ಕಸಕ್ಕಾಗುವ ನಷ್ಟ ಭರಿಸುವವರಾರು ಎಂಬ ಪ್ರಶ್ನೆಯೂ ಇದೆ. ಹೊಸ ಶಿಕ್ಷಕರನ್ನು ತರಬೇತಿಗೆ ಕಳುಹಿಸಿದರೂ ಸರಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ.
ಈ ಹಿಂದೆ ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು 15 ಮಂದಿ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಇಲಾಖೆಯ ವರಿಷ್ಠರ ಸಮ್ಮುಖ ಕೈಗೊಂಡ ಸಭಾ ನಡವಳಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಎನ್‌ಸಿಸಿ ಶಿಕ್ಷಕರನ್ನು ಎನ್‌ಸಿಸಿ ಘಟಕ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದು ಒಪ್ಪಿಗೆ ಸೂಚಿಸಿದ್ದರು. ಆದರೂ ತತ್ಸಂಬಂಧಿ ಆದೇಶ ಹೊರಬಿದ್ದಿಲ್ಲ.
ಸಿಎಂ ಆದೇಶ ಕಡೆಗಣನೆ: ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಕರ ಮನವಿಯನ್ನು ಪರಿಗಣಿಸಿ ಎಂದು ನಮೂದಿಸಿ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿದ್ದರು. ಆದರೆ, ಅದನ್ನು ಕಡೆಗಣಿಸಿರುವುದು ಸರಕಾರಿ ಶಾಲೆಗಳಲ್ಲಿ ಎನ್‌ಸಿಸಿ ಮುಚ್ಚಲು ಪರೋಕ್ಷವಾಗಿ ಇಲಾಖೆ ಅಥವಾ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ ಎಂಬ ಅನುಮಾನ ಹುಟ್ಟಿಸುತ್ತಿದೆ.
ಕಾನೂನಿನಲ್ಲಿ ಯಾವ ರೀತಿ ಅವಕಾಶಗಳಿವೆ ಎಂಬುದನ್ನು ಪರಿಗಣಿಸಿ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುವುದು. ಶಿಕ್ಷಕರ ಕೌನ್ಸೆಲಿಂಗ್ ಸಂದರ್ಭ ಅವರು ಬಯಸಿದ ಶಾಲೆಗಳಿಗೆ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗುವುದು.
-ಪಿ.ಸಿ.ಜಾಫರ್, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ
* ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.