ಮೈಲಾರದ ಕಾರ್ಣಿಕ: ಸಂಪಾಯಿತಲೇ ಪರಾಕ್
Team Udayavani, Feb 12, 2020, 3:05 AM IST
ಹೂವಿನಹಡಗಲಿ: ಉತ್ತರ ಕರ್ನಾಟಕ ಭಾಗದ ಜಾಗೃತ ಕ್ಷೇತ್ರ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಮಂಗಳವಾರ ನಡೆದಿದ್ದು, “ಸಂಪಾಯಿತಲೇ ಪರಾಕ್’ ಈ ವರ್ಷದ ಕಾರಣಿಕ ನುಡಿಯಾಗಿದೆ.
ಮೈಲಾರದ ಡಂಕನಮರಡಿಯಲ್ಲಿ ಸಂಜೆ 5ಕ್ಕೆ ಗೊರವಪ್ಪ ರಾಮಣ್ಣ ಅವರು ಬಿಲ್ಲನ್ನೇರಿ ದೈವವಾಣಿ ನುಡಿದರು. ಧರ್ಮದರ್ಶಿ ವೆಂಕಪ್ಪಯ್ಯ ಓಡೆಯರ್ ಅವರು ಕಾರ್ಣಿಕದ ವಿಶ್ಲೇಷಣೆ ಮಾಡಿದ್ದು, ಬರುವ ದಿನಗಳು ಸಮೃದ್ಧಿಯಿಂದ ಕೂಡಿವೆ. ಈ ಬಾರಿ ಮಳೆ-ಬೆಳೆ ಸಂಪಾಗಿ ಆಗಲಿದೆ. ರಾಜಕೀಯದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ.
ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿಗೆ ಯಾರೂ ತೊಂದರೆ ಕೊಡುವುದಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಸದ್ಯ ಅಧಿಕಾರ ಮಾಡುವ ಪಕ್ಷಕ್ಕೆ ಯಾವುದೇ ವಿಘ್ನವಿಲ್ಲ. ರೈತಾಪಿ ವರ್ಗಕ್ಕೆ ಸಂತಸದ ಹೊನಲು ಇರಲಿದೆ. ಈ ಬಾರಿ ಮಳೆಯು ಸಮೃದ್ಧವಾಗಲಿದೆ. ರೈತರ ಕಷ್ಟಗಳು ದೂರವಾಗಿ ಅಂದುಕೊಂಡಿದ್ದು ನಡೆಯುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಡೆಂಕನ ಮರಡಿಯ ಸುತ್ತಲೂ ಶ್ರೀ ಸ್ವಾಮಿಯ ಮೈಲಾರಲಿಂಗನ ಕಾರ್ಣಿಕ ಆಲಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಜನಸ್ತೋಮ ನೆರೆದಿತ್ತು.
ಭಕ್ತರು ಶ್ರೀ ಸ್ವಾಮಿಯ ಉತ್ಸವ ಮೂರ್ತಿ ಡೆಂಕನ ಮರಡಿಗೆ ಬರುತ್ತಲೇ “ಏಳು ಕೋಟಿ, ಏಳು ಕೋಟಿ ಚಾಂಗಮಲೋ’ ಎನ್ನುವ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಭಕ್ತರನ್ನು ನೋಡುತ್ತಲೇ ಸುಮಾರು 12 ಅಡಿ ಎತ್ತರದ ಕಬ್ಬಿಣದ ಬಿಲ್ಲು ಏರಿದ ಗೊರವಯ್ಯ ಆಕಾಶವನ್ನು ತದೇಕ ಚಿತ್ತದಿಂದ ಆಲಿಸಿ “ಸಂಪಾಯಿತಲೇ ಪರಾಕ್’ ಎನ್ನುವ ದೈವವಾಣಿ ನುಡಿದು ಭುವಿಗೆ ಧುಮುಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.