2ನೇ ದಿನವೂ ಕನ್ನಡದ ತೇರಿಗೆ ಲಕ್ಷ ಮಂದಿ;ಗೋಷ್ಠಿಗಳಲ್ಲೂ ಸಾಹಿತ್ಯಾಸಕ್ತರು ಭರ್ತಿ
ಸಮ್ಮೇಳನಕ್ಕೆ ಶಕ್ತಿ ತುಂಬಿದ "ಶಕ್ತಿ' ಯೋಜನೆ... ಮಳೆ ಅಡ್ಡಿ, ನಿರಾಸೆ
Team Udayavani, Dec 22, 2024, 1:16 AM IST
ಮಂಡ್ಯ: ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2ನೇ ದಿನ ಶನಿವಾರವೂ ಮಂಡ್ಯ ಜಿಲ್ಲೆ ಜನ ಸ್ವಯಂ ಪ್ರೇರಿತರಾಗಿ ಆಗಮಿಸುವ ಮೂಲಕ ಮತ್ತೂಮ್ಮೆ ಅಪ್ಪಟ ಕನ್ನಡಿಗರ ಜಿಲ್ಲೆ ಎಂಬುದನ್ನು ಸಾಕ್ಷೀಕರಿ ಸಿದ್ದಾರೆ. ಮೊದಲ ದಿನದಂತೆ ಸಮ್ಮೇಳನಕ್ಕೆ 2ನೇ ದಿನವೂ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನಸಾಗ ರವೇ ಹರಿದುಬಂದಿದ್ದರಿಂದ “ಕನ್ನಡ ಜಾತ್ರೆ’ ಎಂಬ ಪದಕ್ಕೆ ಅರ್ಥ ಸಿಕ್ಕಿದಂತಾಗಿತ್ತು. ಆದರೆ, ಸಂಜೆ ವೇಳೆಗೆ ಈ ಸಂತಸಕ್ಕೆ ವರುಣ ಸ್ವಲ್ಪ ಅಡ್ಡಿಬಂದಿದ್ದು ಬಿಟ್ಟರೆ ಉಳಿದಂತೆ ಉತ್ತಮವಾಗಿ ನಡೆದಿದೆ.
ಸಮ್ಮೇಳನಕ್ಕೆ ಶಕ್ತಿ ತುಂಬಿದ “ಶಕ್ತಿ’ ಯೋಜನೆ: ಶನಿವಾರ ಶಾಲೆಗಳಿಗೆ ರಜೆ ಇದ್ದುದ್ದರಿಂದ ಸರಕಾರಿ ಹಾಗೂ ಖಾಸಗಿ ಶಾಲೆಯವರು ತಮ್ಮ ತಮ್ಮ ಶಾಲೆಯ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆ ತಂದರೆ, ರಾಜ್ಯ ಸರಕಾರದ “ಶಕ್ತಿ’ ಯೋಜನೆಯು ಸಮ್ಮೇಳನಕ್ಕೆ ಶಕ್ತಿಯ ಜತೆಗೆ ಉತ್ಸಾಹವನ್ನೂ ತುಂಬಿದೆ. ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗ ವಹಿ ಸಬೇಕು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿ ಗ್ರಾಪಂಗಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದರಿಂದ ಮಹಿಳೆಯರೂ ಸೇರಿ ನಾಗರಿಕರು ಸ್ವಯಂ ಪ್ರೇರಿತರಾಗಿ ಸಮ್ಮೇಳನದತ್ತ ಮುಖ ಮಾಡಿದ್ದರು.
ಜಾತ್ರೆಯಂತೆ ಗೋಚರಿಸಿದ ಸಮ್ಮೇಳನ: ವೇದಿಕೆ ಸುತ್ತಮುತ್ತ ಜನರಿಂದಲೇ ತುಂಬಿ ಹೋಗಿತ್ತು. ಕನ್ನಡ ಜಾತ್ರೆಗೆ ಅರ್ಥ ಬರುವ ರೀತಿ ಜನರು ಸಾಕ್ಷಿ ಯಾದರು. ವಿವಿಧೆಡೆಗಳಿಂದ ಆಗಮಿಸಿದ ಜನರು ಬಸ್ ಇಳಿದು ಬರುವಾಗ ನದಿಯು ಸಮುದ್ರ ಸೇರಿದಂತೆ ಭಾಸವಾಗುತ್ತಿತ್ತು. ಆ ರೀತಿ ಯ ವಾತಾ ವರಣ ಸೃಷ್ಟಿಯಾಗಿತ್ತು. ಇದರಿಂದ 2ನೇ ದಿನವೂ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ತುಂಬಿದ ಪುಸ್ತಕ ಮಳಿಗೆಗಳು: ಶನಿವಾರವೂ ಪುಸ್ತಕ, ವಾಣಿಜ್ಯ ಹಾಗೂ ವಸ್ತು ಪ್ರದರ್ಶನ ಮಳಿಗೆಗಳು ಸಾಹಿತ್ಯಾಸಕ್ತರು, ಕನ್ನಡಾಭಿಮಾನಿ ಗಳು, ಸಾರ್ವಜನಿ ಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಂದ ತುಂಬಿ ಹೋಗಿತ್ತು. ಕೆಲವರು ತಮಗಿಷ್ಟವಾದ ಪುಸ್ತಕ ಖರೀದಿಸಿ ದರು. ವಿವಿಧ ಇಲಾಖೆಗಳಿಂದ ಏರ್ಪಡಿಸಿದ್ದ ವಸ್ತು ಪ್ರದರ್ಶನ ಕಣ್ತುಂಬಿಕೊಂಡರು. ಅಲ್ಲದೆ, ವಾಣಿಜ್ಯ ಮಳಿಗೆಗಳಲ್ಲೂ ಜನರ ಗುಂಪು ಕಂಡು ಬಂದಿತು.
ಮಾರುಕಟ್ಟೆಯಾದ ಹೊರಾಂಗಣ: ವೇದಿಕೆ ಮುಂಭಾಗದ ಹೊರಾಂಗಣ ಪ್ರದೇಶ ಸಂಪೂರ್ಣ ಮಾರುಕಟ್ಟೆಯಾಗಿ ಬದಲಾಗಿತ್ತು. ವಿವಿಧ ರೀತಿಯ ತಿಂಡಿ ತಿನಿಸುಗಳು, ಮಕ್ಕಳ ಆಟಿಕೆಗಳ ಮಾರಾಟ ಮಾಡಲಾಗುತ್ತಿತ್ತು. ಬೀದಿಬದಿ ವ್ಯಾಪಾರಸ್ಥರಿಗೆ ಸಮ್ಮೇಳನ ಆದಾಯದ ಮೂಲವಾಗಿದ್ದರಿಂದ ವರ್ತಕರು ಸಂತಸ ವ್ಯಕ್ತಪಡಿಸಿದರು.
ಗೋಷ್ಠಿಗಳಲ್ಲೂ ಜನ
ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಸಾಮಾನ್ಯ
ವಾಗಿ ಜನರು ಸೇರುವುದಿಲ್ಲ ಎಂಬ ಅಪವಾದಗಳು ಕೇಳಿ ಬರುತ್ತಿದ್ದವು. ಮೊದಲ ದಿನ ಈ ಕೊರಗು ಕಂಡಿತ್ತು. ಆದರೆ, 2ನೇ ದಿನ ಸಮ್ಮೇಳನದ ಪ್ರಧಾನ ವೇದಿಕೆಯೂ ಈ ಅಪವಾದಕ್ಕೆ ವಿರುದ್ಧವಾಗಿತ್ತು. ಗೋಷ್ಠಿಗಳಲ್ಲಿ ವಿಐಪಿ ಹಾಗೂ ಸಾರ್ವಜನಿಕರ ಗ್ಯಾಲರಿಯಲ್ಲೂ ಜನರು ಕಂಡು ಬಂದರು.
ಊಟದಲ್ಲೂ ಸರತಿ ಸಾಲು
ಮೊದಲ ದಿನ ತುಂಬಿದ್ದ ಊಟದ ವಿತರಣೆ ಕೌಂಟರ್‌ಗಳು 2ನೇ ದಿನವೂ ಸರತಿ ಸಾಲು ಉದ್ದವಾಗಿ ಬೆಳೆದಿದ್ದವು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಲಾರಿಗಟ್ಟಲೇ ಖಡಕ್ ರೊಟ್ಟಿ, ಹಾಲು
ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತಿಗಳು, ಸಾರ್ವಜನಿಕರು, ಕನ್ನಡಾಭಿಮಾನಿಗಳಿಗೆ ಊಟ ಬಡಿಸುವ ಉದ್ದೇಶದಿಂದ ಉತ್ತರ ಕರ್ನಾಟಕದ ಶೈಲಿಯ ಖಡಕ್ ರೊಟ್ಟಿಗಳನ್ನು ಲಾರಿಗಟ್ಟಲೇ ತರಲಾಗಿತ್ತು. ಅಲ್ಲದೆ, ದೊಡ್ಡ ದೊಡ್ಡ ಟ್ಯಾಂಕರ್‌ಗಳಲ್ಲಿ ಹಾಲು ತರುತ್ತಿದ್ದ ದೃಶ್ಯ ಕಂಡು ಬಂದಿತು.
ಸಾಹಿತ್ಯ ಸಮ್ಮೇಳನಕ್ಕೆ ಮಳೆ ಅಡ್ಡಿ, ನಿರಾಸೆ
ಸಕ್ಕರೆ ನಗರಿ ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನದ 2ನೇ ದಿನದ ಸಂಜೆ 6.30ರ ಸುಮಾರಿಗೆ ದಿಢೀರ್ ಮಳೆ ಸುರಿಯಿತು. ಇದರಿಂದಾಗಿ ಸಮ್ಮೇಳನದ ಸವಿ ಸವಿದು ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭೋಗವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಲಕ್ಷಾಂತರ ಸಾಹಿತ್ಯಸಕ್ತರು ಕೆಲ ಕಾಲ ನಿರಾಸೆಗೊಂಡರು.
ಏಕಾಏಕಿ ಸುರಿದ ಮಳೆಯಿಂದ ರಕ್ಷಿಸಿಕೊಳ್ಳಲು ವೇದಿಕೆಗಳತ್ತ ಜನ ಚೆಲ್ಲಾಪಿಲ್ಲಿಯಾಗಿ ಓಡಿದರು. ಸಂಜೆ ಸಮಯವಾಗಿ ದ್ದರಿಂದ ಪ್ರಧಾನ ವೇದಿಕೆಯಲ್ಲಿ ಕಾರ್ಯಕ್ರಮ ನಡೆ ಯುತ್ತಿತ್ತು. ರಾತ್ರಿ ಭೋಜನ ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಮ್ಮೇಳನ ಆಸುಪಾಸಿ ನಲ್ಲಿದ್ದ ಅಂಗಡಿ, ಮಳಿಗೆಗಳಲ್ಲಿಯೂ ವ್ಯಾಪಾರ ವಹಿ ವಾಟು ಜೋರಾಗಿತ್ತು. ಆದರೆ, ಮಳೆ ಬಂದಾಗ ಉಡು ಪುಗಳು, ಆಹಾರ ಪದಾರ್ಥಗಳು ಸೇರಿ ಕೆಲವು ವಸ್ತು ಗಳು ನೆನೆದು ವ್ಯಾಪಾರಸ್ಥರಿಗೆ ತೊಂದರೆಯಾಯಿತು.
ಮಂಡ್ಯ ಬೆಲ್ಲದ ಸವಿಗೆ ಮನಸೋತ ಮಂದಿ
ಸಕ್ಕರೆ ನಾಡು ಮಂಡ್ಯದ ಬೆಲ್ಲ ಸವಿದವನೇ ಬಲ್ಲ ಎಂಬ ಮಾತಿದ್ದು, ಮಂಡ್ಯದ ಬಿಸಿಬಿಸಿ ಬೆಲ್ಲ ಸವಿಯಲು ಸಾಹಿತ್ಯಾಭಿಮಾನಿಗಳು ಮುಗಿಬಿದ್ದ ದೃಶ್ಯ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕಂಡುಬಂದಿತು. ನುಡಿಜಾತ್ರೆ ಯಲ್ಲಿ ಮಂಡ್ಯದ ಸಂಸ್ಕೃತಿಯನ್ನು ಬಿಂಬಿಸುವ ಪ್ರಾತ್ಯಕ್ಷಿಕೆ ಗಳನ್ನು ಏರ್ಪಡಿಸಲಾಗಿತ್ತು. ವೇದಿಕೆ ಬಳಿ ಮಂಡ್ಯ ಜಿಲ್ಲಾ ಆಲೆಮನೆ ಬೆಲ್ಲ ಉತ್ಪಾದಕರ ರೈತ ಉತ್ಪಾದಕ ಕಂಪೆನಿ ವತಿಯಿಂದ ಏರ್ಪಡಿಸಿದ್ದ ಆಲೆಮನೆಯ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ಚಿಕ್ಕದಾದ ಕೊಪ್ಪರಿಗೆಯನ್ನು ಬಳಸಿ ಸೌಧೆ ಒಲೆಯ ಮೂಲಕ ಕಬ್ಬನ್ನು ಅರೆದು ಬೆಲ್ಲ ತಯಾರಿ ಸುವ ಪ್ರಕ್ರಿಯೆ ತೋರಿಸಲಾಗು ತಿತ್ತು. ಬಿಸಿ ಬೆಲ್ಲದ ಸವಿಗೆ ಜನರು ಮನಸೋತರು. ಬಿಸಿಬಿಸಿ ಬೆಲ್ಲ ತಿಂದಿದ್ದು ಇದೇ ಮೊದಲು, ಚೆನ್ನಾಗಿದೆ ಎಂದು ಸೇರಿದ್ದವರು ಹೇಳಿದರು.
“ಅಕ್ಷರ ಭಂಡಾರ’ದಲ್ಲಿ ಸಮೃದ್ಧ ಮಾಹಿತಿ
ಬೆಂಗಳೂರಿನ ಮಿಥಿಕ್ ಸೊಸೈಟಿಯವರು ನಿರ್ಮಿಸಿದ “ಅಕ್ಷರ ಭಂಡಾರ’ ವೆಬ್‌ಸೈಟ್‌ನಲ್ಲಿ ಪ್ರಾಚೀನ ಶಾಸನಗಳನ್ನು 3ಡಿ ಡಿಜಿಟಲ್‌ನಡಿ ಸಂರಕ್ಷಿಸಿರುವ ಬಗ್ಗೆ ಸಮ್ಮೇಳನದಲ್ಲಿ ಹಾಕಲಾಗಿರುವ ಮಳಿಗೆಯಲ್ಲಿ ಸಂಸ್ಥೆ ವತಿಯಿಂದ ಸಾಹಿತ್ಯಾಭಿಮಾನಿಗಳಿಗೆ ಮಾಹಿತಿ ನೀಡಲಾಯಿತು.
“ಅಕ್ಷರ ಭಂಡಾರ’ವು ಕನ್ನಡ ಲಿಪಿಗಳ ಸಮೃದ್ಧ ಜಗತ್ತಿಗೆ ಪ್ರವೇಶ ದ್ವಾರವಾಗಿದೆ. ಈ ಹೊಸ Óಫ್ಟ್‌ವೇರ್‌ನ ಮೂಲಕ ಅತ್ಯಾಧುನಿಕ 3ಡಿ ಡಿಜಿಟಲ್ ಸ್ಕ್ಯಾನಿಂಗ್ ತಂತ್ರಜ್ಞಾನದೊಂದಿಗೆ, ನಮ್ಮ ಅತ್ಯಮೂಲ್ಯ ಪರಂಪರೆಯ ಸಂರಕ್ಷಣೆಯ ಜತೆಗೆ ಜ್ಞಾನ ಹೆಚ್ಚಿಸುವ ಬಯಕೆ ಹೊಂದಲಾಗಿದೆ. ಈ ಸಾಫ್ಟ್‌ವೇರ್‌ನಲ್ಲಿರುವ ಎಲ್ಲ ಡಿಜಿಟಲ್ ಚಿತ್ರಗಳನ್ನು ದಿ ಮಿಥಿಕ್ ಸೊಸೈಟಿಯು, ಶಾಸನಗಳನ್ನು 3ಡಿ ಡಿಜಿಟಲ್ ಸಂರಕ್ಷಣ ಯೋಜನೆಯಿಂದ ನಿರ್ಮಿಸಲಾಗಿದೆ.
ಸಾರಾಂಶ, ವಿಶ್ಲೇಷಣೆ
ಪ್ರಾಚೀನ ಭಾಷೆಯ ಲಿಪಿ ಮತ್ತು ಭಾಷೆಯ ಸೊಗಡು ತಿಳಿಸಲು, 1500 ಶಾಸನಗಳನ್ನು ಗೂಗಲ್‌ನಲ್ಲಿ ಹಾಕಿ ಡಿಟಿಟಲ್ ಮೀಡಿಯಾ ಮೂಲಕ ಪಾಠ, ಸಾರಾಂಶ, ವಿಶ್ಲೇಷಣೆಯ ಮಾಹಿತಿ ತಿಳಿಸಲು ಈ ಸಂಸ್ಥೆ ಪ್ರಯತ್ನಿಸುತ್ತಿದೆ. ಬೆಂಗಳೂರಿನ ಸುತ್ತ ಮುತ್ತಲಿನಲ್ಲಿ ಸುಮಾರು 5ರಿಂದ 18ನೇ ಶತಮಾನದ 1500 ಶಿಲಾಶಾಸನಗಳನ್ನು 3ಡಿ ಡಿಜಿಟಲ್ ಸಂರಕ್ಷಣೆ ಯೋಜನೆ ಅಡಿಯಲ್ಲಿ ಸಂರಕ್ಷಣೆ ಮಾಡಲಾಗಿದೆ. 5ನೇ ಶತಮಾನದಲ್ಲಿ ಕನ್ನಡ ಭಾಷೆಯು ಪ್ರಚಲಿತದಲ್ಲಿದ್ದು, ಅದೇ ರೀತಿ 6,7,8 ನೇ ಶತಮಾನಗಳ ಶಾಸನಗಳು ಸಿಗುತ್ತವೆ.
ಬದ್ಧತೆ ಇದ್ದರೆ ಸ್ಥಾನಮಾನ
20ನೇ ಶತಮಾನದ ರಾಜಕೀಯ ಚಳವಳಿ ಸುವರ್ಣಯುಗದಂತಿತ್ತು.ಸಾಂಸ್ಕೃತಿಕ ಬದ್ಧತೆ ಇದ್ದಾಗ ದೊಡ್ಡ ಹೆಸರು ಸಾಧ್ಯವಿದೆ.
ಬಿ.ಎಲ್.ಶಂಕರ್, ರಾಜಕೀಯ ಚಿಂತಕ
ಸಂಘಟಕರ ಕಾರ್ಯ ಪ್ರೇರಣೆ
ಮೌಖೀಕ ಜಾನಪದ ಕಾವ್ಯಗಳನ್ನು ಮೊದಲ ಬಾರಿಗೆ ಸಮ್ಮೇಳನದ ವೇದಿಕೆ ಯಲ್ಲಿ ಪ್ರಸ್ತುತ ಪಡಿಸುತ್ತಿರುವುದು ಪ್ರಶಂಸನಾರ್ಹ.
ಡಾ| ವೀರಣ್ಣದಂಡಿ, ಜಾನಪದ ತಜ್ಞ
ಅಂಬೇಡ್ಕರ್ ಜೀವಂತ
ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಜೀವಂತವಿ ರುತ್ತದೋ ಅಲ್ಲಿವರೆಗೂ ಅಂಬೇಡ್ಕರ್ ಜೀವಂತವಾಗಿರುತ್ತಾರೆ.
ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ
ಸಮ್ಮೇಳನ ಬಾಳಾ ಅಚ್ಚುಕಟ್ಟಾಗಿದೆ
ಗೋಷ್ಠಿಯ ಕೆಲ ವಿಷಯಗಳನ್ನ ಹೊಸದಾಗಿ ಇಟ್ಟಾರ. ಸಣ್ಣಪುಟ್ಟ ವ್ಯವಸ್ಥೆ ಕೊರತೆ ಆಗಿದ್ದು ಬಿಟ್ಟರೆ ಅಚ್ಚುಕಟ್ಟಾಗಿದೆ.
ಬಸು ಬೇವಿನಗಿಡದ, ಸಾಹಿತಿ ಧಾರವಾಡ
ಮಣ್ಣೇ ಸತ್ತರೆ ನಾವೆಲ್ಲಿ ?
ನಾವು ಸತ್ತರೆ ಮಣ್ಣು, ಮಣ್ಣೇ ಸತ್ತರೆ ನಾವೆಲ್ಲಿ ಎಂಬ ಚಿಂತನೆ ಶುರುವಾಗಿದೆ. ಮಣ್ಣಿನ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕಾಗಿದೆ.
ಡಾ.ಎ.ಬಿ.ಪಾಟೀಲ್, ವಿಜ್ಞಾನಿ
ಎಚ್.ಶಿವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.