![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
![Yakshagana-Academy](https://www.udayavani.com/wp-content/uploads/2025/02/Yakshagana-Academy-415x249.jpg)
Team Udayavani, Feb 22, 2018, 6:00 AM IST
ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಹಲ್ಲೆ ಪ್ರಕರಣದ ಆರೋಪಿಗಳಾದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಸೇರಿ ಏಳು ಜನ ಆರೋಪಿಗಳನ್ನು ಮಾ.7ರ ವರೆಗೆ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯಗೊಂಡಿದ್ದರಿಂದ ಬುಧವಾರ ಸಂಜೆ ನ್ಯಾಯಾಲಯಕ್ಕೆ ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಹಾಜರುಪಡಿಸಿದಾಗ 8ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತು. ನಂತರ ಏಳು ಮಂದಿ ಆರೋಪಿಗಳನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಬೆಂಗಳೂರು ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದರು.
ವಿದ್ವತ್ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಹಿರಿಯ ವಕೀಲ ಶ್ಯಾಮ್‌ಸುಂದರ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಹಲ್ಲೆ ನಡೆದ ಬಗ್ಗೆ ವಿವರ ನೀಡಿದ ಅವರು “ಫೆ.17ರಂದು ವಿದ್ವತ್ ಫರ್ಜಿ ಕೆಫೆಗೆ ಊಟಕ್ಕೆ ಹೋಗಿದ್ದರು. ಇದೇ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದ ಆರೋಪಿಗಳು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಹಿಂಬಾಲಿಸಿ ಹೋಟೆಲ್‌ನ ಪಾರ್ಕಿಂಗ್ ಸ್ಥಳದಲ್ಲಿಯೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೇ, ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ವಿದ್ವತ್‌ನನ್ನು ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ತಿಳಿದ ಮೊಹಮ್ಮದ್ ತನ್ನ ಸಹಚರರನ್ನು ಆಸ್ಪತ್ರೆಗೆ ಕರೆದೊಯ್ದು ಕೊಲೆಗೆ ಯತ್ನಿಸಿದ್ದಾನೆ. ಜತೆಗೆ ವಿದ್ವತ್ ಸಹೋದರನಿಗೂ ಜೀವ ಬೆದರಿಕೆ ಹಾಕಿದ್ದಾನೆ. ಆಸ್ಪತ್ರೆಗೆ ಮೊಹಮ್ಮದ್ ಹೋಗುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದರು.
ಆರಂಭದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿ ಐಪಿಸಿ ಸೆಕ್ಷನ್ 307 ರಡಿ ಪ್ರಕರಣ ದಾಖಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಆರೋಪದ ಮೇಲೆ ಇನ್ಸ್‌ಪೆಕ್ಟರ್ ವಿಜಯ್ ಹಡಗಲಿಯನ್ನು ಅಮಾನತುಗೊಳಿಸಿ, ಎಸಿಪಿಯನ್ನು ವರ್ಗಾವಣೆ ಮಾಡಲಾಗಿದೆ. ಆನಂತರ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೋರ್ಟ್ ಅನುಮತಿ ಪಡೆದು ಕೊಲೆ ಯತ್ನ (307) ಸೆಕ್ಷನ್ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿದ್ದಾರೆಂದು ಕೋರ್ಟ್‌ಗೆ ತಿಳಿಸಿದರು.
ವಾದ, ಪ್ರತಿವಾದ:
ಉದ್ಯಮಿ ಲೋಕನಾಥ್‌ಗೆ ಇಬ್ಬರು ಪುತ್ರರು. ವಿದ್ವತ್ ಹಾಗೂ ಈತನ ಸಹೋದರ ಸಾತ್ವಿಕ್. ಇಬ್ಬರ ನಡವಳಿಕೆ ಉತ್ತಮವಾಗಿದೆ. ಇಂತವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದರಿಂದ ಇಡೀ ಕುಟುಂಬ, ವಿದ್ವತ್ ಸ್ನೇಹ ಬಳಗ ಆತಂಕಕ್ಕೊಳಗಾಗಿದೆ. ಇದೊಂದು ನಿರ್ಭಯಾ ಪ್ರಕರಣದಂತಾಗಿದ್ದು, ಗಾಯಾಳು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ವಾದ ಮಂಡಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೊಹಮ್ಮದ್ ಪರ ವಕೀಲ ಉಸ್ಮಾನ್, ನನ್ನ ಕಕ್ಷಿದಾರ ಮೊಹಮ್ಮದ್‌ಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಎಫ್ಐಆರ್‌ನಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿರಲಿಲ್ಲ. ವಿರೋಧ ಪಕ್ಷಗಳ ರಾಜಕೀಯ ಒತ್ತಡದಿಂದ ಪೊಲೀಸರು ಅನಂತರ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿದೆ ಎಂದು ವಾದಿಸಿದರು.
ಇದಕ್ಕೆ ಆಕ್ಷೇಪಿಸಿದ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್, ವಿದ್ವತ್ ದೇಹದ ಹಲವು ಭಾಗಗಳು ಗಂಭೀರವಾಗಿ ಗಾಯಗೊಂಡಿವೆ. ದೇಹದ 7 ಮೂಳೆಗಳು ಮುರಿದಿವೆ. ವೈದ್ಯರು ಕೂಡ ವರದಿ ನೀಡಿದ್ದಾರೆ. ಈ ರೀತಿಯ ಹಲ್ಲೆ ಕೊಲೆ ಮಾಡುವ ಉದ್ದೇಶವಲ್ಲದೇ ಮತ್ತೇನು? ಎಂದು ಪ್ರಶ್ನಿಸಿದರು.
ಇದೇ ವೇಳೆ ಸರ್ಕಾರಿ ಅಭಿಯೋಜಕ ಅರುಣ್, ಪ್ರಕರಣ ಗಂಭೀರ ಸ್ವರೂಪವಾಗಿದ್ದು, ತನಿಖಾ ಹಂತದಲ್ಲಿದೆ. ಹೀಗಾಗಿ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಮನವಿ ಮಾಡಿದರು. ಇದನ್ನು ಪುರಸ್ಕರಿಸಿದ ನ್ಯಾಯಾಧೀಶರು ಮಾ.7ರವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದರು.
ಗೃಹ ಸಚಿವಾಲಯಕ್ಕೆ ಪತ್ರ:
ವಿದ್ವತ್ ತಂದೆ ಲೋಕನಾಥ್ ಹಿರಿಯ ವಕೀಲ ಶ್ಯಾಮ್‌ಸುಂದರ್ ಅವರನ್ನು ಈ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡುವಂತೆ ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರಗೆ ಪತ್ರ ಬರೆದಿದ್ದರು. ಇದನ್ನು ಸರ್ಕಾರ ಪುರಸ್ಕರಿಸಿದ್ದು, ಶ್ಯಾಮ್ ಸುಂದರ್ ನೇಮಕಕ್ಕೆ ಅಸ್ತು ಎಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದರ ಬೆನ್ನಲ್ಲೇ ವಕೀಲ ಶ್ಯಾಮ್‌ಸುಂದರ್, ಸರ್ಕಾರ ತಮ್ಮನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಲು ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಶುರುವಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದು ವಾದ ಮಂಡಿಸಿದರು.
ವಿದ್ವತ್ ಆರೋಗ್ಯ ವಿಚಾರಿಸಿದ ಗಣ್ಯರು:
ತೀವ್ರ ಹಲ್ಲೆಯಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ವತ್‌ನನ್ನು ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಬಿಎನ್‌ಎಸ್ ರೆಡ್ಡಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಶಾಸಕ ಹ್ಯಾರಿಸ್‌ರಿಂದ ಸೂಚನೆ:
ಮೊಹಮ್ಮದ್ ಪೊಲೀಸರಿಗೆ ಶರಣಾದ ದಿನದಿಂದಲೇ ಆತನ ಬೆಂಬಲಿಗರು ಆಸ್ಪತ್ರೆ, ಕೋರ್ಟ್, ಪೊಲೀಸ್ ಠಾಣೆ ಸುತ್ತ-ಮುತ್ತ ಹಿಂಬಾಲಿಸುತ್ತಿದ್ದಾರೆ. ಅಲ್ಲದೇ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ, ಮೊಹಮ್ಮದ್ ಪರ ಜೈಕಾರ ಹಾಕಿದರು. ಇದರಿಂದ ತೀವ್ರ ಮುಂಜುಗರಕ್ಕೊಳಗಾದ ಶಾಸಕ ಹ್ಯಾರಿಸ್, ಆತನನ್ನು ಹಿಂಬಾಲಿಸದಂತೆ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಆತನ ಹಿಂಬಾಲಿಸುವಾಗ ಅಹಿತಕರ ಘಟನೆ ನಡೆದರೆ ಅದು ನನ್ನ ಘನತೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಆತನ ಹಿಂದೆ ಹೋಗಬೇಡಿ ಎಂದು ತಮ್ಮ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಫೆ.23ಕ್ಕೆ ಜಾಮೀನು ಅರ್ಜಿ ವಿಚಾರಣೆ
ಪ್ರಕರಣ ಸಂಬಂಧ ಆರೋಪಿ ಮೊಹಮ್ಮದ್ ಪರ ವಕೀಲ ಉಸ್ಮಾನ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಫೆ.23ಕ್ಕೆ ವಿಚಾರಣೆ ಮುಂದೂಡಿದೆ.
ಕೋರ್ಟ್‌ನಲ್ಲಿ ಮೊಹಮ್ಮದ್ ದರ್ಪ
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮ್ ಸುಂದರ್ ವಾದ ಮಂಡಿಸುವ ವೇಳೆ ಆರೋಪಿ ಮೊಹಮ್ಮದ್ ಗುರಾಯಿಸುತ್ತಿದ್ದ ದೃಶ್ಯ ಕಂಡುಬಂದಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ವಕೀಲ ಶ್ಯಾಮ್ ಸುಂದರ್, “ನಾನು ವಾದ ಮಂಡಿಸುತ್ತಿರುವ ವೇಳೆ ಆರೋಪಿ ಮೊಹಮ್ಮದ್ ನನ್ನನ್ನು ಗುರಾಯಿಸಿದ್ದನ್ನು ಗಮನಿಸಿದೆ. ಆದರೆ, ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಇನ್ನು ಕೋರ್ಟ್ ಹಾಲ್‌ನಿಂದ ಹೊರಬರುವಾಗ ಆತನ ಕೆಲ ಬೆಂಬಲಿಗರು, ನಮ್ಮ ಲಿಸ್ಟ್‌ನಲ್ಲಿ ಇವನೊಬ್ಬ ಸೇರಿಕೊಂಡಿದ್ದಾನೆ. ಹೊರಗೆ ಸಿಗಲಿ ನೋಡಿಕೊಳ್ಳೋಣ ಎಂದು ಚರ್ಚಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ನನ್ನ ಮತ್ತು ನಮ್ಮ ಕಿರಿಯ ವಕೀಲರಿಗೆ ರಕ್ಷಣೆ ನೀಡಿ ಹೊರ ಕರೆತಂದರು’ ಎಂದರು.
ಹೀಗಾಗಿ ಆರೋಪಿಯ ಬೆಂಬಲಿಗರು ನಮ್ಮ ಮೇಲೆ ದಾಳಿ ಮಾಡುವ ಸಾಧ್ಯತೆಯಿದೆ. ಉತ್ತರ ವಿಭಾಗದ ಡಿಸಿಪಿ ಡಾ ಚೇತನ್ ಸಿಂಗ್ ರಾಥೋಡ್‌ಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
You seem to have an Ad Blocker on.
To continue reading, please turn it off or whitelist Udayavani.