“ಹೆಚ್ಚು ಉದ್ಯೋಗ, ಹೆಚ್ಚು ಉತ್ತೇಜನ’: ಕರ್ನಾಟಕದಲ್ಲಿಯೇ ಹೂಡಿಕೆ ಅವಕಾಶ ಅಧಿಕ: ಸಿಎಂ
Team Udayavani, Nov 2, 2022, 7:10 AM IST
ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕೆ ಅಭಿವೃದ್ಧಿಯ ಜತೆಗೆ ಉದ್ಯೋಗಾವಕಾಶ ಹೆಚ್ಚಿಸುವುದು ನಮ್ಮ ಧ್ಯೇಯ ವಾಗಿದೆ. “ಹೆಚ್ಚು ಉದ್ಯೋಗ, ಹೆಚ್ಚು ಉತ್ತೇಜನ’ ಎಂಬುದೇ ಸರಕಾರದ ಘೋಷವಾಕ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
“ಇನ್ವೆಸ್ಟ್ ಕರ್ನಾಟಕ-2022: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ಹಿನ್ನೆಲೆಯಲ್ಲಿ “ಉದಯ ವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಪ್ರಸ್ತುತ ವಿಶ್ವದಲ್ಲಿ ಹೂಡಿಕೆಗೆ ಭಾರತ ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅತೀ ಹೆಚ್ಚು ಅವಕಾಶಗಳಿವೆ. ಅಂತಹ ಕೈಗಾರಿಕಾ ಸ್ನೇಹಿ ವಾತಾವರಣ ನಮ್ಮ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳ ಬಯಸುತ್ತೇನೆ. ಎಲ್ಲ ರಂಗಗಳಲ್ಲಿ ಉದ್ಯಮ ಬರಬೇಕು, ಉದ್ಯೋಗ ಸಿಗಬೇಕು ಎಂಬುದೇ ನಮ್ಮ ಮೂಲಮಂತ್ರ ಎಂದು ತಿಳಿಸಿದ್ದಾರೆ.
ಹೂಡಿಕೆದಾರರ ಸಮಾವೇಶಕ್ಕೆ ರಾಜ್ಯ ಸರಕಾರ ಯಾವ ರೀತಿ ಸಜ್ಜಾಗಿದೆ?
ಕೈಗಾರಿಕೆ ಅಭಿವೃದ್ಧಿ, ಆರ್ಥಿಕ ಚೇತರಿಕೆ ನಿಟ್ಟಿನಲ್ಲಿ ಹೂಡಿಕೆ ದಾರರ ಸಮಾವೇಶ ಅತೀ ದೊಡ್ಡ ವೇದಿಕೆ. ಇದಕ್ಕಾಗಿ ರಾಜ್ಯ ಸರಕಾರ ಎಲ್ಲ ರೀತಿಯಲ್ಲೂ ಸಿದ್ಧತೆ ಪೂರ್ಣ ಗೊಳಿಸಿ ಸಜ್ಜಾಗಿದೆ.
ನಿಮ್ಮ ಪ್ರಕಾರ ಹೂಡಿಕೆದಾರರು ಕರ್ನಾಟಕವನ್ನೇ ಏಕೆ ಆಯ್ಕೆ ಮಾಡಿಕೊಳ್ಳಬೇಕು?
ನಾನು ಮೊದಲೇ ಹೇಳಿದಂತೆ ಕರ್ನಾಟಕದಲ್ಲಿ ಕೈಗಾರಿಕೆ ಸ್ನೇಹಿ ವಾತಾವರಣ ಇದೆ. ಹಿಂದಿನ ಅನುಭವದ ಆಧಾರದ ಮೇಲೆ ಉದ್ಯಮ ವಲಯದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇವೆ. ನಿಯಮಗಳನ್ನು ಸರಳಗೊಳಿಸಿದ್ದೇವೆ. ಕೈಗಾರಿಕೆ ಪ್ರಾರಂಭಿಸಿ ಬಳಿಕ ಅನುಮತಿ ಪಡೆಯುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಜತೆಗೆ ಸಾಕಷ್ಟು ಉತ್ತೇಜನ, ಪ್ರೋತ್ಸಾಹ, ಸಬ್ಸಿಡಿ ನೀಡುತ್ತಿದ್ದೇವೆ. ದ್ವಿತೀಯ ವಲಯದ ಉತ್ಪಾದನೆಯಲ್ಲಿ ಕರ್ನಾಟಕ ದೊಡ್ಡ ಮಟ್ಟದ ಸಾಧನೆ ಮಾಡಿದೆ. ನಾಲ್ಕು ದಶಕಗಳಲ್ಲಿ ಎಲೆಕ್ಟ್ರಿಕಲ್, ಮೆಕಾನಿಕಲ್, ಇಂಧನ ವಲಯ, ಕಬ್ಬಿಣ ಮತ್ತು ಉಕ್ಕು -ಹೀಗೆ ಎಲ್ಲ ವಲಯಗಳಲ್ಲಿ ಕರ್ನಾಟಕ ಮುಂದಿದೆ. ಕೃತಕ ಬುದ್ಧಿಮತ್ತೆಯಲ್ಲಿ ರಾಜ್ಯದಲ್ಲಿ ಭದ್ರ ಬುನಾದಿ ಹಾಕಲಾಗಿದೆ. ಐಟಿ -ಬಿಟಿಯಲ್ಲಿ ಕಳೆದ ಎರಡು ದಶಕಗಳಿಂದ ನಾವು ಮುಂಚೂಣಿಯಲ್ಲಿದ್ದೇವೆ.
ಹೂಡಿಕೆ ಹೆಚ್ಚು ಹರಿದು ಬರಲು ಯಾವ ಅವಕಾಶಗಳಿವೆ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ, ಯೂರೋಪ್ ಗಳಲ್ಲಿ ಹಣದುಬ್ಬರ ಜಾಸ್ತಿ ಆಗಿ ಬೆಳವಣಿಗೆ ಕುಂಠಿತ ವಾಗುತ್ತಿದೆ. ಭಾರತದಲ್ಲಿ ಹಣದುಬ್ಬರ ನಿಯಂತ್ರಣ ದಲ್ಲಿದ್ದು, ಶೇ.7ರಷ್ಟು ಬೆಳವಣಿಗೆ ಕಾಣುತ್ತಿದ್ದೇವೆ. ಭಾರತದ ಆರ್ಥಿಕತೆ ಗಟ್ಟಿ ನೆಲೆಗಟ್ಟಿನಲ್ಲಿ ಇದೆ. ಚೀನವನ್ನು ನಂಬಿಕೊಂಡಿದ್ದ ರಾಷ್ಟ್ರಗಳು ಇಂದು ವಿಶ್ವಾಸ ಕಳೆದುಕೊಳ್ಳುತ್ತಿವೆ. ಇಂತಹ ವೇಳೆ ಭಾರತದಲ್ಲಿ ವಿಶೇಷವಾಗಿ ಕರ್ನಾಟಕಕ್ಕೆ ಅವಕಾಶ ಇದೆ.
ಈ ಹಿಂದಿನ ಹೂಡಿಕೆದಾರರ ಸಮಾವೇಶ ನೋಡಿದಾಗ ಅನುಷ್ಠಾನ ಪ್ರಮಾಣ ಕಡಿಮೆ ಇದೆಯಲ್ಲ?
ನಿಜ, ಕೆಲವು ಕಾರಣಗಳಿಂದ ಒಪ್ಪಂದಗಳಿಗೂ ಅನು ಷ್ಠಾನದ ಪ್ರಮಾಣಕ್ಕೂ ವ್ಯತ್ಯಾಸವಿದೆ. ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ಏಕೆಂದರೆ ಐದು ಲಕ್ಷ ಕೋಟಿ ರೂ. ಪೈಕಿ 2.8 ಲಕ್ಷ ಕೋಟಿ ರೂ. ಹಿಂದೆಯೇ ಒಪ್ಪಂದ ಮಾಡಿಕೊಂಡು ಯಾವ ಕೈಗಾರಿಕೆ, ಎಷ್ಟು ಬಂಡವಾಳ ಎಂಬುದರ ಬಗ್ಗೆ ರಾಜ್ಯ ಮಟ್ಟದ ಸಮಿತಿಯಲ್ಲಿ ಅನುಮತಿ ಕೊಟ್ಟಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಳೆ ಇನ್‌ವೆಸ್ಟ್ ಮೆಂಟ್ ಗ್ಯಾರಂಟಿ ಸರ್ಟಿಫಿಕೆಟ್ ಕೊಡುತ್ತಿದ್ದೇವೆ. ಇದು ಬಹಳ ದೊಡ್ಡ ಬೆಳವಣಿಗೆ. ಎಲ್ಲದಕ್ಕಿಂತ ಮುಖ್ಯವಾಗಿ ಸಮಾವೇಶದಲ್ಲಿ ಆಗುವ ಒಪ್ಪಂದ ಎರಡು ತಿಂಗಳುಗಳಲ್ಲಿ ಅನುಷ್ಠಾನಕ್ಕೆ ಬರಲು ಗುರಿ ನೀಡಿದ್ದೇನೆ.
ಮೂಲಸೌಕರ್ಯ ಕೊರತೆ ಎಂಬ ಮಾತಿದೆಯಲ್ಲ?
ಈ ಹಿಂದೆ ಮೂಲಸೌಕರ್ಯ ಒದಗಿಸುವ ಸವಾಲು ಇದ್ದದ್ದು ಹೌದು. ಆದರೆ ಈಗ ಹಾಗಿಲ್ಲ, ನಿಯಮಗಳನ್ನು ಸಾಕಷ್ಟು ಸರಳಗೊಳಿಸಿದ್ದೇವೆ. 50 ಸಾವಿರ ಎಕರೆ ಜಮೀನು ಮೀಸಲಿಟ್ಟಿದ್ದೇವೆ. ರೈತರಿಂದ ನೇರವಾಗಿಯೇ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಬಿಜಾಪುರ ಹಾಗೂ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ. ಕಾರವಾರ, ರಾಯಚೂರಿನಲ್ಲೂ ವಿಮಾನ ನಿಲ್ದಾಣ ಬರುತ್ತಿದೆ. ನಾವು ಕಮ್ಯುನಿಕೇಷನ್, ಮೊಬಿಲಿಟಿ ಎರಡಕ್ಕೂ ಆದ್ಯತೆ ಕೊಡುತ್ತಿದ್ದೇವೆ.
“ಬಿಯಾಂಡ್ ಬೆಂಗಳೂರು’ ಬಗ್ಗೆ ಹೂಡಿಕೆದಾರರು ಆಸಕ್ತಿ ತೋರ್ಪಡಿಸಿದ್ದಾರಾ?
ಈ ಬಾರಿ ಬೆಂಗಳೂರು ಹೊರತುಪಡಿಸಿ ಬಳ್ಳಾರಿ, ಹುಬ್ಬಳ್ಳಿ- ಧಾರವಾಡ, ಕಲಬುರಗಿ, ರಾಯಚೂರು, ರಾಮ ನಗರ ಕಡೆ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರುತ್ತಿ ದ್ದಾರೆ.
ಹಸುರು ಇಂಧನ ವಲಯದ ಹೂಡಿಕೆ ಬಗ್ಗೆ?
ದೇಶದಲ್ಲಿ ಇಂದು ಉತ್ಪಾದನೆಯಾಗುತ್ತಿರುವ ಸೌರ ವಿದ್ಯುತ್‌ನಲ್ಲಿ ಶೇ. 46 ಪಾಲು ನಮ್ಮದು. ಸೌರ, ಪವನ ಸೇರಿ ಹಸುರು ಇಂಧನ ವಲಯದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ. ಈ ಸಮಾವೇಶದಲ್ಲೂ ದೊಡ್ಡ ದೊಡ್ಡ ಕಂಪೆನಿಗಳು ಮುಂದೆ ಬರುತ್ತಿವೆ. ನಾವು ಬಳಕೆದಾರರಿಗೆ ಸಬ್ಸಿಡಿ ನೀಡುತ್ತಿಲ್ಲ ನಿಜ. ಆದರೆ ಉತ್ಪಾದಕರಿಗೆ ನೀಡುತ್ತಿದ್ದೇವೆ.
ಎಫ್ಎಂಸಿಜಿ ವಲಯಕ್ಕೆ ಸರಕಾರದಿಂದ ಯಾವ ರೀತಿಯ ಉತ್ತೇಜನ ಸಿಗುತ್ತಿದೆ?
ನಮ್ಮ ಸರಕಾರ ಎಫ್ಎಂಸಿಜಿ ವಲಯಕ್ಕೆ ವಿಶೇಷ ಪ್ರೋತ್ಸಾಹ ಕೊಡುತ್ತಿದೆ. ಹುಬ್ಬಳ್ಳಿ -ಧಾರವಾಡದಲ್ಲಿ 10 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗ ಸಿಗಲಿದೆ.
ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹೇಗಿದೆ?
ಕೊರೊನಾ ಅನಂತರ ಜಗತ್ತಿನಲ್ಲಿ ಕೂಡಲೇ ಆರ್ಥಿಕತೆಯನ್ನು ಮತ್ತೂಮ್ಮೆ ಮರಳಿ ಹಾದಿಗೆ ತಂದದ್ದು ಭಾರತ. ಅದರಲ್ಲಿ ಅತೀ ಬೇಗ ಆರ್ಥಿಕ ಚೇತರಿಕೆ ಆದದ್ದು ಕರ್ನಾಟಕದಲ್ಲಿ. ಕಳೆದ ವರ್ಷ ತೆರಿಗೆ ಗುರಿಗಿಂತ 12ರಿಂದ 13 ಸಾವಿರ ಕೋಟಿ ರೂ. ಹೆಚ್ಚು ಸಂಗ್ರಹ ಮಾಡಿದ್ದೇವೆ. ಅಷ್ಟು ಬೇಗ ಚೇತರಿಸಿಕೊಂಡ ರಾಜ್ಯ ನಮ್ಮದು ಮಾತ್ರ. ಈ ವರ್ಷ ಸತತವಾಗಿ ಇಡೀ ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಜತೆಗೆ ನಮ್ಮ ಬೆಳವಣಿಗೆಯ ದರ ಚೆನ್ನಾಗಿಯೇ ಇದೆ.
ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಗೆ ಸನ್ನದ್ಧವಾಗಿದೆ. ಜಾಗತಿಕವಾಗಿ ಭಾರತ ಹಾಗೂ ಕರ್ನಾಟಕಕ್ಕೆ ಅತೀ ಹೆಚ್ಚು ಅವಕಾಶವಿದೆ. ಈ ಸಮಾವೇಶ ನಿಜಕ್ಕೂ ಮುಂದಿನ ಐದು ವರ್ಷದ ಆರ್ಥಿಕ ದಿಕ್ಸೂಚಿ. ಹೂಡಿಕೆ ದಾರರ ಸಮಾವೇಶದಲ್ಲಿ ಆಗುವ ಒಪ್ಪಂದಗಳು ಎರಡು ತಿಂಗಳುಗಳಲ್ಲಿ ಅನುಷ್ಠಾನಕ್ಕೆ ಬರಲಿವೆ.
-ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ
- ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.