ಕಂದಾಯ ಇಲಾಖೆಯ ದಾಖಲೆಗಳನ್ನು ತಿದ್ದಿದರೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್: ಕಾರಜೋಳ
Team Udayavani, Sep 21, 2022, 3:26 PM IST
ಬೆಂಗಳೂರು: ಕಂದಾಯ ಇಲಾಖೆಯ ಕಾಗದ ಪತ್ರಗಳಲ್ಲಿ ಹೆಸರನ್ನು ಬದಲಾವಣೆ ಮಾಡಿದರೆ ಅವರು ಅಪರಾಧಿಗಳಾಗುತ್ತಾರೆ. ಮಾಡಿ ಕೊಟ್ಟವರು ಅಪರಾಧಿಗಳಾಗುತ್ತಾರೆ. ಇಬ್ಬರ ಮೇಲೆಯೂ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಯಾದಗಿರಿ ಜಿಲ್ಲೆಯ ಕೊಡೆಕಲ್ ಗ್ರಾಮದಲ್ಲಿ ಸರ್ವೇ ನಂಬರ್ 72ರಲ್ಲಿ 15 ಎಕರೆ 10 ಗುಂಟೆ ಜಮೀನನ್ನು ಕೃಷ್ಣ ಭಾಗ್ಯ ಜಲ ನಿಗಮ ಯೋಜನೆಗೆ ತೆಗೆದುಕೊಂಡು ಪರಿಹಾರವನ್ನು ಕೂಡ ಕೊಟ್ಟಿದ್ದಾರೆ. ಅಲ್ಲಿನ ತಹಶೀಲ್ದಾರ್ ಹಾಗೂ ಅವರ ಸಿಬ್ಬಂದಿ ಸೇರಿ ಭ್ರಷ್ಟಾಚಾರ ಉದ್ದೇಶದಿಂದ ಖಾಸಗಿ ವ್ಯಕ್ತಿಗಳಾದ ಬಸಮ್ಮ ಕೋಂ ಚನ್ನಮಲ್ಲಪ್ಪ ಅದ್ನೂರಾ ಎಂಬ ಹೆಸರಿನಲ್ಲಿ ಪಹಣಿ ಬದಲಾಯಿಸಿ, ಹೆಸರು ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.
ಕೃಷ್ಣ ಭಾಗ್ಯ ಜಲ ನಿಗಮ ಪರಿಹಾರ ತೆಗೆದುಕೊಂಡು ತಹಶೀಲ್ದಾರ್ ಬಸಮ್ಮನವರ ಜೊತೆ ಸೇರಿ ಪಹಣಿ ಬದಲಾಯಿಸಿದ್ದಾರೆ. ಆ ರೀತಿ ಬದಲಾಯಿಸಲು ತಹಶೀಲ್ದಾರ್‌ಗೆ ಯಾವುದೇ ಅಧಿಕಾರ ಇಲ್ಲ. ಸರಿಯಾದ ದಾಖಲೆ ಇದ್ರೆ, ಉಪ ಆಯುಕ್ತರು ಬದಲಾವಣೆ ಮಾಡಬೇಕು. ಈ ಕಾರಣಕ್ಕೆ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ. ಆದರೆ, ತಹಶೀಲ್ದಾರ್‌ನನ್ನು ಸಸ್ಪೆಂಡ್ ಮಾಡಿಲ್ಲ. ತಕ್ಷಣ ತಹಶೀಲ್ದಾರ್‌ನನ್ನು ಸಸ್ಪೆಂಡ್ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಇದನ್ನೂ ಓದಿ: ಎಲ್ಲೇ ಸ್ಪರ್ಧಿಸಿದರೂ ಹಳೇ ಮೈಸೂರು ಮರೆಯುವುದಿಲ್ಲ: ಬಿ.ವೈ.ವಿಜಯೇಂದ್ರ
ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ ಅವರು, ಈ ವಿಚಾರ ನನ್ನ ಗಮನಕ್ಕೆ ಬಂದೇ ಇರ್ಲಿಲ್ಲ. ಈಗ ಬಂದಿದೆ. ಭೂಸ್ವಾಧೀನವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡಬೇಕು. ಹಾಗೇನಾದರೂ ಆಗಿದ್ದರೆ ಕಂದಾಯ ಇಲಾಖೆಗೆ ಸಂಬಂಧಿಸಿದ ತಹಶೀಲ್ದಾರ್‌ರೇ ಆಗಿರಬಹುದು. ಕೆಳಗಿನ ನೌಕರರೇ ಆಗಿರಬಹುದು. ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇವೆ. ಅವರನ್ನ ಸಸ್ಪೆಂಡ್ ಮಾಡಲು ಸರ್ಕಾರದಿಂದ ಸೂಚನೆ ಕೊಡುತ್ತೇವೆ. ಹಣವನ್ನು ರಿಕವರಿ ಮಾಡಲು ಡಿಸಿಗೆ ಹೇಳುತ್ತೇನೆ. ಕ್ರಿಮಿನಲ್ ಕೇಸ್ ಹಾಕೋಣ, ತಕ್ಷಣ ಯಾದಗಿರಿ ಜಿಲ್ಲಾಧಿಕಾರಿಗೆ ಸೂಚನೆ ಕೊಡ್ತೀನಿ ಎಂದು ತಿಳಿಸಿದರು.
ಇನ್ನು, ಬೆಳಗಾವಿ ಜಿಲ್ಲೆಯ ಕೆಲ ತಾಲೂಕಿನಲ್ಲಿ ರೈತರ ಪಹಣಿಯಲ್ಲಿ ಮಾಲೀಕರ ಹೆಸರ ಬದಲಿಗೆ ಕರ್ನಾಟಕ ನೀರಾವರಿ ನಿಗಮ ಎಂದು ಹೆಸರಿದ್ದು ರೈತರು ಕಂಗಾಲಾಗಿದ್ದಾರೆ ಎಂದು ಕೌಜಲಗಿ ಮಹಾಂತೇಶ್ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಗೋವಿಂದ ಕಾರಜೋಳ ಅವರು, ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 3,26,000 ಎಕರೆ ಭೂಸ್ವಾಧೀನ ಆಗಿದೆ. ಭೂಸ್ವಾಧೀನ ಆದ್ಮೇಲೆ ನೀರಾವರಿ ಇಲಾಖೆ ಅಂತ ಹೆಸರು ಬದಲಾವಣೆ ಆಗ್ಬೇಕಿತ್ತು. ಅದು ಆಗದೇ ಇರುವುದರಿಂದ 25,000 ಎಕರೆ ಹೊರತುಪಡಿಸಿ 3 ಲಕ್ಷ ಎಕರೆಯಷ್ಟು ರೈತರ ಹೆಸರಿನಲ್ಲಿ ಉಳಿದುಬಿಟ್ಟಿತ್ತು. ಅವರು ಪರಿಹಾರವನ್ನು ತೆಗೆದುಕೊಂಡಿದ್ದರು. ಈಗ 3,26,000 ಎಕರೆಯನ್ನು ದಾಖಲೆ ತಿದ್ದುಪಡಿ ಮಾಡಿ ಕರ್ನಾಟಕ ಸರ್ಕಾರ ನೀರಾವರಿ ನಿಗಮ ಹೆಸರನ್ನು ಮಾಡಿದ್ದೇವೆ ಎಂದರು.
ಇದು ಕೇವಲ ನಾವಷ್ಟೇ ಮಾಡಿಲ್ಲ, ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದಲ್ಲೂ ಕೂಡ ಕೇಸ್‌ಗಳಾಗಿ, 3,25,000 ಎಕರೆ ಸರ್ಕಾರದ ಹೆಸರಿಗೆ ಮಾಡಿಕೊಂಡಿದ್ದೇವೆ.. ರೈತರು ಅವರ ಹೆಸರಿನಲ್ಲೇ ಇದಿದ್ದರಿಂದ ಕೆಲವರು ಮಾರಾಟ ಮಾಡಿದ್ದಾರೆ. ಕೆಲವರು ಸಾಲ ತೆಗೆದಿದ್ದಾರೆ. ಕೆಲವರು ಭಾಗ ಮಾಡಿಕೊಂಡಿದ್ದಾರೆ. ಹೀಗಾಗಿ ಅನೇಕ ಸಮಸ್ಯೆಗಳಾಗಿದ್ದವು. ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.