ರಾಜ್ಯದಲ್ಲಿ ಜೆಡಿಎಸ್ ಜತೆ ಎನ್‌ಸಿಪಿ ಮೈತ್ರಿ
Team Udayavani, Feb 16, 2018, 12:32 PM IST
ಬೆಂಗಳೂರು: ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿ ಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಕರ್ನಾಟಕದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳಲು ಎನ್‌ಸಿಪಿ ಮುಕ್ತವಾಗಿದ್ದು, ಈ ವಿಚಾರದಲ್ಲಿ ಜೆಡಿಎಸ್ ಸಹ ತೆರೆದ ಮನಸ್ಸು ಹೊಂದಿದೆ ಎಂದು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ದೇಶದ ಜಾತ್ಯತೀತ ತತ್ವಗಳು ಉಳಿಯಬೇಕಾದರೆ, ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಅದಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯುವುದು ಹಾಗೂ ನಮ್ಮ ಪ್ರಯತ್ನಗಳು ಯಾವುದೇ ಕಾರಣಕ್ಕೂ ಬಿಜೆಪಿಗೆ ಲಾಭ ತಂದು ಕೊಡಬಾರದೆಂಬ ಸೂತ್ರವನ್ನು ಎನ್‌ಸಿಪಿ ಎಲ್ಲ ರಾಜ್ಯಗಳಲ್ಲಿ ಅನುಸರಿಸುತ್ತಾ ಬಂದಿದೆ. ಅದೇ ಸೂತ್ರವನ್ನು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಲಾಗುವುದು ಎಂದರು.
ಗುರುವಾರ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‌ಸಿಪಿ ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಹೋಗುವುದಿಲ್ಲ. ಒಂದೊಮ್ಮೆ ಕರ್ನಾಟಕದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ, ಸಮ್ಮಿಶ್ರ ಸರ್ಕಾರದ ಸಾಧ್ಯತೆಗಳು ಎದುರಾದಲ್ಲಿ ಬಿಜೆಪಿ ಜತೆಗೆ ಹೋಗಬಾರದೆಂದು ಜೆಡಿಎಸ್‌ಗೆ ಶರತ್ತು ಹಾಕಿದ್ದೇವೆ. ಅದನ್ನು ಜೆಡಿಎಸ್ ಸಹ ಒಪ್ಪಿಕೊಂಡಿದೆ. ಮೈತ್ರಿ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಪ್ರಾಥಮಿಕ ಹಂತದ ಮಾತುಕತೆಯಾಗಿದ್ದು, ಮತ್ತೆ ಒಂದೆರಡು ಸುತ್ತಿನ ಮಾತುಕತೆ ಬಳಿಕ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದರು.
ಕೇರಳದಲ್ಲಿ ಜೆಡಿಎಸ್, ಎನ್‌ಸಿಪಿ, ಸಿಪಿಎಂ ಮತ್ತು ಸಿಪಿಐ ಸೇರಿ ಚುನಾವಣೆ ಎದುರಿಸಿ ಯಶಸ್ವಿಯಾಗಿದ್ದೇವೆ. ಅಲ್ಲಿನ ಎಡಪಕ್ಷ ನೇತೃತ್ವದ ಸರ್ಕಾರದಲ್ಲಿ ಜೆಡಿಎಸ್ ಮತ್ತು ಎನ್‌ಸಿಪಿ ಸಚಿವರಿದ್ದಾರೆ. ಕೇರಳದಲ್ಲಿ ಸಾಧ್ಯವಾಗಿದ್ದು, ಕರ್ನಾಟಕದಲ್ಲೂ ಆಗಬಹುದು. ಕರ್ನಾಟಕದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಪಕ್ಷ ಅಷ್ಟೊಂದು ಸಂಘಟಿತವಾಗಿಲ್ಲ. ಆದರೆ, ಪಕ್ಷ
ಸಂಘಟನೆ ಮತ್ತು ಕಾರ್ಯಕರ್ತರು ಇರುವ ಆಯ್ದ ಕೆಲವು ಕಡೆ ಸ್ಪರ್ಧಿಸುವ ಆಲೋಚನೆಯಿದೆ. ಆ ಮೂಲಕ ಕರ್ನಾಟಕದ ವಿಧಾನಸಭೆಗೆ ಪಕ್ಷದ ಶಾಸಕರನ್ನು ಕಳಿಸಬೇಕು ಅನ್ನುವುದು ನಮ್ಮ ಗುರಿ. ರೈತರು, ದಲಿತರು, ಅಲ್ಪಸಂಖ್ಯಾತರ ಹಿತ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ನಮ್ಮ ಆದ್ಯತೆಯಾಗಿದೆ ಎಂದರು.
ಇದಕ್ಕೂ ಮೊದಲ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪವಾರ್, ನಮ್ಮ ಪಕ್ಷ ಕರ್ನಾಟಕದಲ್ಲಿ ಅಷ್ಟೊಂದು ಸಂಘಟಿತವಾಗಿಲ್ಲ ಅನ್ನುವ ಹಿಂಜರಿಕೆ ಬೇಡ. ಎಲ್ಲ ನದಿಗಳು ಆರಂಭವಾಗುವುದು ಸಣ್ಣ ತೊರೆಯಿಂದ. ಅದೇ ರೀತಿ ಕರ್ನಾಟಕದಲ್ಲಿ ಎನ್‌ಸಿಪಿ ನದಿ ಆರಂಭವಾಗಿದೆ ಎಂದು ಭಾವಿಸಿ. ಜಾತ್ಯತೀತ ತತ್ವಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ. ಪಕ್ಷ ಸಂಘಟನೆಗೆ ಸಮಯ ಕೊಡಲು ನಾನು ಸಿದ್ಧನಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ತಮ್ಮ ಕೆಲವು ಬೆಂಬಲಿಗರೊಂದಿಗೆ
ಬಳ್ಳಾರಿಯ ಗಣಿ ಉದ್ಯಮಿ ಟಪಾಲ್ ಗಣೇಶ್ ಎನ್‌ಸಿಪಿ ಪಕ್ಷ ಸೇರಿದರು.
ಸಭೆಯಲ್ಲಿ ಎನ್‌ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿತಾಂಬರ್ ಮಾಸ್ಟರ್‌ಜಿ, ಅಲ್ಪಸಂಖ್ಯಾತರ ವಿಭಾಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಕ್ಕೂ ಭಾಯಿ, ಕರ್ನಾಟಕದ ಉಸ್ತುವಾರಿ ಸಿಲ್ವರ್ ಬಿಸಾನಿಯೋ, ಪ್ರಧಾನ ಕಾರ್ಯದರ್ಶಿ ತಿಲಕ್ ನಂಬಿಯಾರ್
ಮತ್ತಿತರರಿದ್ದರು.
ಗೋವಾ ಮತ್ತು ಕರ್ನಾಟಕ ರಾಜ್ಯಗಳ ಜತೆಗೆ ಎನ್‌ಸಿಪಿ ಉತ್ತಮ ಸಂಬಂಧ ಹೊಂದಿದೆ. ಮಹದಾಯಿ ವಿವಾದ ಸೌಹಾರ್ದಯುತವಾಗಿ ಮಾತುಕತೆ ಮೂಲಕ ಬಗೆಹರಿಯಬೇಕು. ಗೋವಾ ಪ್ರವಾಸೋದ್ಯಮ ನೆಚ್ಚಿಕೊಂಡಿದ್ದರೆ, ಕರ್ನಾಟಕ ಕೃಷಿಯನ್ನು ಆಧರಿಸಿದೆ. ಕೃಷಿಗೆ ನೀರು ಅಗತ್ಯವಾಗಿ ಬೇಕು. ಹಾಗಾಗಿ, ಕರ್ನಾಟಕಕ್ಕೆ ಸಿಗಬೇಕಾದ ನೀರು ಸಿಗಲೇಬೇಕು. ಈ ವಿಚಾರದಲ್ಲಿ ಎನ್‌ಸಿಪಿ ತನ್ನಿಂದಾದ ಪ್ರಯತ್ನ ಮಾಡಲಿದೆ.
ಶರದ್ ಪವಾರ್, ಎನ್‌ಸಿಪಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.