M. B. Patil: ಡಿಕೆಶಿ ವಿರುದ್ಧದ ಸಿಬಿಐ ಪ್ರಕರಣ ಕಾನೂನು ಅನ್ವಯವೇ ಹಿಂದಕ್ಕೆ
Team Udayavani, Nov 26, 2023, 2:38 PM IST
ವಿಜಯಪುರ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ವಿರುದ್ಧದ ಸಿಬಿಐ ತನಿಖೆಯನ್ನು ಕಾನೂನು ಅನ್ವಯವೇ ಸರ್ಕಾರ ಸಂಪುಟದಲ್ಲಿ ಚರ್ಚಿಸಿ ಹಿಂಪಡೆದಿದೆ. ಈ ವಿಷಯದಲ್ಲಿ ಸಿಬಿಐ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಲು ನಮ್ಮ ಅಭ್ಯಂತರವಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ, ಕಾನೂನು ಸಲಹೆ ಮೇರೆಗೆ ಸಂಪುಟದಲ್ಲಿ ಚರ್ಚಿಸಿ, ರಾಜಕೀಯ ಪ್ರೇರಿತ ಪ್ರಕರಣವನ್ನು ಹಿಂಪಡೆದಿದೆ ಎಂದರು.
ಡಿ.ಕೆ.ಶಿವಕುಮಾರ ಅವರ ವಿರುದ್ಧ ಸಿಬಿಐ ತನಿಖೆಗೆ ಒಪ್ಪಿಸುವಾಗ ಬಿಜೆಪಿ ಸರ್ಕಾರ ಇದ್ದಾಗ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಅಡ್ವೋಕೇಟ್ ಅವರಿಂದ ಕಾನೂನು ಸಲಹೆ ಪಡೆದಿದ್ದರು. ಆದರೆ ನಮ್ಮ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಪಡೆದೇ ಕಾನೂನು ಅನ್ವಯವೇ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವಿವರಿಸಿದರು.
ರಾಜ್ಯ ಸರ್ಕಾರದದ ವಿರುದ್ಧ ಸಿಬಿಐ ಕಾನೂನು ಸಮರ ನಡೆಸಲು ನಮ್ಮ ಅಭ್ಯಂತರ ಇಲ್ಲ. ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಸಿಬಿಐ ಕಾನೂನು ಸಮರ ನಡೆದಿದೆ ಎಂದ ಸಚಿವ ಎಂ.ಬಿ.ಪಾಟೀಲ್, ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತ್ರ ಕೋರ್ಟ್ ಮೊರೆ ಹೋಗುತ್ತಾರಾ ಎಂದು ಕುಟುಕಿದರು.
ವಿರೋಧ ಪಕ್ಷಗಳ ನಾಯಕರ ಆತ್ಮಸ್ಥೈರ್ಯ ಕುಗ್ಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಸಿಬಿಐ, ಐಟಿ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಶಿವಕುಮಾರ ವಿರುದ್ಧ ರಾಜಕೀಯ ಷಡ್ಯಂತ್ರದಿಂದ ಕೈಗೊಂಡ ನಿರ್ಧಾರವನ್ನು ನಮ್ಮ ಸರ್ಕಾರ ಕಾನೂನಾತ್ಮಕವಾಗಿ ಹಿಂಪಡೆದಿದೆ ಎಂದರು.
ಇಷ್ಟಕ್ಕೂ ಆದಾಯ ಮೀರಿ ಆಸ್ತಿ ಗಳಿಕೆ ವಿಷಯದಲ್ಲಿ ಆದಾಯ ತೆರಿಗೆ ಅಧಿಕಾರಿಗಳ ತಂಡ ಬಿಜೆಪಿ ನಾಯಕರ ಮೇಲೆ ದಾಳಿ ನಡೆಸದೇ, ವಿಪಕ್ಷಗಳ ನಾಯಕರ ಮೇಲೆ ಮಾತ್ರ ದಾಳಿ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದವರ ಮೇಲೆ ಶಾಸಕ ಯತ್ನಾಳ ಅವರಿಗೆ ವಿಶ್ವಾಸ ಇಲ್ಲ ಎನ್ನುವಂತಾಗಿದೆ. ನನಗೆ ತಿಳಿದಂತೆ ಅವರ ಪಕ್ಷದವರು ಹೋರಾಟ ಮಾಡುತ್ತಾರೆ ಎಂದು ಕೊಂಡಿದ್ದೇನೆ. ಯತ್ನಾಳ ಒಬ್ಬರೇ ಮಾಡುತ್ತಾರೆ ಎಂದಾದರೆ ಅವರ ಪಕ್ಷವೇ ಬೇರೆ ಇರಬಹುದು ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಯತ್ನಾಳ, ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಹಲವರು ಬಹಿರಂಗವಾಗಿ ಅಕ್ರೋಶ ಹೊರಹಾಕಿದ್ದಾರೆ. ಇಂಥ ಸ್ಥಿತಿಯಲ್ಲಿ ವಿಜಯೇಂದ್ರ, ವಿಪಕ್ಷದ ನಾಯಕ ಆರ್.ಅಶೋಕ ಅವರು ದೇವಸ್ಥಾನಗಳಿಗೆ ಸುತ್ತುತ್ತಿದ್ದು, ಅದರಿಂದ ಏನೂ ಲಾಭ ಆಗದು ಎಂದರು.
ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ವಿಧಾನಸಭೆ ಚುನಾವಣೆಯಲ್ಲಿ ಸಿದ್ಧರಾಮಯ್ಯ ಅವರ ವಿರುದ್ಧವೂ ಸೇರಿದಂತೆ ಎರಡು ಕಡೆಗಳಲ್ಲಿ ಸ್ಪರ್ಧೆಗೆ ಇಳಿಸಿ ಬಲಿಪಶು ಮಾಡಿದರು ಎಂದು ಕುಟುಕಿದರು.
ಬಿಜೆಪಿ ಅಸಮಾಧಾನಿತರು ನನ್ನೊಂದಿಗೆ ಮಾತ್ರವಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಾರಕಿಹೊಳಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿಗೆ, ನಂತರ ದೇಶ, ರಾಜ್ಯದಲ್ಲಿ ರಾಜಕೀಯವಾಗಿ ಬಹಳ ಬದಲಾವಣೆ ಆಗಲಿದ್ದು, ಕಾದು ನೋಡಿ ಎಂದರು.
ಲಿಂಗಾಯತ ಒಕ್ಕಲಿಗರಿಂದ ಜಾತಿಗಣತಿ ಮಂಡನೆಗೆ ವಿರೋಧ ವಿಷಯಗಳು ಚರ್ಚಿಸಬೇಕಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಮಾತನಾಡಿದ ಬಳಿಕ ಪ್ರತಿಕ್ರಯಿಸುವುದಾಗಿ ಹೇಳಿದರು.
ಜಾತಿ ಗಣತಿಯಿಂದ ಜಾತಿಗಳ ನಡುವೆ ಸಂಘರ್ಷ ಇದ್ದರೂ ಪಕ್ಷದ ವೇದಿಕೆ ಹಾಗೂ ಸರ್ಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸುವ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.