ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಆಫ್ ಲೈನ್ ಶಿಕ್ಷಣ
ಒತ್ತಡ ನಿರ್ವಹಣೆ ಹೇಗೆ? ಒತ್ತಡ ನಿರ್ವಹಣೆ ಹೇಗೆ?
Team Udayavani, Oct 20, 2020, 5:31 AM IST
ಸಾಂದರ್ಭಿಕ ಚಿತ್ರ
ಕೋವಿಡ್ ಆತಂಕದ ನಡುವೆ ಹುಟ್ಟಿಕೊಂಡ ಆನ್‌ಲೈನ್ ತರಗತಿಗಳು ಶಿಕ್ಷಕರು, ಮಕ್ಕಳು ಮತ್ತು ಪೋಷಕರನ್ನು ಹೈರಾಣಾಗಿಸಿದೆ. ತತ್‌ಕ್ಷಣದ ಆನ್‌ಲೈನ್ ತರಗತಿಗೆ ತಯಾರಾಗದ ಶಿಕ್ಷಕರು, ಕಷ್ಟಪಟ್ಟು ಆಲಿಸುವ ವಿದ್ಯಾರ್ಥಿಗಳು, ಮಕ್ಕಳನ್ನು ಆನ್‌ಲೈನ್ ತರಗತಿಗೆ ಸಿದ್ಧಗೊಳಿಸುವಲ್ಲಿ ಪೋಷಕರು ಸಮಸ್ಯೆಗಳನ್ನೇ ಅನುಭವಿಸುತ್ತಿದ್ದಾರೆ. ಜತೆಗೆ ಆನ್‌ಲೈನ್ ಶಿಕ್ಷಣ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತಿರುವುದರಿಂದ ಈ ನಡುವೆ ಆಫ್‌ಲೈನ್ ಶಿಕ್ಷಣದೆಡೆಗೆ ಚಿಂತನೆ ಮಾಡಲು ಇದು ಸಕಾಲ. ಸಂಪೂರ್ಣವಾಗಿ ಆಫ್‌ಲೈನ್ ಸಾಧ್ಯವಾಗದಿದ್ದರೂ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹೇಗೆ ಒತ್ತು ನೀಡಬಹುದು ಎಂಬ ಬಗ್ಗೆ ಮಾನಸಿಕ ಆರೋಗ್ಯ ತಜ್ಞೆ ಡಾ| ರಮೀಳಾ ಶೇಖರ್ ವಿವರಿಸಿದ್ದಾರೆ.
ಆನ್‌ಲೈನ್ ಶಿಕ್ಷಣ ಮಕ್ಕಳ ವೈಯಕ್ತಿಕ ಸಂಬಂಧಕ್ಕೆ ಅಡಚಣೆಯುಂಟು ಮಾಡಿದೆ. ಬೆಳೆಯುವ ಹಂತದಲ್ಲಿ ಸಾಮಾಜಿಕ ಸಂಪರ್ಕ ಮಕ್ಕಳಿಗೆ ಅತೀ ಮುಖ್ಯ. ಆದರೆ, ಇಲ್ಲಿ ಅದು ಸಿಗುತ್ತಿಲ್ಲ. ಹೀಗಾಗಿ ಕ್ರಿಯಾತ್ಮಕ ಚಟುವಟಿಕೆಯನ್ನು ಸದಾ ನೀಡುವುದರ ಮುಖಾಂತರ ಆ ಕೊರತೆ ನೀಗಿಸುವ ಪ್ರಯತ್ನವನ್ನು ಮಾಡಬೇಕು.
ಅನುಭವ ಆಧಾರಿತ ಕಲಿಕೆಗೆ ಪ್ರೋತ್ಸಾಹ
ವಿಜ್ಞಾನ ಪಾಠ ಮಾಡುವಾಗ ಶಿಕ್ಷಕರೇ ಹೇಳುತ್ತಾ ಹೋಗುವುದಕ್ಕಿಂತ ಮಕ್ಕಳಿಂದ ಪ್ರಯೋಗಗಳನ್ನು ಮಾಡಿಸಿ. ಉದಾಹರಣೆಗೆ ಹೂವಿನ ವಿವಿಧ ಭಾಗಗಳನ್ನು ಆನ್‌ಲೈನ್ ತರಗತಿಯಲ್ಲಿ ವಿವರಿಸಿದ ಬಳಿಕ ಮಕ್ಕಳಿಗೆ ಅವರ ಮನೆಯ ಗಾರ್ಡನ್‌ನಿಂದ ಹೂವೊಂದನ್ನು ತಂದು ಅದರ ವಿವಿಧ ಭಾಗಗಳನ್ನು ಗುರುತಿಸಲು ಹೇಳಿ. ಇಂತಹ ಸಣ್ಣಪುಟ್ಟ ಪ್ರಯೋಗಗಳನ್ನು ಮಾಡಿಸುವುದರಿಂದ ಅನುಭವ ಆಧಾರಿತ ಕಲಿಕೆ ನಡೆಯುತ್ತದೆ ಮತ್ತು ಅದು ಜೀವನಪರ್ಯಂತ ನೆನಪಿನಲ್ಲೂ ಉಳಿಯುತ್ತದೆ.
ಹೆತ್ತವರೇನು ಮಾಡಬೇಕು?
ಕ್ರಿಯಾತ್ಮಕ ಚಟುವಟಿಕೆ ಎಂದರೆ ಕೇವಲ ಶಿಕ್ಷಕರದ್ದಷ್ಟೇ ಪಾತ್ರವಲ್ಲ, ಪೋಷಕರದ್ದೂ ಅಷ್ಟೇ ಮುಖ್ಯ. ಇಲ್ಲಿವರೆಗೆ ಟ್ಯೂಶನ್, ತರಗತಿ, ಸ್ಪೆಷಲ್ ಕ್ಲಾಸ್ ಎಂದು ಸದಾ ಒತ್ತಡದಲ್ಲಿದ್ದ ಮಕ್ಕಳಿಗೆ ಸದ್ಯ ತುಂಬಾ ಸಮಯ ಸಿಕ್ಕಿದೆ. ಮಕ್ಕಳಲ್ಲಿ ಎಳವೆಯಿಂದಲೇ ಸಾಕಷ್ಟು ಆಸೆಗಳಿರುತ್ತವೆ ಮತ್ತು ಸಮಯದ ಕೊರತೆಯಿಂದ ಅದನ್ನು ಪೂರೈಸಲಾಗದೆ ಒದ್ದಾಡುತ್ತಾರೆ. ಅಂತಹ ಆಸೆಗಳನ್ನು ತಿಳಿದುಕೊಂಡು ಅದನ್ನು ನೆರವೇರಿಸುವುದಕ್ಕೆ ಪ್ರಯತ್ನಿಸಿ. ಕ್ಲಿನಿಕ್‌ಗೆ ಬಂದ ಹುಡುಗಿಯೋರ್ವಳಿಗೆ ನಿನ್ನ ಕನಸೇನು ಎಂದು ಕೇಳಿದ್ದಕ್ಕೆ ಗಿಟಾರ್ ಹಿಡಿಯಬೇಕೆಂಬ ಕನಸು ಎಳವೆಯಿಂದಲೇ ಇತ್ತು, ಇಲ್ಲಿವರೆಗೆ ನನಸಾಗಿಲ್ಲ ಎಂದಳು. ಈಗ ಸಮಯವಿದೆಯಲ್ಲ ಕನಸು ನನಸಾಗಿಸು ಎಂದೆ. ಆಕೆ ಹೆತ್ತವರ ಬಳಿ ಹೇಳಿ ಗಿಟಾರ್ ಪಡೆದುಕೊಂಡು ಆನ್‌ಲೈನ್ ಗಿಟಾರ್ ತರಗತಿಗೆ ಸೇರಿಕೊಂಡಳು. ಪ್ರಸ್ತುತ ಗಿಟಾರ್ ವಾದನದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂತಹ ಚಟುವಟಿಕೆಗಳು ಮಾನಸಿಕ ಆರೋಗ್ಯವರ್ಧನೆಗೂ ಕಾರಣವಾಗುತ್ತವೆ.
ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು
ತರಗತಿಗೆ ತೆರಳಿ ಶಿಕ್ಷಣ ಪಡೆಯುವುದು ಪ್ರಸ್ತುತ ಅಸಾಧ್ಯವಾಗಿರುವುದರಿಂದ ಆನ್‌ಲೈನ್ ಶಿಕ್ಷಣ ಅನಿವಾರ್ಯ. ಆದರೆ, ಈ ಆನ್‌ಲೈನ್ ಶಿಕ್ಷಣದ ನಡುವೆಯೇ ಆಫ್‌ಲೈನ್ ಶಿಕ್ಷಣವನ್ನು ನೀಡುವ ಬಗ್ಗೆ ಇಲಾಖೆಯು ಶಿಕ್ಷಕರ ಜತೆ ಸೇರಿ ಯೋಜನೆ ರೂಪಿಸಬೇಕು. ಆದಷ್ಟು ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಮಕ್ಕಳು ಆಲೋಚನೆ ಮಾಡುವಂತಹ ಅಸೈನ್‌ಮೆಂಟ್‌ಗಳನ್ನು ನೀಡಬೇಕು.
ಕ್ರಿಯಾತ್ಮಕ ಚಟುವಟಿಕೆ ಹೀಗಿರಲಿ
ಕಲಿಸುವಾಗ ಶಿಕ್ಷಕರು ವಿದ್ಯಾರ್ಥಿಗಳ ಎದುರಿಗೆ ಇರಲೇಬೇಕು ನಿಜ. ಆದರೆ, ಈಗ ಅದು ಅಸಾಧ್ಯ. ಹೀಗಾಗಿ ಮಕ್ಕಳಿಗೆ ಪರ್ಯಾಯವಾಗಿ
ಕಲಿಸಿ. ಇಂಗ್ಲಿಷ್ ಪದವೊಂದನ್ನು ಹೇಳಿ ಅದಕ್ಕೆ ಪರ್ಯಾಯ ಅರ್ಥಗಳನ್ನು ಸಂಗ್ರಹಿಸಲು ತಿಳಿಸಿ. ಮೊದಲು ಡಿಕ್ಷನರಿ, ಅನಂತರ ವೃತ್ತ ಪತ್ರಿಕೆಗಳಲ್ಲಿ ಹುಡುಕಲು ತಿಳಿಸಿ. ಇದರಿಂದ ಅವರಿಗೆ ಆನ್‌ಲೈನ್ ಶಿಕ್ಷಣದಡಿ ಮೊಬೈಲ್ ಸ್ಕ್ರೀನ್ ನೋಡುವುದು ಕಡಿಮೆಯಾಗಿ ಪತ್ರಿಕೆ ಓದುವ ಹವ್ಯಾಸವೂ ಬೆಳೆಯುತ್ತದೆ. ಮಕ್ಕಳು ಹುಡುಕಿದ ಪರ್ಯಾಯ ಶಬ್ದಗಳನ್ನು ಮರುದಿನ ಗ್ರೂಪ್‌ಗ್ಳಲ್ಲಿ ಹಾಕಿ ಅವರ ಕೆಲಸವನ್ನು ಶ್ಲಾಘಿಸಿ. ಶ್ಲಾಘನೆ ಸಿಗುತ್ತದೆಂಬ ಕಾರಣಕ್ಕೆ ಅಸೈನ್‌ಮೆಂಟ್‌ಗಳ ವೇಳೆ ಮಕ್ಕಳ ಪಾಲ್ಗೊಳ್ಳುವಿಕೆ ಜಾಸ್ತಿಯಾಗುತ್ತದೆ. ಆತ್ಮವಿಶ್ವಾಸವೂ ವೃದ್ಧಿಯಾಗುತ್ತದೆ.
ಮಕ್ಕಳ ಕನಸು ನನಸಾಗಿಸಿ
ಆನ್‌ಲೈನ್ ತರಗತಿ ಎಂಬ ತತ್‌ಕ್ಷಣದ ಬದಲಾವಣೆಗೆ ಶಿಕ್ಷಕರು, ಮಕ್ಕಳು ಅನಿವಾರ್ಯವಾಗಿ ಒಗ್ಗಿಕೊಂಡಿದ್ದಾರೆ. ಇಲ್ಲಿ ಆದಷ್ಟು ಸ್ಕ್ರೀನ್ ಟೈಮ್ ಕಡಿಮೆ ಮಾಡಿ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಜತೆಗೆ ಸಾಕಷ್ಟು ಸಮಯಾವಕಾಶ ಇರುವುದರಿಂದ ಮಕ್ಕಳ ಕನಸುಗಳನ್ನು ತಿಳಿದುಕೊಂಡು ಅದನ್ನು ನೆರವೇರಿಸಲು ಹೆತ್ತವರು ಮನಸ್ಸು ಮಾಡಬೇಕು. ಇದರಿಂದ ಮಕ್ಕಳ ಮನಸ್ಸು ಖುಷಿಯಾಗುತ್ತದೆ, ಆ ಮೂಲಕ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ.
-ಡಾ| ರಮೀಳಾ ಶೇಖರ್, ಮಾನಸಿಕ ಆರೋಗ್ಯ ತಜ್ಞೆ, ಮಂಗಳೂರು
ಆನ್‌ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ. 7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.