ಆಡಳಿತದಲ್ಲಿ ಜಿಲೇಬಿ-ನಾನ್ ಜಿಲೇಬಿ ಫೈಲ್‌ಗಳು..!
Team Udayavani, Mar 21, 2017, 10:49 AM IST
ವಿಧಾನಸಭೆ: ರಾಜ್ಯದಲ್ಲೀಗ ಜಿಲೇಬಿ ಫೈಲ್, ನಾನ್ ಜಿಲೇಬಿ ಫೈಲ್‌ಗಳ ಕಾಟ ಶುರುವಾಗಿದೆ. ಜಿಲೇಬಿ ಫೈಲ್
ಗಳು ಬಂದರೆ ಬದಿಗಿಡೋದು, ನಾನ್ ಜಿಲೇಬಿ ಫೈಲ್‌ಗಳು ಬಂದರೆ ವಿಲೇವಾರಿ ಮಾಡೋ ಕೆಲಸ ನಡೆಯುತ್ತಿದೆ…!
ಬಜೆಟ್ ಮೇಲಿನ ಚರ್ಚೆ ವೇಳೆ ಸೋಮವಾರ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಪ್ರಸ್ತಾಪಿಸಿದ ಈ ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದಲ್ಲದೆ, ಆ ಕುರಿತು ಸ್ವಾರಸ್ಯಕರ ಚರ್ಚೆಯೂ ನಡೆಯಿತು.
ಚರ್ಚೆ ಸಂದರ್ಭದಲ್ಲಿ ಜಗದೀಶ ಶೆಟ್ಟರ್, ಆಡಳಿತದಲ್ಲಿ ಜಾತಿ ಬರಬಾರದು ಎಂಬುದು ನಿಯಮ. ಆದರೆ, ಈ ಸರ್ಕಾರದಲ್ಲಿ ಜಾತಿಯೇ ಮುಖ್ಯವಾಗಿದೆ. ಫೈಲ್‌ಗಳನ್ನೂ ಜಿಲೇಬಿ, ನಾನ್ ಜಿಲೇಬಿ ಎಂದು ವಿಂಗಡಣೆ ಮಾಡಲಾಗುತ್ತಿದೆ. ಜಿಲೇಬಿ ಫೈಲ್‌ಗಳು ಬಂದರೆ ಬದಿಗಿಡುವುದು, ನಾನ್ ಜಿಲೇಬಿ ಫೈಲ್ ಬಂದರೆ ಅದನ್ನು ವಿಲೇವಾರಿ ಮಾಡುವ ಕೆಲಸ ನಡೆಯುತ್ತಿದೆ. ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ನನಗೆ ಈ ಬಗ್ಗೆ ಹೇಳಿದ್ದರು. ಅದರಂತೆ ಗಮನಿಸಿದಾಗ ಅದು ಹೌದು ಎಂಬುದು ಸ್ಪಷ್ಟವಾಯಿತು ಎಂದು ಹೇಳಿದರು.
“ಏನಿದು ಜಿಲೇಬಿ, ನಾನ್ ಜಿಲೇಬಿ ಫೈಲ್’ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದಾಗ, ” ಜಿ ಎಂದರೆ
ಗೌಡ, ಲೇ ಎಂದರೆ ಲಿಂಗಾಯತ, ಬಿ ಎಂದರೆ ಬ್ರಾಹ್ಮಣ. ಇದನ್ನು ಒಟ್ಟಾಗಿ ಜಿಲೇಬಿ ಎನ್ನುತ್ತಾರಂತೆ’ ಎಂದು ಜಗದೀಶ ಶೆಟ್ಟರ್ ಪ್ರತಿಕ್ರಿಯಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ನರೇಂದ್ರಸ್ವಾಮಿ, ಪ್ರತಿಪಕ್ಷ ನಾಯಕರು ಜಾತಿಗಳ ಮಧ್ಯೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ. ಈ ರೀತಿಯ ಆಧಾರರಹಿತ ಆರೋಪ ಕೇಳಲು ನಾವು ಕುಳಿತಿಲ್ಲ ಎಂದರು. ಇದಕ್ಕೆ ತಿರುಗೇಟು ನೀಡಿದ ಶೆಟ್ಟರ್, “ಬೇಕಿದ್ದರೆ ಫೈಲ್‌ಗಳನ್ನು ತರಿಸಿ ನೋಡಿ. ಅಷ್ಟಕ್ಕೂ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೇನು ಗೊತ್ತು ‘ ಎಂದರು.
ಮಧ್ಯಪ್ರವೇಶಿಸಿದ ಬಿಜೆಪಿಯ ಲಕ್ಷ್ಮಣ ಸವದಿ, “ನಮ್ಮಲ್ಲಿ ಮಕ್ಕಳು ಹುಟ್ಟಿದಾಗ ಜಿಲೇಬಿ ಮತ್ತು ಪೇಡಾ ಕೊಡುವ ಪದ್ಧತಿ ಇದೆ. ಜಿಲೇಬಿ ಕೊಟ್ಟರೆ ಹೆಣ್ಣುಮಗು, ಪೇಡಾ ಕೊಟ್ಟರೆ ಗಂಡುಮಗು ಎಂದು ಅರ್ಥ. ಅದೇ ರೀತಿ ಮುಖ್ಯಮಂತ್ರಿಗಳು ಜಿಲೇಬಿ, ಪೇಡಾ ಫೈಲ್ ಎಂದು ವಿಂಗಡಣೆ ಮಾಡಿರಬಹುದು’ ಎಂದಾಗ, ” ಹಾಗಾದ್ರೆ ಜಿಲೇಬಿ ಎಂದರೆ ಲಕ್ಷ್ಮೀ ಎಂದಾಯಿತು’ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಅದಕ್ಕೆ ಬಸವರಾಜ ಬೊಮ್ಮಾಯಿ, ಲಕ್ಷ್ಮೀ ಯಾರ ಪಾಲಿಗೆ ಎಂದು ಪ್ರಶ್ನಿಸಿದಾಗ ಎಂ.ಬಿ.ಪಾಟೀಲ್ ಸುಮ್ಮನಾದರು.
ವೋಟ್‌ಬ್ಯಾಂಕ್ ರಾಜಕಾರಣವೇ?
ಇದಕ್ಕೂ ಮೊದಲು ಮಾತನಾಡಿದ ಜಗದೀಶ ಶೆಟ್ಟರ್, ಈ ಸರ್ಕಾರ ಕೋಮುಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಮದರಸಾಗಳಲ್ಲಿ ಪೇಷ್ ಇಮಾಮ್ (ಮೌಲ್ವಿ) ಅವರಿಗೆ ನೀಡುವ ಗೌರವಧನವನ್ನು 3 ಸಾವಿರ ರೂ.ನಿಂದ 4 ಸಾವಿರ ರೂ.ಗೆ ಏರಿಸಿದೆ. ಆದರೆ, ತಸ್ತೀಕ್ ಮೊತ್ತ ಹೆಚ್ಚಿಸಬೇಕಂಬ ಮುಜರಾಯಿ ಇಲಾಖೆ ದೇವಸ್ಥಾನಗಳ ಅರ್ಚಕರ ಕೋರಿಕೆ ಪರಿಗಣಿಸಿಲ್ಲ. ಅವರಿಗೆ ಕೇವಲ 3 ಸಾವಿರ ರೂ. ನೀಡುತ್ತಿದ್ದು, ಅದರಲ್ಲಿ ಶೇ. 65 ನ್ನು ದೀಪಾರಾಧನೆ ಮತ್ತು ಪೂಜಾ ಕೈಂಕರ್ಯಕ್ಕೆ ಬಳಸಬೇಕು ಎಂಬ ಆದೇಶವಿದೆ. ಉಳಿದ 1050 ರೂ.ನಲ್ಲಿ ಅರ್ಚಕರು ಜೀವನ ಸಾಗಿಸುವುದಾದರೂ ಹೇಗೆ? ಈ ರೀತಿ ತಾರತಮ್ಯ ಏಕೆ? ಇದೇನು ವೋಟ್ ಬ್ಯಾಂಕ್ ರಾಜಕಾರಣವೇ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.