ಅಂಗಾಂಗ ದಾನ: ಸಿಎಂ ಬೊಮ್ಮಾಯಿ ಸಹಿತ ಸಚಿವರ ನೋಂದಣಿ
ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಎಂದ ಸಿಎಂ ಬೊಮ್ಮಾಯಿ
Team Udayavani, Aug 13, 2022, 8:50 PM IST
ಬೆಂಗಳೂರು: ಅಂಗಾಂಗ ದಾನ ಮಾನವೀಯತೆಯ ಕೆಲಸ. ಅಂಗಾಂಗಗಳನ್ನು ದಾನಕ್ಕೆ ಸಂಕಲ್ಪ ಮಾಡುವ ಮುಖಾಂತರ ಸಾವಿನ ನಂತರವೂ ಬದುಕು ನೀಡುವ ಸಾರ್ಥಕ ಕಾರ್ಯ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧ ಮುಂಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಜ್ಞಾನಿಗಳ, ವೈದ್ಯರ ಪರಿಶ್ರಮದಿಂದ ನಮ್ಮ ಸಾವಿನ ನಂತರ ಅಂಗಾಂಗಗಳನ್ನು ನೀಡುವ ಮೂಲಕ ಇತರರ ಜೀವವನ್ನು ಬದುಕಿಸಬಹುದಾಗಿದೆ ಎಂದು ಹೇಳಿದರು.
ಒಬ್ಬ ವ್ಯಕ್ತಿ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಎಂಟು ಜೀವಗಳನ್ನು ಉಳಿಸಬಹುದು. ಚರ್ಮದಿಂದ ಹಿಡಿದು ಎಲ್ಲ ಅಂಗಗಳನ್ನು ದಾನ ಮಾಡಬಹುದು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಮಾನವ ಜನ್ಮ ಶ್ರೇಷ್ಠವಾದುದು. ಅಂಗಾಂಗ ದಾನದ ಮೂಲಕ ಈ ಶ್ರೇಷ್ಠ ಜೀವವನ್ನು ಉಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಬ್ರೈನ್ ಡೆಡ್ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿ ಮರುಜೀವ ಪಡೆಯುವುದರ ಜತೆಗೆ ಮರಣಾನಂತರವೂ ಅಂಗಾಂಗಗಳು ಪ್ರಪಂಚ ನೋಡಲು ಸಾಧ್ಯವಾಗುತ್ತದೆ. ನಾನು ಕೂಡ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದೇನೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಪ್ರಸ್ತುತ 18 ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಿಮಾನ್ಸ್‌ನಲ್ಲಿ ಮೆದುಳು ದಾನ ಹಾಗೂ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೂತ್ರಪಿಂಡ ದಾನಗಳನ್ನು ಮಾಡಬಹುದಾಗಿದೆ. ಇದು ಸರ್ಕಾರದ ದೊಡ್ಡಸಾಧನೆ. ಅಂಗಾಂಗ ದಾನ ಮಾನವೀಯತೆ ಕೆಲಸ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿದವರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಐದು ಸಾವಿರಕ್ಕೂ ಹೆಚ್ಚು ಮಂದಿ ಮೆಡಿಕಲ್ಸ್, ಪ್ಯಾರಾ ಮೆಡಿಕಲ್ಸ್ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಉಪಸ್ಥಿತರಿದ್ದರು.
ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಐದು ಸಾವಿರ ಜನ ಪಾಲ್ಗೊಂಡು ಮಾನವ ಸರಪಳಿ ನಿರ್ಮಿಸಿ ಒಬ್ಬರಿಗೊಬ್ಬರು ಸಹಕಾರ ನೀಡುವ ಸಂದೇಶ ಸಾರಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಡಾ.ಸುಧಾಕರ್ ಸಹಿತ ಸಚಿವರು, ಅಧಿಕಾರಿಗಳು ಅಂಗಾಂಗ ದಾನಕ್ಕೆ ನೋಂದಣಿ ಮಾಡಿದ್ದು ದೇಶದಲ್ಲೇ ಮೊದಲು. ನಗರದ ಅರಮನೆ ಮೈದಾನದಿಂದ ವಿಧಾನಸೌಧದವರೆಗೆ ನಡೆದ ಜಾಥಾ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಅಪ್ಪು -ಸಂಚಾರಿ ನೆನಪು
ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಪುನೀತ್ ರಾಜಕುಮಾರ್ ಮತ್ತು ನಟ ಸಂಚಾರಿ ವಿಜಯ್ ಅವರನ್ನು ನೆನೆದರು. ಅಲ್ಲದೆ ಕಣ್ಣು ದಾನ ಮಾಡಿ ಇತರರಿಗೆ ಬೆಳಕಾಗಿದ್ದಾರೆಂದು ಸ್ಮರಿಸಿದರು. ಜತೆಗೆ ಮಾರ್ಕೋನಳ್ಳಿಯ ಕೃಷ್ಣಪ್ಪ, ನವೀನಕುಮಾರ್ ಬಡ ಕುಟುಂಬದವರಾಗಿದ್ದು, ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿದ್ದರೂ, ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ದೊಡ್ಡ ಗುಣವನ್ನು ಮೆರೆದಿದ್ದಾರೆ. ಅವರ ಉದಾತ್ತ ಗುಣವನ್ನು ಎಲ್ಲರಿಗೂ ಅನುಕರಣೀಯವಾದುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.