MUDA ಅಕ್ರಮ: ರಾಜ್ಯಪಾಲರಿಗೆ ಮೇಲ್ನೋಟಕ್ಕೆ ದಾಖಲೆ ಪತ್ತೆ
ಆರೋಪ ಹೊತ್ತಿದ್ದವರು ತನಿಖಾ ಸ್ವರೂಪ ನಿರ್ಧರಿಸುವಂತಿಲ್ಲ, ಮಂತ್ರಿ ಪರಿಷತ್ ಸಲಹೆ ಸ್ವೀಕರಿಸಬೇಕಿಲ್ಲ, 6 ಪುಟಗಳ ಆದೇಶದಲ್ಲಿ ವಿವರಣೆ
Team Udayavani, Aug 18, 2024, 6:33 AM IST
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದಾಗ ಅಕ್ರಮವನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳು ಲಭ್ಯವಿರುವ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಟಸ್ಥ, ವಸ್ತುನಿಷ್ಠ ಮತ್ತು ನಿಷ್ಪಕ್ಷ ತನಿಖೆ ಅತಿ ಮುಖ್ಯ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಟಿ.ಜೆ. ಅಬ್ರಹಾಂ, ಪ್ರದೀಪ್ ಕುಮಾರ್ ಎಸ್.ಪಿ. ಮತ್ತು ಸ್ನೇಹಮಯಿ ಕೃಷ್ಣ ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರಿನ ಮೇರೆಗೆ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಹೊರಡಿಸಿರುವ 6 ಪುಟಗಳ ಆದೇಶದಲ್ಲಿ ರಾಜ್ಯಪಾಲರು ಈ ಅಂಶವನ್ನು ಒತ್ತಿ ಹೇಳಿದ್ದಾರೆ.
ಮುಖ್ಯಮಂತ್ರಿಯವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರುಗಳು, ಮುಖ್ಯಮಂತ್ರಿಗಳ ಪ್ರತಿಕ್ರಿಯೆ, ಕಾನೂನು ತಜ್ಞರ ಅಭಿಪ್ರಾಯ ಮತ್ತು ಸಂಪುಟದ ನಿರ್ಣಯವನ್ನು ಪರಿಶೀಲಿಸಲಾಗಿದೆ. ಮುಖ್ಯಮಂತ್ರಿಯವರ ವಿರುದ್ಧದ ಆರೋಪಗಳ ವಿಚಾರದಲ್ಲಿ 2 ಬಗೆಯ ಅಭಿಪ್ರಾಯಗಳಿವೆ. ದೂರಿನಲ್ಲಿರುವ ಆರೋಪಗಳನ್ನು ಮೇಲ್ನೋಟಕ್ಕೆ ಪುಷ್ಟೀಕರಿಸುವ ದಾಖಲೆಗಳೂ ಇವೆ ಎಂದು ರಾಜ್ಯಪಾಲರು ಆದೇಶ ಪತ್ರದಲ್ಲಿ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಮೇಲೆ ವಿಚಾರಣೆಗೆ ಅನುಮತಿ ಕೋರಿ ದಾಖಲಾದ ಅರ್ಜಿಗಳ ಹಿನ್ನೆಲೆಯಲ್ಲಿ ಜು. 26ರಂದು ಮುಖ್ಯಮಂತ್ರಿಯವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿ ವಿವರಣೆ ಕೇಳಲಾಗಿತ್ತು. ಆ. 1ರಂದು ಸಂಪುಟದ ನಿರ್ಣಯವು ತಮ್ಮ ಕಚೇರಿಗೆ ತಲುಪಿತು. ಆ. 3ರಂದು ಮುಖ್ಯಮಂತ್ರಿಯವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ ಕೆಲವು ದಾಖಲೆಗಳೊಂದಿಗೆ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ
ಮಧ್ಯಪ್ರದೇಶ ವಿಶೇಷ ಪೊಲೀಸ್ ಘಟಕ ಮತ್ತು ಮಧ್ಯಪ್ರದೇಶ ಸರಕಾರದ ನಡುವಿನ ವ್ಯಾಜ್ಯದಲ್ಲಿ ಸುಪ್ರೀಂ ಕೋರ್ಟ್ 2004ರಲ್ಲಿ ನೀಡಿದ್ದ ತೀರ್ಪನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವ ರಾಜ್ಯಪಾಲರು, ಕೆಲವು ವಿಶೇಷ ಸಂದರ್ಭಗಳಲ್ಲಿ ಸಂಪುಟದ ಸಲಹೆಯನ್ನು ಸ್ವೀಕರಿಸುವುದು ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ. ಇಂತಹ ಪ್ರಕರಣಗಳಲ್ಲಿ ದಾಖಲೆಗಳು ಲಭ್ಯವಿದ್ದಾಗಲೂ ರಾಜ್ಯಪಾಲರು ತಮ್ಮ ವಿವೇಚನೆ ಬಳಸಲು ಅವಕಾಶ ನೀಡದೆ ಇದ್ದಲ್ಲಿ ಅಧಿಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯ ಗಳು ಲಭ್ಯವಿದ್ದಾಗಲೂ ತನಿಖೆಗೆ ಅನುಮತಿ ನಿರಾಕರಿಸಿದರೆ ಅದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ. ಸರಕಾರಕ್ಕೆ ಅನುಮತಿ ನಿರಾಕರಿಸುವ ಅಧಿಕಾರ ನೀಡಿದಲ್ಲಿ ಕಾನೂನಿನ ಆಡಳಿತವು ಕುಸಿದುಬೀಳುತ್ತದೆ. ತಮ್ಮ ವಿರುದ್ಧ ತನಿಖೆ ನಡೆಸಲು ಅವಕಾಶವೇ ಇಲ್ಲ ಎಂಬ ಭಾವನೆಯಿಂದ ಅಧಿಕಾರದಲ್ಲಿರುವ ವ್ಯಕ್ತಿಗಳು ಕಾನೂನು ಉಲ್ಲಂ ಸಲು ಪ್ರೇರಣೆ ದೊರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವುದನ್ನು ರಾಜ್ಯಪಾಲರು ಉಲ್ಲೇಖೀಸಿದ್ದಾರೆ.
ಆದೇಶದ ಪ್ರಮುಖ ಅಂಶಗಳು
ಮುಡಾದಲ್ಲಿನ ಅಕ್ರಮಗಳ ಕುರಿತು ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದ ಸಮಿತಿಯನ್ನು ಮಂತ್ರಿ ಪರಿಷತ್ ರಚಿಸಿತ್ತು. ಆದರೆ ಆ ಬಳಿಕ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿದ ಸರಕಾರ ಏಕಸದಸ್ಯ ಆಯೋಗವನ್ನು ನೇಮಿಸಿತು. ಈ ಸಮಿತಿಯ ತನಿಖಾ ವ್ಯಾಪ್ತಿಯನ್ನು ಗಮನಿಸಿದಾಗ ಬದಲಿ ನಿವೇಶನ ಹಂಚಿಕೆ ಹಾಗೂ ಭೂಮಿ ಹಂಚಿಕೆಯಲ್ಲೂ ನಿಯಮಗಳನ್ನು ಉಲ್ಲಂ ಸಲಾಗಿದೆ. ಐಎಎಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದ ಸರಕಾರ ತತ್‌ಕ್ಷಣವೇ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಏಕ ವ್ಯಕ್ತಿಯ ಆಯೋಗ ರಚಿಸಿರುವುದನ್ನು ಗಮನಿಸಿದರೆ ನಿವೇಶನ ಹಂಚಿಕೆಯಲ್ಲಿ ಭಾರೀ ಅಕ್ರಮಗಳು ನಡೆದಿರುವುದನ್ನು ಸರಕಾರವೇ ಒಪ್ಪಿಕೊಂಡಿದೆ.
ವಿಶೇಷವಾಗಿ ಯಾರ ಮೇಲೆ ಗಂಭೀರ ಸ್ವರೂಪದ ಆರೋಪವಿದೆಯೋ ಅವರೇ ತನಿಖಾ ಸ್ವರೂಪವನ್ನು ನಿರ್ಧರಿಸುವಂತಿಲ್ಲ ಎಂಬುದನ್ನು ಕಾನೂನು ಹೇಳುತ್ತದೆ. ಈ ಪ್ರಕರಣದಲ್ಲಿರುವ ಪುರಾವೆಗಳು ಮೇಲ್ನೋಟಕ್ಕೆ ಆರೋಪವನ್ನು ಪುಷ್ಟೀಕರಿಸುವಂತಿದ್ದರೂ ಮಂತ್ರಿ ಪರಿಷತ್‌ನ ತೀರ್ಮಾನ ಅತಾರ್ಕಿಕವಾಗಿದೆ ಎಂದು ರಾಜ್ಯಪಾಲರು ಆದೇಶದಲ್ಲಿ ಉಲ್ಲೇಖೀಸಿದ್ದಾರೆ.
ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ನೀಡಿರುವ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ನನಗೆ ಸಲಹೆ ನೀಡಿದ್ದು ಸಚಿವ ಸಂಪುಟದ ಇಂತಹ ಸಲಹೆಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ವಿರುದ್ಧದ ದೂರು ಮತ್ತು ಸಲ್ಲಿಸಿರುವ ದಾಖಲೆಗಳನ್ನು ನಾನು ಸಹ ಸ್ವತಂತ್ರವಾಗಿ ಪರಿಶೀಲಿಸಿದ್ದೇನೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.