Team Udayavani, Oct 21, 2020, 5:30 AM IST
ಆನ್‌ಲೈನ್ ಕಲಿಕೆ ಕುರಿತು ಇರುವ ಸ್ಪಷ್ಟತೆಗಿಂತ ಗೊಂದಲವೇ ಹೆಚ್ಚು. ಹಾಗೆ ನೋಡುವುದಾದರೆ ಇದು ಪೂರ್ಣ ಪ್ರಮಾಣದ ಆನ್‌ಲೈನ್ ಕಲಿಕೆಯೂ ಅಲ್ಲ; ಆಂಶಿಕವಷ್ಟೇ. ಬಹಳ ಸರಳವಾಗಿ ಹೇಳುವುದಾದರೆ “ವೀಡಿಯೋ ತರಗತಿಗಳು’. ಇದು ಸೃಷ್ಟಿಸುತ್ತಿರುವ ಒತ್ತಡವೇ ಬೇರೆ ತೆರನಾದದ್ದು. ಈ ದಿಶೆಯಲ್ಲಿ ಇಂದು ಪೋಷಕರ ಒತ್ತಡ ಮತ್ತು ನಿರ್ವಹಣೆ ಬಗೆಗಿನ ವಿವರ ನೀಡಲಾಗಿದೆ. ಇದನ್ನು ಹೊರತುಪಡಿಸಿ ಪ್ರಶ್ನೆಗಳಿದ್ದರೆ ವಾಟ್ಸಾಪ್ ಮಾಡಿ. 7618774529
ಆನ್‌ಲೈನ್ ಕಲಿಕೆ ಎಂದರೆ ಇಲ್ಲಿ ಕ್ಲಾಸ್‌ರೂಂ ಕಲಿಕೆಯಂತೆ ಸುದೀರ್ಘ ಕಲಿಕೆ ಇರುವುದಿಲ್ಲ. ಕಡಿಮೆ ಅವಧಿಯದ್ದು ಮತ್ತು ಆಲೋಚನಾ ಶಕ್ತಿಯೂ ಕಡಿಮೆ ಸಾಕು. ಇದೇ ಮಕ್ಕಳನ್ನು ಸುಲಭವಾಗಿ ಪಾರಾಗುವ ತಂತ್ರದೆಡೆಗೆ (ಸೇಫ್ ಝೋನ್) ಕೊಂಡೊಯ್ಯುತ್ತಿದೆಯೇ ಎಂಬ ಆತಂಕವೂ ಸದ್ಯ ಸೃಷ್ಟಿಯಾಗುತ್ತಿದೆ. ಆನ್‌ಲೈನ್ ಶಿಕ್ಷಣದಡಿ ನಡೆಸುವ ಪರೀಕ್ಷೆಗಳೇ ಈ ಆತಂಕಕ್ಕೆ ಸಾಕ್ಷಿ.
ಆನ್‌ಲೈನ್ ಪರೀಕ್ಷೆಯಲ್ಲಿ ದೀರ್ಘವಾಗಿ ಬರೆಯುವುದಕ್ಕೆ ಇರುವುದಿಲ್ಲ. ಏನಿದ್ದರೂ ನಾಲ್ಕು ಉತ್ತರಗಳ ಆಪ್ಶನ್. ಅದರಲ್ಲಿ ಒಂದಕ್ಕೆ ಟಿಕ್ ಮಾಡಿದರಾಯಿತು. ಇದು ಮಕ್ಕಳ ಯೋಚನಾ ಕ್ರಮವನ್ನು ಕುಬjವಾಗಿಸಿ, ಬರೆದು ಕಲಿಯುವ ಆಸಕ್ತಿಯನ್ನೂ ಕಡಿಮೆ ಮಾಡುತ್ತದೆ ಎಂಬ ಆತಂಕ ಪೋಷಕರಲ್ಲಿದೆ. ಆದರೆ, ಈ ಆತಂಕ ಅಗತ್ಯವೇ? ಆನ್‌ಲೈನ್ ಶಿಕ್ಷಣದಡಿಯಲ್ಲಿ ಪರೀಕ್ಷೆಗಳಲ್ಲಿ ಟಿಕ್ ಮಾಡದೆ ಬರೆಯುವುದಕ್ಕೆ ಹೇಗೆ ನೀಡಬಹುದು ಎಂಬ ಬಗ್ಗೆ ಮನೋವೈದ್ಯೆ ಡಾ| ಅರುಣಾ ಯಡಿಯಾಳ್ ವಿವರಿಸಿದ್ದಾರೆ.
ಶಿಕ್ಷಕರೇನು ಮಾಡಬೇಕು?
ಸಮತೋಲನದಲ್ಲಿರಲಿ ಮಕ್ಕಳು ಆನ್‌ಲೈನ್ ಶಿಕ್ಷಣದಡಿ ಟಿಕ್ ಮಾಡಿ ಉತ್ತರ ಬರೆಯುವುದಕ್ಕೆ ಹೊಂದಿಕೊಂಡು, ಮುಂದೆ ಶಾಲೆಗೆ ತೆರಳಿದಾಗ ಮತ್ತೆ ಹಳೆಯ ಪದ್ಧತಿಗೆ ಮರಳಲು ಸ್ವಲ್ಪ ತೊಂದರೆ ಅನುಭವಿಸುತ್ತಾರೆ. ಆದರೆ, ಅದು ಕೆಲವು ದಿನಗಳ ಮಟ್ಟಿಗೆ ಮಾತ್ರ. ಇದಕ್ಕಾಗಿ ಹಳೆಯ ಮತ್ತು ಹೊಸ ಪದ್ಧತಿಯ ಪರೀಕ್ಷಾ ವಿಧಾನ ಎರಡನ್ನೂ ಶಿಕ್ಷಕರು ಸಮತೋಲನದಲ್ಲಿಡಬೇಕು.
ಬರೆಯಲು ಪ್ರೇರಣೆ ನೀಡಿ
ಆನ್‌ಲೈನ್ ಪರೀಕ್ಷೆಗಳನ್ನೇ ನಡೆಸುವುದಕ್ಕೆ ಬದಲಾಗಿ ಎಲ್ಲ ಶಿಕ್ಷಕರು ಪ್ರಶ್ನೆಯನ್ನು ಬರೆದು ಕಳುಹಿಸಿ ಬರೆಯುವ ಮೂಲಕವೇ ಉತ್ತರಿಸಲು ವಿದ್ಯಾರ್ಥಿಗಳಿಗೆ ಹೇಳಬಹುದು. ಇದರಿಂದ ಮಕ್ಕಳ ಆಲೋಚನಾ ಕ್ರಮ ಬೆಳೆಯುತ್ತದೆ. ಅಲ್ಲದೆ, ಓದಿ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.
ಕೆಲವು ಸಾಫ್ಟ್‌ವೇರ್‌ಗಳನ್ನು ಖರೀದಿಸಿದರೆ ಆನ್‌ಲೈನ್ ಇಂಟರ್ಯಾಕ್ಟಿವ್ ಪರೀಕ್ಷೆಗಳನ್ನೇ ಮಾಡಬಹುದು. ಗೂಗಲ್ ಕ್ಲಾಸ್‌ರೂಂಗಳಲ್ಲಿ ನೇರಾನೇರ ನೋಡಿಕೊಂಡು ಉತ್ತರ ಬರೆದು ಸ್ಕ್ರೀನ್‌ನಲ್ಲಿ ತೋರಿಸುವುದು, ಅದಕ್ಕೆ ಶಿಕ್ಷಕರು ಅಂಕ ಪ್ರಕಟಿಸುವುದು ಇತ್ಯಾದಿ.
ಸಂದರ್ಭದ ಅನಿವಾರ್ಯ
ಆನ್‌ಲೈನ್ ಶಿಕ್ಷಣ ಈಗಿನ ಅನಿವಾರ್ಯವಾಗಿದೆ. ಆನ್‌ಲೈನ್ ಎಂದ ಮೇಲೆ ಅಲ್ಲಿ ಲಭ್ಯ ಪರಿಮಿತಿಯೊಳಗೆ ಶಿಕ್ಷಕರು ಕಲಿಸಬೇಕಾಗುತ್ತದೆ. ಹಾಗಾಗಿ ಆಬೆjಕ್ಟಿವ್ ಸ್ಕೋರಿಂಗ್ ಅನ್ನು ಅವಲಂಬಿಸಬೇಕಾಗುತ್ತದೆ. ಇಲ್ಲಿ ನಾಲ್ಕು ಉತ್ತರಗಳಿದ್ದು, ಅವುಗಳಲ್ಲೊಂದನ್ನು ಮಕ್ಕಳು ಆಯ್ಕೆ ಮಾಡಿ ಉತ್ತರ ಟಿಕ್ ಮಾಡಬೇಕಾಗುತ್ತದೆ. ಆದರೆ, ಇದು ತೀರಾ ಮಕ್ಕಳನ್ನು ಸೇಫ್ ಝೋನ್‌ಗೆ ಕೊಂಡೊಯ್ಯುತ್ತದೆ ಎನ್ನುವುದಕ್ಕಿಂತ ಇದೊಂದು ಈ ಸಂದರ್ಭದ ಅನಿವಾರ್ಯ ಎಂದು ಅರಿತುಕೊಳ್ಳಬೇಕು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಬೆjಕ್ಟಿವ್ ಮಾದರಿಯ ಉತ್ತರಗಳಿಗೆ ಅವಕಾಶ. ಅಲ್ಲಿ ಮಕ್ಕಳ ಯೋಚನಾಶಕ್ತಿ, ಬುದ್ಧಿಶಕ್ತಿಗೆ ಪರೀಕ್ಷೆ ನೀಡುವಂತೆ ಈಗಿನ ಆನ್‌ಲೈನ್ ಶಿಕ್ಷಣದಲ್ಲಿ ಮಕ್ಕಳ ಬುದ್ಧಿಶಕ್ತಿಗೆ ಪರೀಕ್ಷೆ ಎಂದೇ ಪರಿಭಾವಿಸಬಹುದು.
ಎಲ್ಲ ಆನ್‌ಲೈನ್ ಪರೀಕ್ಷೆಗಳು ಆನ್‌ಲೈನ್‌ನಲ್ಲೇ ನಡೆಯುವುದಿಲ್ಲ. ಕೆಲವು ಶಿಕ್ಷಕರು ಪ್ರಶ್ನೆ ಪತ್ರಿಕೆಯನ್ನು ಮಕ್ಕಳಿಗೆ ಆನ್‌ಲೈನ್‌ನಲ್ಲಿ ಕಳುಹಿಸಿ ಅದಕ್ಕೆ ಉತ್ತರ ಬರೆದು ಕಳುಹಿಸಲು ಹೇಳುತ್ತಾರೆ. ಇಲ್ಲಿ ಮಕ್ಕಳ ಬರವಣಿಗೆಗೆ ಹೆಚ್ಚು ಅವಕಾಶ ಸಿಗುತ್ತದೆ.
ಸಣ್ಣ ಮಕ್ಕಳಿಗೆ ಈ ಅನಿವಾರ್ಯ ಸಂದರ್ಭದಲ್ಲಿ ಸಾಮಾನ್ಯ ಶಿಕ್ಷಣ, ಪರೀಕ್ಷೆಗಳು ತೀರಾ ಅಗತ್ಯವಿಲ್ಲ. ಮನೆಯಲ್ಲಿ ಹೆತ್ತವರು ಶಿಕ್ಷಿತರಾಗಿದ್ದರೆ ಅವರೇ ಓದಿಸಬಹುದು, ಪರೀಕ್ಷೆಯನ್ನೂ ಅವರೇ ನೀಡಬಹುದು.
ಬರವಣಿಗೆಗೆ ಆದ್ಯತೆ ಸಿಗಲಿ
ಆನ್‌ಲೈನ್ ಕಲಿಕೆ ಈ ಸಂದರ್ಭದ ಅನಿವಾರ್ಯ. ಇಲ್ಲಿ ಪರೀಕ್ಷೆಯನ್ನೂ ನಡೆಸುವುದು ಇನ್ನೊಂದು ಅನಿವಾರ್ಯ. ಇದು ಮಕ್ಕಳ ಕೌಶಲವನ್ನೇ ಮರೆಯಾಗಿಸುತ್ತದೆ ಎನ್ನುವುದಕ್ಕಿಂತ ಅನಿವಾರ್ಯತೆಯ ಸಂದರ್ಭದಲ್ಲಿ ಒಂದು ಆಯ್ಕೆ ಎಂದು ಪರಿಭಾವಿಸಬೇಕು. ಶಿಕ್ಷಕರು ಸಾಧ್ಯವಾದಷ್ಟು ಬರವಣಿಗೆಗೆ ಒತ್ತು ನೀಡುವ ಪ್ರಶ್ನೆಗಳನ್ನು ಕಳುಹಿಸಿ ಮಕ್ಕಳು ಉತ್ತರ ಬರೆದು ಕಳುಹಿಸುವಂತೆ ಪ್ರೇರೇಪಿಸಬಹುದು.
– ಡಾ| ಅರುಣಾ ಯಡಿಯಾಳ್, ಮನೋವೈದ್ಯರು, ಮಂಗಳೂರು