ಡಿಸೆಂಬರ್ ಅಂತ್ಯದೊಳಗೆ 400 ಪಶು ವೈದ್ಯರ ನೇಮಕ; ಸಚಿವ ಕೆ.ವೆಂಕಟೇಶ್
Team Udayavani, Jul 11, 2023, 7:45 AM IST
ವಿಧಾನಸಭೆ: ಡಿಸೆಂಬರ್ ತಿಂಗಳೊಳಗಾಗಿ 400 ಪಶು ವೈದ್ಯರ ನೇಮಕ ಮಾಡಿಕೊಳ್ಳುವ ಮೂಲಕ ಜಾನುವಾರು ಹಾಗೂ ವೈದ್ಯರ ಅನುಪಾತದಲ್ಲಿ ಸೃಷ್ಟಿಯಾಗಿರುವ ಅಂತರ ಕಡಿಮೆ ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ವಿಧಾನಸಭೆಗೆ ತಿಳಿಸಿದ್ದಾರೆ.
ಡಾ.ಭರತ್ ಶೆಟ್ಟಿ ಹಾಗೂ ಗುರುರಾಜ್ ಗಂಟಿಹೊಳಿ ಅವರ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಪಶು ವೈದ್ಯಾಧಿಕಾರಿಗಳ ಅನುಪಾತ ಕಡಿಮೆ ಇದೆ. ಅದನ್ನು ಸರಿಪಡಿಸಲಾಗುವುದು. ಮುಂದಿನ 2 ತಿಂಗಳು ಅವಧಿಯಲ್ಲಿ 200 ಪಶು ಇನ್‌ಸ್ಪೆಕ್ಟರ್‌ಗಳು ಹಾಗೂ ಡಿಸೆಂಬರ್ ಅಂತ್ಯದ ವೇಳೆಗೆ 400 ಪಶು ವೈದ್ಯರ ನೇಮಕ ಮಾಡಲಾಗುವುದು. ಸದ್ಯಕ್ಕೆ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ವೈದ್ಯರನ್ನು ವರ್ಗಾವಣೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಗುರುರಾಜ್ ಗಂಟಿಹೊಳಿ ಉಡುಪಿ ಜಿಲ್ಲೆಯಲ್ಲಿ 83 ಸಾವಿರ ಜಾನುವಾರುಗಳಿವೆ. ಆದರೆ ಕೇವಲ ಇಬ್ಬರು ವೈದ್ಯಾಧಿಕಾರಿಗಳು ಮಾತ್ರ ಇದ್ದಾರೆ. ನಿಯಮಾವಳಿ ಪ್ರಕಾರ ನಾಲ್ಕು ಸಾವಿರ ಜಾನುವಾರುಗಳಿಗೆ ಒಬ್ಬ ಪಶುವೈದ್ಯ ಇರಬೇಕು. ಆದರೆ ನಮ್ಮ ಜಿಲ್ಲೆಯಲ್ಲಿ ಸರಾಸರಿ 40 ಸಾವಿರ ಪಶುಗಳಿಗೆ ಒಬ್ಬ ವೈದ್ಯರಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ಹೈನೋತ್ಪನ್ನಗಳ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಸ್ಪೀಕರ್ ಯು.ಟಿ.ಖಾದರ್ ಕೂಡಾ ಧ್ವನಿ ಸೇರಿಸಿದರು. ಮನುಷ್ಯನಷ್ಟೇ ಪ್ರಾಣಿಗಳಿಗೂ ಬದುಕುವುದಕ್ಕೆ ಹಕ್ಕಿದೆ. ನಮಗೆ ನಮ್ಮ ಕಷ್ಟಗಳನ್ನು ಹೇಳಿಕೊಳ್ಳುವುದಕ್ಕೆ ಬಾಯಿ ಹಾಗೂ ಭಾಷೆ ಇದೆ. ಆದರೆ ಪ್ರಾಣಿಗಳಿಗೆ ಆ ಸೌಲಭ್ಯವಿಲ್ಲ. ಹೀಗಾಗಿ ಪಶು ಚಿಕಿತ್ಸಾಲಯ ಹಾಗೂ ವೈದ್ಯಾಧಿಕಾರಿಗಳನ್ನು ಅನುಪಾತಕ್ಕೆ ಅನುಗುಣವಾಗಿ ಸಂಯೋಜಿಸಬೇಕು ಎಂದು ಸಲಹೆ ನೀಡಿದರು.
ಡಾ.ಭರತ್ ಶೆಟ್ಟಿ ಮಾತನಾಡಿ, ಮಂಗಳೂರಿನಲ್ಲಿ ಗೋಶಾಲೆ ನಿರ್ಮಾಣ ಮಾಡುವುದಕ್ಕೆ ಸುಮಾರು 98 ಎಕರೆ ಭೂಮಿ ಮೀಸಲಿದೆ. ಆದರೆ 10 ರಿಂದ 12 ಎಕರೆಯಷ್ಟು ಜಾಗಕ್ಕೆ ಮಾತ್ರ ಬೇಲಿ ಹಾಕಲಾಗಿದೆ. ಸುಮಾರು 2 ಲಕ್ಷ ಜಾನುವಾರುಗಳನ್ನು ಇಲ್ಲಿ ಸಂರಕ್ಷಣ ಮಾಡುವುದಕ್ಕೆ ಅವಕಾಶವಿದೆ. ಆದರೆ ಹಾಲಿ ಇರುವ ಗೋಶಾಲೆಯಲ್ಲಿ 100 ಗೋವುಗಳು ಮಾತ್ರ ಇದೆ. ಇದರ ಸಾಮರ್ಥ್ಯವನ್ನು 1500ಕ್ಕೆ ವೃದ್ಧಿಸಬಹುದಾಗಿದೆ. ಗೋಶಾಲೆಗೆ ಮೀಸಲಾಗಿರುವ ಜಾಗಗಳನ್ನು ಒತ್ತುವರಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಸರ್ಕಾರ ತಕ್ಷಣ ಈ ಬಗ್ಗೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಹೊಸ ತಾಲೂಕು ರಚನೆಗೆ ಮಾನದಂಡ
ವಿಧಾನಸಭೆ : ಇನ್ನು ಮುಂದೆ ಹೊಸ ತಾಲೂಕು ರಚನೆಗೆ ಸೂಕ್ತ ಮಾನದಂಡ ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ಶಾಸಕ ಟಿ.ರಘುಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ರಚಿಸುವ ಕುರಿತು ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸ್ವೀಕೃತವಾಗುವುದಿಲ್ಲ. ಡಾ.ಎಂ.ಬಿ.ಪ್ರಕಾಶ್ ಸಮಿತಿ ತಾಲೂಕು ಕೇಂದ್ರವನ್ನಾಗಿ ಮಾಡಲು ಶಿಫಾರಸು ಮಾಡಿದೆ. ಆದರೆ ಇನ್ನು ಮುಂದೆ ಹೊಸ ತಾಲೂಕು ಕೇಂದ್ರ ರಚನೆಗೆ ಕೆಲವು ಮಾನದಂಡ ವಿಧಿಸಲಾಗುವುದು. ಆ ಸಂದರ್ಭದಲ್ಲಿ ಪರಶುರಾಂಪುರ ತಾಲೂಕು ಕೇಂದ್ರವನ್ನಾಗಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಆದರೆ ಇದಕ್ಕೆ ತೃಪ್ತರಾಗದ ರಘುಮೂರ್ತಿ, ಪರಶುರಾಂಪುರ ಹೋಬಳಿ ಘೋಷಣೆಯಾಗಲೇಬೇಕು. ನಮ್ಮ ಸರ್ಕಾರ ಬೇರೆ ಬೇರೆ ಯೋಜನೆ ಘೋಷಣೆ ಮಾಡುತ್ತಿದೆ. ಆದರೆ ನಮ್ಮ ಕ್ಷೇತ್ರದ ಬಹುಕಾಲದ ಬೇಡಿಕೆಯನ್ನು ಈಡೇರಿಸಲ್ಲ. 2028 ರೊಳಗೆ ತಾಲೂಕು ರಚನೆಯಾಗದಿದ್ದರೆ ಸಕ್ರಿಯ ರಾಜಕಾರಣದಲ್ಲಿ ಇರುವ ಬಗ್ಗೆ ನಾವು ಯೋಚನೆ ಮಾಡಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಫಸಲ್ ಬಿಮಾ ಯೋಜನೆಯಿಂದ ರಾಜ್ಯ ಹೊರಕ್ಕೆ?
ವಿಧಾನಸಭೆ: ಫಸಲ್ ಬಿಮಾ ಯೋಜನಾ ವ್ಯಾಪ್ತಿಯಿಂದ ರಾಜ್ಯ ಹೊರಗೆ ಬರಬೇಕೇ , ಬೇಡವೇ? ಎಂಬ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಗೆ ತಿಳಿಸಿದ್ದಾರೆ.
ಫಸಲ್ ಬಿಮಾ ಯೋಜನೆಯ ಸರ್ವರ್ ಕೆಟ್ಟಿದ್ದು, ರೈತರಿಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ಕೇಂದ್ರದಿಂದ ಈ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಖಾಸಗಿ ವಿಮಾ ಕಂಪನಿಗಳಿಗೆ ಅನುಕೂಲವಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದಾಗ ಉತ್ತರಿಸಿದ ಅವರು, ಗುಜರಾತ್ ಸೇರಿ ಅನೇಕ ರಾಜ್ಯಗಳು ಈ ಯೋಜನೆಯ ವ್ಯಾಪ್ತಿಯಿಂದ ಹೊರಕ್ಕೆ ಬಂದಿವೆ. ಸರ್ಕಾರ ಈ ವಿಚಾರದಲ್ಲಿ ಏನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.
ನೋಂದಣಿ ದಿನಾಂಕ ವಿಸ್ತರಿಸುವುದಕ್ಕೆ ಕೇಂದ್ರ ಸರ್ಕಾರ ನಿಯೋಜಿತ ಅಧಿಕಾರಿಗಳಿಂದ ಒಪ್ಪಿಗೆ ಬೇಕಾಗುತ್ತದೆ. ಒಂದು ದಿನ ಮಾತ್ರ ವಿಸ್ತರಣೆ ಮಾಡಿದ್ದರಿಂದ 30 ಸಾವಿರ ರೈತರು ವಿಮೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅಡಕೆಯನ್ನು ಹವಾಮಾನಾಧಾರಿತ ಬೆಳೆಗಳ ವ್ಯಾಪ್ತಿಯಿಂದ ಕೈ ಬಿಟ್ಟಿರುವ ಬಗ್ಗೆ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಅಶೋಕ್ ಕುಮಾರ್ ರೈ ಸರ್ಕಾರದ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.