ಮಹಿಳಾ ವಿವಿ ಕುಲಪತಿ ಹುದ್ದೆಗೆ ಪುರುಷರಿಂದಲೂ ಅರ್ಜಿ ಸಲ್ಲಿಕೆ !
Team Udayavani, Aug 24, 2020, 7:35 AM IST
ವಿಜಯಪುರ: ಅಕ್ಕ ಮಹಾದೇವಿ ಮಹಿಳಾ ವಿವಿಯ ತೆರವಾದ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ಕೊನೆಗೊಂಡಿದ್ದು, ಇದೇ ಮೊದಲ ಬಾರಿಗೆ ಕುಲಪತಿ ಸ್ಥಾನಕ್ಕೆ ಮಹಿಳೆಯರೊಂದಿಗೆ ಪುರುಷರೂ ಅರ್ಜಿ ಸಲ್ಲಿಸಿದ್ದಾರೆ.
ಮಹಿಳಾ ವಿವಿ ಕುಲಪತಿಯಾಗಿದ್ದ ಸಬೀಹಾ ಭೂಮಿಗೌಡ ಅವರ ಅವಧಿ ಜೂ.19ರಂದು ಮುಕ್ತಾಯವಾಗಿದ್ದು, ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಹಂಗಾಮಿ ಕುಲಪತಿಯಾಗಿ ನೇಮಕವಾಗಿದ್ದಾರೆ.
ಹೊಸ ನೇಮಕಾತಿ ನಡೆಯುವವರೆಗೆ ಅಥವಾ ಪ್ರಸಕ್ತ ವರ್ಷದ ಡಿ. 13ರ ವರೆಗೆ ಕಾಕಡೆ ಹಂಗಾಮಿ ಕುಲಪತಿ ಆಗಿರಲಿದ್ದಾರೆ.
ತೆರವಾದ ಕುಲಪತಿ ನೇಮಕಕ್ಕೆ ಈ ಬಾರಿ ತುಮಕೂರು ವಿವಿ ಕುಲಪತಿ ಡಾ| ಎನ್. ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಗುಲಬರ್ಗಾ ವಿವಿ ನಿವೃತ್ತ ಕುಲಪತಿ ಬಿ. ಜಿ. ಮೂಲಿಮನಿ, ಹರಿಯಾಣ ಮಹಿಳಾ ವಿವಿ ಕುಲಪತಿ ಡಾ| ಸುಷ್ಮಾ ಯಾದವ, ಅಕ್ಕ ಮಹಾದೇವಿ ಮಹಿಳಾ ವಿವಿ ಹಿಂದಿನ ಕುಲಪತಿ ಡಾ| ಮೀನಾ ಚಂದಾವರಕರ ಶೋಧನಾ ಸಮಿತಿ ಸದಸ್ಯರಾಗಿದ್ದಾರೆ.
ಈ ಮಧ್ಯೆ ತೆರವಾದ ವಿವಿ ಕುಲಪತಿ ಸ್ಥಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದ್ದು, ಆ. 12ರಂದು ಕೊನೆಗೊಂಡಿದೆ. ಮೂಲಗಳ ಪ್ರಕಾರ 45 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಅಶೋಕ ಶೆಟ್ಟರ್ ಸಹಿತ ಇತರ ಕೆಲವು ಪುರುಷರೂ ಸೇರಿದ್ದಾರೆ.
ಧಾರವಾಡದ ಕರ್ನಾಟಕ ವಿವಿ ಸಮಾಜ ವಿಜ್ಞಾನ ವಿಭಾಗದ ಶಕುಂತಲಾ ಶೆಟ್ಟರ್, ನೂರ್‌ಜಹಾನ್, ಕಳೆದ ಬಾರಿ ಅಂತಿಮ ಮೂವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕಲಬುರಗಿ ಕೇಂದ್ರೀಯ ವಿವಿ ಅರ್ಥಶಾಸ್ತ್ರ ವಿಭಾಗದ ಪುಷ್ಪಾ ಸವದತ್ತಿ ಜತೆಗೆ ಎನ್. ಪಾರ್ವತಿ, ಪರಿಮಳಾ ಅಂಬೇಕರ, ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ, ಮಹಿಳಾ ವಿವಿಯಲ್ಲೇ ಕುಲಸಚಿವೆ ಆಗಿರುವ ಆರ್. ಸುನಂದಮ್ಮ ಮುಂತಾದವರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಈವರೆಗೆ ಉನ್ನತ ಶಿಕ್ಷಣ ಇಲಾಖೆಯಿಂದ ನನಗೆ ಅರ್ಜಿ ಸಲ್ಲಿಕೆ ಹಾಗೂ ಸಭೆ ನಡೆಸುವ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಸಭೆ ಬಳಿಕ ನಿಯಮದಂತೆ ಮೂವರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು.
– ಎನ್.ಸಿದ್ದೇಗೌಡ, ಅಧ್ಯಕ್ಷರು, ಮಹಿಳಾ ವಿವಿ ಕುಲಪತಿ ನೇಮಕ ಶೋಧನಾ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.