ಸಂದಿಗ್ಧ ಸ್ಥಿತಿ ಯಶಸ್ವಿ ನಿರ್ವಹಣೆ ಚಾಣಕ್ಯ: ಎಲೆಮರೆಯ ಟ್ರಬಲ್ ಶೂಟರ್ ಬಸವರಾಜ ಬೊಮ್ಮಾಯಿ
Team Udayavani, Jul 28, 2021, 9:00 AM IST
ಹುಬ್ಬಳ್ಳಿ: ಹುಬ್ಬಳ್ಳಿಗೆ ಮೂರನೇ ಬಾರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬಂದಿದೆ. ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಸಂಘಟನಾ ಚತುರ, ಸಂದಿಗ್ಧ ಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲ , ಗುಂಪುಗಾರಿಕೆಯನ್ನು ಸರಿಪಡಿಸುವ ಚಾಕಚಕ್ಯತೆಯ ಚಾಣಾಕ್ಷ, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕಮಡೊಳ್ಳಿಯ ಹೆಮ್ಮೆಯ ಪುತ್ರ ಇವರು.
ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕರ ಹೆಸರುಗಳು ಸುಳಿದಾಡಿದ್ದವು. ಅದರಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರು ಸುಳಿದಾಡಿತ್ತಾದೆರೂ, ಮುಂಚೂಣಿ ಎನ್ನುವಂತೆ ಇರಲಿಲ್ಲ. ಆದರೆ, ಕೊನೆ ಘಳಿಗೆಯಲ್ಲಿ ದಿಢೀರನೇ ಮುಂಚೂಣಿಗೆ ಬಂದು ಅಂತಿಮಗೊಂಡಿದ್ದು ಒಂದು ರೀತಿಯ ರೋಚಕ ಎನ್ನಬಹುದಾಗಿದೆ.
ಜನತಾ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರರಾಗಿದ್ದರೂ, ತಂದೆಯ ನೆರಳಿನಡಿಯಲ್ಲಿ ಎನ್ನುವುದಕ್ಕಿಂತ ಸ್ವಸಾಮರ್ಥ್ಯ, ಸಂಘಟನಾ ಚತುರತೆಯಿಂದಲೇ ರಾಜಕೀಯವಾಗಿ ಬೆಳೆದವರು, ಹಲವು ಸಾಧನೆಗಳ ಮೆಟ್ಟಿಲನ್ನು ಏರಿದವರು. ವಿದ್ಯಾರ್ಥಿ ದೆಸೆಯಿಂದಲೇ ನಾಯಕತ್ವದ ಗುಣಗಳನ್ನು ತೋರುತ್ತ ಬಂದಿದ್ದ ಬಸವರಾಜ ಬೊಮ್ಮಾಯಿ ಅವರು ಸಚಿವರಾಗಿ ಇದೀಗ ರಾಜ್ಯದ ಚುಕ್ಕಾಣಿ ಹಿಡಿದ್ದಾರೆ.
ಎಂಎಲ್‌ಸಿಯಿಂದ ರಾಜಕೀಯ ಪಯಣ: ಬಸವರಾಜ ಬೊಮ್ಮಾಯಿ ಅವರು ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಎಂದೇ ಜನತಾ ಪರಿವಾರದಲ್ಲಿ ಗುರುತಿಸಿಕೊಂಡರಾದರೂ, ಅವರ ಸಂಘಟನಾ ಶಕ್ತಿ, ರಾಜಕೀಯ ಚತುರತೆ ಅವರನ್ನು ಜನತಾ ಪರಿವಾರದಲ್ಲಿ ಯುವ ನಾಯಕತ್ವದ ಪಟ್ಟ ತಂದುಕೊಟ್ಟಿತ್ತು. ಜನತಾ ಪರಿವಾರದ ಪ್ರಮುಖ ನಾಯಕರ ಬಾಯಲ್ಲಿ ಬಸಣ್ಣ ಎಂದೇ ಗುರುತಿಸಿಕೊಂಡು, ಬೆಳೆದು ಬಂದವರು.
ಸದ್ದುಗದ್ದಲವಿಲ್ಲದ ಟ್ರಬಲ್ ಶೂಟರ್: ಬಸವರಾಜ ಬೊಮ್ಮಾಯಿ ಅವರು ಯಾವುದೇ ಸದ್ದುಗದ್ದಲವಿಲ್ಲದ ಟ್ರಬಲ್ ಶೂಟರ್ ಎಂದರೂ ತಪ್ಪಾಗಲಾರದು. ಎಂತಹದ್ದೇ ಸಮಸ್ಯೆ ಎದುರಾಗಲಿ ಅದನ್ನು ಸಮರ್ಥ ರೀತಿಯಲ್ಲಿ ನಿಭಾಯಿಸುವ ಶಕ್ತಿ ಅವರಿಗಿದೆ ಎಂಬುದಕ್ಕೆ ಕೆಲವೊಂದು ಪ್ರಕರಣಗಳು ಸಾಕ್ಷಿಯಾಗಿವೆ. ಆದರೆ, ಅವರೆಂದು ಇದು ನನ್ನಿಂದಲೇ ಆಗಿದೆ ಎಂದು ಹೇಳಿಕೊಂಡವರಲ್ಲ.
ಹುಬ್ಬಳ್ಳಿಯಲ್ಲಿನ ಈದ್ಗಾ ಮೈದಾನ ವಿವಾದ ರಾಷ್ಟ್ರದಲ್ಲಿ ಚರ್ಚೆಯಾಗಿತ್ತು. ರಾಜ್ಯ ಸರಕಾರದಕ್ಕೆ ಇದೊಂದು ದೊಡ್ಡ ಸವಾಲು ಎದುರಾಗಿತ್ತು. ಅಂದಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು, ಬಸವರಾಜ ಬೊಮ್ಮಾಯಿ ಅವರನ್ನು ಕರೆದು, ವಿವಾದ ಇತ್ಯರ್ಥ ನಿನಗೆ ವಹಿಸುವೆ ಇದನ್ನು ಮಾಡು ಎಂದು ಹೇಳಿದ್ದರು.
ಈದ್ಗಾ ಮೈದಾನ ವಿವಾದ ಇತ್ಯರ್ಥದ ಹಿಂದೆ ಬಸವರಾಜ ಬೊಮ್ಮಾಯಿ ದೊಡ್ಡ ಶಕ್ತಿಯಾಗಿ, ಚಾಕಚಕ್ಯತೆಯಿಂದ ಪರಿಹಾರ ಕಂಡುಗೊಂಡು ಗೆಲುವು ಸಾಧಿಸಿದ್ದರು. ಆದರೆ ಅವರೆಲ್ಲು ಇದು ತಮ್ಮಿಂದ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇದು ಕೇವಲ ಒಂದು ಸ್ಯಾಂಪಲ್ ಅಷ್ಟೇ. ಇದಲ್ಲದೆ ಅನೇಕ ಸಣ್ಣಪುಟ್ಟ , ದೊಡ್ಡ ಸಮಸ್ಯೆ, ಗುಂಪುಗಾರಿಕೆಯನ್ನು ನಿಭಾಯಿಸುವ ಕಾರ್ಯ ತೋರಿದವರು.
ಜೆ.ಎಚ್.ಪಟೇಲ್ ಪ್ರಭಾವ: ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಬಸವರಾಜ ಬೊಮ್ಮಾಯಿಯನ್ನು ಮಗನ ರೀತಿಯಲ್ಲಿ ಪ್ರೀತಿಯಿಂದಲೇ ಕಾಣುತ್ತಿದ್ದರು. ಅಷ್ಟೇ ಅಲ್ಲ ಬಸವರಾಜ ಬೊಮ್ಮಾಯಿ ಅವರಲ್ಲಿ ಪುಸ್ತಕ ಓದಿನ ಹುಚ್ಚು ಹಚ್ಚಿಸಿದವರಲ್ಲಿ ಪಟೇಲರ ಪಾತ್ರ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ.
ಪಟೇಲರು ತಾವು ಮುಖ್ಯಮಂತ್ರಿಯಾಗಿದ್ದಾಗ ಬಸವರಾಜ ಬೊಮ್ಮಾಯಿ ಅವರನ್ನು ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದರು. ಬಸವರಾಜ ಬೊಮ್ಮಾಯಿ ಅವರಿಗೆ ಪುಸ್ತಕಗಳನ್ನು ನೀಡುತ್ತಿದ್ದ ಪಟೇಲರು, ಪುಸ್ತಕ ಓದಿಕೊಂಡ ಬರುವಂತೆ ಸೂಚಿಸುತ್ತಿದ್ದರು. ನಂತರ ಪುಸ್ತಕ ಓದಿನ ಬಗ್ಗೆ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸುತ್ತಿದ್ದರು. ಪಟೇಲರ ಜತೆ ಚರ್ಚೆ ಎಂದರೆ ಸಾಮಾನ್ಯವಲ್ಲ. ಇದನ್ನು ಗಮನದಲ್ಲಿಟ್ಟುಕೊಂಡೇ ಬಸವರಾಜ ಬೊಮ್ಮಾಯಿ ಅವರು, ನೀಡಿದ ಪುಸ್ತಕಗಳನ್ನು ಗಮನಕೊಟ್ಟು ಓದಿಕೊಂಡು ಹೋಗಿ ಚರ್ಚೆಗಿಳಿಯುತ್ತಿದ್ದರು. ಇದೇ ಅವರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಇನ್ನಷ್ಟು ಹೆಚ್ಚು ಮಾಡುವಂತೆ ಮಾಡಿತು. ಜತೆಗೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಿಳಿಯುವ, ಅದರಲ್ಲಿ ತೊಡಗುವ ಆಸಕ್ತಿ ಅವರಲ್ಲಿ ಹೆಚ್ಚಿದೆ ಎಂಬುದು ಬೊಮ್ಮಾಯಿವರನ್ನು ಬಲ್ಲವರ ಮಾತು.
ನೀಲಿಕಣ್ಣಿನ ಹುಡುಗ: ರಾಜಕೀಯ ನಂಟು, ಮಾಜಿ ಮುಖ್ಯಮಂತ್ರಿ ಮಗ ಎಂದು ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಬಸವರಾಜ ಬೊಮ್ಮಾಯಿ ಅವರು 1997 ಮತ್ತು 2003ರಲ್ಲಿ ಎರಡು ಬಾರಿ ಅವಿಭಜಿತ ಧಾರವಾಡ ಜಿಲ್ಲೆ ಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತುಗೆ ಆಯ್ಕೆಯಾಗಿದ್ದರು. ವಿಧಾನಪರಿಷತ್ತು ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಲ್ಲದೆ, ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ವಿಧಾನಸಭೆ ಸ್ಪರ್ಧಿಸಿ ಮೊದಲ ಯತ್ನದಲ್ಲೇ ಯಶಸ್ಸು ಸಾಧಿಸುವುದರೊಂದಿಗೆ ವಿಧಾನಸಭೆ ಪ್ರವೇಶ ಮಾಡಿದ್ದರು.
2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ತನ್ನ ಬಲದೊಂದಿಗೆ ಅಧಿಕಾರ ಹಿಡಿದಾಗ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೀಲಿಕಣ್ಣಿನ ಹುಡುಗನಾಗಿ ಗೋಚರಿಸಿದ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದರಲ್ಲದೆ, ಜಲಸಂಪನ್ಮೂಲ ಸಚಿವರಾಗಿ ತೋರಿದ ಸಾಧನೆ ಅಪಾರ. ಕೃಷ್ಣಾ-ಕಾವೇರಿ ಕೊಳದ ನೆನೆಗುದಿಗೆ ಬಿದ್ದ ಯೋಜನೆಳಿಗೆ ಮುಕ್ತಿ ನೀಡುವ ಕಾರ್ಯತೊರಿದ್ದರು. ಅದೇ ಕ್ಷೇತ್ರದಿಂದ ಸತತವಾಗಿ ಮೂರಬಾರಿ ಆಯ್ಕೆಯಾಗಿರುವುದು ಕ್ಷೇತ್ರದ ಜನರು ಇವರ ಬಗ್ಗೆ ಹೊಂದಿದ ಪ್ರೀತಿಗೆ ಸಾಕ್ಷಿಯಾಗಿದೆ.
ಶಿಗ್ಗಾಂವಿ, ಸವಣೂರಿನಲ್ಲಿ ಇದ್ದ ಹಳೇಯ ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದರು. ನೀರಾವರಿ ಬಳಕೆಗೂ ಅವುಗಳನ್ನು ತೊಡಗುವಂತೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಶಿಗ್ಗಾಂವಿ ತಾಲೂಕಿನಲ್ಲಿ ರಾಜ್ಯದಲ್ಲೇ ಮೊದಲೆನ್ನಬಹುದಾದ ಹನಿನೀರಾವರಿ ಯೋಜನೆ ಅನುಷ್ಠಾನಕ್ಕೆ ಕೈಗೊಂಡಿದ್ದರು. ಇಸ್ರೇಲ್ ಮಾದರಿ ನೀರು ಬಳಕೆ ಅವರ ಚಿಂತನೆಯಾಗಿತ್ತು. ಯಾವುದೇ ಅಧಿಕಾರ ಇಲ್ಲದಾಗಲೂ ಬಸವರಾಜ ಬೊಮ್ಮಾಯಿ ಅವರು ಅನೇಕರಿಗೆ ಪ್ರೇರಣೆ ನೀಡುವ ಮೂಲಕ ನಾಯಕತ್ವದ ಪ್ರೇರಣೆ ನೀಡಿದ್ದರು, ಅನೇಕರನ್ನು ಬೆಳೆಸಿದ್ದರು. ಇದೀಗ ಅವರೇ ಮುಖ್ಯಮಂತ್ರಿ ಆಗುತ್ತಿರುವುದು ಇನ್ನಷ್ಟು ಪ್ರೇರಣೆ ಹಾಗೂ ಸಾಧನೆಯ ಹೆಜ್ಜೆ ಗುರುತು ಮೂಡಲಿ ಎಂಬುದು ಅವರ ಸ್ನೇಹಿತರು, ಬೆಂಬಲಿಗರ ಆಶಯ.
ಹೋರಾಟಗಾರ.. :
ಬಸವರಾಜ ಬೊಮ್ಮಾಯಿ ಕೇವಲ ಸಂಘಟಕ, ರಾಜಕೀಯ ಮುತ್ಸದ್ಧಿ ಅಷ್ಟೇ ಅಲ್ಲ. ಬದಲಾಗಿ ಹೋರಾಟಗಾರ ಕೂಡ. ಮಹದಾಯಿ, ಕಳಸಾ-ಬಂಡೂರಿ ನಾಲಾ ಕುರಿತಾಗಿ 2007ರಲ್ಲಿ 21 ದಿನಗಳವರೆಗೆ ಪಾದಯಾತ್ರೆ ನಡೆಸಿದ್ದರು. ಸರಕಾರಗಳ ಮೇಲೆ ಒತ್ತಡ ತರಲು ರಕ್ತದಲ್ಲಿಯೇ ಪತ್ರ ಬರೆಯುವ ಮೂಲಕ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದವರಾಗಿದ್ದಾರೆ.
ತಂದೆ ಬಗ್ಗೆ ಹೆಮ್ಮೆ-ತಾಯಿ ಬಗೆ ಮಮತೆ-ಗೌರವ..:
ಬಸವರಾ ಬೊಮ್ಮಾಯಿ ಅವರು ತಂದೆ ಎಸ್.ಆರ್.ಬೊಮ್ಮಾಯಿ ಅವರ ಬಗ್ಗೆ ಹೆಮ್ಮೆ ಹೊಂದಿದವರು, ಆದರೆ, ತಾಯಿ ಗಂಗಮ್ಮ ಅವರ ತೆ ಹೆಚ್ಚು ಅನ್ಯೋನ್ಯ, ಮಮತೆ ಹಾಗೂ ಗೌರವ. ತಾಯಿ ಅವರು ಅನಾರೋಗ್ಯಕೀಡಾಗಿ ಕೊನೆಯ ದಿನಗಳಲ್ಲಿ ಅಕ್ಷರಶಃ ಒಬ್ಬ ಮಗಳ ರೀತಿಯಲ್ಲಿ ತಾಯಿ ಸೇವೆ ಮಾಡಿದ್ದರು. ತಾಯಿ ಹೆಸರಲ್ಲಿಯೇ ಬಡ ಕ್ಯಾನ್ಸರ್ ರೋಗಿಗಳಿಗೆ ನೆರವಾಗುವ ರೀತಿಯಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಗಂಗಮ್ಮ ಬೊಮ್ಮಾಯಿ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ನೆರವು ನೀಡಿದ್ದಾರೆ.
ಪುಸ್ತಕ ಓದಿನ ಹವ್ಯಾಸ ಇರುವ ಬಸವರಾಜ ಬೊಮ್ಮಾಯಿ ಅವರು ತಾಯಿ ಹೆಸರಲ್ಲಿ ಟ್ರಸ್ಟ್ ಮಾಡಿದ್ದು, ಅದರ ಮೂಲಕ ಕೆಲ ಪಸ್ತುಕಗಳನ್ನು ಹೊರ ತರುವ ಕೆಲಸ ಮಾಡುತ್ತಿದ್ದು, ಹಲವು ಸಾಮಾಜಿಕ ಸೇವೆಗಳನ್ನು ಕೈಗೊಳ್ಳುತ್ತಿದ್ದರೂ, ಹೆಚ್ಚಿನ ಪ್ರಚಾರಕ್ಕೆ ಮುಂದಾಗಿಲ್ಲ.
ಹುಬ್ಬಳ್ಳಿಯ ಪಾಲಿಕೆಯಲ್ಲಿ ಪ್ರಭಾವ..:
ಸ್ಥಳೀಯ ಸಂಸ್ಥೆ ಚುನಾವಣೆಯೇ ಇರಲಿ, ಇನ್ನಾವುದೇ ಚುನಾವಣೆಯೇ ಇರಲಿ ಅದನ್ನು ಬಸವರಾಜ ಬೊಮ್ಮಾಯಿ ಅವರ ನಿರ್ವಹಣೆಗೆ ನೀಡಿದರೆ, ಅಚ್ಚುಕಟ್ಟಾಗಿ ಯೋಜಿಸಿ ಗೆಲುವಾಗಿಸುವ ಸಾಮರ್ಥ್ಯ ಅವರದ್ದು. ರಾಜ್ಯದಲ್ಲಿ ಅಧಿಕಾರ ಇಲ್ಲದಿದ್ದ ಸಂದರ್ಭದಲ್ಲೂ ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರಿನಲ್ಲಿ ಜನತಾ ಪರಿವಾರ ಅಧಿಕಾರ ಹಿಡಿಯುವಂತೆ ಮಾಡಿದ, ಇಲ್ಲವೆ ಇವರಿಲ್ಲದೆ ಅಧಿಕಾರ ಹಿಡಿಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಿದ್ದ ಹೆಗ್ಗಳಿಕೆ ಇವರದ್ದು. ಅವರ ಗಡಿಯಲ್ಲಿಯೇ ಪಳಗಿ ಇಂದು ನಾವು ರಾಜಕೀಯದಲ್ಲಿ ಅಷ್ಟು ಇಷ್ಟು ಸ್ಥಾನ ಪಡೆದಿದ್ದೇವೆ ಎಂಬುದು ಅವರ ಹಲವು ಬೆಂಬಲಿಗರ ಮಾತು.
-ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.