ಹತ್ತು ದಿನಗಳ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ತೆರೆ
Team Udayavani, Nov 25, 2017, 7:24 AM IST
ಸುವರ್ಣಸೌಧ, ಬೆಳಗಾವಿ: ಕುಂದಾನಗರಿಯಲ್ಲಿ ಹತ್ತು ದಿನಗಳ ಕಾಲ ನಡೆದ ವಿಧಾನಮಂಡಲ ಅಧಿವೇಶನಕ್ಕೆ ಶುಕ್ರವಾರ ತೆರೆಬಿದ್ದಿದ್ದು, ಈ ಅಧಿವೇಶನ ಕೆಲವು ಮಹತ್ವದ ವಿಧೇಯಕಗಳ ಅಂಗೀಕಾರಕ್ಕೆ ಸಾಕ್ಷಿಯಾಯಿತಲ್ಲದೇ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಿಲ್ಲ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಲು ವೇದಿಕೆಯಾಯಿತು.
ವಿದ್ಯುತ್ ಖರೀದಿ ಹಗರಣ ಕುರಿತು ವರದಿ ಮಂಡನೆಯಾದರೂ ಚರ್ಚೆಗೆ ಅವಕಾಶ ಸಿಗದ ಕಾರಣ ಠುಸ್ ಆದಂತಾಯಿತು. ಹತ್ತು ದಿನಗಳ ಅಧಿವೇಶನದಲ್ಲಿ ನಿರೀಕ್ಷೆಯಂತೆ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಜಾರ್ಜ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿರುವುದು, ನೈಸ್ ಹಗರಣ, ಲ್ಯಾಪ್‌ಟಾಪ್ ಹಗರಣ ಸದ್ದು ಮಾಡಿತಾದರೂ ಪ್ರತಿಪಕ್ಷಗಳ ಮನದಾಳದಂತೆ ತಾರ್ಕಿಕ ಅಂತ್ಯ ಕಾಣಲಿಲ್ಲ.
ವಿರೋಧಿಗಳು ಒಟ್ಟಾಗಲಿಲ್ಲ: ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಡುವೆಯೂ ಸಮನ್ವಯತೆ ಇರಲಿಲ್ಲ. ಬಿಜೆಪಿ ಜಾರ್ಜ್ ಪ್ರಕರಣ ಬೆನ್ನತ್ತಿದ್ದರೆ, ಜೆಡಿಎಸ್ ನೈಸ್ ಹಾಗೂ ವಿದ್ಯುತ್ ಖರೀದಿ ಹಗರಣದ ಚರ್ಚೆಗೆ ಪಟ್ಟು ಹಿಡಿಯಿತು. ಸರ್ಕಾರದ ವಿರುದ್ಧ ಮುಗಿಬೀಳುವಲ್ಲಿ ಎರಡೂ ಪಕ್ಷಗಳು ಹತ್ತೂ ದಿನ ಒಟ್ಟಾಗಲೇ ಇಲ್ಲ. ಕೆಲವು ವಿಚಾರಗಳಲ್ಲಿ ಜೆಡಿಎಸ್‌ನ ತಟಸ್ಥ ಧೋರಣೆ ಸರ್ಕಾರಕ್ಕೆ ವರವೂ ಆಯಿತು. ವಿದ್ಯುತ್ ಖರೀದಿ ಹಗರಣದಲ್ಲಿ ನೇರವಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಶೋಭಾ ಕರಂದ್ಲಾಜೆ ಹೆಸರು ಪ್ರಸ್ತಾಪ ಮಾಡಿದ್ದರೂ, ಬಿಜೆಪಿ ಸದಸ್ಯರು ತುಟಿಕ್ ಪಿಟಿಕ್ ಎನ್ನಲಿಲ್ಲ. ಗದ್ದಲ-ಕೋಲಾಹಲ, ಧರಣಿ, ಪ್ರತಿಭಟನೆ ನಡುವೆಯೂ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ತಡರಾತ್ರಿವರೆಗೂ ಕಲಾಪ ನಡೆಸಿ ಮಹತ್ವದ ವಿಧೇಯಕಗಳ ಅಂಗೀಕಾರವಾಗುವಂತೆ ನೋಡಿಕೊಂಡು ಜಾಣತನ ತೋರಿತು.
ಕಲಾಪ ಬಲಿ: ವಿಧಾನಸಭೆಯಲ್ಲಿ ಹತ್ತು ದಿನಗಳ ಅಧಿವೇಶನದಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದು ಧರಣಿ ನಡೆಸಿದ್ದರಿಂದ ಒಂದು ದಿನದ ಕಲಾಪ ಬಲಿಯಾದರೆ, ಅಂತಿಮ ದಿನ ಜಿಪಂ ಸದಸ್ಯ ಯೋಗೀಶ್‌ಗೌಡ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಬಲಿಯಾಯಿತು. ಹೀಗಾಗಿ ಸದನ ಆರಂಭ ಮತ್ತು ಅಂತ್ಯ ಎರಡೂ ಗದ್ದಲದಲ್ಲೇ ಆಯಿತು. ಬಿಜೆಪಿ ನಾಯಕರಿಗೆ ಮಾನ ಮಾರ್ಯದೆ ಇಲ್ಲವೆಂಬ ಸಿದ್ದರಾಮಯ್ಯ ಹೇಳಿಕೆಯಿಂದ ಅರ್ಧ ದಿನ ಕಲಾಪ ಬಲಿಯಾಗಿದ್ದು ಬಿಟ್ಟರೆ ಉಳಿದಂತೆ ಸುಗಮವಾಗಿತ್ತು. ಕಲಾಪ ಸುಗಮ ವಿಚಾರಕ್ಕೆ ಬಂದರೆ ವಿಧಾನ ಪರಿಷತ್‌ನಲ್ಲಿ ಈ ಬಾರಿ ಹೆಚ್ಚು ಅವಧಿಯ ಚರ್ಚೆಗಳು ನಡೆದವು. ರಾತ್ರಿ 11 ಗಂಟೆವರೆಗೂ ಕಲಾಪ ನಡೆದ ಉದಾಹರಣೆಯೂ ಇತ್ತು.
ವಿಧೇಯಕ ಅಂಗೀಕಾರ: ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ಹಾಕುವ ಹಾಗೂ ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟ ಸುಧಾರಿಸುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ, ವಾಸಿಸುವವನೇ ನೆಲದೊಡೆಯ ಉದ್ದೇಶದ ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್‌ಗ್ಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಭೂ ಸುಧಾರಣಾ ತಿದ್ದುಪಡಿ ವಿಧೇಯಕ, ದುಷ್ಟ ಹಾಗೂ ಅಮಾನವೀಯ ಪದ್ಧತಿಗಳ ತಿದ್ದುಪಡಿ ವಿಧೇಯಕ, ಎಸ್‌ಸಿ, ಎಸ್‌ಟಿ ಅಧಿಕಾರಿ-ನೌಕರರಿಗೆ ನೀಡಿರುವ ಬಡ್ತಿ ಮೀಸಲಾತಿ ಉಳಿಸುವ ನಿಟ್ಟಿನ ಪ್ರಯತ್ನದ ವಿಧೇಯಕ ಸೇರಿ ಹನ್ನೊಂದು ವಿಧೇಯಕಗಳಿಗೆ ಅಂಗೀಕಾರ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಯಿತು. ಜತೆಗೆ ಕರಾವಳಿ ಭಾಗದ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕಾನೂನು ಮಾನ್ಯತೆ ದೊರಕಿಸುವ ವಿಧೇಯಕಕ್ಕೂ ಅಂಗೀಕಾರ ಪಡೆದು ಆ ಭಾಗದ ಜನರ ಭಾವನೆಗಳಿಗೆ ಸ್ಪಂದಿಸಿದ ತೃಪ್ತಿ ಪಡೆಯಿತು.
ಕೆರೆ ಒತ್ತುವರಿ ಕುರಿತು ಸ್ಪೀಕರ್ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯ ಸಮಿತಿ ರಾಜಧಾನಿ ಬೆಂಗಳೂರಿನಲ್ಲಿ ಕೆರೆ ಮತ್ತು ರಾಜಕಾಲುವೆಗಳ ಒತ್ತುವರಿ ಹಾಗೂ ಜಲಮೂಲ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಹತ್ವದ ಶಿಫಾರಸು ಸಮೇತ ವರದಿ ಸಲ್ಲಿಸಿದ್ದು
ಪ್ರಮುಖ ವಿಚಾರ. ಈ ಬಾರಿ ಅಧಿವೇಶನದ ಸಂದರ್ಭದಲ್ಲೇ ವೈದ್ಯರ ಮುಷ್ಕರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು
ಸುಳ್ಳಲ್ಲ. ಖುದ್ದು ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಾಯಿತು. ಕಬ್ಬು ಬೆಳೆಗಾರರ ಸಮಸ್ಯೆ ದೊಡ್ಡ ಮಟ್ಟದಲ್ಲಿಲ್ಲದ ಕಾರಣ, ಪ್ರತಿಭಟನೆ ನಡೆಯಲಿಲ್ಲ. ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಪ್ರಸಕ್ತ ಅವಧಿಯಲ್ಲಿ ಸುವರ್ಣ ಸೌಧದಲ್ಲಿ ನಡೆದ ಕೊನೆಯ ಅಧಿವೇಶನವೂ ಇದಾಗಿದ್ದರಿಂದ ಸರ್ಕಾರವೂ ತನ್ನ ಸಾಧನೆಯ ಬೆನ್ನು ತಟ್ಟಿಕೊಳ್ಳುವ ಅವಕಾಶವನ್ನು ತಪ್ಪಿಸಿಕೊಳ್ಳಲಿಲ್ಲ.
ಶಾಸಕರ ನಿರಾಸಕ್ತಿ
ವಿಧಾನಸಭೆಯಲ್ಲಿ ಹತ್ತೂ ದಿನಗಳಲ್ಲಿ ಒಂದೇ ಒಂದು ದಿನವೂ 224 ಶಾಸಕರ ಪೈಕಿ ಅರ್ಧದಷ್ಟು ಶಾಸಕರು ಹಾಜರಿರಲಿಲ್ಲ. 100ರಿಂದ 110 ಶಾಸಕರ ಹಾಜರಿ. ಕೋರಂ ಕೊರತೆಯಿಂದ ಸದನ ಮುಂದೂಡಿದ ಪ್ರಸಂಗವೂ ನಡೆಯಿತು. ಸಚಿವರ ಗೈರು ಹಾಜರಿ ಪದೇಪದೆ ಪ್ರತಿಪಕ್ಷದವರಿಗೆ ಆಹಾರವಾಗಿತ್ತು. ವಿಧಾನಸಭೆಗೆ ನಿಯೋಜಿ ಸಿದ ಸಚಿವರು ಪ್ರಶ್ನೋತ್ತರ ವೇಳೆಯಲ್ಲಿ ಬಾರದ ಕಾರಣ ಪ್ರತಿಪಕ್ಷಗಳ ಸದಸ್ಯರು ಲೇವಡಿ ಮಾಡಿ ಸರ್ಕಾರ ಸತ್ತಿದೆಯೋ ಬದುಕಿದೆಯೋ ಎಂದು ಪ್ರಶ್ನಿಸುವಂತಾಗಿತ್ತು.
ರೈತರ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ
ಉತ್ತರ ಕರ್ನಾಟಕ ಭಾಗದ ಆಶೋತ್ತರಗಳ ಈಡೇರಿಕೆ ಉದ್ದೇಶದಿಂದ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಈ ಭಾಗದ ಸಮಸ್ಯೆಗಳಿಗಿಂತ ಬೇರೆ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಯೇ ಹೆಚ್ಚು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಮೂರು ದಿನಗಳ ಕಾಲ ಚರ್ಚೆಗೆ ಅವಕಾಶ ದೊರೆತರೂ ಮಾತನಾಡಿದವರು ವಿಧಾನಸಭೆಯಲ್ಲಿ ಕೇವಲ ನಾಲ್ಕು ಮಂದಿ ಹಾಗೂ ವಿಧಾನ ಪರಿಷತ್‌ನಲ್ಲಿ 15 ಸದಸ್ಯರು. ಮೆಕ್ಕೆಜೋಳ ಬೆಳೆಗಾರರ ಬಗ್ಗೆ ಚರ್ಚೆ ನಡೆಯಿತಾದರೂ, ಖರೀದಿ ಭರವಸೆ ಸಿಗಲಿಲ್ಲ. ಉಳಿದಂತೆ ರೈತರ
ಸಮಸ್ಯೆಗಳಿಗೆ ಪರಿಹಾರವೂ ಸಿಗಲಿಲ್ಲ.
ಎಸ್.ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.