ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ
ದೂರುದಾರ ಚಲುವರಾಜು ಧ್ವನಿ ಮಾದರಿ ಸಹ ಎಫ್ಎಸ್‌ಎಲ್‌ಗೆ ರವಾನೆ ಮತ್ತೆರಡು ಆಡಿಯೋ ಇದೆ: ದೂರುದಾರನಿಂದ ಬಾಂಬ್
Team Udayavani, Sep 17, 2024, 6:35 AM IST
ಬೆಂಗಳೂರು: ಜಾತಿ ನಿಂದನೆ ಆರೋಪದಡಿ ಬಂಧನಕ್ಕೊಳಗಾಗಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಎಂ. ಮುನಿರತ್ನ ಅವರನ್ನು ರವಿವಾರವೂ ತೀವ್ರ ವಿಚಾರಣೆಗೊಳಪಡಿಸಲಾಗಿದ್ದು ಆಗಲೂ ನಾನು ಯಾರನ್ನೂ ನಿಂದಿಸಿಲ್ಲ. ಹಲ್ಲೆಯೂ ನಡೆಸಿಲ್ಲ. ಉದ್ದೇಶಪೂರ್ವಕ ರಾಜಕೀಯ ಷಡ್ಯಂತ್ರದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಪುನರುಚ್ಚರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ದೂರುದಾರ ಚಲುವರಾಜು ಅವರ ಧ್ವನಿ ಮಾದರಿಯನ್ನು ಪಡೆದಿರುವ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು 2ನೇ ಬಾರಿಗೆ ಮುನಿರತ್ನ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದಾರೆ.
ಅಶೋಕನಗರ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಶಾಸಕರು ಎರಡು ದಿನಗಳಿಂದ ಒಂದೇ ರೀತಿಯ ಉತ್ತರ ನೀಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಎಲ್ಲ ಜಾತಿಯವರು ಇದ್ದು ಎಲ್ಲರೂ ಮತದಾರರೇ. ನಾನೇಕೆ ಅವರ ಜಾತಿ ಬಗ್ಗೆ ನಿಂದಿಸಲಿ. ಇದೊಂದು ದೊಡ್ಡ ಷಡ್ಯಂತ್ರ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಬ್ಬರ ಧ್ವನಿ ಸಂಗ್ರಹ
ಶಾಸಕರು ಮಾತ್ರವಲ್ಲದೆ, ದೂರುದಾರ ಚಲುವರಾಜು ಅವರ ಧ್ವನಿ ಮಾದರಿಯನ್ನು ಎಫ್ಎಸ್‌ಎಲ್ ತಜ್ಞರು ಪಡೆದುಕೊಂಡಿದ್ದು ವೈರಲ್ ಆಗಿರುವ ಆಡಿಯೋದಲ್ಲಿರುವ ಧ್ವನಿಗಳಿಗೂ ಈ ಇಬ್ಬರ ಧ್ವನಿಗಳಿಗೂ ಹೋಲಿಕೆ ಆಗುತ್ತದೆಯೇ? ಎಂಬುದನ್ನು ಪರಿಶೀಲಿಸಲಾಗುತ್ತದೆ. ಆಡಿಯೋ ಮೂಲ ತುಣುಕನ್ನು ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರ ಎದುರು ಚಲುವರಾಜು ಅಳಲು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎದುರು ಇಡೀ ಪ್ರಕರಣದ ಕುರಿತು ಮಾಹಿತಿ ನೀಡಿದ ಗುತ್ತಿಗೆದಾರ ಚಲುವರಾಜು, ಶಾಸಕ ಮುನಿರತ್ನ ಹಣಕ್ಕಾಗಿ ಹಿಂಸೆ ಕೊಟ್ಟಿದ್ದಾರೆ. ಕೊಠಡಿಯಲ್ಲಿ ಕೂಡಿಹಾಕಿ ಹಿಂಸೆ ಕೊಟ್ಟಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹೊಡೆದು ಹಾಕಿದ್ದು ಯಾರು ಗೊತ್ತಾ?. ರೇಣುಕಾಸ್ವಾಮಿಯ ಕೊಂದಿದ್ದು ನನ್ನ ತಂಗಿ ಮಗ ಅಂದಿದ್ದರು. ಅಂದೇ ಲೋಕಾಯುಕ್ತಕ್ಕೆ ದೂರು ನೀಡಿದ್ದೆ ಎಂಬುದು ಸೇರಿ ಘಟನೆಯ ಪೂರ್ಣ ವಿವರವನ್ನು ಸಚಿವರಿಗೆ ಗುತ್ತಿಗೆದಾರ ಚಲುರಾಜು ತಿಳಿಸಿದ್ದಾರೆ. ಸಚಿವರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚಲುವರಾಜು, ಆಡಿಯೋ ವಿಚಾರದಲ್ಲಿ ನಿಜ ಗೊತ್ತಾಬೇಕು ಅಂದರೆ, ತಿರುಪತಿಗೆ ಬಂದು ಆಣೆ ಪ್ರಮಾಣ ಮಾಡಲಿ. ಆಡಿಯೋದಲ್ಲಿ ಯಾರ ದನಿ ಅನ್ನೊದು ಅವರು ತಿರುಪತಿಯಲ್ಲಿ ಹೇಳಲಿ ಎಂದು ಸವಾಲು ಹಾಕಿದರು. ನಾನು ಮತ್ತು ನನ್ನ ಕುಟುಂಬ ಭಯಭೀತರಾಗಿದ್ದು ನಮಗೆ ರಕ್ಷಣೆ ಬೇಕು ಎಂದು ಇದೇ ವೇಳೆ ಸಚಿವರಿಗೆ ಮನವಿ ಮಾಡಿದರು.
ಇಂದು ಕೋರ್ಟ್‌ಗೆ ಹಾಜರು
ಮುನಿರತ್ನ ಪೊಲೀಸ್ ಕಸ್ಟಡಿ ಅವಧಿ ಮಂಗಳವಾರ ಮುಕ್ತಾಯವಾಗಲಿದ್ದು ಮಧ್ಯಾಹ್ನದ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೊಮ್ಮೆ ವಶಕ್ಕೆ ಪಡೆಯಲಾಗುತ್ತದೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆರಡು ಆಡಿಯೋಗಳು ವೈರಲ್ ಆಗಿವೆ. ಜತೆಗೆ ದೂರುದಾರ ಚಲುವರಾಜು, ತನ್ನ ಬಳಿ ಮತ್ತೆರಡು ಆಡಿಯೋಗಳಿದ್ದು ಅವುಗ ಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದು ಅವುಗಳ ನೈಜತೆ ಯನ್ನು ಪರಿಶೀಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
ಮುನಿರತ್ನ ಬೆಂಬಲಿಗರಿಂದ ಹನುಮಂತರಾಯಪ್ಪ ಆಡಿಯೋ
ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮಧ್ಯೆ ಮಾತುಕತೆ ನಡೆದಿದೆ ಎನ್ನಲಾದ ಆಡಿಯೋವನ್ನು ಮುನಿರತ್ನ ಬೆಂಬಲಿಗರು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ನಮ್ಮ ಶಾಸಕ ಮುನಿರತ್ನ ವಿರುದ್ಧ ದೂರು ನೀಡಲಾಗಿದೆ ಎಂದೂ ಆರೋಪಿಸಿದ್ದಾರೆ.
ಆಡಿಯೋದಲ್ಲಿ, ಹೇ ಚಲುವರಾಜು ನಿನ್ನೆ ಕರೆ ಮಾಡಿದ್ದರೂ ತೆಗೆದುಕೊಂಡಿಲ್ಲ. ಯಾವುದೋ ಸಣ್ಣ ವಿಷಯಕ್ಕೆ ಹೋಗಿ ದೂರು ನೀಡಿದ್ದೀಯಾ? ವೇಲು ಹುಡುಗರಿಗೆ ಹೇಳಿ ಸರಿ ಪಡಿಸುತ್ತೀನಿ. ಬಾ… ಇಲ್ಲಿ. ಡಿಸಿಪಿ ಹಾಗೂ ಪೊಲೀಸ್ ಕಮಿಷನರ್ ಬಳಿಗೆ ಹೋಗುವುದು ಬೇಡ. ಸರಕಾರ ನಮ್ಮದೇ ಇದೆ. ನೀನು ನಮ್ಮ ಹುಡುಗ, ನಮ್ಮ ತಾಲೂಕಿನವನು’ ಎಂದು ಹನುಮಂತರಾಯಪ್ಪ ಹೇಳಿರುವುದು ಒಂದು ಆಡಿಯೋದಲ್ಲಿದೆ.
ಇನ್ನೊಂದರಲ್ಲಿ, ಚಲುವರಾಜು ಕಥೆ ಹೇಳಿಕೊಂಡು ಓಡಾಡುತ್ತೀಯಾ. ನಾನೇ ಬಿಬಿಎಂಪಿಗೆ ಹೋಗಿದ್ದೆ. ನಿನಗೆ ತೊಂದರೆ ಕೊಡದಂತೆ ಹೇಳಿದ್ದೀನಿ. ಸೋಮವಾರದೊಳಗೆ ಬಂದು ಸರಿ ಪಡಿಸಿಕೋ, ಇಲ್ಲದಿದ್ದರೆ ಗುತ್ತಿಗೆಯನ್ನು ರದ್ದುಪಡಿಸಲು ಹೇಳ್ತೀನಿ. ಕೊಬ್ಬು ಮಾಡಿಕೊಂಡು ಓಡಾಟ ನಡೆಸಬೇಡ ಎಂದು ಹನುಮಂತರಾಯಪ್ಪ ಮತ್ತೂಂದು ಆಡಿಯೋದಲ್ಲಿ ಹೇಳುತ್ತಾರೆ.
ಮುನಿರತ್ನಗೆ ಎದೆ ನೋವು
ಶಾಸಕ ಮುನಿರತ್ನ ಅವರನ್ನು ಅಶೋಕನಗರ ಠಾಣೆಯಿಂದ ಸಂಜೆ 4 ಗಂಟೆ ಸುಮಾರಿಗೆ ಆರೋಗ್ಯ ತಪಾಸಣೆಗಾಗಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸಂಜೆ 7ಕ್ಕೆ ಮತ್ತೆ ಅಶೋಕನಗರ ಠಾಣೆಗೆ ಕರೆದೊಯ್ಯಲಾಗಿತ್ತು. ಆದರೆ ರಾತ್ರಿ 8ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಡಿಯೋದಲ್ಲಿರುವುದು ನನ್ನ
ಧ್ವನಿ: ಹನುಮಂತರಾಯಪ್ಪ
ಮತ್ತೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪ, ಆಡಿಯೋದಲ್ಲಿ ಇರುವುದು ನನ್ನದೇ ಧ್ವನಿ. ನನ್ನ ಧ್ವನಿ ಅಲ್ಲ ಎಂದು ಈಗ ಹೇಳುವುದಿಲ್ಲ. ಚಲುವರಾಜು ನಮ್ಮ ಸಮಾಜಕ್ಕೆ ಸೇರಿದ ವ್ಯಕ್ತಿ. ನನ್ನ ತಾಲೂಕಿನವರು. ಹೀಗಾಗಿ ಸಹಾಯ ಮಾಡುತ್ತೇನೆ ಬಾ ಎಂದು ಕರೆದಿದ್ದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.