ಕಮಿಷನ್ ಕೇಳಿದವರ ಹೆಸರು ಬಹಿರಂಗಗೊಳಿಸಿ
Team Udayavani, Aug 26, 2022, 6:55 AM IST
ಉಡುಪಿ: ಗುತ್ತಿಗೆದಾರರ ಸಂಘದವರು ಸರಕಾರವನ್ನು ಟೀಕೆ ಮಾಡಿದ್ದಾರೆ. ನಮ್ಮ ಇಲಾಖೆಯ ವಸತಿ ಶಿಕ್ಷಣ ಸಂಸ್ಥೆಗಳ ಕಟ್ಟಡದ ಹಣ ಪಾವತಿ ಬಾಕಿ ಇದೆ ಎಂದಿದ್ದಾರೆ. ಸುಮಾರು 1,100 ಕೋ.ರೂ. ನೀಡಲು ಬಾಕಿ ಇದೆ. ಕೊರೋನಾದಿಂದ ಉಂಟಾಗಿರುವ ಎರಡು ವರ್ಷಗಳ ಆರ್ಥಿಕ ಕೊರತೆಯಿಂದ ಬಾಕಿ ಇರಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ 700 ಕೋ.ರೂ. ನೀಡಲಾಗಿದೆ. ಈಗಾಗಲೇ 110 ಕೋ.ರೂ.ಗಳ ಎರಡು ಕಂತುಗಳ ಹಣ ಬಿಡುಗಡೆಯಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಯೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಈ ಕುರಿತು ವೆಬ್‌ಸೈಟ್‌ನಲ್ಲಿ ಅನೌನ್ಸ್ ಮಾಡಿದ್ದೇವೆ. ಮೊದಲು ಕೊಟ್ಟವರು, ಕೊನೆಗೆ ಕೊಟ್ಟವರು, ಆಮಿಷ ಒಡ್ಡಿದವರು ಯಾವುದನ್ನೂ ಪರಿಗಣಿಸಿಲ್ಲ. ಯಾರಿಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿದೆ. ಜ್ಯೇಷ್ಠತೆಯ ಪಟ್ಟಿ ತಪ್ಪಿ ಹೋಗಿದ್ದರೆ ಹೇಳಲಿ. ಬಾಕಿ ಹಣವನ್ನು ಮರು ಹೊಂದಾಣಿಕೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸುತ್ತಿದ್ದೇವೆ. ಬೇರೆ ಯಾವುದಾದರೂ ಇಲಾಖೆಯಲ್ಲಿ ಹಣ ಉಳಿದಿದ್ದರೆ ಹೊಂದಾಣಿಕೆ ಮಾಡುತ್ತೇವೆ ಎಂದರು.
ಗೊಂದಲ ಸರಿಯಲ್ಲ:
ನಮ್ಮ ಇಲಾಖೆಯಲ್ಲಿ ಶೇ. 40ರಿಂದ 50ರಷ್ಟು ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಿ, ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಬದಲಾಗಿ ಗೊಂದಲ ಮೂಡಿಸುವುದು ಸರಿಯಲ್ಲ. ಕೆಂಪಣ್ಣ ಸೇರಿದಂತೆ ಉಳಿದವರೆಲ್ಲರೂ ಇದರ ಬಗ್ಗೆ ಆಲೋಚಿಸಲಿ. ಯಾರು ಕಮಿಷನ್ ಕೇಳಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿ. ಕೇವಲ ಪ್ರಚಾರಕ್ಕಾಗಿ ಮಾಡುವುದು, ಸರಕಾರಕ್ಕೆ ಅಪಮಾನ, ಆಗೌರವ ಮಾಡುವ ಉದ್ದೇಶ ಇದರಲ್ಲಿದೆ ಎಂದು ದೂರಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತನಿಖೆಯಲ್ಲಿ ಅವರು ನಿರ್ದೋಷಿ ಎಂದು ಹೇಳಲಾಗಿದೆ. ಈ ಬಗ್ಗೆ ಸಂತೋಷ್ ಕುಟುಂಬದಿಂದ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ನ್ಯಾಯ ಸಿಗುವುದು ವಿಪಕ್ಷ ನಾಯಕರ ಮನೆಯಂಗಳದಲ್ಲಾ? :
ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಬಹಿರಂಗವಾಗಿ ಹೇಳಲಿ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ, ತನಿಖೆಗೆ ಆಗ್ರಹಿಸುವ ಅಧಿಕಾರ ಇದೆ. ಸರಕಾರದ ಮೇಲೆ ಆರೋಪ ಮಾಡುವಾಗ, ವಿಪಕ್ಷಕ್ಕೆ ಹೋಗಿ ದೂರು ಕೊಡುವುದು ಎಷ್ಟು ಸರಿ? ನಿಮಗೆ ನ್ಯಾಯ ಸಿಗುವುದು ಎಲ್ಲಿ ಸಿಗುವುದು? ವಿಪಕ್ಷ ನಾಯಕರ ಮನೆಯಂಗಳದಲ್ಲಾ? ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದಿತ್ತು. ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆಗೆ ಆಗ್ರಹಿಸಬಹುದಿತ್ತು ಅಥವಾ ನಿರ್ದಿಷ್ಟ ವಿಚಾರಗಳಿದ್ದರೆ ದಾಖಲೆ ಸಹಿತ ಆರೋಪಿಸಬಹುದಿತ್ತು. ಸರಕಾರದ ಮೇಲೆ ಈ ರೀತಿ ಗೂಬೆ ಕೂರಿಸುವುದು ಸರಿಯಲ್ಲ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.