ಅಗ್ನಿಪಥ್ ವಿರೋಧಿಸಿ ಪ್ರತಿಭಟನೆಗೆ ಸೂಚನೆ: ಡಿ.ಕೆ.ಶಿವಕುಮಾರ್
Team Udayavani, Jun 25, 2022, 8:45 PM IST
ಬೆಂಗಳೂರು: ಅಗ್ನಿಪಥ್ ಯೋಜನೆ ಖಂಡಿಸಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಪ್ರತಿಭಟನೆ ಮಾಡಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಯುವಕರಿಗೆ ದೊಡ್ಡ ಅನ್ಯಾಯವಾಗುತ್ತಿದ್ದು, ಪ್ರತಿಭಟನೆ ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಿ ಈ ಅನ್ಯಾಯ ವಿಚಾರವನ್ನು ಜನರಿಗೆ ಮುಟ್ಟಿಸಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಏನಾದರೂ ಹೇಳಲಿ. ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಮಕ್ಕಳು ನಾಲ್ಕು ವರ್ಷ ಸೇನೆಯಲ್ಲಿ ಸೇವೆಯಲ್ಲಿ ಸಲ್ಲಿಸಿ ನಂತರ ಬೇರೆಯವರಿಗೆ ಸೆಕ್ಯುರಿಟಿ ಗಾರ್ಡ್ ಆಗಲು ಬಿಡುವುದಿಲ್ಲ. ಬೇಕಿದ್ದರೆ ಬಿಜೆಪಿ ನಾಯಕರ ಮಕ್ಕಳು ಆಗ್ನಿಪತ್ ಮೂಲಕ ಸೇನೆ ಸೇರಲಿ ಎಂದು ಹೇಳಿದರು.
ಬಿಜೆಪಿ ನಾಯಕರ ಮಕ್ಕಳು ಮಾತ್ರ ವೈದ್ಯರು, ಇಂಜಿನಿಯರ್, ಪ್ರೊಫೆಸರ್ ಆಗಬೇಕು, ಬಡವರ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಆಗಬೇಕಾ. ಇದು ಸರಿಯಿಲ್ಲ. ಸೇನೆಗೆ ಯುವಕರನ್ನು ತೆಗೆದುಕೊಳ್ಳಲಿ. ಆದರೆ ಪೂರ್ಣಾವಧಿಗೆ ತೆಗೆದುಕೊಂಡು ಅವರು ನಿವೃತ್ತಿಯಾಗುವವರೆಗೂ ಸೇವೆಗೆ ಅವಕಾಶ ನೀಡಲಿ. ಇಷ್ಟು ದಿನ ಹೇಗಿತ್ತೋ ಹಾಗೆಯೇ ನೇಮಕ ಮಾಡಲಿ ಎಂದು ಆಗ್ರಹಿಸಿದರು.
ಯೋಧರ ವೇತನ ಹಾಗೂ ಪಿಂಚಣಿಗೆ ಸಮಸ್ಯೆ ಇದ್ದರೆ, ಸರ್ಕಾರ ಬೇರೆ ವಿಚಾರಗಳಿಗೆ ಸೆಸ್ ಹಾಕುತ್ತಿರುವಂತೆ ಸೆಸ್ ಹಾಕಲಿ ಎಂದು ತಿಳಿಸಿದರು.
ಮಾಜಿ ಸಚಿವ ಸೀತಾರಾಂ ಪಕ್ಷದ ಹಿರಿಯ ನಾಯಕರು. ಅವರು ಶಾಸಕರಾಗಿದ್ದು, ಮಂತ್ರಿಯಾಗಿದ್ದರು. ಸದನದಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು. ಪಕ್ಷ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿತ್ತು. ಆದರೆ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದರಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ಒಳ್ಳೆಯದು ಮಾಡಲಿ .ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದಾರೆ. ಅವರದು ಬಹಳ ಗೌರವಯುತ ಕುಟುಂಬ ಅವರು ಪಕ್ಷ ಬಿಡುವುದಿಲ್ಲ .
-ಡಿ.ಕೆ.ಶಿವಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.