ಕನ್ನಡದಲ್ಲಿ ಪರೀಕ್ಷೆಗೆ ಇಲ್ಲ ಅವಕಾಶ; ಆಕ್ರೋಶ
ಸಿಆರ್‌ಪಿಎಫ್ ಪರೀಕ್ಷೆಯಲ್ಲಿ ಹಿಂದಿಯೇತರರ ಅವಗಣನೆ: ಆರೋಪ
Team Udayavani, Apr 11, 2023, 6:40 AM IST
ಬೆಂಗಳೂರು: “ಅಮುಲ್ – ನಂದಿನಿ’ ವಿವಾದ ಇನ್ನೂ ಹಸಿಯಾಗಿರುವಾಗಲೇ ರಾಜ್ಯದಲ್ಲಿ ಕನ್ನಡಿಗರನ್ನು ಅವಗಣಿಸುವ ಮತ್ತೂಂದು ವಿವಾದ ಸೋಮವಾರ ಭುಗಿಲೆದ್ದಿದೆ. ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶವೇ ನೀಡಿಲ್ಲ ಎಂದು ಆರೋಪಿಸಿ ರಾಜಕೀಯ ಪಕ್ಷಗಳು, ಕನ್ನಡಪರ ಸಂಘ ಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಸಿಆರ್‌ಪಿಎಫ್ ಪರೀಕ್ಷೆಯಲ್ಲಿ ಹಿಂದಿಯೇತರರನ್ನು ಅವಗಣಿಸುವ ಮೂಲಕ ಕನ್ನಡಿಗರ ಮೇಲೆ ಕೇಂದ್ರ ಮತ್ತೂಂದು ಆಕ್ರಮಣ ಮಾಡಿದೆ ಎಂದು ವಿಪಕ್ಷಗಳ ನಾಯಕರು, ಕರ್ನಾಟಕ ರಕ್ಷಣ ವೇದಿಕೆ ಒಳ ಗೊಂಡಂತೆ ವಿವಿಧ ಸಂಘಟನೆಗಳ ಮುಖಂಡರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿವಾದವು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸ್ಪಷ್ಟ ಸೂಚನೆಗಳಿವೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ಒಟ್ಟು 1.30 ಲಕ್ಷ ಕಾನ್‌ಸ್ಟೆಬಲ್‌ಗಳನ್ನು ನೇಮಿಸಿಕೊಳ್ಳಲು ಕೇಂದ್ರ ಗೃಹ ಇಲಾಖೆ ಉದ್ದೇಶಿಸಿದ್ದು, ಈ ಪೈಕಿ 9,212 ಕಾನ್‌ಸ್ಟೆಬಲ್‌ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಕರ್ನಾಟಕದಲ್ಲಿ 466 ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸಲಾಗಿದೆ. ಆದರೆ ಅದರಲ್ಲಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಹಿಂದಿಯೇತರರು ವಂಚಿತರಾಗುವ ಸಾಧ್ಯತೆಯಿದೆ ಎಂಬ ಆರೋಪ ಕೇಳಿಬರುತ್ತಿದೆ.
ಹಿಂದಿ ಯಜಮಾನಿಕೆ ಸಲ್ಲ
ಕೇಂದ್ರದ ಬಿಜೆಪಿ ಸರಕಾರ ರಾಜ್ಯ ಭಾಷೆಗಳನ್ನು ಮೂಲೆಗೆ ತಳ್ಳಿ ಹಿಂದಿ ಭಾಷೆಯನ್ನು ನಮ್ಮ ತಲೆ ಮೇಲೆ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಾಟದ ಎಚ್ಚರಿಕೆ
ಸಿಆರ್‌ಪಿಎಫ್ ಮರುಪರೀಕ್ಷೆ ನಡೆಸ ಬೇಕು. ಇಲ್ಲವಾದರೆ ಈ ತಾರತಮ್ಯ ಹಾಗೂ ಹಿಂದಿ ಹೇರಿಕೆ ಇನ್ನೊಂದು ದೊಡ್ಡ ಹೋರಾಟಕ್ಕೆ ನಾಂದಿ ಆದೀತು ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, ಕನ್ನಡ ಮತ್ತು ಕನ್ನಡಿಗರ ಬಗ್ಗೆ ಯಾಕೆ ಈ ಸಿಟ್ಟು? ಯಾಕೆ ಪದೇಪದೆ ಭಾಷೆಗೆ ಧಕ್ಕೆ ತರುತ್ತಿದ್ದೀರಿ? ವಿವಿಧತೆಯಲ್ಲಿ ಏಕತೆ ಎಂಬ ಮೂಲತತ್ವಕ್ಕೆ ಧಕ್ಕೆ ತರುತ್ತಿರುವುದು ಯಾಕೆ? ಕೂಡಲೇ ಮರುಪರೀಕ್ಷೆಗೆ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.