ಬಿಎಸ್‌ವೈಗೆ ಸಿಡಿಲುತ್ತರ; ನ್ಯಾಯಾಂಗ ತನಿಖೆಗೆ ಆಗ್ರಹ
Team Udayavani, Feb 14, 2017, 6:57 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್‌ಗೆ 1000 ಕೋಟಿ ರೂ. ಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಡಿಸಿದ್ದ “ಬಾಂಬ್’ ಅವರಿಗೇ ತಿರುಗುಬಾಣವಾಗಿದೆ.
ಬಿಎಸ್‌ವೈ ಮುಖ್ಯಮಂತ್ರಿಯಾಗಿದ್ದಾಗ ಬಿಜೆಪಿ ಹೈಕಮಾಂಡ್‌ಗೆ ಹಣ ಕೊಟ್ಟಿರುವ ಬಗೆಗಿನ ಸಂಭಾಷಣೆ ಸೀಡಿ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ. ಭಾನುವಾರ ನಡೆದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್ ಹಾಗೂ ಯಡಿಯೂರಪ್ಪ ಅವರು ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು, “ಮುಖ್ಯಮಂತ್ರಿ ಸಿದ್ದರಾಮಯ್ಯ’ ಕುರಿತು ಆಡಿದ್ದ ಮಾತುಗಳ ಆಡಿಯೋದ “ಸೀಡಿ’ಯನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.
ತಮ್ಮ ಸರ್ಕಾರವಿದ್ದಾಗ ಬಿಜೆಪಿ ಹೈಕಮಾಂಡ್‌ಗೆ ಹಣ ನೀಡಲಾಗಿತ್ತು ಎನ್ನುವ ಅಂಶ ಈ ಮಾತಿನಲ್ಲಿ ಅಡಕವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಇದು ಬಿಜೆಪಿ ನಾಯಕರಿಗೆ ಮುಜುಗರ ಉಂಟು ಮಾಡಿದೆ. ಮೊದಲಿಗೆ ಪ್ರತಿಕ್ರಿಯೆಗೆ ನಿರಾಕರಿಸಿದ್ದ ಅನಂತಕುಮಾರ್ ಸಂಜೆ ವೇಳೆಗೆ, “”ಸೀಡಿ’ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ನಾವು ಮಾಡಿದ ಆರೋಪದ ದಿಕ್ಕು ತಪ್ಪಿಸಲು ಈ ಯತ್ನ ನಡೆದಿದೆ. ನಾವು ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ಹೈಕಮಾಂಡ್‌ಗೆ ಹಣ ಕೊಟ್ಟ ಬಗ್ಗೆ ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮೇಲಿಂದ ಮೇಲೆ ಆರೋಪಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪಕ್ಷದ ಜತೆಗೆ ರಾಜ್ಯ ಸಚಿವ ಸಂಪುಟದ ಐವರು ಸದಸ್ಯರು ಸಿದ್ದರಾಮಯ್ಯ ಪರ ನಿಂತಿದ್ದು, ಸೀಡಿಯನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ.
ಈ ಮಧ್ಯೆ ಮಡಿಕೇರಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್,ಯಡಿಯೂರಪ್ಪ ಅವರು ಏನೇನೋ ಮಾತನಾಡುತ್ತಿದ್ದು, ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಸೀಡಿ ಕಾಂಗ್ರೆಸ್ ನಾಯಕರ ಕೈಗೆ ಸಿಕ್ಕಿದ್ದು ಹೇಗೆ? ವೇದಿಕೆಯಲ್ಲಿ ಕುಳಿತುಕೊಂಡು ಆಪ್ತವಾಗಿ ಮಾತನಾಡಿದ್ದೇ ಮರುದಿನ ಟಿವಿಯಲ್ಲಿ ಬಂದುಬಿಟ್ಟರೆ? ಅಂಥದ್ದೊಂದು ಸಂದಿಗ್ಧತೆಗೆ ಸಿಲುಕಿದ್ದು ಬಿಜೆಪಿ ಮುಖಂಡರು. ಈ ಮಾತನ್ನು ರೆಕಾರ್ಡ್ ಮಾಡಿಕೊಂಡಿದ್ದು ಯಾರು ಮತ್ತು ಏಕೆ ಎನ್ನುವುದು ಈಗ ಎದ್ದಿರುವ ಪ್ರಶ್ನೆ. ಟಿವಿ ಚಾನೆಲ್‌ನವರು ಇದನ್ನು ಗುಟ್ಟಾಗಿ ರೆಕಾರ್ಡ್ ಮಾಡಿಕೊಂಡಿದ್ದಿರಬಹುದು ಎನ್ನಲಾಗಿದೆ. ಆ ಮಾತಿನಲ್ಲಿ ಕುತೂಹಲಕಾರಿ ವಿಷಯ ಇರುವುದು ಗಮನಕ್ಕೆ ಬಂದ ತಕ್ಷಣ ಸಂಬಂಧಿಸಿದ ಟಿವಿ ವಾಹಿನಿಯೊಂದರ ಮುಖ್ಯಸ್ಥರು, ಕಾಂಗ್ರೆಸ್‌ನ ಹಿರಿಯ ಸಚಿವರಿಗೆ
ಸೋಮವಾರ ಬೆಳಗ್ಗೆ ಸಿಡಿ ತಲುಪಿಸಿದ್ದಾರೆ ಎಂದು ವಿಧಾನಸಭೆ ಮೊಗಸಾಲೆಯಲ್ಲಿ ಶಾಸಕರು ಮಾತನಾಡಿಕೊಂಡಿದ್ದು ಕೇಳಿಬಂದಿತು.
ಸಿಎಂಗೆ ಐವರ ರಕ್ಷಣೆ
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಎಂ ಬಿ ಪಾಟೀಲ್, ಡಾ.ಶರಣ್‌ಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ ಹಾಗೂ ಪರಿಷತ್ ಸದಸ್ಯರಾದ ವಿ.ಎಸ್. ಉಗ್ರಪ್ಪ, ಎಚ್.ಎಂ.ರೇವಣ್ಣ, ಸಿಡಿ ಬಿಡುಗಡೆ ಮಾಡಿ, ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸುವ ಸಂಚು ನಡೆಯುತ್ತಿದ್ದು, ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂದು ಹರಿಹಾಯ್ದರು. ಜತೆಗೆ, ಯಡಿಯೂರಪ್ಪ, ಅನಂತಕುಮಾರ್ ನಡುವಿನ ಸಂಭಾಷಣೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದರು.
54 ಸೆಕೆಂಡ್‌ಗಳ ಮಾತು
ಅನಂತಕುಮಾರ್: ನಾನು ಕೊಟ್ಟಿದೀನಿ, ಕೊಟ್ಟಿಲ್ಲಾ ಅಂತ ಎಲ್ಲಿ ಹೇಳಿದೀನಿ, ಆದರೆ, ಸಾವಿರ ಕೋಟಿ ಕೊಟ್ಟಿಲ್ಲಾ ಅಂತ. ಅಂದ್ರೆ ಒಪ್ಪಿಕೊಂಡಂಗೆ ಅಲ್ವಾ ?
ಯಡಿಯೂರಪ್ಪ: ಕೊಟ್ಟಿರ್ತಾರೆ, ಯಾರಾದ್ರೂ ಬರ್ಕೊಂಡು ಇಟ್ಟುಕೊಳ್ತಾರಾ ?
ಅನಂತಕುಮಾರ್: ನಗು..
ಅನಂತಕುಮಾರ್ : ಹರಳು ಬೀಸಿದ್ರೆ ಹತ್ತುಕೊಳ್ಳತ್ತೆ. ಒಂದು ಸಾವಿರ ಕೋಟಿ ಕೊಟ್ಟಿದೀನಿ ಅಂತ ಒಪ್ಪಿಕೊಳ್ಳಲ್ಲ. ಆದ್ರ ಕೊಟ್ಟಿದ್ದಾನೆ ಅಂತ ಒಪ್ಕೊತಾನೆ.
ಯಡಿಯೂರಪ್ಪ: ಡೈರಿ ಆಚೆ ಬರಲಿ ಇರಿ..
ಅನಂತಕುಮಾರ್: ಇಲೆಕ್ಷನ್‌ತನಕಾ ಉತ್ತರಾ ಕೊಡ್ತಾನೆ ಇರಬೇಕಾಗುತ್ತೆ.
ಸಿದ್ದರಾಮಯ್ಯ ಅವರು ಕಾಂಗ್ರೆಸ್ ವರಿಷ್ಠರಿಗೆ 1000 ಕೋಟಿ ರೂ. ನೀಡಿರುವುದು ನಿಜ. ಈ ವಿಚಾರದಲ್ಲಿ ಅವರ ಸವಾಲು ಎದುರಿಸಲು ಸಿದ್ಧ.
ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ
ಹೈಕಮಾಂಡ್‌ಗೆ 1000 ಕೋಟಿ, ಉಕ್ಕಿನ ಸೇತುವೆಯಲ್ಲಿ 65 ಕೋಟಿ ಕಮಿಷನ್ ಆರೋಪ ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.
ಅನಂತಕುಮಾರ್, ಕೇಂದ್ರ ಸಚಿವ
ಬಿಜೆಪಿ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಕಪ್ಪ ಕೊಡುವುದು ಇದೇ ಮೊದಲೇನಲ್ಲ. ಬಿಜೆಪಿ ಅವಧಿಯಲ್ಲೂ ಕೊಡಲಾಗುತ್ತಿತ್ತು.
ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಮಾಡಿರುವ ಆರೋಪಕ್ಕೆ ಸಾಕ್ಷಿ ನೀಡಿದರೆ, ಸಿದ್ದರಾಮಯ್ಯ ಅವರು ಒಂದು ನಿಮಿಷ ಕೂಡ ಕುರ್ಚಿಯಲ್ಲಿ ಇರುವುದಿಲ್ಲ.
ರಮೇಶ್ ಕುಮಾರ್, ಆರೋಗ್ಯ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.