ಅಪ್ರಾಪ್ತೆಗೆ ಪೋಷಕರಿಂದ ಮದುವೆ “ಶಿಕ್ಷೆ’; ಬಾಲಕಿಗೆ ಹೈಕೋರ್ಟ್ “ನ್ಯಾಯರಕ್ಷೆ’
Team Udayavani, Nov 26, 2021, 8:45 PM IST
ಬೆಂಗಳೂರು: ಶಿಕ್ಷಣ ಮೊಟಕುಗೊಳಿಸಿ ಮದುವೆ ಆಗುವಂತೆ ಅಪ್ರಾಪ್ತ ಬಾಲಕಿಗೆ ಪೋಷಕರು ಒತ್ತಾಯಿಸಿದ್ದರು. ಆದರೆ, ಆಕೆಯ ನೆರವಿಗೆ ಬಂದ ಹೈಕೋರ್ಟ್ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.
ಇದು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಅಪ್ರಾಪ್ತ (ಹದಿನೇಳು ವರ್ಷ) ಬಾಲಕಿಗೆ ಹೈಕೋರ್ಟ್ ನೀಡಿರುವ “ನ್ಯಾಯರಕ್ಷೆ’. ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಬಾಲಕಿಯರ ಬಾಲ ಮಂದಿರದಲ್ಲಿರಿಸಿ ವ್ಯಾಸಂಗ ಮುಂದುವರಿಸಲು ಹೈಕೋರ್ಟ್ ಅವಕಾಶ ಒದಗಿಸಿಕೊಟ್ಟ ಪ್ರಕರಣವಿದು!.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್‌ದತ್ ಯಾದವ್ ಹಾಗೂ ನ್ಯಾ. ಎಸ್. ರಾಚಯ್ಯ ಅವರಿದ್ದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಬಾಲಕಿಯ ಶಿಕ್ಷಣ, ಕ್ಷೇಮ ಹಾಗೂ ಸುರಕ್ಷತೆ ಮುಖ್ಯ. ಆದ್ದರಿಂದ ಬಾಲಕಿಯನ್ನು ಗದಗದ ಸಂಗೊಳ್ಳಿ ರಾಯಣ್ಣ ಸರ್ಕಲ್ ಸಮೀಪದ ಬಾಲಕಿಯರ ಬಾಲ ಮಂದಿರದಲ್ಲಿ ಇರಲು ಅವಕಾಶ ಮಾಡಿಕೊಡುವಂತೆ ಲಕ್ಷ್ಮೇಶ್ವರ ಪೋಲಿಸ್ ಇನ್ಸ್‌ಪೆಕ್ಟರ್‌ಗೆ ನಿರ್ದೇಶನ ನೀಡಿತು.
ಅಲ್ಲದೇ, ಬಾಲಕಿ ಪ್ರಾಪ್ತ ವಯಸ್ಸಿಗೆ ಬರುವವರೆಗೆ ಅಥವಾ ಪೋಷಕರೊಂದಿಗೆ ಹೋಗಲು ಮನಸ್ಸು ಬದಲಿಸುವರೆಗೂ ಬಾಲಕಿಯರ ಮಂದಿರದಲ್ಲಿ ಆಕೆಯನ್ನು ಇರಿಸಬೇಕು. ಆಕೆ ವ್ಯಾಸಂಗ ಮುಂದುವರಿಸಲು ಬಾಲಕಿರಯ ಮಂದಿರ ಖಾತರಿಪಡಿಸಬೇಕು. ಒಂದು ವೇಳೆ ಪೋಷಕರೊಂದಿಗೆ ಹೋಗಲು ಬಯಸಿದರೆ, ಆಕೆಯ ಸುರಕ್ಷತೆ ಮತ್ತು ಭವಿಷ್ಯಕ್ಕೆ ತೊಂದರೆ ಉಂಟು ಮಾಡುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಪಡೆದು ಪೋಷಕರೊಂದಿಗೆ ಕಳುಹಿಸಬೇಕು. ಬಾಲಕಿಯರ ಮಂದಿರದಲ್ಲಿ ಇರುವ ವೇಳೆ ಪೋಷಕರನ್ನು ಕಾಣಲು ಆಕೆ ಆಪೇಕ್ಷೆಪಟ್ಟರೆ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ:ಮೊಟ್ಟೆ ಎಸೆತಕ್ಕೆ ಕಾಂಗ್ರೆಸ್- ಬಿಜೆಪಿ ಮೈತ್ರಿ
ಪ್ರಕರಣವೇನು?
ಪೋಷಕರು ಮದುವೆಗೆ ಒತ್ತಾಯಿಸುತ್ತಿರುವುದಕ್ಕೆ ಹದಿನೇಳುವರೆ ವರ್ಷದ ಅಪ್ರಾಪ್ತಳು ಮನೆಬಿಟ್ಟು ಗೋವಾಗೆ ತೆರಳಿ ಸಹೋದರ ಮನೆಯಲ್ಲಿ ನೆಲೆಸಿದ್ದಳು. ಮಗಳ ಅಪಹರಣಕ್ಕೆ ಒಳಗಾಗಿದ್ದು, ಹುಡುಕಿಕೊಡಲು ಪೊಲೀಸರಿಗೆ ಆದೇಶಿಸುವಂತೆ ಕೋರಿ ಆಕೆಯ ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ನಿರ್ದೇಶನದ ಮೇರೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಠಾಣಾ ಪೊಲೀಸರು ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ವಿಚಾರಣೆ ವೇಳೆ ಪೋಷಕರು ಶಿಕ್ಷಣ ಮೊಟಕುಗೊಳಿಸಿ ಮದುವೆಯಾಗುವಂತೆ ಮಗಳಿಗೆ ಒತ್ತಾಯಿಸುತ್ತಿದ್ದ ವಿಚಾರವನ್ನು ಸರ್ಕಾರಿ ವಕೀಲರು ಹೈಕೋರ್ಟ್ ಗಮನಕ್ಕೆ ತಂದು, ಅಪ್ರಾಪೆ¤ಗೆ ಹದಿನೇಳುವರೆ ವರ್ಷ. ಆಕೆಗೆ ಶಿಕ್ಷಣ ಮುಂದುವರಿಸುವ ಆಸೆ ಇದೆ. ಆದರೆ, ಪೋಷಕರು ಮಾತ್ರ ವ್ಯಾಸಂಗ ಮೊಟಕುಗೊಳಿಸಿ ಮದುವೆಯಾಗುವಂತೆ ಒತ್ತಾಯಿಸಿದ್ದರು. ಇದರಿಂದ ಬೇಸತ್ತ ಆಕೆ ಸ್ವಯಂ ಪ್ರೇರಿತಳಾಗಿ ಮನೆ ತೊರೆದಿದ್ದಾಳೆ. ಗೋವಾಗೆ ತೆರಳಿ ಸೋದರ ಮನೆಯಲ್ಲಿ ನೆಲೆಸಿದ್ದಳು ಎಂದು ಮಾಹಿತಿ ನೀಡಿದರು. ಜೊತೆಗೆ ಪೋಷಕರೊಂದಿಗೆ ತೆರಳುವುದಿಲ್ಲ , ಬೇಕಿದ್ದರೆ ಬಾಲ ಮಂದಿರಕ್ಕೆ ಹೋಗುತ್ತೇನೆ ಎಂದು ಬಾಲಕಿ ನ್ಯಾಯಾಲಯಕ್ಕೆ ತಿಳಿಸಿದ್ದಳು.
ಪೊಲೀಸರ ವಾದ ನಿರಾಕರಿಸಿದ ತಾಯಿಯ ಪರ ವಕೀಲರು, ಬಾಲಕಿಯನ್ನು ಅಪಹರಿಸಲಾಗಿದೆ. ಈ ವಿಚಾರವನ್ನು ಪೋಲೀಸರು ಮರೆಮಾಚಿದ್ದಾರೆ. ಇನ್ನೂ ಮದುವೆಯಾಗಲು ಹಾಗೂ ಶಿಕ್ಷಣ ಮೊಟಕುಗೊಳಿಸಲು ಆಕೆಗೆ ತಂದೆ ತಾಯಿ ಒತ್ತಾಯಿಸಿಲ್ಲ. ಹಾಗಾಗಿ, ಆಕೆಯನ್ನು ಪೋಷಕರೊಂದಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.