ಮೋದಿ ಅಬ್ಬರಕೆ ಮಗುಚಿತೇ ಮೈತ್ರಿ ಹಾಯಿದೋಣಿ?
ಉದಯವಾಣಿ ವಿಶ್ಲೇಷಣೆ
Team Udayavani, May 24, 2019, 3:00 AM IST
ಬೆಂಗಳೂರು: ಮೋದಿ ಕಡಲಬ್ಬರದ ಮುಂದೆ ರಾಜ್ಯದ ಮೈತ್ರಿ ಪಕ್ಷಗಳ ದೋಣಿ ಆಯ ತಪ್ಪಿ ಅಪಾಯದ ಅಂಚಿನಲ್ಲಿದೆ. ಪರಸ್ಪರ ಕೆಸರೆರಚಾಟ ದಲ್ಲೇ ನಿರತರಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್, ಮೈತ್ರಿ ದೋಣಿಗೆ ತಾವೇ ಕೊರೆದ ತೂತುಗಳಲ್ಲಿ ಸೋಲಿನ ನೀರು ತುಂಬುತ್ತಿರುವಾಗಲೇ ಮೋದಿ ಅಬ್ಬರ ದೋಣಿಯನ್ನೇ ಮಗುಚುವಂತೆ ಮಾಡಿದೆ.
ರಾಜ್ಯದಲ್ಲಿ ಮೈತ್ರಿಗೆ ಬರೀ ಎರಡೇ ಕ್ಷೇತ್ರಗಳು ಒಲಿದಿದ್ದು, ಮಗುಚಿ ಬಿದ್ದಿರುವ ಮೈತ್ರಿ ಸರ್ಕಾರದ ದೋಣಿಯನ್ನು ಕಾಂಗ್ರೆಸ್-ಜೆಡಿಎಸ್ ಮತ್ತೆ ತಹಬದಿಗೆ ತರುತ್ತದೆಯೇ? ಸದ್ಯಕ್ಕಂತೂ ಮೋದಿ ಅಬ್ಬರದಲ್ಲಿ ರಾಜ್ಯದ ಮೈತ್ರಿ ಸರ್ಕಾರ ಜೀವಂತ ಇರುವ ಲಕ್ಷಣ ಕಾಣುತ್ತಿಲ್ಲ.
ಬೆಂ.ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಮತ್ತು ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಮೈತ್ರಿ ಸಾಧನೆಯಂತೂ ಅಲ್ಲವೇ ಅಲ್ಲ. ಎರಡಕ್ಕೂ ವೈಯ ಕ್ತಿಕ ವರ್ಚಸ್ಸು ಮತ್ತು ತಳಮಟ್ಟದಲ್ಲಿ ಆ ಅಭ್ಯರ್ಥಿ ಗಳು ಹೊಂದಿದ್ದ ಜನಸಂಪರ್ಕ ಕಾರಣವಾಗಿದೆ. ಆದರೆ, ಉಳಿದೆಡೆ ಮೈತ್ರಿ ರಾಜಕೀಯದಲ್ಲಿ ನಡೆದ ಒಳ ಏಟುಗಳು, ಜಾತಿ ಸಮೀಕರಣ, ಪರಸ್ಪರ ಕಾಲೆಳೆದಾಟ ಮೈತ್ರಿ ದೋಣಿಗೆ ತೂತುಗಳನ್ನು ಕೊರೆದಿತ್ತು. ಆದರೆ, ಮೋದಿ ಸಿಡಿಲಬ್ಬರ ಮೈತ್ರಿಗೆ ಮರ್ಮಾಘಾತ ನೀಡಿ ಕರ್ನಾಟಕದ ರಾಜಕೀಯ ಚರಿತ್ರೆಗೆ ಹೊಸ ಭಾಷ್ಯ ಬರೆಸಿತು.
ವಿಶೇಷ ಎಂದರೆ, ಲೋಕಸಭಾ ಚುನಾವಣಾ ಆಘಾತ ಅನುಭವಿಸಿದ ದಿನ ಮೈತ್ರಿ ಸರ್ಕಾರಕ್ಕೆ ಪೂರ್ತಿ ಒಂದು ವರ್ಷ. ವರ್ಷಾಚರಣೆ ಖುಷಿ ಅನುಭವಿಸುವ ಬದಲು ಸೋಲಿನ ಸರಮಾಲೆ ಯನ್ನು ಸರ್ಕಾರ ಎದುರಿಸಿದೆ. ಸಿಎಂ ಕುಮಾರ ಸ್ವಾಮಿ, ಇನ್ನೇನು ಮುಳುಗಲಿರುವ ಸರ್ಕಾರದ ದೋಣಿಯನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದು ಈಗ ಯಕ್ಷಪ್ರಶ್ನೆ.
ಒಟ್ಟಿನಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ನಿರ್ಧಾರಗಳಿಗೆ ಹೇಗೆ ಬೆಲೆ ತೆರಬೇಕಾಯಿತು ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕಾದ ಸಂದರ್ಭ ಬಂದಿದೆ. ಒಂದು ಹಂತದಲ್ಲಿ 10 ಕ್ಷೇತ್ರಗಳಲ್ಲಿ ಪಾರಮ್ಯ ಹೊಂದಿದ್ದ ಕಾಂಗ್ರೆಸ್‌ಗೆ ಮೈತ್ರಿ ರಾಜಕೀಯ ನೀಡಿರುವ ಏಟು ಸದ್ಯಕ್ಕೆ ಮೇಲೇಳಲಾರದ ಸ್ಥಿತಿಯನ್ನು ತಂದೊಡ್ಡಿದೆ.
ವರ್ಷದ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜತೆ ಒಲ್ಲದ ಮದುವೆ ಮಾಡಿಕೊಂಡಿತು. ಬಿಜೆಪಿಯಿಂದ ಸತತ “ಅಪವಿತ್ರ ಮೈತ್ರಿ’ ಎಂಬ ಹೀಗಳಿಕೆ ಎದುರಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ವರ್ತನೆ ಆ ಆರೋಪಕ್ಕೆ ಅಪವಾದವಾಗಲಿಲ್ಲ. ಬದಲಿಗೆ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಸಿಎಂ ಎಚ್‌ಡಿಕೆ ನಡುವಿನ ನೇರ ಮತ್ತು ಪರೋಕ್ಷ ಮಾತಿನ ಸಮರ, ಡಿ.ಕೆ. ಶಿವಕುಮಾರ್ ಅವರಿಂದ ಉಂಟಾದ “ಬೆಳಗಾವಿ ಸಮರ’ ಹಾಗೂ ಅದರಿಂದ ವಿಚಲಿತರಾದ ರಮೇಶ್ ಜಾರಕಿಹೊಳಿ ಬಂಡಾಯ, ಮೈತ್ರಿ ಶಾಸಕರ ಎಚ್‌ಡಿಕೆ-ಸಿದ್ದು ಪರ-ವಿರುದ್ಧ ಹೇಳಿಕೆಗಳು ಹೀಗೆ, ಒಂದೇ ಎರಡೇ? ಎಲ್ಲವೂ ರಾಜ್ಯದ ಮೈತ್ರಿ ಅಪವಿತ್ರ ಎನ್ನುವುದಕ್ಕೆ ಪುರಾವೆ ನೀಡಿದವು.
ಜೆಡಿಎಸ್‌ನ ಸಾ.ರಾ. ಮಹೇಶ್, ಡಿ.ಸಿ. ತಮ್ಮಣ್ಣ, ಎಚ್.ಡಿ.ರೇವಣ್ಣ, ಕಾಂಗ್ರೆಸ್‌ನ ಎಸ್.ಟಿ. ಸೋಮ ಶೇಖರ್, ಚೆಲುವರಾಯಸ್ವಾಮಿ, ರಮೇಶ್ ಜಾರಕಿಹೊಳಿ ಮತ್ತಿತರರ ವೈಯಕ್ತಿಕ ಹಿತಾಸಕ್ತಿ ಹೇಳಿಕೆಗಳು, ಆ ಹೇಳಿಕೆಗಳ ಆಧಾರದಲ್ಲಿ ಉನ್ನತ ನಾಯಕರ ಒಣಪ್ರತಿಷ್ಠೆ ನಡವಳಿಕೆ ಮೈತ್ರಿಗೆ ಗಂಡಾಂತರ ತಂದೊಡ್ಡಿತು. ಅದೂ ಅಲ್ಲದೆ ಇಬ್ಬಣ ಗಳ ನಾಯಕರ “ಟೇಕನ್ ಫಾರ್ ಗ್ರಾಂಟೆಡ್’ ಮನ ಸ್ಥಿತಿ ಪ್ರಮುಖ ನಾಯಕರ ಸೋಲಿಗೆ ಕಾರಣವಾಗಿದೆ.
ಕೋಲಾರ, ತುಮಕೂರುಗಳಲ್ಲಿ ಉಭಯ ಪಕ್ಷಗಳ ನಾಯಕರು ನೀಡಿದ ಒಳ ಏಟುಗಳೂ ಕೆ.ಎಚ್. ಮುನಿಯಪ್ಪ, ಎಚ್.ಡಿ. ದೇವೇಗೌಡರ ಸೋಲಿನ ಹಿಂದಿವೆ ಎಂರು ವಿಶ್ಲೇಷಿಸಲಾಗುತ್ತಿದೆ. ಕೋಲಾರ ದಲ್ಲಿ ಕಾಂಗ್ರೆಸ್ ಶಾಸಕರೇ ಮುನಿಯಪ್ಪ ಬದಲಿಗೆ ಖರ್ಗೆ ಅವರನ್ನು ಅಭ್ಯರ್ಥಿ ಮಾಡಬೇಕೆಂದು ಹಠ ಹಿಡಿದಿದ್ದೇ ಅಲ್ಲದೆ, ಮುನಿಯಪ್ಪ ಅವರಿಗೆ ಕಾಂಗ್ರೆಸ್ ಶಾಸಕರೇ ಚುನಾವಣಾ ಅಸಹಕಾರ ನೀಡಿದ್ದು, ಸೋಲಿನ ಕಾರಣಗಳಲ್ಲಿ ಒಂದಾಗಿದೆ.
ಇನ್ನೊಂದೆಡೆ ಬಿಜೆಪಿ ಎಸೆದ “ಆಪರೇಷನ್’ ಗಾಳದ ಗಾಯಕ್ಕೆ ಮುಲಾಮು ಹಚ್ಚಿಕೊಳ್ಳುವುದರ ಜತೆಗೆ ಸ್ವಯಂಕೃತ ಹೆಚ್ಚುವರಿ ಗಾಯಗಳಿಂದ ಕಂಗೆಟ್ಟ ದೋಸ್ತಿ ಬೆಸುಗೆ ಸಡಿಲಗೊಂಡು ದಿನಗಳೇ ಆಗಿವೆ. ಈಗ ಮೋದಿ ಅಬ್ಬರದಲ್ಲಿ ಈ ಬೆಸುಗೆಗೆ ತಾರ್ಕಿಕ ಅಂತ್ಯ ಯಾವುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲಕ್ಕಿಂತಲೂ ಪ್ರಮುಖವಾಗಿ ಕುಟುಂಬ ರಾಜಕೀಯವನ್ನು ರಾಜ್ಯದ ಜನ ಧಿಕ್ಕರಿಸಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖೀಸಬೇಕಾಗಿದೆ. ದೇವೇಗೌಡರು ತಮ್ಮ ಕುಟುಂಬ ಪ್ರೀತಿಯನ್ನು ಅತಿಯಾಗಿ ಮೆರೆದರು ಎಂಬುದು ಅವರ ಜತೆಗೆ ಮೊಮ್ಮಕ್ಕಳೂ ಸ್ಪರ್ಧಿಸಿದಾಗ ಚರ್ಚೆಗೆ ಬಂತು. ಮಾಜಿ ಪ್ರಧಾನಿಯ ಮಗ ಮುಖ್ಯಮಂತ್ರಿ, ಇನ್ನೊಬ್ಬ ಮಂತ್ರಿ, ಸೊಸೆ ಶಾಸಕಿ, ಇನ್ನೊಬ್ಬ ಸೊಸೆ ಹಾಸನ ರಾಜಕೀಯದಲ್ಲಿ ಸಕ್ರಿಯರಾಗಿರುವ ಜತೆಗೆ ಮೊಮ್ಮಕ್ಕಳನ್ನೂ ಸ್ಪರ್ಧೆಗೆ ಇಳಿಸಿರುವುದು ದೇವೇಗೌಡರು ನಂಬಿಕೊಂಡಿದ್ದ ಒಕ್ಕಲಿಗ ಮತದಾರರಲ್ಲಿ ಮಾತ್ರವಲ್ಲ, ಎಲ್ಲರಲ್ಲೂ “ಅಸಹ್ಯ’ ಮನೋಭಾವ ಸೃಷ್ಟಿಸಿದ್ದು ಸುಳ್ಳಲ್ಲ.
ದೇವೇಗೌಡರು ಈ ಎಲ್ಲಾ ಅಂಶಗಳನ್ನು ಪರಿಗಣಿ ಸದೇ ಹೋದುದು ಈಗ ದುಬಾರಿಯಾಗಿದೆ. ಹಾಗೇ ಗೆಲುವು ಖಚಿತ ಎಂದೇ ಭಾವಿಸಿದ್ದ ಖರ್ಗೆ ಸೋಲಿಗೂ ಕುಟುಂಬ ರಾಜಕೀಯ ಕಾರಣವಾಗಿದೆ. (ಆದರೆ, ಕಲಬುರಗಿಯಲ್ಲಿ ಗೆದ್ದ ಉಮೇಶ್ ಜಾಧವ್ ಮತ್ತು ಉಪಚುನಾವಣೆಯಲ್ಲಿ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಅವಿನಾಶ್ ಜಾಧವ್ ಕುಟುಂಬವನ್ನು ಮತದಾರ ಒಪ್ಪಿಕೊಂಡಿರುವುದೂ ಸತ್ಯ.)
ಖರ್ಗೆ ಮತ್ತು ದೇವೇಗೌಡರ ಸೋಲು ಬಹುತೇಕ ಅವರ ರಾಜಕೀಯ ಭವಿಷ್ಯವನ್ನು ಕ್ಷೀಣ ಗೊಳಿಸಿದೆ. ರಾಜ್ಯದ ಮಟ್ಟಿಗೆ ಅದು ನಷ್ಟ ಆಗಿದ್ದರು ಕೂಡ, ಆ ಇಬ್ಬರೂ ಬದಲಾದ ರಾಜಕೀಯ ಸ್ಥಿತ್ಯಂತ ರಗಳು, ಯುವ ವಿದ್ಯಾವಂತ ಮತದಾರರ ಮನಸ್ಥಿತಿ ಗಳನ್ನು ಸರಿಯಾಗಿ ಅರ್ಥೈಸದೇ ಹೋದುದು ಖರ್ಗೆ-ಗೌಡರ ಸೋಲಿನಲ್ಲಿ ಪ್ರಮುಖವಾಗಿವೆ.
ಒಂದು ಕಾಲದಲ್ಲಿ ಕರಾವಳಿ ಮಾತ್ರ ಬಿಜೆಪಿ ಮುಷ್ಠಿಯಲ್ಲಿತ್ತು ಎಂಬ ಮಾತಿತ್ತು. ಈಗ, ಉತ್ತರ ಕರ್ನಾಟಕ ಜಿಲ್ಲೆಗಳು ಬಿಜೆಪಿಗೆ ಪ್ರಧಾನ ನೆಲೆಗಟ್ಟನ್ನು ಕಟ್ಟಿಸಿಕೊಟ್ಟಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಿವಾದದ ಅಲೆ ಎಬ್ಬಿಸಿದ್ದ ಲಿಂಗಾಯತ ಧರ್ಮ ವಿಚಾರ, ಪರಿಶಿಷ್ಟ ಜಾತಿ- ವರ್ಗಗಳ ಮತದಾರರಿಗೆ ಕಾಂಗ್ರೆಸ್, ಜೆಡಿಎಸ್ ನಾಯಕರ ಮೇಲೆ ಎದ್ದ ಅವಿಶ್ವಾಸ ಇವೆಲ್ಲವೂ ಮೋದಿ ಅಲೆಗೆ ರಹದಾರಿ ಕಲ್ಪಿಸಿಕೊಟ್ಟಿತು.
* ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.