ಅಪಘಾತಗಳು ಸಂಭವಿಸಿದರೆ ಅಧಿಕಾರಿಗಳೇ ಹೊಣೆ: ಹೈಕೋರ್ಟ್
ಬೀದರ್ ಜಿಲ್ಲೆಯಲ್ಲಿ ಹಾಳಾದ ರಸ್ತೆಗಳು
Team Udayavani, Nov 11, 2021, 9:30 PM IST
ಬೆಂಗಳೂರು: ಬೀದರ್ ಜಿಲ್ಲೆಯಾದ್ಯಂತ ರಸ್ತೆ ಗುಂಡಿಗಳನ್ನು ಮುಚ್ಚುವ ಮತ್ತು ರಸ್ತೆಗಳನ್ನು ದುರಸ್ತಿಗೊಳಿಸುವ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಅಧಿಕಾರಿಗಳು ಸರ್ಕಾರದ ಮಾತು ಕೇಳುತ್ತಿಲ್ಲ ಎಂದಾದರೆ, ಹೇಗೆ ಕೆಲಸ ಮಾಡಬೇಕು ಅವರಿಗೆ ನಾವೇ ಹೇಳಿಕೊಡುತ್ತೇವೆ ಎಂದು ಚಾಟಿ ಬೀಸಿದೆ.
ಬೀದರ್ ಜಿಲ್ಲೆಯಾದ್ಯಂತ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು ಮತ್ತು ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಗುರುನಾಥ ವದ್ದೆ 2019ರಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಗುರುವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಆಗ ಸರ್ಕಾರದ ಪರ ವಕೀಲರು ಮಾನ್ಸೂನ್ ಮಳೆ ಕಾರಣಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಮಳೆಗಾಲ ಮುಗಿದ ಮೇಲೆ ಆದ್ಯತೆಯ ಮೇಲೆ ರಸ್ತೆ ಗುಂಡಿ ಮುಚ್ಚುವ ಮತ್ತು ರಸ್ತೆ ದುರಸ್ತಿ ಕಾರ್ಯ ಪ್ರಾರಂಭಿಸಲಾಗುವುದು ಎಂದು ಸಮಜಾಯಿಷಿ ನೀಡಿದರು.
ಅದಕ್ಕೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, 2019ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ನಾಲ್ಕು ವಾರಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು 2021ರ ಸೆ.20ರಂದು ಸರ್ಕಾರ ಭರವಸೆ ನೀಡಿತ್ತು. ಈಗ ಮತ್ತೇ ಸರ್ಕಾರ ಕಾಲಾವಕಾಶ ಕೇಳಿತ್ತಿದೆ. ಇಡೀ ಜಿಲ್ಲೆಯ ರಸ್ತೆಗಳು ಅತ್ಯಂತ ದುಸ್ಥಿತಿಯಲ್ಲಿವೆ ಎಂದು ಅರ್ಜಿದಾರರ ಪರ ವಕೀಲರು ಹೇಳುತ್ತಿದ್ದಾರೆ. ನಿಜಕ್ಕೂ ಇದು ಬೇಸರದ ಸಂಗತಿ ಎಂದು ಹೇಳಿತು.
ಇದನ್ನೂ ಓದಿ:ಅನ್ನದಾತರು ಆರ್ಥಿಕ ಪ್ರಗತಿ ಸಾಧಿಸಲಿ: ಸಚಿವ ಬಿ.ಸಿ.ಪಾಟೀಲ
ಅಲ್ಲದೇ ಸರ್ಕಾರದ ಪರ ವಕೀಲರು ಸಮರ್ಥರಿರಬಹುದು. ಆದರೆ, ಸರ್ಕಾರದ ಮಾತು ಅಧಿಕಾರಿಗಳು ಕೇಳುತ್ತಿಲ್ಲ. ಬೆಂಗಳೂರಿನಲ್ಲಿ ಮಾತ್ರ ಮಳೆ ಬೀಳುತ್ತಿದೆ. ಇಡೀ ರಾಜ್ಯದಲ್ಲಿ ಮಳೆ ಇಲ್ಲ. ಅದರಲ್ಲೂ ಬೀದರ್ ಒಣ ಪ್ರದೇಶ. ಅಲ್ಲಿನ ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಮಳೆ ನೆಪ ಹೇಳುತ್ತಿದ್ದಾರೆ. ಹೇಗೆ ಕೆಲಸ ಮಾಡುಬೇಕು ಎಂದು ಅಧಿಕಾರಿಗಳಿಗೆ ಹೇಳುವುದು ನ್ಯಾಯಾಲಯಕ್ಕೆ ಗೊತ್ತಿದೆ. ಸಂಬಂಧಪಟ್ಟ ಅಧಿಕಾರಿ ವೇತನ ತಡೆ ಹಿಡಿದರೆ ಗೊತ್ತಾಗುತ್ತದೆ ಎಂದು ನ್ಯಾಯಪೀಠ ತೀಕ್ಷ್ಣವಾಗಿ ಹೇಳಿತು.
ಅಧಿಕಾರಿಗಳೇ ಹೊಣೆ:
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳು ಸಂಭವಿಸಿ ಅನಾಹುತಗಳು ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಜಿಲ್ಲೆಯ ರಸ್ತೆಗಳಲ್ಲಿನ ಗುಂಡಿ ಮುಚ್ಚಿ, ಹಾಳಾದ ರಸ್ತೆಗಳನ್ನು ದುರಸ್ತಿಗೊಳಿಸಿ ಎಲ್ಲಾ ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಹೈಕೋರ್ಟ್, ಕೆಲಸ ಆಗದಿದ್ದರೆ ಮುಂದಿನ ವಿಚಾರಣೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಮುಖ್ಯ ಇಂಜಿನಿಯರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿ ವಿಚಾರಣೆಯನ್ನು 2022ರ ಜ.18ಕ್ಕೆ ಮುಂದೂಡಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.