ವಸ್ತುಗಳ ಬೆಲೆ ಸ್ಪಷ್ಪಪಡಿಸಲು ಸೂಚನೆ
Team Udayavani, Jul 18, 2017, 11:44 AM IST
ಬೆಂಗಳೂರು: ಜಿಎಸ್‌ಟಿ ಜಾರಿ ಬಳಿಕ ಪೊಟ್ಟಣ ಸಾಮಗ್ರಿ (ಪ್ಯಾಕೇಜ್ಡ್ ಕಮಾಡಿಟಿ) ವಸ್ತುಗಳ ಬೆಲೆ ಏರಿಕೆಯಾಗಿದೆಯಾ ಅಥವಾ
ಇಳಿಕೆಯಾಗಿದೆಯೇ ಎಂಬ ಬಗ್ಗೆ ಮೂರು ದಿನದಲ್ಲಿ ಮಾಹಿತಿ ನೀಡುವಂತೆ ಕಾನೂನು ಮಾಪನಶಾಸ್ತ್ರ ಇಲಾಖೆ ರಾಜ್ಯದ 700 ನೋಂದಾಯಿತ ಉತ್ಪಾದಕರಿಗೆ ನಿರ್ದೇಶನ ನೀಡಿದೆ.
ಈ ವಿಚಾರದಲ್ಲಿ ಉತ್ಪಾದಕರು ಸ್ಪಂದಿಸದಿದ್ದರೆ ನೋಟಿಸ್ ಸಹ ನೀಡಲು ಸಿದ್ಧತೆ ನಡೆಸಿರುವ ಇಲಾಖೆ ಅದಾದ ನಂತರವೂ ಮಾಹಿತಿ
ಕೊಡದಿದ್ದರೆ ಕ್ರಮ ಜರುಗಿಸಲು ನಿರ್ಧರಿಸಿದೆ. ಇನ್ನೊಂದೆಡೆ ಕೆಲ ಹೋಟೆಲ್‌ಗಳಲ್ಲಿ ಜಿಎಸ್‌ಟಿಯಡಿ ತೆರಿಗೆ ಮಾತ್ರವಲ್ಲದೇ ಹಿಂದಿನ
ವ್ಯಾಟ್‌ನಡಿಯೂ ತೆರಿಗೆ ಸಂಗ್ರಹಿಸಿ ವಂಚಿಸಲಾಗುತ್ತಿದೆ ಎಂಬುದಾಗಿ ದೂರು ಸಲ್ಲಿಕೆಯಾಗಿರುವ ಬಗ್ಗೆ ಸಹ ಇಲಾಖೆ ಪರಿಶೀಲನೆ ನಡೆಸುತ್ತಿದೆ. ಜಿಎಸ್‌ಟಿ ಜಾರಿ ನಂತರ ಸಾರ್ವಜನಿಕ ವಲಯದಲ್ಲಿ ಬೆಲೆ ಏರಿಕೆ ಬಗ್ಗೆ ದೂರುಗಳು ಹಾಗೂ ಆಕ್ಷೇಪಗಳು ವ್ಯಾಪಕವಾಗಿ ಕೇಳಿ ಬಂದ ಬೆನ್ನಲ್ಲೇ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.
ಮಾಹಿತಿ ನೀಡದಿದ್ದರೆ ಕಾನೂನು ಕ್ರಮ: ಕೇಂದ್ರ ಕಾನೂನು ಮಾಪನಶಾಸ್ತ್ರ ನಿರ್ದೇಶನಾಲಯವು ಇತ್ತೀಚೆಗೆ ನೀಡಿರುವ ನಿರ್ದೇಶನದ
ಅನ್ವಯ ಇಲಾಖೆಯು ಕಳೆದ ಶುಕ್ರವಾರ 700ಕ್ಕೂ ಹೆಚ್ಚು ನೋಂದಾಯಿತ ಉತ್ಪಾದಕರಿಗೆ ಸೂಚನೆ ನೀಡಿದ್ದು, ಮೂರು ದಿನದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ. ಮೂರು ದಿನದೊಳಗೆ ಉತ್ಪಾದಕರು ಪ್ರತಿಕ್ರಿಯೆ ನೀಡದಿದ್ದರೆ ಎರಡನೇ ಹಂತದಲ್ಲಿ ನೋಟಿಸ್ ನೀಡಲಿದೆ. ಆ ನೋಟಿಸ್‌ಗೂ ಏಳು ದಿನದೊಳಗೆ ಸ್ಪಂದಿಸದಿದ್ದರೆ 2011ರ ಪ್ಯಾಕೇಜ್ಡ್ ಕಮಾಡಿಟಿ ಕಾಯ್ದೆ ನಿಯಮ 18(3) ಅಡಿ ಕಾನೂನು ಕ್ರಮ ಜರುಗಿಸಲಿದೆ. ಮೊದಲ ಬಾರಿಗೆ ದಂಡ ಹಾಕುವುದು ಹಾಗೂ ಎರಡನೇ ಬಾರಿ ಸಂಬಂಧಪಟ್ಟ ನ್ಯಾಯಾಲಯದಲ್ಲಿ
ಪ್ರಕರಣ ದಾಖಲಿಸಲು ಅವಕಾಶವಿರುವುದರಿಂದ ಉತ್ಪಾದಕರು ಮಾಹಿತಿ ನೀಡುವುದು ಅನಿವಾರ್ಯವಾಗಲಿದೆ.
ಹಳೆಯ- ಹೊಸ ಎಂಆರ್‌ಪಿ ಇರಬೇಕು: ಜೂನ್ 30ರೊಳಗೆ ಪೂರೈಕೆಯಾದ ವಸ್ತುಗಳನ್ನು ಸೆಪ್ಟೆಂಬರ್ 30ರವರೆಗೆ ಮಾರಾಟ ಮಾಡಲು ಅವಕಾಶವಿದ್ದು, ಆನಂತರ ಮಾರಾಟಕ್ಕೆ ನಿಷೇಧವಿದೆ. ಯಾವುದೇ ಪ್ಯಾಕೇಜ್ಡ್ ಕಮಾಡಿಟಿಯಡಿ ಬರುವ ವಸ್ತುವಿನ ಬೆಲೆ ಏರಿಕೆಯಾಗಿದ್ದರೆ ಇಲ್ಲವೇ ಇಳಿಕೆಯಾಗಿದ್ದರೆ ಉತ್ಪಾದಕರು ಕೂಡಲೇ ಹಳೆಯ ದರಪಟ್ಟಿ ಜತೆಗೆ ಪರಿಷ್ಕೃತ ದರಪಟ್ಟಿ ಕಡ್ಡಾಯವಾಗಿ ಮುದ್ರಿಸಬೇಕು. ಏಕೆಂದರೆ ಜಿಎಸ್‌ಟಿ ಜಾರಿ ಬಳಿಕ ವಸ್ತುವಿನ ಬೆಲೆ ವಾಸ್ತವವಾಗಿ ಇಳಿಕೆಯಾಗಿದೆಯೇ, ಏರಿಕೆಯಾಗಿದೆಯೇ ಎಂಬುದು ಗ್ರಾಹಕರಿಗೆ ತಿಳಿಯಬೇಕು ಎಂಬುದು ಇಲಾಖೆ ಆಶಯ. ಅದರಂತೆ ಉತ್ಪಾದಕರು ವಸ್ತುವಿನ ಪರಿಷ್ಕೃತ ಎಂಆರ್‌ಪಿ ದರಪಟ್ಟಿಯನ್ನು ಮುದ್ರಿಸಿ ವಿತರಕರು, ಸಗಟುದಾರರು, ಮಳಿಗೆದಾರರಿಗೆ ವಿತರಿಸಬೇಕು. ಒಂದೊಮ್ಮೆ ಉತ್ಪಾದಕರು ಒದಗಿಸದಿದ್ದರೆ ಮಳಿಗೆದಾರರೇ
ಉತ್ಪಾದಕರಿಂದ ಪಡೆದು ಅಂಟಿಸಬೇಕು. ಇಲ್ಲದಿದ್ದರೆ ಹೊಸ ಎಂಆರ್‌ಪಿ ದರ ಪಟ್ಟಿ ಸಿಗುವವರೆಗೆ ವಸ್ತುವನ್ನು ಮಾರಾಟ ಮಾಡುವಂತಿಲ್ಲ. ಒಂದೊಮ್ಮೆ ಮಾರಾಟ ಮಾಡಿದರೆ ಎಂಆರ್‌ಪಿ ತಿದ್ದುಪಡಿ ಮಾಡಿದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದಕ್ಕೂ ದಂಡ ಹಾಗೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಇಲಾಖೆಗೆ ಅಧಿಕಾರವಿದೆ.
ಸಲ್ಲಿಕೆಯಾಗಿದ್ದು ಕೇವಲ ಮೂರು ದೂರು
ಜಿಎಸ್‌ಟಿ ಜಾರಿ ಬಳಿಕ ಬಹಳಷ್ಟು ವಸ್ತುಗಳು ಅದರಲ್ಲೂ ಹೋಟೆಲ್ ತಿಂಡಿ- ತಿನಿಸು, ಉಪಾಹಾರ, ಊಟದ ಬೆಲೆಗಳಲ್ಲಿ ಇಳಿಕೆಯಾಗುವ ನಿರೀಕ್ಷೆ ಇತ್ತು. ಇದಕ್ಕೆ ಪುಷ್ಠಿ ನೀಡುವಂತೆ ಆರ್ಥಿಕ ತಜ್ಞರು, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಬೆಲೆ ಇಳಿಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಬಹಳಷ್ಟು ಹೋಟೆಲ್‌ಗಳಲ್ಲಿ ಬೆಲೆ ಇಳಿಕೆಯಾಗುವುದಿರಲಿ ಹಾಲಿ ದರ ಸಹ ಮುಂದುವರಿಕೆಯಾಗದೆ ಏರಿಕೆಯಾಗಿದೆ. ಹೀಗೆ ದುಬಾರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕಾನೂನು ಮಾಪನಶಾಸ್ತ್ರ ಇಲಾಖೆಗೆ ಕೇವಲ ಮೂರು ದೂರು ಸಲ್ಲಿಕೆಯಾಗಿವೆ. ನಿರ್ದಿಷ್ಟ ಹೋಟೆಲ್‌ನ ತಿಂಡಿ- ತಿನಿಸಿನ ಬೆಲೆಯಲ್ಲಿ ಜಿಎಸ್‌ಟಿ ತೆರಿಗೆ ಮಾತ್ರವಲ್ಲದೆ ವ್ಯಾಟ್
ತೆರಿಗೆಯನ್ನೂ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಸಲ್ಲಿಕೆಯಾಗಿವೆ. ಆ ಹಿನ್ನೆಲೆಯಲ್ಲಿ ಇಲಾಖೆಯು ಸಂಬಂಧಪಟ್ಟ ತಪಾಸಣಾ ತಂಡಗಳಿಗೆ ಸೂಚನೆ ನೀಡಿ ಪರಿಶೀಲಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದೆ.
ಅಕ್ರಮವಾಗಿ ಬೆಲೆ ಏರಿಕೆ: ಇಲ್ಲಿಗೆ ದೂರು ನೀಡಿ ಪ್ಯಾಕೇಜ್ಡ್ ಕಮಾಡಿಟಿಯಡಿ ಬರುವ ವಸ್ತುಗಳ ಬೆಲೆಯಲ್ಲಿ ಅನಧಿಕೃತವಾಗಿ ಏರಿಕೆ
ಮಾಡಿರುವುದು, ನಿಯಮಬಾಹಿರವಾಗಿ ಹೆಚ್ಚು ತೆರಿಗೆ ವಿಧಿಸುವುದು, ಎಂಆರ್‌ಪಿ ಸಮರ್ಪಕವಾಗಿ ನಮೂದಿಸದಿರುವುದು
ಸೇರಿ ವಸ್ತುವಿನ ತೂಕ, ಅಳತೆ, ಎಂಆರ್‌ಪಿ ಪ್ರಕಟಣೆಯಲ್ಲಿನ ಲೋಪಗಳ ಬಗ್ಗೆ ಕೆಳಕಂಡ ದೂರವಾಣಿಗೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಕಾನೂನು ಮಾಪನಶಾಸ್ತ್ರ ಇಲಾಖೆ: 080- 2225 3500. ಇ-ಮೇಲ್ ವಿಳಾಸ: [email protected]
“ಜಿಎಸ್‌ಟಿ ಜಾರಿ ಬಳಿಕ ಪ್ಯಾಕೇಜ್ಡ್ ಕಮಾಡಿಟಿ ವ್ಯಾಪ್ತಿಯ ವಸ್ತುಗಳ ಬೆಲೆ ಬಗ್ಗೆ ಸ್ಪಷ್ಟತೆ ನೀಡುವಂತೆ ರಾಜ್ಯದ 700ಕ್ಕೂ
ಹೆಚ್ಚು ಉತ್ಪಾದಕರಿಗೆ ಸೂಚನೆ ನೀಡಲಾಗಿದೆ. ಉತ್ಪಾದಕರು ಮಾಹಿತಿ ನೀಡಿದ ಕೂಡಲೇ ಪರಿಶೀಲನೆ ಕಾರ್ಯ ನಡೆಯಲಿದೆ.
ಉತ್ಪಾದಕರು ಮಾಹಿತಿ ನೀಡದಿದ್ದರೆ ನೋಟಿಸ್ ನೀಡಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ನಿಯಮಾನುಸಾರ ಕ್ರಮ
ಜರುಗಿಸಲಾಗುವುದು. ಕೆಲ ಹೋಟೆಲ್‌ಗಳಲ್ಲಿ ಜಿಎಸ್‌ಟಿ ಜತೆಗೆ ವ್ಯಾಟ್ ತೆರಿಗೆಯನ್ನೂ ಪಡೆಯುತ್ತಿರುವ ಬಗ್ಗೆ ಮೂರು ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಸರಳಾ ನಾಯರ್, ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ
ಎಂ.ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.